ಆದಿವಾಸಿ ವ್ಯಕ್ತಿಯೊಬ್ಬರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನ ಆರೋಪ ಹೊತ್ತಿರುವ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಕ್ಟೋಬರ್ 7ರೊಳಗೆ ಬಂಧಿಸಲು ವಿಫಲವಾದರೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಮಧ್ಯಪ್ರದೇಶ ಸರ್ಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಎಚ್ಚರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
“ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿ. ಇಲ್ಲದಿದ್ದರೆ ಈ ವಿಷಯವನ್ನು ಹೇಗೆ ಇತ್ಯರ್ಥಪಡಿಸಬೇಕೆಂದು ನಮಗೆ ಗೊತ್ತಿದೆ. ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಸಿಬಿಐ ಮತ್ತು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ಜುಲೈ 2024ರಲ್ಲಿ, ಮದುವೆಗೆ ಕೆಲ ದಿನಗಳ ಮುನ್ನ, 25 ವರ್ಷದ ದೇವ ಪಾರ್ಧಿ ಎಂಬ ಆದಿವಾಸಿ ಯುವಕ ಮತ್ತು ಅವರ ಚಿಕ್ಕಪ್ಪ ಗಂಗಾರಾಮ್ ಪಾರ್ಧಿ ಅವರನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಬಳಿಕ ದೇವ ಪಾರ್ಧಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬಕ್ಕೆ ತಿಳಿಸಲಾಗಿತ್ತು.
ದೇವ ಪಾರ್ಧಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿಕೊಂಡರೂ, ಕಸ್ಟಡಿಯಲ್ಲಿ ಇಬ್ಬರೂ ವ್ಯಕ್ತಿಗಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮಧ್ಯಪ್ರದೇಶ ಪೊಲೀಸರು ಈ ಪ್ರಕರಣದ ತನಿಖೆಯನ್ನು ‘ನ್ಯಾಯಯುತ’ ಮತ್ತು ‘ಪಾರದರ್ಶಕ ರೀತಿಯಲ್ಲಿ’ ನಡೆಸಿಲ್ಲ ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡ ನಂತರ, ಮೇ 15 ರಂದು ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತ್ತು.
ಅಧಿಕಾರಿಗಳು ಹೊಣೆಗಾರರೆಂದು ಕಂಡುಬಂದರೆ, ಒಂದು ತಿಂಗಳೊಳಗೆ ಅವರನ್ನು ಬಂಧಿಸಬೇಕು ಎಂದು ಸುಪ್ರೀಂ ಕೋರ್ಟ್ ಆ ಸಮಯದಲ್ಲಿ ನಿರ್ದೇಶಿಸಿತ್ತು.
ಮಂಗಳವಾರ, ದೇವ ಪಾರ್ಧಿ ಅವರ ತಾಯಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿಗಳಾದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲು ಸಿಬಿಐಗೆ ಎರಡು ದಿನಗಳ ಕಾಲಾವಕಾಶ ನೀಡಿತ್ತು.
ಈ ವೇಳೆ ಪ್ರತಿಕ್ರಿಯಿಸಿದ್ದ ಸಿಬಿಐ, ಆರೋಪಿ ಪೊಲೀಸ್ ಅಧಿಕಾರಿಗಳಾದ ಸಂಜೀವ್ ಸಿಂಗ್ ಮಾಳವೀಯ ಮತ್ತು ಉತ್ತಮ್ ಸಿಂಗ್ ಕುಶ್ವಾಹ ಏಪ್ರಿಲ್‌ನಿಂದ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿತ್ತು. ಇದನ್ನು ಕೇಳಿದ ನ್ಯಾಯಾಧೀಶರು ಕೆಂಡಾಮಂಡಲರಾಗಿದ್ದರು.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು, ಸಮವಸ್ತ್ರದಲ್ಲಿರುವವರಿಗೆ ಕಾನೂನು ಭಿನ್ನವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಆರೋಪಿಗಳು ಖಾಸಗಿ ವ್ಯಕ್ತಿಗಳಾಗಿದ್ದರೆ ಅವರನ್ನು 15 ದಿನಗಳಲ್ಲಿ ಬಂಧಿಸುತ್ತಿದ್ದರಿ. ಇವರು ಇನ್ಸ್‌ಪೆಕ್ಟರ್‌ಗಳಾಗಿರುವುದರಿಂದ ಬಂಧಿಸಲು ನಿಮಗೆ ಕಷ್ಟವಾಗುತ್ತಿದೆಯಾ? ಎಂದು ನ್ಯಾಯಾಧೀಶರು ಖಾರವಾಗಿ ಪ್ರಶ್ನಿಸಿದ್ದಾರೆ.
ತಲೆಮರೆಸಿಕೊಂಡಿರುವ ಅಧಿಕಾರಿಗಳು ಇನ್ನೂ ಸಂಬಳ ಪಡೆಯುತ್ತಿದ್ದಾರೆ. ಅವರನ್ನು ಏಕೆ ಅಮಾನತುಗೊಳಿಸಿಲ್ಲ? ಎಂದು ಗುರುವಾರದ ವಿಚಾರಣೆ ವೇಳೆ ನ್ಯಾಯಾಧೀಶರು ಕೇಳಿದ್ದರು.
ಆರೋಪಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅವರ ಸಂಬಳವನ್ನು ನಿಲ್ಲಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಶುಕ್ರವಾರ ಪೀಠಕ್ಕೆ ತಿಳಿಸಿದ್ದಾರೆ.
ಆರೋಪಿ ಅಧಿಕಾರಿಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ ಎಂಬ ಸಿಬಿಐ ಹೇಳಿಕೆಯನ್ನು ನ್ಯಾಯ ಪೀಠ ತಿರಸ್ಕರಿಸಿದೆ.
ಆರೋಪಿಗಳ ಮಾಹಿತಿ ನೀಡುವವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಅವರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡಲಾಗಿದೆ. ಟೋಲ್ ಮತ್ತು ಸಾಮಾಜಿಕ ಮಾಧ್ಯಮ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೆ, ಭೌತಿಕ ಕಣ್ಗಾವಲು ಇರಿಸಲಾಗಿದೆ ಎಂಬ ಸಿಬಿಐ ಹೇಳಿಕೆಯನ್ನು ‘ಕಣ್ಣೊರೆಸುವ ತಂತ್ರ’ ಎಂದು ನ್ಯಾಯಾಲಯ ಟೀಕಿಸಿದೆ.
ಅಕ್ಟೋಬರ್ 7 ರೊಳಗೆ ಆರೋಪಿಗಳನ್ನು ಬಂಧಿಸಿ, ಆದೇಶ ಅನುಸರಣಾ ವರದಿಯನ್ನು ಸಲ್ಲಿಸಬೇಕು. ಅಕ್ಟೋಬರ್ 8 ರಂದು ಮುಂದಿನ ವಿಚಾರಣೆಯನ್ನು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
‘ಐ ಲವ್ ಮುಹಮ್ಮದ್’ ವಿವಾದ: ದೇಶದಾದ್ಯಂತ 3000ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು


