ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರದಿಂದ ಜಾರಿಗೆ ಬರುವಂತೆ ಶ್ರೀನಗರದಲ್ಲಿ ಕರ್ಫ್ಯೂ ವಿಧಿಸಿದೆ. ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಮೊದಲ ವಾರ್ಷಿಕ ದಿನವಾದ ಆಗಸ್ಟ್ 5 ರಂದು ಹಿಂಸಾತ್ಮಕ ಪ್ರತಿಭಟನೆಗಳು ನಡೆಯಬಹುದು ಎಂಬ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಜಿಲ್ಲಾಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಅವರು, ಕರ್ಫ್ಯೂ ತಕ್ಷಣದಿಂದ ಜಾರಿಗೆ ಬರಲಿದ್ದು, ಆಗಸ್ಟ್ 4 ಮತ್ತು ಆಗಸ್ಟ್ 5 ರಂದು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರತ್ಯೇಕತಾವಾದಿ ಮತ್ತು ಪಾಕಿಸ್ತಾನ ಪ್ರಾಯೋಜಿತ ಗುಂಪುಗಳು ಆಗಸ್ಟ್ 5 ಅನ್ನು ಕಪ್ಪು ದಿನವನ್ನಾಗಿ ಆಚರಿಸಲು ಯೋಜಿಸುತ್ತಿವೆ. ಹಿಂಸಾತ್ಮಕ ಪ್ರತಿಭಟನೆಗಳು ನಡೆಯಬಹುದು. ಹಾಗಾಗಿ ಈ ಕರ್ಫ್ಯೂ ಸೂಕ್ತ ಎಂದು ಶ್ರೀನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಸಾರ್ವಜನಿಕ ಜೀವನ ಮತ್ತು ಸಾರ್ವಜನಿಕ ಆಸ್ತಿಗೆ ಅಪಾಯವನ್ನುಂಟುಮಾಡುವ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಬಗ್ಗೆ ನಿರ್ದಿಷ್ಟ ಮಾಹಿತಿಗಳಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೊರೊನಾ ಸಮಯದಲ್ಲಿ ಇಂತಹ ಪ್ರತಿಭಟನೆ ಅಥವಾ ಸಾಮೂಹಿಕ ಸಭೆಗಳು ಹಾನಿಕಾರಕವಾಗಿದೆ ಎಂದು ಚೌಧರಿ ಹೇಳಿದರು.
ಆದರೂ ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಪಾಸ್ ಹೊಂದಿರುವವರಿಗೆ, ಕೊರೊನಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳೆಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ನಿರ್ಬಂಧಗಳು ತಕ್ಷಣದಿಂದ ಜಾರಿಗೆ ಬರಲಿವೆ. ಆಗಸ್ಟ್ 4 ಮತ್ತು 5 ರಂದು ಜಾರಿಯಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ, ಈ ಹಿಂದೆ ಕೊರೊನಾ ಕಾರಣಕ್ಕೆ ಆದೇಶಿಸಲಾದ ನಿರ್ಬಂಧಗಳು ಆಗಸ್ಟ್ 8 ರವರೆಗೆ ಮುಂದುವರಿಯುತ್ತದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಬಿಹಾರ ಸರ್ಕಾರ


