|ಡಾ.ವಾಸು ಎಚ್.ವಿ|
ವೈದ್ಯರುಗಳು ಇನ್ನೊಮ್ಮೆ ಮುಷ್ಕರ ನಡೆಸಿದ್ದಾರೆ. ಈ ಸಾರಿ, ದೇಶಾದ್ಯಂತ. ಶುರುವಾಗಿದ್ದು ಕೊಲ್ಕೊತ್ತಾದಲ್ಲಾದರೂ, ದೇಶದ ಎಲ್ಲೆಡೆಯ ವೈದ್ಯರು ಜೊತೆಗೂಡಿದ್ದಾರೆ. ಹಿಂದೊಮ್ಮೆ ಇದೇ ರೀತಿ ಬೆಂಗಳೂರಿನಲ್ಲಾಗಿತ್ತು. ಆ ಸಂದರ್ಭದಲ್ಲಿ ‘ಗೌರಿ ಲಂಕೇಶ್’ ಪತ್ರಿಕೆಗೆ ಬರೆದ ಈ ಲೇಖನ ಹಲವು ಪ್ರಮುಖ ಪ್ರಶ್ನೆಗಳನ್ನೆತ್ತುತ್ತದೆ. ಹಾಗಾಗಿ ಮತ್ತೊಮ್ಮೆ ಪ್ರಕಟಿಸಲಾಗಿದೆ.
ಮೊನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ಕೆಲವು ಸರ್ಕಾರೀ ವೈದ್ಯರೂ ಅವರಿಗೆ ಸಾಥ್ ನೀಡಿದ್ದರು. ಈ ಪ್ರತಿಭಟನೆ ಹಮ್ಮಿಕೊಳ್ಳಲು ಕಾರಣವಿತ್ತು. ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಸಂಬಂಧಿಕರು, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಐಸಿಯುನಲ್ಲಿನ ಉಪಕರಣಗಳು ಸೇರಿದಂತೆ ಆಸ್ತಿ ಪಾಸ್ತಿ ಧ್ವಂಸ ಮಾಡಿದ್ದರು. ಅದಕ್ಕೆ ಸ್ವಲ್ಪ ದಿನಗಳ ಹಿಂದೆ ಕೆ.ಆರ್.ಪುರದಲ್ಲಿನ ಆಸ್ಪತ್ರೆಯೊಂದರ ಮುಂದೆಯೂ ರೋಗಿಗಳ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು.
ಮಹಾವೀರ್ ಜೈನ್ ಆಸ್ಪತ್ರೆಯವರ ಪ್ರಕಾರ ಮತ್ತು ಅವರ ಪರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ಕೊಟ್ಟವರ ಪ್ರಕಾರ, ಆ ರೋಗಿಗೆ ನೀಡಬೇಕಿದ್ದ ಎಲ್ಲಾ ಲಭ್ಯ ಚಿಕಿತ್ಸೆಗಳನ್ನೂ ನೀಡಲಾಗಿತ್ತು. ಮಾರ್ಚ್ 6ರಂದು ರೋಗಿಯ ಪರಿಸ್ಥಿತಿ ಬಿಗಡಾಯಿಸುತ್ತಿದ್ದುದರಿಂದ, ಐಸಿಯುಗೆ ವರ್ಗಾವಣೆ ಮಾಡಬೇಕೆಂದೂ ಸೂಚಿಸಲಾಗಿತ್ತು. ಆದರೆ ರೋಗಿಯ ಕಡೆಯವರು ಅದಕ್ಕೆ ಒಪ್ಪದೇ ಮನೆಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರು. ‘ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಬಿಡುಗಡೆ ಹೊಂದುವ (Discharge Against Medical Advice)’ ಫಾರಂಗಳಿಗೆ ಸಹಿಯನ್ನೂ ಮಾಡಿದ್ದರು. ಮನೆಗೆ ಕರೆದೊಯ್ದರೆ ಅಲ್ಲಿ, ಆಕ್ಸಿಜನ್ ನೀಡುವುದೂ ಸೇರಿದಂತೆ ಇನ್ನಿತರ ಪರಿಕರಗಳನ್ನು ಜೋಡಿಸಿಕೊಳ್ಳಬೇಕಾಗುತ್ತದಾದ್ದರಿಂದ, ಸಮಯ ಕೇಳಿಕೊಂಡು ಆಸ್ಪತ್ರೆಯ ವಾರ್ಡ್‍ನಲ್ಲಿಯೇ ಉಳಿದುಕೊಂಡಿದ್ದರು. ಆದರೆ, ಮಾರ್ಚ್ 7ರ ಬೆಳಿಗ್ಗೆ ಬಾತ್‍ರೂಂಗೆ ಹೋದ ರೋಗಿ ಕುಸಿದರು.
ರೋಗಿಯನ್ನು ಐಸಿಯುಗೆ ಕೂಡಲೇ ಕರೆದೊಯ್ಯುತ್ತಾ ಜೀವ ಉಳಿಸಲು ಮಾಡಬಹುದಾದ ಎಲ್ಲಾ ಪ್ರಯತ್ನವನ್ನು ಮಾಡಿಯೂ ರೋಗಿ ಉಳಿಯಲಿಲ್ಲ. ಇದಾದ ನಂತರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೇ ಇದ್ದುದರಿಂದಲೇ ಹೀಗಾಯಿತು ಎಂದು ರೋಗಿಯ ಸಂಬಂಧಿಕರು ಮತ್ತು ಸಂಬಂಧಿಕರೆಂದು ಹೇಳಿಕೊಂಡವರು ಸಿಕ್ಕಾಪಟ್ಟೆ ದಾಂಧಲೆ ನಡೆಸಿದರು. ಆಸ್ಪತ್ರೆಯ ನಿರ್ದೇಶಕ ಡಾ.ಮಾರ್ಕರ್ ಅವರ ಮೇಲೂ ಹಲ್ಲೆ ನಡೆಸಿದರು. ವೈದ್ಯರೊಬ್ಬರ ಪ್ರಕಾರ ‘ಅವರು ನಡೆದುಕೊಂಡ ರೀತಿ ನಾಗರಿಕ ಸಮಾಜದ ಎಲ್ಲಾ ರೀತಿ ನೀತಿಗಳಿಗೆ ಮೀರಿದ್ದಾಗಿತ್ತು’. ರೋಗಿಯ ಕಡೆಯವರ ಹೇಳಿಕೆಗಳು ಎಲ್ಲೂ ವರದಿಯಾಗಿಲ್ಲ. ಆದರೆ, ವೈದ್ಯರು ಹೇಳುತ್ತಿರುವ ರೀತಿ ನಡೆದಿರುವ ಸಾಧ್ಯತೆ ಇದೆ.
ಹೀಗಾಗಿ ಮಾರ್ಚ್ 16ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು 4,000ಕ್ಕೂ ಹೆಚ್ಚು ಜನ ವೈದ್ಯಕೀಯ ವೃತ್ತಿ ನಿರತರ ಬೃಹತ್ ಪ್ರತಿಭಟನೆ ನಡೆದಿದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘ, ಭಾರತೀಯ ವೈದ್ಯಕೀಯ ಸಂಘ, ಸರ್ಕಾರೀ ವೈದ್ಯಾಧಿಕಾರಿಗಳ ಸಂಘ ಸೇರಿದಂತೆ ಸುಮಾರು 24 ವಿವಿಧ ಸಂಘ-ಸಂಸ್ಥೆಗಳು ಈ ಪ್ರತಿಭಟನೆಯ ಭಾಗವಾಗಿದ್ದವು. ನಾರಾಯಣ ಹೆಲ್ತ್‍ಸಿಟಿಯ ಡಾ.ದೇವಿಪ್ರಸಾದ್ ಶೆಟ್ಟಿ, ಮಣಿಪಾಲ್ ಸಮೂಹದ ಡಾ.ಸುದರ್ಶನ್ ಬಲ್ಲಾಳ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಹಾಸ್‍ಮ್ಯಾಟ್‍ನ ಡಾ.ಥಾಮಸ್ ಚಾಂಡಿ ಹಾಗೂ ಇನ್ನಿತರ ಘಟಾನುಘಟಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಸ್ವತಃ ಗೃಹ ಸಚಿವ ಕೆ.ಜೆ.ಜಾರ್ಜ್ ಅವರೇ ಸ್ಥಳಕ್ಕೆ ಬಂದು ಮನವಿ ಪತ್ರವನ್ನು ಸ್ವೀಕರಿಸಿದರು.
ಇನ್ನಿತರ ಒತ್ತಾಯಗಳ ಜೊತೆಗೆ ಮುಖ್ಯವಾಗಿ ‘2009ರ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿ ಮೇಲಿನ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒತ್ತಾಯಿಸಲಾಯಿತು. ಗೃಹ ಮಂತ್ರಿಗಳು ಮನವಿ ಪತ್ರ ಸ್ವೀಕರಿಸಿ ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಡೆದ ಗಲಾಟೆಯು ಖಂಡನೀಯವಾದುದು. ಜೀವ ಉಳಿಸುವ ಸಲುವಾಗಿ ಸದುದ್ದೇಶದಿಂದ ಮಾಡುವ ಚಿಕಿತ್ಸೆಯಲ್ಲಿ ಎಡವಟ್ಟಾಗಿಯೋ, ಅಥವಾ ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಿಯೂ ಕೈ ಮೀರಿದ ಕಾರಣಗಳಿಂದಾಗಿ ಸಾವು ಸಂಭವಿಸಬಹುದು. ವೈದ್ಯಕೀಯ ಚಿಕಿತ್ಸೆಗೆ ಕುರಿತಾದ ಎಷ್ಟೋ ಅಂಶಗಳು ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಜೊತೆಗೆ ಕೆಲವರು ಗೊತ್ತಿದ್ದೂ ಬಹಳ ಕೆಟ್ಟದಾಗಿ ನಡೆದುಕೊಳ್ಳುವವರು ಇರುತ್ತಾರೆ. ಈ ರೀತಿ ಮುಂದುವರೆದರೆ, ವೈದ್ಯರು ಯಾವ ಧೈರ್ಯದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಎಂಬ ಆತಂಕವನ್ನು ಎದುರಿಸಬೇಕಾಗುತ್ತದೆ ಎಂಬುದೂ ನಿಜ. ಹಾಗಾಗಿ ಇದಕ್ಕೆ ಕೆಲವು ಸೂಕ್ತ ಕ್ರಮಗಳ ಅಗತ್ಯವಿದೆ.
ಆದರೆ, ಈ ಪರಿಸ್ಥಿತಿಗೆ ಕಾರಣವೇನು? ಇದರ ನಿಜವಾದ ಪರಿಹಾರ ಎಲ್ಲಿ ಅಡಗಿದೆ? ಎಂಬುದನ್ನು ಸೂಕ್ತವಾಗಿ ಪರಿಶೀಲಿಸದಿದ್ದಲ್ಲಿ (if not properly diagnosed) ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲವೆಂಬುದು ಎಲ್ಲರಿಗಿಂತ ಹೆಚ್ಚು ವೈದ್ಯರಿಗೆ ಗೊತ್ತಿದೆ. ಹಾಗಾಗಿ ಇಂತಹ ಪರಿಸ್ಥಿತಿಯು ಉದ್ಭವವಾಗಲು ಇರುವ ಅಸಲೀ ಕಾರಣಗಳತ್ತ ಸ್ವಲ್ಪ ನೋಡೋಣ. ಇದು ಕೇವಲ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಮಾತ್ರ ನಡೆಯುತ್ತಿರುವುದಲ್ಲ; ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸುವುದು ದಿನೇ ದಿನೇ ಹೆಚ್ಚುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ವೈದ್ಯರುಗಳ ಬಗ್ಗೆ ಮತ್ತು ವೈದ್ಯಕೀಯ ವ್ಯವಸ್ಥೆಯ ಬಗ್ಗೆ ದಿನೇ ದಿನೇ ಸಿಟ್ಟು ಹೆಚ್ಚುತ್ತಾ ಇದೆ. ಹೀಗಾಗಿಯೆ ಮೇಲೆ ಹೇಳಲಾದ ಕಾಯ್ದೆಯನ್ನು ಎಲ್ಲಾ ಆಸ್ಪತ್ರೆಗಳಲ್ಲೂ ಎದ್ದು ಕಾಣುವ ಹಾಗೆ ಪ್ರದರ್ಶನ ಮಾಡುತ್ತಿದ್ದರೂ, ದಿನೇ ದಿನೇ ವೈದ್ಯಕೀಯ ಸಿಬ್ಬಂದಿ ಮೇಲೆ ರೋಗಿಗಳ ಸಂಬಂಧಿಕರು ಕೂಗಾಡುವುದು ಹೆಚ್ಚಾಗುತ್ತಿದೆ.
ಇದಕ್ಕೆ ಕಾರಣ – ದೇವಲೋಕದಿಂದ ಇಳಿದು ಬಂದ ವೈದ್ಯ ಲೋಕದ ಪ್ರತಿನಿಧಿಗಳು ಹೇಳುತ್ತಿರುವಂತೆ – ನಮ್ಮ ದೇಶದಲ್ಲಿ ಅನಕ್ಷರತೆ ಹೆಚ್ಚಾಗಿರುವುದು, ಜನರು ಒಳ್ಳೆಯ ಮ್ಯಾನರ್ಸ್ ಕಲಿತುಕೊಳ್ಳದಿರುವುದು ಕಾರಣವಾ? ಅಥವಾ ವೈದ್ಯಕೀಯ ವ್ಯವಸ್ಥೆಯಲ್ಲೇ ದೋಷವಿದೆಯಾ? ಒಂದು ವೇಳೆ, ಈ ದೇಶದ ಜನರು ಇನ್ನೂ ಹಿಂದಿನ ಕಾಲದಲ್ಲೇ ಇದ್ದಾರೆ ಎಂಬುದು ನಿಜವೇ ಆಗಿದ್ದರೆ, ಅದೇ ಹಳೆಯ ಕಾಲವೇ ಇಲ್ಲಿ ‘ವೈದ್ಯೋ ನಾರಾಯಣೋ ಹರಿಃ’ ಎಂದು ಅವರಿಗೆ ಹೇಳಿಕೊಟ್ಟಿತ್ತು. ಬಹುಶಃ ಹಾಗಾಗಿಯೇ ಏನೋ ನಾರಾಯಣನ ಹೆಸರಿಟ್ಟುಕೊಂಡ ಆಸ್ಪತ್ರೆ ಸಮೂಹವೊಂದು ರಾಜ್ಯದ ಮೂಲೆ ಮೂಲೆಗಳಲ್ಲೂ ಹಬ್ಬುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಂತರವೂ, ಈ ನಾಡಿನ ಬಹುಸಂಖ್ಯಾತ ಜನರು ಆಸ್ಪತ್ರೆಗಳಲ್ಲಿ ವೈದ್ಯರಿಗೆ ತಿರುಗಿ ಮಾತನಾಡುವುದಿಲ್ಲ; ಇಷ್ಟೊಂದೇಕೆ ಹಣ ಕೀಳುತ್ತಿದ್ದೀರಿ ಎಂದು ಕೇಳುವುದಿಲ್ಲ. ಸರ್ಕಾರೀ ಆಸ್ಪತ್ರೆಗಳಲ್ಲಿ ಮಾತ್ರವಲ್ಲಾ, ಖಾಸಗೀ ಆಸ್ಪತ್ರೆಗಳಲ್ಲೂ ಸಹಾ ರೋಗಿಗಳಿಗೆ ಅವರ ಖಾಯಿಲೆ ಮತ್ತು ಅದಕ್ಕಿರುವ ಪರಿಹಾರದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತಿಲ್ಲ. ದಿನಕ್ಕೆ 1 ಲಕ್ಷ ಸಂಪಾದನೆ ಮಾಡುವ ವೈದ್ಯರಿಗೂ ತಮ್ಮ ರೋಗಿಗಳ ಜೊತೆ ಮಾತನಾಡಲು ಸಮಯವಿರುವುದಿಲ್ಲ. ಇದಕ್ಕೆ ಅಪವಾದಗಳಿಲ್ಲವೆಂದಲ್ಲ. ಹಲವಾರು ವೈದ್ಯರು ನಿಷ್ಠೆಯಿಂದ ರೋಗಿಗಳ ಸೇವೆ ಮಾಡುತ್ತಿರುವುದು ವಾಸ್ತವ. ಆದರೆ ಒಂದು ಸಮಷ್ಟಿಯಾಗಿ ವೈದ್ಯರಲ್ಲಿ ಹೆಚ್ಚಿನವರು ಏನು ಮಾಡುತ್ತಿದ್ದಾರೆ?
ಹಣದ ಹಿಂದೆ ಬಿದ್ದಿದ್ದಾರೆ. ಇದನ್ನು ಇಲ್ಲ ಎಂದು ಎದೆ ತಟ್ಟಿ ಹೇಳುವ ಛಾತಿ ವೈದ್ಯರುಗಳಿಗಿದೆಯೇ? ಇಲ್ಲ. ಬದಲಿಗೆ, ‘ಉಳಿದೆಲ್ಲಾ ವೃತ್ತಿಪರರಿಗಿಲ್ಲದ ಈ ನೀತಿಯನ್ನು ನಮಗೆ ಮಾತ್ರ ಏಕೆ ಬೋಧಿಸುತ್ತಿದ್ದೀರಿ’ ಎಂದು ಕೇಳುತ್ತಾರೆ. ವಾಸ್ತವದಲ್ಲಿ ಉಳಿದೆಲ್ಲಾ ವೃತ್ತಿಪರರಿಗಿಂತ ಹೆಚ್ಚಾಗಿಯೇ ವೈದ್ಯರು ಹಣದ ಹಿಂದೆ ಬಿದ್ದಿದ್ದಾರೆ. ಒಂದು ವೇಳೆ ನೀವು ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ರಿಯಲ್ ಎಸ್ಟೇಟ್ ದಂಧೆಕೋರರ ಜೊತೆ ಹೋಲಿಸಿಕೊಳ್ಳುವುದಾದರೆ ನೀವು ಹೇಳುವುದು ಸರಿ. ಹಾಗಾದಾಗ, ಈ ಎಲ್ಲಾ ವಿಭಾಗದವರು ಜನ ಸಾಮಾನ್ಯರಿಂದ ಏನು ಮಾತು ಕೇಳಬೇಕಾಗುತ್ತದೋ, ಅದನ್ನು ನೀವೂ ಕೇಳಬೇಕಾಗುತ್ತದೆ. ಒಂದು ವೇಳೆ ಒಬ್ಬ ರಾಜಕಾರಣಿ, ಒಬ್ಬ ಅಧಿಕಾರಿ, ಒಬ್ಬ ಭೂ ವ್ಯಾಪಾರದ ದಲ್ಲಾಳಿ ನ್ಯಾಯವಾದ ಮಾರ್ಗದಿಂದ ಹಣ ಸಂಪಾದಿಸಿದ್ದರೂ ಜನರು ಅವರ ಬಗ್ಗೆ ಮಿಕ್ಕ ಭ್ರಷ್ಟರ ಬಗ್ಗೆ ಏನು ಮಾತಾಡುತ್ತಾರೋ ಅದನ್ನೇ ಮಾತಾಡುತ್ತಾರೆಂಬುದು ನಿಮಗೆ ಗೊತ್ತು. ಆ ರೀತಿಯಲ್ಲಿ ಇಂದು ಇಡೀ ವೈದ್ಯ ಸಮುದಾಯ ಜನರಿಂದ ಮಾತು ಕೇಳುವ ಪರಿಸ್ಥಿತಿ ಬಂದಿದೆ.
ವೈದ್ಯರಲ್ಲಿ ಹೆಚ್ಚಿನವರು ಸೇವೆಯನ್ನೇ ಮಾಡುತ್ತಿದ್ದೇವೆಂದೂ, ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವವರೂ, ಕಾರಣವೇ ಇಲ್ಲದೇ ಹಣ ಕೀಳುವವರು ಕಡಿಮೆಯೆಂದೂ ಕೆಲವರು ಹೇಳುತ್ತಾರೆ. ‘ನ್ಯಾಯಬದ್ಧವಾಗಿ’, ‘ರೋಗಿಗೆ ಸೇವೆಯನ್ನು ನಿಷ್ಠೆಯಿಂದ ಮಾಡಿ’ ಪಡೆದುಕೊಳ್ಳುವ ಹಣವೇ ತಿಂಗಳಿಗೆ ಹತ್ತು ಲಕ್ಷ ಇದ್ದರೆ ಅದು ನ್ಯಾಯವಾ? ನ್ಯಾಯದ ಮಾನದಂಡಗಳನ್ನು ನಮಗೆ ಬೇಕಾದಂತೆ ಮಾಡಿಕೊಂಡಾಗ ಅದು ಸಾಧ್ಯ. ಮನುಷ್ಯರ ನೋವಿನಲ್ಲಿ, ಅಸಹಾಯಕತೆಯಲ್ಲಿ, ನರಳಾಟದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದ ವೈದ್ಯರು ಗಂಭೀರ ಆತ್ಮಾವಲೋಕನಕ್ಕೆ ಇಳಿಯುವ ಅಗತ್ಯವಿದೆ. ಅಂತಹ ಕೆಲವಾದರೂ ಆತ್ಮಾವಲೋಕನವು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದಿದ್ದರೆ, ಈ ಅಂಕಣದಲ್ಲಿ ಈ ಲೇಖನವನ್ನು ಬರೆಯುವ ಅಗತ್ಯವಿರಲಿಲ್ಲ.
ಕೀಲು ಬದಲಾವಣೆ (joint replacement), ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯನ್ನು ವರ್ಷಕ್ಕೆ ಇಂತಿಷ್ಟು ಮಾಡಿದರೆ, ಇಷ್ಟು ಕೋಟಿ ಎಂಬ ಪ್ಯಾಕೇಜ್‍ಗಳನ್ನು ವೈದ್ಯರು ಮಾಡಿಕೊಂಡಿರುವುದು ನಿಜವೇ, ಸುಳ್ಳೇ? ಇನ್‍ಶ್ಯೂರೆನ್ಸ್ ಇದ್ದರೆ ಒಂದು ದರ, ಇಲ್ಲದಿದ್ದರೆ ಒಂದು ದರ ಇರುವುದು ನಿಜವೇ ಸುಳ್ಳೇ? ಸರ್ಕಾರೀ ವಿಮೆಯನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ಉದ್ಘಾಟಿಸಲು ಕಾರಣವಾದ ಪ್ರಮುಖ ವೈದ್ಯರೊಬ್ಬರು ಮೊನ್ನಿನ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಅದೇ ರೀತಿ ಅನಗತ್ಯವಾದ ಶಸ್ತ್ರಚಿಕಿತ್ಸೆಗಳಿಗೆ ಕುಖ್ಯಾತರಾದ ಇನ್ನೊಬ್ಬ ವೈದ್ಯರೂ ಸಹಾ ಅಲ್ಲಿ ಭಾಷಣ ಮಾಡಿದರು. ಇಂತಹವರನ್ನು ನೀವು ನಿಮ್ಮ ಪ್ರತಿಭಟನೆಯ ಮುಂಚೂಣಿಯಲ್ಲಿರಬಾರದವರು ಎಂದು ಭಾವಿಸುತ್ತೀರೊ ಅಥವಾ ಸಾಧ್ಯವಾದರೆ ನೀವೂ ಅವರಂತೆ ಆಗಬೇಕೆಂದು ಬಯಸುತ್ತೀರೋ?
ತಾನು ಅಧಿಕೃತವಾಗಿ ಪಡೆಯುವ ಶಸ್ತ್ರಚಿಕಿತ್ಸೆಯ ವೆಚ್ಚ ಮತ್ತು ಕನ್ಸಲ್ಟೇಷನ್ ವೆಚ್ಚವನ್ನು ಹೊರತುಪಡಿಸಿ, ತನ್ನ ರೋಗಿಯ ಒಟ್ಟಾರೆ ಆಸ್ಪತ್ರೆಯ ವೆಚ್ಚ ಮತ್ತು ರೋಗನಿದಾನ (diagnostic) ಪರೀಕ್ಷೆಗಳಲ್ಲಿ ಕಮೀಷನ್ ಪಡೆಯದ ಪ್ರಾಕ್ಟೀಸಿಂಗ್ ವೈದ್ಯರ ಪ್ರಮಾಣ ಶೇಕಡಾವಾರು ಎಷ್ಟು ಎಂದು ಹೇಳಬಲ್ಲಿರಾ? ಬೆಂಗಳೂರಿನಲ್ಲಿ ಅಂಗಡಿ ತೆರೆದಿಟ್ಟುಕೊಂಡು ಕೂತಿರುವ ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನ್ ಮಾಡುವವರು ಶೇ.40ರಷ್ಟು ಕಮೀಷನ್ ಕೊಡುತ್ತಿರುವುದು ನಿಜವಾ, ಸುಳ್ಳಾ? ಸಾಮಾನ್ಯವಾಗಿ ದೇಹದ ಒಂದು ಭಾಗದ ಎಂಆರ್‍ಐ ಸ್ಕ್ಯಾನ್‍ಗೆ 8000 ರೂ ತೆಗೆದುಕೊಳ್ಳುವ, ಸ್ಕ್ಯಾನಿಂಗ್ ದಂಧೆಕೋರರು ವೈದ್ಯರು ಕಮೀಷನ್ ಬೇಡ ಎಂದರೆ 4,000 ರೂ.ಗಳಿಗೂ ಸ್ಕ್ಯಾನ್ ಮಾಡುತ್ತಾರೆ.
ಇವೆಲ್ಲವೂ ರೋಗಿಗಳಿಗೆ ಗೊತ್ತಿಲ್ಲ ಎಂದು ತಿಳಿಯಬೇಡಿ. ಸಾಕಷ್ಟು ಉತ್ಪ್ರೇಕ್ಷೆಯೊಂದಿಗೆ ಈ ವಿಚಾರವು ಜನಸಾಮಾನ್ಯರಲ್ಲಿ ಚಲಾವಣೆಯಲ್ಲಿದೆ. ಆದರೆ, ಅನಿವಾರ್ಯ ಎಂದಷ್ಟೇ ನಿಮ್ಮಲ್ಲಿಗೆ ಬರುತ್ತಿದ್ದಾರೆ. ಕೆಲವೊಮ್ಮೆ, ವಿವಿಧ ವೈದ್ಯ ಗೆಳೆಯರಿಂದ ಕಾರ್ಪೋರೇಟ್ ಆಸ್ಪತ್ರೆಗಳ ಅಸಲೀ ಸತ್ಯ ಗೊತ್ತಾದಾಗ, ಜನಸಾಮಾನ್ಯರ ಉತ್ಪ್ರೇಕ್ಷೆಗಿಂತ ವಾಸ್ತವವೇ ಕಠೋರವಾಗಿರುವುದು ಕಂಡು ಬರುತ್ತದೆ. ಹಾಗಾಗಿಯೇ ವೈದ್ಯ ಮಹಾಶಯರುಗಳಲ್ಲಿ ಒಂದು ವಿನಂತಿ. ಮೊದಲು ನಿಮ್ಮ ಆತ್ಮಸಾಕ್ಷಿಗಳನ್ನು ಜಾಗೃತವಾಗಿರಿಸಿಕೊಳ್ಳಿ. ಇಡೀ ವೈದ್ಯ ಸಮುದಾಯವೇ ಮಾನ್ಯತೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಯಾವುದೇ ಕಾಯ್ದೆಯೂ ನಿಮ್ಮನ್ನು ರಕ್ಷಿಸಲಾರದು. ಇಷ್ಟಕ್ಕೂ ನಿಮಗೆ ಜನಸಾಮಾನ್ಯರ ಕಷ್ಟ ಅರ್ಥವಾಗದೇ ಇದ್ದಲ್ಲಿ, ನಿಮ್ಮ ಪ್ರತಿಭಟನೆಯ ದಿನ ಸಂಜೆ ಈ ಅಂಕಣಕಾರನಿಗೆ ಆದ ಒಂದು ವ್ಯಕ್ತಿಗತ ಅನುಭವವನ್ನು ಇಲ್ಲಿ ಕಾಣಿಸಲಾಗಿದೆ. ನಿಮ್ಮ ಆತ್ಮಸಾಕ್ಷಿಗೆ ಏನನ್ನಿಸುತ್ತದೋ ಹಾಗೆ ನಡೆದುಕೊಳ್ಳಿ.
ಚಿಕ್ಕಮಗಳೂರಿನ ಒಬ್ಬ ಸಂಬಂಧಿಕರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಳ್ಳುವ ಹಂತಕ್ಕೆ ಜಾರುತ್ತಿದ್ದಾಗ, ನನಗೆ ಒಂದು ಫೋನ್ ಕರೆ ಬಂದಿತು. ಸ್ಕ್ಯಾನ್ ವರದಿ ಏನೆಂದು ಕೇಳಿದಾಗ ಅದು subdural hemorrhage ಎಂದು ಗೊತ್ತಾಯಿತು. ಅಲ್ಲಿನ ವೈದ್ಯರು ಸಮೀಪದ ನಗರಗಳ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ತಿಳಿಸಿ, ‘ತಾವೇ ಅಲ್ಲಿನ ವೈದ್ಯರಿಗೆ ಹೇಳಿ ವ್ಯವಸ್ಥೆ ಮಾಡಿಸುವು’ದಾಗಿ ಹೇಳಿದ್ದರು. ಅದೇನೇ ಇದ್ದರೂ ನಮ್ಮ ಸರ್ಕಾರೀ ಆಸ್ಪತ್ರೆಗಳೇ ವಾಸಿ ಎಂದು ರೋಗಿಯನ್ನು ನಿಮ್ಹಾನ್ಸ್‍ಗೆ ಕರೆತರಲು ಹೇಳಿದೆ. ಇಂದಿಗೂ ನಿಮ್ಹಾನ್ಸ್ ಮತ್ತು ಜಯದೇವ ಆಸ್ಪತ್ರೆಗಳ ಹೇಳತೀರದ ರೋಗಿದಟ್ಟಣೆಗಳ ಹೊರತಾಗಿಯೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ಯಾವುದೇ ಖಾಸಗಿ ಆಸ್ಪತ್ರೆಗಳಿಗಿಂತ ಮಿಗಿಲಾಗಿ.
ಅಲ್ಲಿ ಕೇವಲ 18 ಗಂಟೆಗಳ ಕಾಲ ಮಾತ್ರ ಇಟ್ಟುಕೊಂಡಿದ್ದರು. ಇನ್ನೂ ಒಮ್ಮೆ ಸಿಟಿ ಸ್ಕ್ಯಾನ್ ಹಾಗೂ ಇನ್ನಿತರ ಪರೀಕ್ಷೆಗಳನ್ನು ಮಾಡಿದರು; ಶಸ್ತ್ರಚಿಕತ್ಸೆಯನ್ನೂ ಯಶಸ್ವಿಯಾಗಿ ಮಾಡಿದರು. ಮತ್ತು ಮರುದಿನ ಡಿಸ್‍ಚಾರ್ಜ್ ಮಾಡಿದರು. ಒಟ್ಟು ಖರ್ಚು 5,750 ರೂ.ಗಳು ಆಯಿತು. ಯಾವುದೇ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ (ಚಿಕ್ಕ ಆಸ್ಪತ್ರೆಗಳಲ್ಲಿ ನರರೋಗ ಶಸ್ತ್ರಚಿಕಿತ್ಸಕರು ಇರುವುದಿಲ್ಲ) ಕನಿಷ್ಠ 1 ಲಕ್ಷ ರೂ ಖರ್ಚಾಗುತ್ತಿತ್ತು. ಹೌದು, ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡಲು ದುಡ್ಡಿನ ಗಿಡಗಳನ್ನೇನೂ ಬೆಳೆಸಿಕೊಂಡಿರುವುದಿಲ್ಲ. ಆದರೆ ಇದೇ ಶಸ್ತ್ರಚಿಕಿತ್ಸೆಯನ್ನು ಕನಿಷ್ಠ 25,000 ರೂ.ಗಳಲ್ಲಿ ನಡೆಸಲು ಸಾಧ್ಯ. ಅಂತಹುದಕ್ಕೆ 1 ಲಕ್ಷ ರೂ ಸುಲಿಗೆ ಮಾಡುವುದಕ್ಕೆ ಯಾವ ಸಮಜಾಯಿಷಿ ಕೊಡಬಲ್ಲಿರಿ? ಹಣದ ದಾಹದ ಹೊರತಾಗಿ.
ನಿಮ್ಹಾನ್ಸ್‍ನಲ್ಲಿ ಒಳಗೆ ತುರ್ತು ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗ, ಒಬ್ಬ ಮಧ್ಯವಯಸ್ಸು ದಾಟಿದ ಮಹಿಳೆ ಬಂದು ನನ್ನ ಅಕ್ಕನ ಹತ್ತಿರ ಮೊಬೈಲ್ ಫೋನ್ ಕೇಳಿದ್ದಾರೆ. ನನ್ನ ಅಕ್ಕ, ಆ ಮಹಿಳೆ ಕೇಳಿದ ನಂಬರ್‍ಗೆ ಫೋನ್ ಮಾಡಿಕೊಟ್ಟಿದ್ದಾರೆ. ಆಕೆ ಮಾತನಾಡಿ, ಇನ್ನೊಂದು ಕಡೆಯ ವ್ಯಕ್ತಿಯ ಬಳಿ ಮಾರನೆಯ ದಿನ ಹಣ ತಂದುಕೊಡು ಎಂದು ಗೋಗರೆದಿದ್ದಾರೆ. ಆ ಕಡೆಯ ವ್ಯಕ್ತಿ ಆಗಲ್ಲ ಎಂದಿರಬೇಕು. ಈಕೆ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಅಂತಹ ಖಚಿತ ಭರವಸೆಯೇನೂ ಇಲ್ಲದೇ ಈಕೆ ಫೋನ್ ಕಟ್ ಮಾಡಿದ್ದಾರೆ. ತನ್ನ ಕರವಸ್ತ್ರದಲ್ಲಿ ಕಟ್ಟಿಕೊಂಡಿದ್ದ ಚಿಲ್ಲರೆ ಕಾಸನ್ನು ತೆಗೆದು, ಫೋನ್‍ನ ಖರ್ಚು ನೀಡಲು ಹೊರಟಿದ್ದಾರೆ. ಆಕೆ ಆಸ್ಪತ್ರೆಯಲ್ಲಿ ಇದ್ದದ್ದು, ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ಉಳಿಸಿಕೊಳ್ಳಲು. ಫೋನ್‍ನಲ್ಲಿ ಕೇಳಿದ್ದು ಕೇವಲ 200 ರೂ. ಫೋನ್ ಕೊಟ್ಟವರು ಬಹಳ ನೊಂದುಕೊಂಡು, ಆಕೆ ಕೊಡಲು ಬಂದ ಹಣವನ್ನು ನಿರಾಕರಿಸಿ, ತಾವೇ 500 ರೂ ಕೊಟ್ಟಿದ್ದಾರೆ. ಹಣ ತೆಗೆದುಕೊಳ್ಳಲು ಹಿಂಜರಿಯುತ್ತಾ, ನಂತರ ತೆಗೆದುಕೊಂಡ ಮಹಿಳೆ, ನಂತರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹಣವಿಲ್ಲ ಎನ್ನುವ ಒಂದೇ ಕಾರಣಕ್ಕೆ ಪ್ರತಿನಿತ್ಯ ಎಷ್ಟೋ ಜನ ಸಾಯುತ್ತಿದ್ದಾರೆ. ವರ್ಷಕ್ಕೆ ಹತ್ತೋ, ಇಪ್ಪತ್ತೋ ಜನಕ್ಕೆ ಉಚಿತವಾಗಿ ಚಿಕಿತ್ಸೆ ನೀಡಿ, ವರ್ಷ ಪೂರ್ತಿ ಮಾಡುವ ಸುಲಿಗೆಯನ್ನು ಸಮರ್ಥಿಸಿಕೊಳ್ಳುವ ವೈದ್ಯರು ಇದನ್ನು ಗಮನಿಸಬೇಕು. ಬದಲಾವಣೆ ನಿಮ್ಮಿಂದಲೂ ಸಾಧ್ಯ. ಇನ್ನೂ ಸ್ವಲ್ಪ ವಿಶಾಲವಾಗಿ ಆಲೋಚನೆ ಮಾಡಿ.


