ವಿಧಾನಸಭೆಯ ಉಪಚುನಾವಣೆಯಲ್ಲಿ ಬಹಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಹಂಚಿಕೆ ಜಟಾಪಟಿ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಂಡು ಬರುತ್ತಿದೆ.
ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ ಯೋಗೇಶ್ವರ್ ಇಂದು (ಅ.23) ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಯೋಗೇಶ್ವರ್ ಇಂದು ಬೆಳಿಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
#Karnataka: Former Minister CP Yogeshwar to quit @BJP4India & join @INCIndia.
With two days left for the nominations of the assembly by-polls, BJP’s former MLC CP Yogeshwar met CM @siddaramaiah in the presence of KPCC chief and Deputy CM @DKShivakumar & ministers at the Chief… pic.twitter.com/xQWTnhQXXm
— South First (@TheSouthfirst) October 23, 2024
ಯೋಗೇಶ್ವರ್ ಇಂದು ಬೆಳಿಗ್ಗೆ ಮೊದಲು ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಡಿಕೆಶಿ ತಮ್ಮ ಕಾರಿನಲ್ಲೇ ಯೋಗೇಶ್ವರ್‌ನ್ನು ಸಿಎಂ ನಿವಾಸ ಕಾವೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಿಎಂ ಮನೆಯಲ್ಲಿ ಸಚಿವ ಝಮೀರ್ ಅಹ್ಮದ್, ಮಾಜಿ ಸಂಸದ ಡಿ.ಕೆ ಸುರೇಶ್, ಶಾಸಕ ರವಿಕುಮಾರ್ ಗಣಿಗ ಇದ್ದರು.
ನಿನ್ನೆ(ಅ.22) ಬೆಂಬಲಿಗರ ಸಭೆ ನಡೆಸಿದ್ದ ಯೋಗೇಶ್ವರ್, ಇನ್ನೆರಡು ದಿನ ಕಾದು ನೋಡುವುದಾಗಿ ಹೇಳಿದ್ದರು. ಬಿಜೆಪಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇಂದು ಏಕಾಏಕಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದರೆ ಕುಮಾರಸ್ವಾಮಿಗೆ ಅಭ್ಯರ್ಥಿ ಘೋಷಣೆ ಮಾಡಲು ಸುಲಭವಾಗಲಿದೆ. ಆದರೆ, ಮೈತ್ರಿ ನಾಯಕರು ಸೇರಿ ಜೆಡಿಎಸ್-ಬಿಜೆಪಿಯಲ್ಲಿ ಯಾವ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಕುಮಾರಸ್ವಾಮಿ ಜೆಡಿಎಸ್‌ನಿಂದಲೇ ಅಭ್ಯರ್ಥಿ ಹಾಕುವಂತೆ ಪಟ್ಟು ಹಿಡಿದು ಕುಳಿತಂತಿದೆ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಸಿಎಂ, ಡಿಸಿಎಂ ಸೇರಿದಂತೆ ಘಟಾನುಘಟಿಗಳು ಪ್ರಚಾರ ಕಣಕ್ಕೆ ಧುಮುಕುವ ಸಾಧ್ಯತೆ ಇದೆ. ಇದು ಇನ್ನಷ್ಟು ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಬಹುದು.
ಇದನ್ನೂ ಓದಿ : ಜಾತಿಗಣತಿ ವರದಿ ವಿರುದ್ಧ ವೀರಶೈವ-ಲಿಂಗಾಯತ ಮಹಾಸಭೆ ನಿರ್ಣಯ : ಸಚಿವರು, ಶಾಸಕರಿಂದ ಸಹಿ


