ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಕೋವಿಡ್ ಪಾಸಿಟಿವ್ ಹೆಚ್ಚಳದ ವರದಿಗಳ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಹೆಚ್‌ಎಸ್) ಸೋಮವಾರ ಪರಿಶೀಲನಾ ಸಭೆ ನಡೆಸಿದರು.
ಪ್ರಾಥಮಿಕ ವರದಿಗಳ ಪ್ರಕಾರ, ವರದಿಯಾದ ಪ್ರಕರಣಗಳು ಹೆಚ್ಚಾಗಿ ಸೌಮ್ಯವಾಗಿವೆ, ಅಸಾಧಾರಣ ತೀವ್ರತೆ ಅಥವಾ ಮರಣಕ್ಕೆ ಸಂಬಂಧಿಸಿಲ್ಲ ಎಂದು ಸರ್ಕಾರ ಹೇಳಿದೆ. ಭಾರತದಲ್ಲಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳು 257 ರಷ್ಟಿವೆ ಎಂದು ಸರ್ಕಾರ ತಿಳಿಸಿದೆ. ಈ ಎಲ್ಲಾ ಪ್ರಕರಣಗಳು ಸೌಮ್ಯವಾಗಿದ್ದು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಹೇಳಿದೆ.
ಡಿಜಿಹೆಚ್‌ಎಸ್ ಸಭೆಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ತುರ್ತು ವೈದ್ಯಕೀಯ ಪರಿಹಾರ (ಇಎಂಆರ್) ವಿಭಾಗ, ವಿಪತ್ತು ನಿರ್ವಹಣಾ ಕೋಶ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಸೂಕ್ತ ಕ್ರಮಗಳನ್ನು ಜಾರಿಗೆ ತರಲು ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಜಾಗರೂಕವಾಗಿದೆ ಎಂದು ಹೇಳಿದೆ.
ಕ್ರಿಕೆಟಿಗ ಟ್ರಾವಿಸ್ ಹೆಡ್‌ಗೆ ಕೋವಿಡ್
ಆಸ್ಟ್ರೇಲಿಯಾ ಕ್ರಿಕೆಟಿಗ, ಪ್ರಸ್ತುತ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಪ್ರಮುಖ ಬ್ಯಾಟರ್ ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ತಗುಲಿದೆ ಎಂದು ತಂಡ ತಿಳಿಸಿದೆ. ನಿನ್ನೆ ಸಂಜೆ ಲಕ್ನೋ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಆಡಲಿಲ್ಲ.


