ಕಸ್ಟಡಿ ಸಾವು ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಜಾಮ್‌ನಗರ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2024ರಲ್ಲಿ ಭಟ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ, ಈ ವರ್ಷದ ಜೂನ್‌ನಲ್ಲಿ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಭಟ್ ಮತ್ತು ಇತರ ಮಾಜಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಇದರ ವಿರುದ್ಧ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಸ್ತುತ ಪ್ರಕರಣವು ಪೊಲೀಸರು ವಶಕ್ಕೆ ಪಡೆದ ಪ್ರಭುದಾಸ್ ಮಾಧವ್‌ಜಿ ವೈಷ್ಣಾನಿ ಎಂಬ ವ್ಯಕ್ತಿಯ ಕಸ್ಟಡಿ ಸಾವು ಘಟನೆಗೆ ಸಂಬಂಧಿಸಿದೆ. ಆ ಸಮಯದಲ್ಲಿ ಭಟ್ ಜಾಮ್‌ನಗರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರು ಇತರ ಅಧಿಕಾರಿಗಳೊಂದಿಗೆ ಭಾರತ್ ಬಂದ್ ಸಮಯದಲ್ಲಿ ಗಲಭೆ ಉಂಟು ಮಾಡಿದ ಆರೋಪದ ಮೇಲೆ ವೈಷ್ಣಾನಿ ಸೇರಿದಂತೆ ಸುಮಾರು 133 ಜನರನ್ನು ವಶಕ್ಕೆ ಪಡೆದಿದ್ದರು.
ವೈಷ್ಣಾನಿಯವರ ಸಾವಿಗೆ ಸಂಬಂಧಿಸಿದಂತೆ, ಸೆಷನ್ಸ್ ನ್ಯಾಯಾಲಯವು 2019ರಲ್ಲಿ ಭಟ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಪ್ರವೀಣ್‌ಸಿನ್ಹ್ ಜಲಾ ಅವರಿಗೆ ಐಪಿಸಿ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 506 (1) (ಕ್ರಿಮಿನಲ್ ಬೆದರಿಕೆ ಅಪರಾಧಕ್ಕೆ ಶಿಕ್ಷೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು 2024ರಲ್ಲಿ ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. ಭಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ನಿರಾಕರಿಸಿದೆ.
ಉತ್ತರ ಪ್ರದೇಶ| ದೇವಸ್ಥಾನದ ಬಳಿ ‘ಆಕಸ್ಮಿಕವಾಗಿ’ ಮೂತ್ರ ವಿಸರ್ಜನೆ; ನೆಲ ನೆಕ್ಕುವಂತೆ ದಲಿತ ವೃದ್ದನಿಗೆ ಹಿಂಸೆ


