ಮಹಾ ಕುಂಭದ ಬಗ್ಗೆ ‘ಆಕ್ಷೇಪಾರ್ಹ’ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ (ಎಸ್‌ಪಿ) ಲೋಕಸಭಾ ಸದಸ್ಯ ಅಫ್ಜಲ್ ಅನ್ಸಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶದ ಗಾಜಿಪುರದ ಲೋಕಸಭಾ ಸದಸ್ಯ ಅನ್ಸಾರಿ, ”ಸ್ವರ್ಗದ ಮನೆ ತುಂಬಿದಂತೆ ಕಾಣುತ್ತದೆ; ಯಾರೂ ನರಕದಲ್ಲಿ ಉಳಿಯುವುದಿಲ್ಲ” ಎಂದು ಹೇಳಿದ್ದರು.
ಸುಮಾರು 50 ಕೋಟಿ ಭಕ್ತರು ‘ಸಂಗಮ’ದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿ ಅವರು ಮೇಲಿನ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಪುರಾಣದ ಪ್ರಕಾರ, ಸಂಗಮ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಯಾರೇ ಆಗಲಿ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಾರೆ, ಅವರ ಪಾಪಗಳು ತೊಳೆಯಲ್ಪಡುತ್ತವೆ ಎಂದು ನಂಬಲಾಗಿದೆ.
“ಲಗ್ತಾ ಹೈ ಸ್ವರ್ಗ್ ಹೌಸ್ ಫುಲ್ ಹೋ ಜಾಯೇಗಾ…ನರ್ಕ್ ಮೇ ಕೋ ಬಚೇಗಾ ಹಿ ನಹೀ” (ಸ್ವರ್ಗವು ಮನೆ ತುಂಬಿರುತ್ತದೆ ಮತ್ತು ನರಕದಲ್ಲಿ ಯಾರೂ ಇರುವುದಿಲ್ಲ ಎಂದು ತೋರುತ್ತದೆ) ಎಂದು ಘಾಜಿಪುರದಲ್ಲಿ ದಲಿತ ಸಂತ ರವಿದಾಸ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅನ್ಸಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಮಹಾ ಕುಂಭದಲ್ಲಿ ನಡೆದ ‘ನಿರ್ವಹಣೆಯಲ್ಲಿನ ದುಷ್ಕೃತ್ಯ’ದ ಬಗ್ಗೆ ಅನ್ಸಾರಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ ಎಂದು ವರದಿಯಾಗಿದೆ. “ಜನರು ರೈಲುಗಳ ಕಿಟಕಿಗಳನ್ನು ಒಡೆಯುತ್ತಿದ್ದಾರೆ.. ಭಯಭೀತರಾದ ಮಹಿಳೆಯರು ಮತ್ತು ಮಕ್ಕಳು ಬೋಗಿಗಳ ಒಳಗೆ ನಡುಗುತ್ತಿದ್ದಾರೆ. ಕಾಲ್ತುಳಿತದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಆದರೆ, ರಾಜ್ಯ ಸರ್ಕಾರ ವಿವರಗಳನ್ನು ನೀಡುತ್ತಿಲ್ಲ” ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಘಾಜಿಪುರದ ಶಾದಿಯಾಬಾದ್ ಪೊಲೀಸ್ ಠಾಣೆಯಲ್ಲಿ ಅನ್ಸಾರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಘಾಜಿಪುರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ; ಕೇರಳದಲ್ಲಿ ಮತ್ತೊಂದು ರ‍್ಯಾಗಿಂಗ್ ಪ್ರಕರಣ ಬೆಳಕಿಗೆ; 11 ನೇ ತರಗತಿ ವಿದ್ಯಾರ್ಥಿಯ ಕೈ ಮುರಿತ


