ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪಿಪಿಇ ಕಿಟ್, ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ ನಿರ್ಧಿರಿಸಿದೆ.
ಗುರುವಾರ (ನ.14) ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಕೋವಿಡ್ ಅಕ್ರಮಗಳ ತನಿಖೆಗೆ ರಚಿಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಪಿಪಿಇ ಕಿಟ್, ಔಷಧಿ, ಯಂತ್ರೋಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ, ಕೋವಿಡ್ ಸಾಂಕ್ರಾಮಿಕದಿಂದ ಸಂಭವಿಸಿದ ಸಾವುಗಳ ಮಾಹಿತಿ ಮುಚ್ಚಿಟ್ಟಿರುವುದು, ದಾಖಲೆಗಳ ನಾಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ. ಐಜಿಪಿ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆಯ ಪೊಲೀಸ್ ಅಧಿಕಾರಿ ಎಸ್ಐಟಿ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಭ್ರಷ್ಟಾಚಾರದ ಕುರಿತು ಸತ್ಯಶೋಧನೆಗಾಗಿ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿʼಕುನ್ಹಾ ಅವರ ಆಯೋಗವು ಸಲ್ಲಿಸಿರುವ 2 ಮಧ್ಯಂತರ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ತೀರ್ಮಾನಿಸಿದೆ.… pic.twitter.com/zNee3dKnEn
— Siddaramaiah (@siddaramaiah) November 14, 2024
ನ್ಯಾಯಮೂರ್ತಿ ಡಿ’ಕುನ್ಹಾ ಆಯೋಗದ ವರದಿಯಲ್ಲಿರುವ ಅಂಶಗಳ ಜೊತೆಗೆ ಎಸ್‌ಐಟಿ ಹೆಚ್ಚಿನ ತನಿಖೆ ನಡೆಸಲಿದೆ. ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
187.91 ಕೋಟಿ ವಸೂಲಿಗೆ ಶಿಫಾರಸು
ಕೋವಿಡ್ ನಿರ್ವಹಣೆಗಾಗಿ ನಡೆದ ಖರೀದಿಯಲ್ಲಿ ನಿಯಮ ಉಲ್ಲಂಘನೆಯಿಂದ ಅಪಾರ ನಷ್ಟ ಸಂಭವಿಸಿದೆ. ಈ ಪೈಕಿ 187.91 ಕೋಟಿ ರೂಪಾಯಿಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸೇರಿದಂತೆ ಆರೋಗ್ಯ ಇಲಾಖೆಗಳಿಂದ ವಸೂಲಿ ಮಾಡುವಂತೆ ಮತ್ತು ಖರೀದಿ ಒಪ್ಪಂದ ಮಾಡಿಕೊಂಡ ಅಧಿಕಾರಿಗಳ ವಿರುದ್ದ ಅಪರಾಧ ಪ್ರಕರಣ ದಾಖಲಿಸುವಂತೆ ನ್ಯಾಯಮೂರ್ತಿ ಡಿ’ಕುನ್ಹಾ ಆಯೋಗ ಶಿಫಾರಸು ಮಾಡಿದೆ ಎಂದು ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೋವಿಡ್ ಹಗರಣ : ಯಡಿಯೂರಪ್ಪ, ಶ್ರೀರಾಮುಲು ವಿರುದ್ದ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು


