ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ನೇಮಿಸಬೇಕು ಎಂಬ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.
ಸಿಡಬ್ಲ್ಯುಸಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರು, “ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ವಿಪಕ್ಷ ನಾಯಕನಾಗಿ ಆಯ್ಕೆ ಮಾಡಬೇಕೆಂಬುದು ಸಿಡಬ್ಲ್ಯೂಸಿಯ ಆಶಯವಾಗಿದೆ” ಎಂದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇರಳದ ಅಲಪ್ಪುಝ ಕ್ಷೇತ್ರದಿಂದ ಹೊಸದಾಗಿ ಚುನಾಯಿತರಾದ ಸಂಸದ ಕೆಸಿ ವೇಣುಗೋಪಾಲ್ ಮಾತನಾಡಿ “ಸಿಡಬ್ಲ್ಯುಸಿ ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ರಾಹುಲ್ ಗಾಂಧಿ ಅವರಿಗೆ ಸರ್ವಾನುಮತದಿಂದ ವಿನಂತಿಸಿದೆ” ಎಂದು ತಿಳಿಸಿದ್ದಾರೆ.
ಸಿಡಬ್ಲ್ಯುಸಿ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿಯವರು ಪಕ್ಷದ ಗೆಲುವಿಗೆ ನಡೆಸಿದ ಪ್ರಯತ್ನಗಳನ್ನು ಶ್ಲಾಘಿಸಿದೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿಯವರ ಎರಡು ಭಾರತ್ ಜೋಡೋ ಯಾತ್ರೆಗಳು ರಾಷ್ಟ್ರ ರಾಜಕೀಯದಲ್ಲಿ ಐತಿಹಾಸಿಕವಾಗಿದ್ದವು. ಇದು ಪಕ್ಷಕ್ಕೆ ಬಲ ತುಂಬುವುದರ ಜೊತೆಗೆ ಕೋಟಿ ಕೋಟಿ ಮತದಾರದಲ್ಲಿ ಪಕ್ಷದ ಮೇಲಿನ ವಿಶ್ವಾಸ ಮತ್ತು ಭರವಸೆಯನ್ನು ಹೆಚ್ಚಿಸಿದೆ. ಚುನಾವಣಾ ಪ್ರಚಾರದ ವೇಳೆ ಸಂವಿಧಾನ ರಕ್ಷಣೆಯ ವಿಷಯವನ್ನು ರಾಹುಲ್ ಗಾಂಧಿ ಬಲವಾಗಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳನ್ನು ಮತದಾರರಿಗೆ ತಲುಪಿಸಿದ್ದಾರೆ. ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರ ಭಯ, ಕಾಳಜಿ ಮತ್ತು ಆಕಾಂಕ್ಷೆಗಳನ್ನು ರಾಹುಲ್ ಆಲಿಸಿದ್ದಾರೆ ಎಂದು ಸಿಡಬ್ಲ್ಯುಸಿ ಶ್ಲಾಘಿಸಿದೆ ಎಂದು ತಿಳಿದು ಬಂದಿದೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮನೀಶ್ ತಿವಾರಿ, ಡಿ.ಕೆ ಶಿವಕುಮಾರ್, ರೇವಂತ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸಿಡಬ್ಲ್ಯುಸಿ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ, “ಖಂಡಿತವಾಗಿಯೂ ಅವರು (ರಾಹುಲ್ ಗಾಂಧಿ) ಲೋಕಸಭೆಯ ವಿಪಕ್ಷ ನಾಯಕನಾಗಬೇಕು. ಇದು ನಮ್ಮ ಕಾರ್ಯಕಾರಿ ಸಮಿತಿಯ ವಿನಂತಿಯಾಗಿತ್ತು. ಅವರು ನಿರ್ಭೀತ ಮತ್ತು ಧೈರ್ಯಶಾಲಿ” ಎಂದಿದ್ದಾರೆ.
ಇದಕ್ಕೂ ಮುನ್ನ ಪಕ್ಷದ ಹಲವು ಮುಖಂಡರು ರಾಹುಲ್ ಗಾಂಧಿ ಅವರು ಪ್ರಮುಖ ಪಾತ್ರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ರಾಹುಲ್ ಗಾಂಧಿ ವಿಪಕ್ಷ ನಾಯಕನಾಗುವುದು 140 ಕೋಟಿ ಭಾರತೀಯರ ಬೇಡಿಕೆಯಾಗಿದೆ ಎಂದಿದ್ದಾರೆ.
ಗುರುದಾಸ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸಂಸದ ಸುಖ್‌ಜಿಂದರ್ ಸಿಂಗ್ ರಾಂಧವಾ ಅವರು, “ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿಗೆ ಪ್ರತ್ಯುತ್ತರ ನೀಡಬಲ್ಲವರು. ಆದ್ದರಿಂದ ಅವರು ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : NEET UG|1,500 ಅಭ್ಯರ್ಥಿಗಳ ಫಲಿತಾಂಶ ಮರು ಪರಿಶೀಲಿಸಲು ಸಮಿತಿ ರಚನೆ: ಎನ್‌ಟಿಎ


