ಲಂಚ ಸೇರಿದಂತೆ ವಿವಿಧ ಆರೋಪಗಳ ಮೇಲೆ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಜನಾಧಿಪತ್ಯ ರಾಷ್ಟ್ರೀಯ ಸಭಾ (ಜೆಆರ್‌ಎಸ್) ನಾಯಕಿ ಸಿ.ಕೆ ಜಾನು ವಿರುದ್ಧ ಪ್ರಕರಣ ದಾಖಲಿಸುವಂತೆ ವಯನಾಡ್ ನ್ಯಾಯಾಲಯ ಬುಧವಾರ ಪೊಲೀಸರಿಗೆ ಸೂಚಿಸಿದೆ. ಏಪ್ರಿಲ್‌ನಲ್ಲಿ ನಡೆಯಲಿದ್ದ ವಿಧಾನಸಭಾ ಚುನಾವಣೆಗೆ ಮುನ್ನ ಸುರೇಂದ್ರನ್ ಎನ್‌ಡಿಎಗೆ ಸೇರಲು ಜಾನು ಅವರಿಗೆ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ನ ರಾಜ್ಯ ಅಧ್ಯಕ್ಷ ಪಿ.ಕೆ ನವಾಸ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ವಯನಾಡ್ ಕಲ್ಪೆಟ್ಟಾದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆ ನಡೆಸುತ್ತಿತ್ತು.
ಐಪಿಸಿ ಸೆಕ್ಷನ್ಸ್ 171 ಬಿ (ಮತದಾನಕ್ಕೆ ಲಂಚ ನೀಡಿ ಪ್ರೇರೇಪಿಸುವುದು), ಐ 71 ಇ (ಲಂಚ) ಮತ್ತು 171 ಎಫ್ (ಅನಗತ್ಯ ಪ್ರಭಾವ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?
ಅರ್ಜಿದಾರರು ಈ ಹಿಂದೆ ಸುರೇಂದ್ರನ್ ಮತ್ತು ಜಾನು ವಿರುದ್ಧ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿದ್ದರು. ಆದರೆ ಅಲ್ಲಿ ಯಾವುದೇ ಪ್ರಕರಣ ದಾಖಲಾಗದ ಕಾರಣ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
“ಜಾನು ಚುನಾವಣೆಗೆ ಮುನ್ನ ಎನ್‌ಡಿಎಗೆ ಸೇರಲು ತನಗೆ 10 ಕೋಟಿ ನೀಡಬೇಕು ಎಂದು ಸುರೇಂದ್ರ ಅವರೊಂದಿಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಸುರೇಂದ್ರನ್ ಜಾನು ಅವರಿಗೆ 10 ಲಕ್ಷ ರೂಪಾಯಿಗಳನ್ನು ನೀಡಿದರು” ಎಂದು ಈ ತಿಂಗಳ ಆರಂಭದಲ್ಲಿ, ಜೆಆರ್‌ಎಸ್ ರಾಜ್ಯ ಖಜಾಂಚಿ ಪ್ರಸೀತಾ ಅಜಿಕೋಡ್ ಅವರು ಆರೋಪಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಜಾನು ಅವರು ವಯನಾಡಿನ ಸುಲ್ತಾನ್ ಬತ್ತೇರಿಯಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು.
ಈ ಒಪ್ಪಂದವನ್ನು ಉಲ್ಲೇಖಿಸುವ ಸುರೇಂದ್ರನ್ ಮತ್ತು ಪ್ರಸೀತಾ ಅಜಿಕೋಡ್ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಸುರೇಂದ್ರನ್ ಮತ್ತು ಜಾನು ಇಬ್ಬರೂ ಈ ಆರೋಪಗಳನ್ನು ನಿರಾಕರಿಸಿದಾಗ, ಪ್ರಸೀತಾ ಅಜಿಕೋಡ್ ಸಂಭಾಷಣೆಯ ಹೆಚ್ಚಿನ ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದರು.
ಕಳೆದ ವಾರ, ಮಜೇಶ್ವರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬಿಎಸ್ಪಿ ಅಭ್ಯರ್ಥಿ ಕೆ. ಸುಂದರ ಅವರಿಗೆ ಲಂಚ ನೀಡಿದ ಆರೋಪದ ಮೇಲೆ ಕಾಸರಗೋಡ್ ಪೊಲೀಸರು ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಕ್ಷೇತ್ರದಲ್ಲಿ ಸುರೇಂದ್ರನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇಲ್ಲಿ ನಾಮಪತ್ರ ಹಿಂತೆಗೆದುಕೊಂಡ ನಂತರ ಸುಂದರ ಅವರು ಬಿಜೆಪಿಗೆ ಸೇರಿದ್ದರು. ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು 2.5 ಲಕ್ಷ ರೂ. ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: 2024ರ ಚುನಾವಣೆ: ಪ್ರಾದೇಶಿಕ ನಾಯಕರು V/s ಮೋದಿ-ಬಿಜೆಪಿ?


