ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಗಡಿಪಾರು ಮಾಡಲ್ಪಟ್ಟ 63 ವರ್ಷದ ಮಹಿಳೆಯನ್ನು ಭಾರತಕ್ಕೆ ಮರಳಿ ಕರೆತರುವಂತೆ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಮಹಿಳೆ ಸುಮಾರು ನಾಲ್ಕು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿದ್ದು, ದೀರ್ಘಾವಧಿಯ ವೀಸಾ (ಎಲ್‌ಟಿವಿ) ಹೊಂದಿರುವುದರಿಂದ, ಪ್ರಕರಣದ ‘ಸತ್ಯಗಳು ಮತ್ತು ಸನ್ನಿವೇಶಗಳ ಅಸಾಧಾರಣ ಸ್ವರೂಪ’ವನ್ನು ಗಮನಿಸಿ ಹೈಕೋರ್ಟ್ ಈ ಆದೇಶ ನೀಡಿದೆ ಎಂದು livelaw.in ವರದಿ ಮಾಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಕೇಂದ್ರ ಸರ್ಕಾರ ಭಾರತದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸಿ, ಅವರು ಏಪ್ರಿಲ್ 27ರೊಳಗೆ ಭಾರತ ತೊರೆಯುವಂತೆ ಆದೇಶಿಸಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಹಲವು ಪಾಕಿಸ್ತಾನಿ ಪ್ರಜೆಗಳನ್ನು ಅಧಿಕಾರಿಗಳು ಗಡಿಪಾರು ಮಾಡಿದ್ದರು.
ಹಾಗೆ, ಗಡಿಪಾರದವರಲ್ಲಿ ರಕ್ಷಂದಾ ರಶೀದ್ ಕೂಡ ಒಬ್ಬರು. ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಜಮ್ಮುವಿನಲ್ಲಿ ವಾಸಿಸುತ್ತಿದ್ದ ಮಹಿಳೆ ಗಡಿಪಾರು ಬಳಿಕ ಲಾಹೋರ್‌ನ ಹೋಟೆಲ್‌ನಲ್ಲಿ ಉಳಿಯುವಂತಾಗಿದೆ. ಏಪ್ರಿಲ್ 30ರಂದು ಅವರನ್ನು ಗಡಿಪಾರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅದೇ ದಿನ ರಕ್ಷಂದಾ ರಶೀದ್ ಹೈಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಪತ್ನಿಗೆ ಪಾಕಿಸ್ತಾನದಲ್ಲಿ ಯಾರೂ ಬಂಧುಗಳಿಲ್ಲ. ಅಲ್ಲದೆ ಆಕೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅಕೆಯ ಜೀವಕ್ಕೆ ಸಂಚಕಾರ ಇದೆ ಎಂದು ರಕ್ಷಂದಾ ಅವರ ಪತಿ ಶೇಖ್ ಜಹೂರ್ ಅಹ್ಮದ್ ಅವರು ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರೆದುರು ವಾದಿಸಿದ್ದರು.
ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಇನ್ನಷ್ಟೇ ಆಲಿಸಬೇಕಿದ್ದು, ಸಾಂವಿಧಾನಿಕ ನ್ಯಾಯಾಲಯವಾಗಿ ತಾನು ಕೆಲವೊಮ್ಮೆ ಮಾನವೀಯ ನೆಲೆಯಲ್ಲಿ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಜೂನ್ 6ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ದೀರ್ಘಾವಧಿ ವೀಸಾ ಪಡೆದಿರುವ ರಕ್ಷಂದಾ ಅವರನ್ನು ಗಡಿಪಾರು ಮಾಡುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದೇಶ ಹೊರಡಿಸಿದ ದಿನಾಂಕದಿಂದ (ಜೂನ್ 6) ಹತ್ತು ದಿನಗಳ ಒಳಗೆ, ಅದನ್ನು ಪಾಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಆದೇಶ ಪಾಲನೆ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.
ರಕ್ಷಾಂದ ರಶೀದ್ ಅವರ ಪರವಾಗಿ ಮಗಳು ಫಲಕ್ ಜಹೂರ್ ಮೂಲಕ ಸಲ್ಲಿಸಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಾಹುಲ್ ಭಾರ್ತಿ ಆದೇಶ ನೀಡಿದ್ದಾರೆ.
ಎಲ್ಲರೊಂದಿಗೆ ಮಾತುಕತೆ ನಡೆಸಿ ತ್ರಿಭಾಷಾ ಸೂತ್ರದ ಬಗ್ಗೆ ಅಂತಿಮ ನಿರ್ಧಾರ: ಮಹಾರಾಷ್ಟ್ರ ಸಿಎಂ ಫಡ್ನವೀಸ್


