ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಪ್ರಕರಣದಲ್ಲಿ ಜಿತೇಂದ್ರ ತ್ಯಾಗಿ ಅವರನ್ನು ಬಂಧಿಸಲು ಶ್ರೀನಗರ ನ್ಯಾಯಾಲಯ ಆದೇಶಿಸಿದೆ.
ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾದ ಕಾರಣ ಬಂಧಿಸಲು ಆದೇಶ ಹೊರಡಿಸಲಾಗಿದೆ. ಬಂಧಿಸಲಾಗಿದೆ ಎಂಬುವುದನ್ನು ಖಚಿತಪಡಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಎಸ್‌ಪಿ) ನ್ಯಾಯಾಲಯ ನಿರ್ದೇಶನ ನೀಡಿದೆ.
ಆರೋಪಿಯನ್ನು ಬಂಧಿಸಲು ತಂಡ ರಚಿಸಬೇಕು. ಮುಂದಿನ ವಿಚಾರಣೆಯ ದಿನವಾದ ಏಪ್ರಿಲ್ 25ರೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಶ್ರೀನಗರದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿದೆ.
2021ರಲ್ಲಿ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, ಸೆಕ್ಷನ್ 295ಎ ಮತ್ತು ಸೆಕ್ಷನ್ 505ರ ಅಡಿಯಲ್ಲಿ ಜಿತೇಂದ್ರ ತ್ಯಾಗಿ ವಿರುದ್ದ ಶ್ರೀನಗರದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಜಿತೇಂದ್ರ ತ್ಯಾಗಿ 2021ರಲ್ಲಿ ಕುರ್‌ಆನ್‌ನಲ್ಲಿರುವ ಕೆಲವು ಸೂಕ್ತಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಜಿತೇಂದ್ರ ತ್ಯಾಗಿಗೆ ಛೀಮಾರಿ ಹಾಕಿತ್ತು. ಅಲ್ಲದೆ, ಅವರ ವಿರುದ್ದ ಹಲವು ಎಫ್‌ಐಆರ್‌ಗಳು ದಾಖಲಾಗಿತ್ತು.
ಈ ಹಿಂದೆ ವಸೀಮ್ ರಿಝ್ವಿ ಎಂಬ ಹೆಸರಿನೊಂದಿಗೆ ಇಸ್ಲಾಂ ಧರ್ಮದ ಜೊತೆ ಗುರುತಿಸಿಕೊಂಡಿದ್ದ ಜಿತೇಂದ್ರ ತ್ಯಾಗಿ, ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದರು. ಬಳಿಕ ಹಿಂದೂ ಧರ್ಮದ ತ್ಯಾಗಿ ಸಮುದಾಯದೊಂದಿಗೆ ಗುರುತಿಸಿಕೊಂಡ ಅವರು ತನ್ನ ಹೆಸರನ್ನು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ವಕ್ಫ್ ಆಸ್ತಿಗಳ ಮಾರಾಟ ಮತ್ತು ವರ್ಗಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ತ್ಯಾಗಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಹಿಂದೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.
ಜಾತ್ಯತೀತ ಸಂವಿಧಾನದಡಿ ‘ಹಿಂದೂ ರಾಷ್ಟ್ರ’ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ : ಹಿರಿಯ ವಕೀಲೆ ಇಂದಿರಾ ಜೈಸಿಂಗ್


