Homeಕರೋನಾ ತಲ್ಲಣಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ - ಇದು ಕಂಪನಿಗಳು ಅತಿಹೆಚ್ಚು...

ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ!

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಕೆ. ಸುಜಾತಾ ರಾವ್‌ರವರು ಲಸಿಕೆ ಕುರಿತಂತೆ ಇಂದು ಅನಗತ್ಯವಾಗಿ ಸಂಕೀರ್ಣಗೊಳಿಸಿರುವ ವಿಚಾರಗಳನ್ನು, ಹುನ್ನಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ.

- Advertisement -

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಕೆ. ಸುಜಾತಾ ರಾವ್‌ರವರು ಲಸಿಕೆ ಕುರಿತಂತೆ ಇಂದು ಅನಗತ್ಯವಾಗಿ ಸಂಕೀರ್ಣಗೊಳಿಸಿರುವ ವಿಚಾರಗಳನ್ನು, ಹುನ್ನಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ. ಈ ಲೇಖನ ಮೊದಲು ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿ ಪ್ರಕಟವಾಗಿತ್ತು. ಲೇಖಕರ ಒಪ್ಪಿಗೆಯ ಮೇರೆಗೆ ನಾನುಗೌರಿ ಓದುಗರಿಗಾಗಿ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಲಾಗುತ್ತಿದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌

  • ಕೆ. ಸುಜಾತಾ ರಾವ್‌

ಆಘಾತಕ್ಕೊಳಗಾದ ಭಾರತದಲ್ಲಿ, ವಯಸ್ಕ ಜನಸಂಖ್ಯೆಯ ಶೇ. 70 ಪ್ರತಿಶತ ಅಥವಾ 654 ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಜೀವಗಳನ್ನು ಉಳಿಸುವುದು ಹೆಚ್ಚಿನ ಆದ್ಯತೆಯಾಗಿದೆ. ಈ ಲೇಖನವು ಏಪ್ರಿಲ್ 20 ರಂದು ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಲಸಿಕೆ ನೀತಿ ಪ್ರಕಟಣೆಗಳ ಪರಿಣಾಮಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ.

ಕಳೆದ ಮೂರು ತಿಂಗಳಲ್ಲಿ, 30 ಕೋಟಿ ಹೆಚ್ಚಿನ ಅಪಾಯದ (ಹೈ ರಿಸ್ಕ್) ಜನಸಂಖ್ಯೆಯಲ್ಲಿ ಕೇವಲ ಶೇ. 40 ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಯಿತು. ಭಾಗಶಃ ಆರಂಭಿಕದಲ್ಲಿ ಜನರಿಗೆ ಲಸಿಕೆ ಹಿಂಜರಿಕೆ ಮತ್ತು ನಂತರದ ಲಸಿಕೆ ಕೊರತೆಯಿಂದಾಗಿ ಇದು ಸಂಭವಿಸಿರಬಹುದು. ಎರಡನೆ ಅಲೆಯ ಮರಣ ಪ್ರಮಾಣದ ಮಾಹಿತಿ ಪ್ರಕಾರ, ಒಟ್ಟು ಕೋವಿಡ್ ಸಾವುಗಳಲ್ಲಿ ಶೇ. 44ರಷ್ಟು ಜನ 20-50 ವರ್ಷ ವಯಸ್ಸಿನವರಿದ್ದಾರೆ. ಹೀಗಾಗಿ, ಮೇ 1 ರಿಂದ ಎಲ್ಲಾ ವಯಸ್ಕರನ್ನು (18 ದಾಟಿದ) ಲಸಿಕೆ ಅಭಿಯಾನಕ್ಕೆ ಸೇರಿಸಲು ಸರ್ಕಾರ ಅರ್ಹತಾ ಮಾನದಂಡಗಳನ್ನು ವಿಸ್ತರಿಸಿದೆ.

ಗಮನಿಸಬೇಕಾದ ಅಂಶಗಳು: ಇನ್ನೂ 60 ಪ್ರತಿಶತದಷ್ಟು ಜನಸಂಖ್ಯೆಗೆ ಒಂದು ಡೋಸ್ ಕೂಡ ಹಾಕಿಲ್ಲ. ಇನ್ನೊಂದು ಕಡೆ ಲಸಿಕೆಯನ್ನು ಅಸಮವಾಗಿ ಸರಬರಾಜು ಮಾಡಲಾಗಿದೆ. ಈ ಎರಡು ಅಂಶಗಳು ವಿರೂಪಗಳು ಮತ್ತು ಅಸಮಾನತೆಗಳಿಗೆ ಕಾರಣವಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಕೊಳೆಗೇರಿಗಳಲಿನ್ಲ ಶಕ್ತಿಹೀನ ಮತ್ತು ದುರ್ಬಲರಿಗಿಂತ ನಗರ ಪ್ರದೇಶಗಳಲ್ಲಿನ ದೊಡ್ಡ ಧ್ವನಿ ಇರುವ ಸ್ಥಿತಿವಂತರಿಗೆ ಈ ನೀತಿ ಪೂರಕವಾಗಿದೆ.

ಭಾರತದ ಮಾಸಿಕ ಕೋವಿಡ್ ಲಸಿಕೆ ಉತ್ಪಾದನಾ ಸಾಮರ್ಥ್ಯವು ಸುಮಾರು 60-65 ಮಿಲಿಯನ್ ಡೋಸ್‌ಗಳು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕಂಪನಿಯಿಂದ ಮಾಸಿಕ 60 ಮಿಲಿಯನ್ ಮತ್ತು ಭಾರತ್ ಬಯೋಟೆಕ್ (ಬಿಬಿ) 1-5 ಮಿಲಿಯನ್ ಡೋಸ್ ಉತ್ಪಾದನೆ ಸಾಧ್ಯ. ಆದರೆ ನಮ್ಮ ಅಂತಿಮ ಅವಶ್ಯಕತೆ ಬೃಹತ್ತಾಗಿದೆ. ಶೇ .70 ರಷ್ಟು ವಯಸ್ಕರಿಗೆ ಲಸಿಕೆ ನೀಡಲು ಒಟ್ಟು 1,45 ಬಿಲಿಯನ್ ಡೋಸ್‌ಗಳು ಬೇಕಾಗುತ್ತವೆ.

ಎಲ್ಲಿ ತಪ್ಪಿತು ಭಾರತ ಅಥವಾ ಕೇಂದ್ರ ಸರ್ಕಾರ? ಇತರ ಲಸಿಕೆ ಉತ್ಪಾದಕರೊಂದಿಗೆ ಮುಂಗಡ ಖರೀದಿ ಒಪ್ಪಂದಗಳನ್ನು ದೃಢಿಕರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಸ್ಪುಟ್ನಿಕ್ ಲಸಿಕೆಯೊಂದಿಗಿನ ವ್ಯವಹಾರದಲ್ಲೂ ವಿಫಲವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಏಕೆಂದರೆ ಅದು, ಎಸ್‌ಐಐ (ಸೀರಂ) ಮತ್ತು ಬಿಬಿ (ಭಾರತ್ ಬಯೋಟೆಕ್) ಉತ್ಪಾದಿಸುವ ಲಸಿಕೆಗಳು ಭಾರತದ ಅಗತ್ಯಗಳಿಗೆ ಸಾಕಾಗುತ್ತದೆ ಎಂಬ ಆಧಾರರಹಿತ, ತಪ್ಪು ಕಲ್ಪನೆಯನ್ನು ಹೊಂದಿದ್ದು ಇದಕ್ಕೆ ಕಾರಣವಾಗಿದೆ. ವಿವರವಾದ ಬೇಡಿಕೆ-ಪೂರೈಕೆಯ ವಿಶ್ಲೇಷಣೆಯನ್ನು ವೈಜ್ಞಾನಿಕ ಮತ್ತು ಲಸಿಕೆ ಮಾರುಕಟ್ಟೆ ನೆಲೆಯಲ್ಲಿ ಮಾಡಿದ್ದರೆ, ಯಾವ ವಯಸ್ಸಿನವರಿಗೆ, ಯಾವ ಸಮಸ್ಯೆ ಇರುವವರಿಗೆ ಮೊದಲು ನೀಡಬೇಕು ಎಂಬ ಅರ್ಹತಾ ಮಾನದಂಡಗಳಲ್ಲಿ ಸ್ಪಷ್ಟತೆ ಇರುತ್ತಿತ್ತು.

ಸರ್ಕಾರ ಮೂರು ಪ್ರಮುಖ ನಿರ್ಧಾರಗಳನ್ನು ಘೋಷಿಸಿದೆ: ಒಂದು, ಭಾರತ ಸರ್ಕಾರಕ್ಕೆ ಶೇ.50ರಷ್ಟು ಲಸಿಕೆಗಳನ್ನು ಎರಡೂ ಕಂಪನಿಗಳು ನೀಡಬೇಕು. ಉಳಿದವು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ. ಎರಡನೇದು, ವಿದೇಶಿ ಕಂಪನಿಗಳ ಮಾರುಕಟ್ಟೆ ಪ್ರವೇಶಕ್ಕಾಗಿ ಬ್ರಿಡ್ಜಿಂಗ್ ಅಧ್ಯಯನಗಳನ್ನು ಮನ್ನಾ ಮಾಡುವುದು ಮತ್ತು ಮೂರನೇದಾಗಿ, ಮತ್ತು ಆಶ್ಚರ್ಯಕರವಾಗಿ, ಕಂಪನಿಗಳಿಗೆ ಬೆಲೆಯನ್ನು ನಿಗದಿಪಡಿಸಲು ಸ್ವಾತಂತ್ರ್ಯ ನೀಡಿರುವುದು.

ಕೇಂದ್ರ ಸರ್ಕಾರದ ಈ ಲಸಿಕಾ ನೀತಿ ಸ್ಪಷ್ಟವಾಗಿಲ್ಲ ಮತ್ತು ಸಂಶಯಾತ್ಮಕವಾಗಿದೆ. ಕೇಂದ್ರ ಖರೀದಿಸುವ ಲಸಿಕೆಗಳ ಬಳಕೆಯು ಎಲ್ಲಿ ಆಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅವು ರಾಜ್ಯಗಳಿಗಾಗಿಯೇ ಮತ್ತು ಹಾಗಿದ್ದರೆ ಎಷ್ಟು ಪ್ರಮಾಣದಲ್ಲಿ, ಅದಕ್ಕೆ ನಿಯಮಗಳೇನು ಎಂಬ ಪ್ರಶ್ನೆ ಏಳುತ್ತವೆ. ಅಥವಾ ಮತ್ತೆ ಲಸಿಕೆ ರಾಜತಾಂತ್ರಿಕತೆ (ವಿದೇಶಗಳಿಗೆ ಕೊಡುವುದು) ಮೆರೆಯಲೋ? ಕಳಿಸಲೇಬೇಕು ಎಂಬ ವಿದೇಶಿ ಕಟ್ಟುಪಾಡುಗಳಿವೆಯೇ? ಇದ್ದರೆ ಅಂತವನ್ನು ಪೂರೈಸಲು ಯಾವ ಕೋಟಾದ ಲಸಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಯಾವುದೂ ಸ್ಪಷ್ಟವಿಲ್ಲ.

ಪ್ರತಿ ರಾಜ್ಯವು ಪ್ರತ್ಯೇಕವಾಗಿ ಸರಬರಾಜುದಾರರನ್ನು ಸಂಪರ್ಕಿಸಿ ಮತ್ತು ಚೌಕಾಶಿ ಬೆಲೆಗೆ ಇಳಿದರೆ, ಅಂತಿಮ ನಿರ್ಧಾರ/ವಿವೇಚನೆಯು ಸರಬರಾಜುದಾರನ ಬಳಿ ಇರುತ್ತದೆ- ಯಾರಿಗೆ ಮಾರಾಟ ಮಾಡಬೇಕು, ಯಾವಾಗ, ಎಲ್ಲಿ, ಎಷ್ಟು ಮತ್ತು ಯಾವ ದರದಲ್ಲಿ ಎಂಬುದನ್ನು ಸರಬರಾಜುದಾರನೇ ನಿರ್ಧರಿಸಲಿದ್ದಾನೆ. ಇದು ನಿಸ್ಸಂದೇಹವಾಗಿ ಅಂತರರಾಜ್ಯ ಅಸಮಾನತೆಗಳನ್ನು ಸೃಷ್ಟಿಸುತ್ತದೆ. ಬಡ ರಾಜ್ಯಗಳು ಕಳಪೆ ಚೌಕಾಶಿ ಶಕ್ತಿಯಿಂದ ಬಳಲುತ್ತಿವೆ, ಬಳಲಿವೆ. ಆದರೆ ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು ಹೆಚ್ಚಿನ ದರವನ್ನು ಪಾವತಿ ಲಸಿಕೆ ಕೊಂಡುಕೊಳ್ಳಬಹುದು. ಆದರೆ ಈಗಾಗಲೇ ಕಲ್ಯಾಣ ಯೋಜನೆಗಳಿಗೆ ಇರುವ ಹಣವೇ ಕಡಿಮೆಯಿದೆ, ಈಗ ಅವು ಅದನ್ನೂ ಲಸಿಕೆಗಾಗಿ ಕಳೆದುಕೊಳ್ಳಲಿವೆ.

ಇತ್ತೀಚೆಗೆ, ಸೀರಂ ಮತ್ತು ಭಾರತ್ ಬಯೋಟೆಕ್ ತಮ್ಮ ಬೆಲೆ ನೀತಿಯನ್ನು ಘೋಷಿಸಿವೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400. ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಎಂದು ದರ ನಿಗದಿ ಮಾಡಿದೆ. ಭಾರತ್ ಬಯೋಟೆಕ್ ಕೊವಾಕ್ಸಿನ್‌ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಎಂದು ನಿಗದಿ ಮಾಡಿದೆ. ಎಸ್‌ಐಐ ಲಸಿಕೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪ್ರತಿ ಡೋಸ್‌ಗೆ 161 ರೂ., GAVI (ಲಸಿಕೆ ವಿತರಣೆಗೆಂದು ಸ್ಥಾಪಿಸಲಾದ ಜಾಗತಿಕ ವೇದಿಕೆ) ಲಸಿಕೆಗೆ 210 ರೂ.ಗೆ ಲಭ್ಯವಿದೆ. ಆದರೆ ಇದೇ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ 150 ರೂ.ಗೆ ನೀಡಲಾಗುತ್ತಿದೆ. (ರಾಜ್ಯಗಳಿಗೆ ಮಾತ್ರ ವಿದೇಶಿ ದರಕ್ಕಿಂತ ದುಬಾರಿ ಎಂಬುದನ್ನು ಗಮನಿಸಿ). ಮೂರನೆಯ ಲಸಿಕೆಯಾಗಿ ಭಾರತ ಪ್ರವೇಶಿಸುತ್ತಿರುವ ರಷ್ಯಾದ ಸ್ಪುಟ್ನಿಕ್ ಜೂನ್‌ನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ ಮತ್ತು ಪ್ರತಿ ಡೋಸ್‌ಗೆ 750 ರೂ. ದರ ನಿಗದಿ ಮಾಡಿದೆ.

ಎಸ್‌ಐಐನ (ಸೀರಂ) ಸಿಇಒ ಸಂದರ್ಶನಗಳಲ್ಲಿ ಮೂರು ಆಸಕ್ತಿದಾಯಕ ವಿಷಯಗಳನ್ನು ಸಹ ಹೇಳಿದ್ದಾರೆ: ಪ್ರತಿ ಡೋಸ್ ಅನ್ನು 150 ರೂ.ಗೆ ಮಾರಿದರೂ ನಷ್ಟವಿಲ್ಲ, ಅದು ಸಾಮಾನ್ಯ ಲಾಭವನ್ನು ಕೊಟ್ಟೇ ಕೊಡುತ್ತದೆ. ಆದರೆ ನಮ್ಮ ಉದ್ದೇಶವು ಸೂಪರ್ ಪ್ರಾಫಿಟ್ ಗಳಿಸುವುದಾಗಿದೆ. ಎರಡನೇ ಅಂಶ, ಈ ಸಿಇಒ ಅವರ (ರಾಷ್ಟ್ರವಲ್ಲ) ಮೊದಲ ಆದ್ಯತೆಯೆಂದರೆ ಮಹಾರಾಷ್ಟ್ರಕ್ಕೆ ಲಸಿಕೆಗಳನ್ನು ಪೂರೈಸುವುದು ಮತ್ತು ಮೂರನೆಯದಾಗಿ, ಅತ್ಯಂತ ಆತಂಕಕಾರಿಯಾಗಿ, ಖಾಸಗಿ ವಲಯವು ದೇಶದಲ್ಲಿ ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೀಡುವ ಮುಖ್ಯ ಪೂರೈಕೆದಾರನಾಗಿ ಹೊರಹೊಮ್ಮುತ್ತದೆ…..

ಲಸಿಕೆಯ ದರ ನಿರ್ಧರಿಸುವ ಅಂಶಗಳೇನು? ಇನ್‌ಪುಟ್‌ಗಳ (ಕಚ್ಚಾ ವಸ್ತು, ಮಾನವ ಸಂಪನ್ಮೂಲ ಇತ್ಯಾದಿ) ನಿಜವಾದ ವೆಚ್ಚ, ಕ್ಲಿನಿಕಲ್ ಪ್ರಯೋಗಗಳಿಗೆ ಮಾಡಿದ ಖರ್ಚು, ಮಾರಾಟ ಪ್ರಚಾರ ಮತ್ತು ಸಣ್ಣ ಲಾಭದ ಆಧಾರದ ಮೇಲೆ ದರ ನಿಗದಿ ಅವಲಂಬಿತವಾಗಿರುತ್ತದೆ. ಎಸ್‌ಐಐ (ಸೀರಂ) ವಿಚಾರಕ್ಕೆ ಬಂದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿ ವೆಚ್ಚಗಳನ್ನು ಭರಿಸಿದ್ದರಿಂದ ಹೂಡಿಕೆ ಕಡಿಮೆ ಆಗಿದೆ. ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಈಗಾಗಲೇ ಕೇಂದ್ರ ಸರ್ಕಾರವು 3 ಸಾವಿರ ಕೋಟಿ ರೂ. ನೀಡಿದೆ. ಇದರೊಂದಿಗೆ ಈಗಾಗಲೇ GAVI ಉತ್ಪಾದನಾ ವಿಸ್ತರಣೆಗೆ 300 ಮಿಲಿಯನ್ ಡಾಲರ್ ನೀಡಿಯಾಗಿದೆ. GAVI ಅನುದಾನವನ್ನು ಆರು ತಿಂಗಳ ಹಿಂದೆ ನೀಡಲಾಗಿದ್ದರೂ, ಸೀರಂ ತನ್ನ ಉತ್ಪಾದನೆಯನ್ನು ವಿಸ್ತರಿಸಿದಂತೆ ಕಾಣುತ್ತಿಲ್ಲ. ಈಗ ಜುಲೈ ಅಂತ್ಯದ ವೇಳೆಗೆ ತಿಂಗಳಿಗೆ 100 ಮಿಲಿಯನ್ ಡೋಸ್ ತಯಾರಿಸುವ ಭರವಸೆ ನೀಡಿದೆ. ಇದರಲ್ಲಿ ಭಾರತಕ್ಕೆ ಎಷ್ಟು ಲಭ್ಯವಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

3 ನೇ ಹಂತದ ಪ್ರಯೋಗ ಒಳಗೊಂಡಂತೆ ಲಸಿಕೆ ಅಭಿವೃದ್ಧಿಗೆ ಭಾರತ್ ಬಯೋಟೆಕ್ ಸುಮಾರು 350 ಕೋಟಿ ರೂ. ವೆಚ್ಚ ಮಾಡಿದೆ ಎಂದು ಅದರ ಮುಖ್ಯಸ್ಥ ಕೃಷ್ಣ ಎಲಾ ಹೇಳುತ್ತಾರೆ. ಕೇಂದ್ರದಿಂದ 1,500 ಕೋಟಿ ರೂ.ಗಳ ಅನುದಾನ ಬೆಂಬಲದೊಂದಿಗೆ, ಭಾರತ್ ಬಯೋಟೆಕ್ ಪ್ರಸ್ತುತ 60 ದಶಲಕ್ಷ ಮಟ್ಟದಿಂದ ಉತ್ಪಾದನೆಯನ್ನು ವರ್ಷಕ್ಕೆ 700 ದಶಲಕ್ಷಕ್ಕೆ ವಿಸ್ತರಿಸಲು ಆಶಿಸಿದೆ.

ಏಳು ರಾಜ್ಯಗಳು (ಸದ್ಯ ಕರ್ನಾಟಕ ಸೇರಿ 11 ರಾಜ್ಯಗಳು) ತಮ್ಮ ಜನರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿವೆ. ಗಮನಿಸಿ, ಉತ್ತರಪ್ರದೇಶ ಮತ್ತು ಬಿಹಾರ್ ರಾಜ್ಯಗಳು ಯೋಗ್ಯವಾದ ಪ್ರಯೋಗಾಲಯಗಳನ್ನು ಹೊಂದಿಲ್ಲವಾದರೂ, ತಮ್ಮ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ನಿರ್ಮಿಸಲು ತಮ್ಮ ಸಂಪನ್ಮೂಲಗಳನ್ನು ಖರ್ಚು ಮಾಡುವ ಬದಲು, ಉಚಿತ ಲಸಿಕೆಗಳನ್ನು ಒದಗಿಸಲು ಖರ್ಚು ಮಾಡಬೇಕಾಗಿದೆ. ಉತ್ತರಪ್ರದೇಶ ಎಸ್‌ಡಿಪಿಯ ಅಂದಾಜು 0.47ರಷ್ಟು ಮತ್ತು ಬಿಹಾರ್ ಎಸ್‌ಡಿಪಿಯ ಶೇಕಡಾ 0.6 ರಷ್ಟು ಅಮೂಲ್ಯ ಮೊತ್ತವನ್ನು ಲಸಿಕೆ ಖರೀದಿಗೆ ವೆಚ್ಚ ಮಾಡಬೇಕಾಗಿದೆ.

ಪ್ರಸ್ತುತ ರಾಜಕೀಯ ಆರ್ಥಿಕ ‘ಪ್ರವಚನ’ದ ಬಗ್ಗೆ ಆಸಕ್ತಿದಾಯಕ ಸಂಗತಿಯೆಂದರೆ, ಕೇಂದ್ರ ಧನಸಹಾಯ ಭಾರತ ಸರ್ಕಾರಕ್ಕೆ ಸೇರಿದ್ದಂತೆ, ಇವನ್ನು ರಾಜ್ಯಗಳಿಂದ ಪ್ರತ್ಯೇಕವಾಗಿ ಪರಿಗಣಿಸುವ ಪ್ರವೃತ್ತಿ ಜಾರಿಯಲ್ಲಿದೆ. ಖರ್ಚು ಮಾಡಿದ ಹಣವು ಎಲ್ಲ ರಾಜ್ಯಗಳ ಜನರು ಪಾವತಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬಂದಿದ್ದು ಅಲ್ಲವೇ? “ಸಾಂಕ್ರಾಮಿಕ ಕಾಯಿಲೆಗಳ ಅಂತರರಾಜ್ಯ ಹರಡುವಿಕೆಯನ್ನು” ನಿಯಂತ್ರಿಸಲು ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿದೆ. ಸಂವಿಧಾನದ VII ನೇ ಶೆಡ್ಯೂಲ್ ಅಡಿಯಲ್ಲಿ 29ನೆ ನಮೂದು ಇದನ್ನು ಒತ್ತಿ ಹೇಳುತ್ತದೆ. ಆದರೆ ಇಲ್ಲಿ ಕೇಂದ್ರ ಜವಾಬ್ದಾರಿಯಿಂದ ನುಣುಚಿಕೊಂಡು ಎಲ್ಲವನ್ನೂ ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ವಿಚಿತ್ರ ಚಿಂತನೆಯಾಗಿದೆ. ಇಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಎದುರಿಸಲು ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಸಾಂಕ್ರಾಮಿಕ ಕಾಯಿಲೆಗಳಿಂದ ಉಂಟಾಗುವ ವ್ಯಾಪಕವಾದ ಪರಿಣಾಮಗಳ ಕಾರಣದಿಂದಾಗಿ, ಕೇಂದ್ರವು ಎಲ್ಲಾ ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳ ಅಡಿಯಲ್ಲಿ ರಾಜ್ಯಗಳಿಗೆ ಯಾವಾಗಲೂ ಲಸಿಕೆಗಳು ಮತ್ತು ಇತರ ಉಪಭೋಗ್ಯ ವಸ್ತುಗಳನ್ನು ಸಂಗ್ರಹಿಸಿ ನೀಡಬೇಕಾಗುತ್ತದೆ. ಅದು ಅದರ ಕರ್ತವ್ಯ ಕೂಡ ಆಗಿದೆ.

ಇದಲ್ಲದೆ, ಇಂತಹ ವ್ಯವಸ್ಥೆಯು ಆರ್ಥಿಕ ಪರಿಣಾಮಕಾರಿತ್ವಕ್ಕೆ ಕಾರಣವಾಗುತ್ತದೆ. ಲಸಿಕೆ ಸಂಗ್ರಹಣೆಯನ್ನು ಕೇಂದ್ರೀಕರಿಸುವ ಮೂಲಕ ಮತ್ತು ತಾನೇ ಏಕೈಕ ಖರೀದಿದಾರನಾಗಿರುವ ಮೂಲಕ ಕೇಂದ್ರ ಸರ್ಕಾರವು ದೇಶದ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ. ಸರ್ಕಾರವು ಹೆಚ್ಚು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಮತ್ತು ಲಸಿಕೆಗಳಲ್ಲಿ ದೃಢವಾದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯಕಾರಿ. ಎರಡನೆಯದಾಗಿ, ಎನ್‌ಪಿಪಿಎ ನಡೆಸುವ ವೆಚ್ಚದ ಆಧಾರದ ಮೇಲೆ ಎಲ್ಲಾ ಅಗತ್ಯ ಔಷಧಿಗಳ ಬೆಲೆಯನ್ನು ನಿಗದಿಪಡಿಸುವ ಅಧಿಕಾರವೂ ಸರ್ಕಾರಕ್ಕೆ ಇದೆ.

ವಿದೇಶಿ ಕಂಪನಿಗಳಿಗೆ ನೀಡುವ ಪ್ರೋತ್ಸಾಹದೊಂದಿಗೆ, ಈಗ ಹೆಚ್ಚು ಸ್ಪರ್ಧಾತ್ಮಕ ವಾತಾವರಣವಿದೆ. ಕಾರ್ಟೆಲೈಸೇಶನ್ ಪ್ರಯತ್ನಗಳ ಸಂದರ್ಭದಲ್ಲಿ, ಸರ್ಕಾರವು ಕಡ್ಡಾಯ ಪರವಾನಗಿಯನ್ನು ಪಡೆಯಬಹುದು ಮತ್ತು ಭಾರತದ 18 ಉತ್ಪಾದನಾ ಕಂಪನಿಗಳ ಮೂಲಕ ಉತ್ಪಾದನೆಯನ್ನು ವಿಸ್ತರಿಸಬಹುದು, ಇದು ಆಡಳಿತಾತ್ಮಕ ಬೆಲೆಗೆ ಲಭ್ಯತೆಯನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಲಸಿಕೆಗಳ ಮೇಲಿನ ಐಪಿಆರ್ (ಸ್ವಾಮ್ಯ ಹಕ್ಕು) ಮನ್ನಾ ಮಾಡುವ ಬೇಡಿಕೆಯನ್ನು ಬೆಂಬಲಿಸುವ ವಿಷಯವನ್ನು ಭಾರತ ಸರ್ಕಾರವು ಅಮೆರಿಕದೊಂದಿಗೆ ಆಕ್ರಮಣಕಾರಿಯಾಗಿ ಕೈಗೆತ್ತಿಕೊಳ್ಳಬೇಕು. ಇದು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಅದರ ಲಭ್ಯತೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರದ ಅಧಿಕಾರವನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಂದಾಜು 60,000 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ಅರ್ಧಕ್ಕೆ ಇಳಿಸಬಹುದು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಉಳಿಸಿದ ನಿಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದು.

ಮುಂದಿನ ಎರಡು ವರ್ಷಗಳು ಕಷ್ಟವಾಗುತ್ತವೆ. ಖಾಸಗಿ ಕಂಪನಿಗಳು ಏಕಸ್ವಾಮ್ಯವನ್ನು ಸೃಷ್ಟಿಸಲು ಮತ್ತು ಲಾಭವನ್ನು ಪಡೆಯಲು ಇದು ಸಮಯವಲ್ಲ. ಬದಲಾಗಿ, ಅವತ್ತು ಸಿಪ್ಲಾ ಬಹುರಾಷ್ಟ್ರೀಯ ಔಷಧಿ ಕಂನಿಗಳಿಗೆ ಎದುರಾಗಿ ನಿಂತು ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸುವ ಕೆಲಸ ಮಾಡಿತ್ತು. ಅದು ಎಚ್‌ಐವಿ/ಏಡ್ಸ್ ವಿರುದ್ಧದ ಹೋರಾಟವಾಗಿತ್ತು. ಎಚ್‌ಐವಿ ಚಿಕಿತ್ಸೆಯ ಚಿಕಿತ್ಸಾ ವೆಚ್ಚ ವ್ಯಕ್ತಿಯೊಬ್ಬನಿಗೆ 12,000 ಡಾಲರ್‌ನಿಂದ ಕೇವಲ 300 ಡಾಲರ್‌ಗೆ ಇಳಿಯಿತು. ಇದು ಲಕ್ಷಾಂತರ ಜೀವ ಉಳಿಸಿತು. ಜನರ ಕಲ್ಯಾಣಕ್ಕೆ ಬದ್ಧವಾದ ಇಂತಹ ಅಗತ್ಯತೆ ಈಗ ತುರ್ತಾಗಿ ಜಾರಿಗೆ ಬರಬೇಕಿದೆ.

ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ


ಇದನ್ನೂ ಓದಿ: ಲಸಿಕೆ ಸ್ಟಾಕ್ ಇಲ್ಲ: ಮೇ 1ರಿಂದ ‘ಎಲ್ಲರಿಗೂ ಲಸಿಕೆ’ ಅಭಿಯಾನ ಅಸಾಧ್ಯವೆಂದ 4 ರಾಜ್ಯಗಳು

ಅನುವಾದಿತ ಲೇಖನ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial