ಸೋಮವಾರ ಸುಪ್ರೀಂ ಕೋರ್ಟ್ ಒಳಗೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ವಕೀಲರೊಬ್ಬರು ಭಾರತದ ಅಟಾರ್ನಿ ಜನರಲ್‌ಗೆ ಪತ್ರ ಬರೆದಿದ್ದಾರೆ.
ರಾಕೇಶ್ ಕಿಶೋರ್ ನ್ಯಾಯ ಪೀಠದ ಮೇಲೆ ಶೂ ಎಸೆದು, ಸಿಜೆಐ ವಿರುದ್ಧ ಘೋಷಣೆಗಳನ್ನು ಕೂಗಿದ್ದು ನ್ಯಾಯಾಂಗದ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪವಾಗಿದೆ ಮತ್ತು ಸುಪ್ರೀಂ ಕೋರ್ಟ್‌ನ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿರುವ ನ್ಯಾಯವಾದಿ ಸುಭಾಷ್ ಚಂದ್ರನ್ ಕೆ.ಆರ್. ಅವರು, 1971ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಕಿಶೋರ್ ವಿರುದ್ದ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕೆಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಘಟನೆಯ ನಂತರವೂ, ರಾಕೇಶ್ ಕಿಶೋರ್ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸದೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ನಡವಳಿಕೆಯು ನ್ಯಾಯಾಲಯವನ್ನು ದೂಷಿಸುವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಸುಭಾಷ್ ಚಂದ್ರನ್ ಹೇಳಿದ್ದಾರೆ.
ರಾಕೇಶ್ ಕಿಶೋರ್ ಅವರ ಕೃತ್ಯವು ಸುಪ್ರೀಂ ಕೋರ್ಟ್‌ನ ಗೌರವ ಮತ್ತು ಪ್ರಾಮುಖ್ಯತೆಗೆ ಧಕ್ಕೆ ತಂದಿದೆ ಎಂದು ಪತ್ರದಲ್ಲಿ ದೂರಲಾಗಿದೆ. ಇದು ಕಾನೂನಿನ ಗೌರವವನ್ನು ಕಡಿಮೆ ಮಾಡುವುದಲ್ಲದೆ, ಭಾರತದ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.
ಹರಿಯಾಣ: ಮೇಲಧಿಕಾರಿಗಳಿಂದ ಜಾತಿ ಕಿರುಕುಳ ಆರೋಪ ಮಾಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಶವವಾಗಿ ಪತ್ತೆ