ಗಾಝಾ ಪರ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಬಾಂಬೆ ಹೈಕೋರ್ಟ್ ಮಾಡಿರುವ ಟಿಪ್ಪಣಿಯನ್ನು ಸಂವಿಧಾನ ವಿರೋಧಿ ಎಂದಿರುವ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ(ಎಂ) ಪಾಲಿಟ್ ಬ್ಯೂರೋ, ಖಂಡನೆ ವ್ಯಕ್ತಪಡಿಸಿದೆ.
ಈ ಸಂಬಂಧ ಶುಕ್ರವಾರ (ಜುಲೈ 25) ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಾಲಿಟ್ ಬ್ಯೂರೋ, “ನ್ಯಾಯ ಪೀಠದ ಟಿಪ್ಪಣಿಯು ಕೇಂದ್ರ ಸರ್ಕಾರಕ್ಕೆ ಅನುಗುಣವಾಗಿ ಸ್ಪಷ್ಟವಾದ ರಾಜಕೀಯ ಪಕ್ಷಪಾತವನ್ನು ತೋರಿಸುತ್ತದೆ” ಎಂದಿದೆ.
“ನ್ಯಾಯಾಲಯವು ನಮ್ಮ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸುವ ಹಂತಕ್ಕೆ ಹೋಗಿದೆ. ವಿಪರ್ಯಾಸವೆಂದರೆ ರಾಜಕೀಯ ಪಕ್ಷದ ಹಕ್ಕುಗಳನ್ನು ಪ್ರತಿಪಾದಿಸುವ ಸಂವಿಧಾನದ ನಿಬಂಧನೆಗಳ ಬಗ್ಗೆಯಾಗಲಿ, ನಮ್ಮ ದೇಶದ ಇತಿಹಾಸ ಮತ್ತು ಪ್ಯಾಲೆಸ್ತೀನಿಯರೊಂದಿಗಿನ ನಮ್ಮ ಜನರ ಒಗ್ಗಟ್ಟು ಹಾಗೂ ತಾಯ್ನಾಡಿನ ಅವರ ಕಾನೂನು ಬದ್ದ ಹಕ್ಕಿನ ಬಗ್ಗೆಯಾಗಲಿ ನ್ಯಾಯಪೀಠಕ್ಕೆ ತಿಳಿದಿಲ್ಲದಂತಿದೆ” ಎಂದು ಹೇಳಿದೆ.
“ಪ್ಯಾಲೆಸ್ತೀನ್ ಅಥವಾ ಇಸ್ರೇಲ್ ಪರ ವಹಿಸುವುದು ಯಾವ ರೀತಿ ದೂಳೆಬ್ಬಿಸಬಹುದು (ಪರಿಣಾಮ ಬೀರಬಹುದು) ಎಂದು ನಿಮಗೆ ಗೊತ್ತಿಲ್ಲ. ನೀವು ಏಕೆ ಈ ರೀತಿ ಮಾಡುತ್ತೀರಿ? ನೀವು ಪ್ರತಿನಿಧಿಸುವ ಪಕ್ಷವನ್ನು ನೋಡಿದರೆ, ಇದು ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನಿಮಗೆ ಅರ್ಥವಾಗುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ಪೀಠ ಹೇಳಿದೆ.
ಮುಂದುವರೆದು “ನೀವು ಭಾರತದಲ್ಲಿ ನೋಂದಣಿಯಾದ ಒಂದು ಸಂಘಟನೆ. ನೀವು ತ್ಯಾಜ್ಯ ನಿರ್ವಹಣೆ, ಪರಿಸರ ಮಾಲಿನ್ಯ, ಚರಂಡಿ ವ್ಯವಸ್ಥೆ, ನೆರೆ ಮುಂತಾದ ವಿಷಯಗಳನ್ನು ಎತ್ತಿಕೊಳ್ಳಬಹುದಿತ್ತು. ನಾವು ಉದಾಹರಣೆಗಳನ್ನು ಕೊಡುತ್ತಿದ್ದೇವಷ್ಟೇ. ನೀವು ಅವುಗಳ ಬಗ್ಗೆ ಪ್ರತಿಭಟಿಸುತ್ತಿಲ್ಲ, ಬದಲಿಗೆ ನಮ್ಮ ದೇಶದಿಂದ ಸಾವಿರಾರು ಮೈಲಿಗಳಾಚೆ ಏನೋ ನಡೆಯುತ್ತಿದ್ದರೆ ಅದನ್ನು ಪ್ರತಿಭಟಿಸುತ್ತಿದ್ದೀರಿ” ಎಂಬುವುದಾಗಿ ನ್ಯಾಯಾಲಯ ಟಿಪ್ಪಣಿ ಮಾಡಿದೆ ಎಂದಿದೆ.
ನ್ಯಾಯಾಲಯದ ಈ ಟಿಪ್ಪಣಿ, ಕಳೆದ ಶತಮಾನದ 40ರ ದಶಕದಲ್ಲಿ ಮಹಾತ್ಮ ಗಾಂಧಿ, ರಾಷ್ಟ್ರೀಯ ಆಂದೋಲನ ಮತ್ತು ನಂತರ ಸ್ವತಂತ್ರ ಭಾರತದ ವಿದೇಶಾಂಗ ನೀತಿ ಪ್ಯಾಲೆಸ್ತೀನ್ ಜನತೆಯ ಸ್ವಾತಂತ್ರ್ಯ ಮತ್ತು ತಾಯ್ನಾಡಿನ ಹಕ್ಕನ್ನು ಬೆಂಬಲಿಸುವಲ್ಲಿ ಎಂದೂ ಹಿಂಜರಿದಿಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತವೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಖಂಡಿಸಿದೆ.
ಅಲ್ಲದೆ ನ್ಯಾಯಪೀಠ, “ಇಸ್ರೇಲಿ ಆಕ್ರಮಣಕ್ಕೆ ಜಾಗತಿಕವಾಗಿ ವ್ಯಕ್ತವಾಗಿರುವ ನಿಸ್ಸಂದಿಗ್ಧ ಖಂಡನೆಯನ್ನು ಮತ್ತು ವಿಶ್ವಸಂಸ್ಥೆಯ ಸಂಘಟನೆಗಳ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ನಿಲುವುಗಳನ್ನು ಅರಿತಿಲ್ಲ ಎಂಬ ಸಂಗತಿಯನ್ನು ಕೂಡ ಬಯಲು ಮಾಡಿದೆ” ಎಂದಿದೆ.
ಇಂತಹ ಖಂಡನೀಯ ಮನೋಭಾವವನ್ನು ಸ್ಪಷ್ಟವಾಗಿ ತಿರಸ್ಕರಿಸುವಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನರಲ್ಲಿ ನಾವು ಮನವಿ ಮಾಡುತ್ತೇವೆ ಎಂದು ಪಾಲಿಟ್ ಬ್ಯೂರೋ ಹೇಳಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ‘ಜನಾಂಗೀಯ ಹತ್ಯೆ’ಯನ್ನು ಪ್ರತಿಭಟಿಸಲು ಮುಂಬೈ ಪೊಲೀಸರು ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಿಪಿಐ(ಎಂ) ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. “ಮೊದಲು ನಮ್ಮ ದೇಶದ ವಿಷಯಗಳನ್ನು ಕೈಗೆತ್ತಿಕೊಳ್ಳಿ, ನಮ್ಮ ದೇಶದ ನಾಗರಿಕರಿಗೆ ದೇಶಭಕ್ತಿಯನ್ನು ತೋರಿಸಿ” ಎಂದಿದೆ.
“ಭಾರತದಲ್ಲಿ ಈಗಾಗಲೇ ಹಲವಾರು ಸಮಸ್ಯೆಗಳಿವೆ, ಅವುಗಳನ್ನು ಪರಿಹರಿಸಬೇಕಿದೆ. ಹೀಗಿರುವಾಗ ಅರ್ಜಿದಾರರು ಭಾರತದ ನಾಗರಿಕರ ಮೇಲೆ ಪರಿಣಾಮ ಬೀರದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಬೇಕು” ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕಡ್ ಅವರ ವಿಭಾಗೀಯ ಪೀಠ ಹೇಳಿದೆ.
ಜೈಲಿನಿಂದ ತಪ್ಪಿಸಿಕೊಂಡಿದ್ದ ಅಪರಾಧಿ ಬಾವಿಯಲ್ಲಿ ಪತ್ತೆ: ನಾಲ್ವರು ಅಧಿಕಾರಿಗಳು ಅಮಾನತು


