ಭಾನುವಾರ (ಮೇ 27) ರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದ ‘ರೀಮಲ್ ಚಂಡಮಾರುತ’ ಭಾರೀ ಅನಾಹುತ ಸೃಷ್ಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 2 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದಲ್ಲಿ 10 ಜನರು ಬಲಿಯಾಗಿದ್ದಾರೆ.
ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 30 ಸಾವಿರದಷ್ಟು ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ-24-ಪರಗಣ ಮತ್ತು ಉತ್ತರ-24-ಪರಗಣ ಜಿಲ್ಲೆಗಳಲ್ಲಿ ಗಾಳಿಯ ಹೊಡೆತಕ್ಕೆ 1,700 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ ಮತ್ತು ಅನೇಕ ಮರಗಳು ಧರೆಗುರುಳಿವೆ.
ರಕ್ಷಣಾ ತಂಡಗಳು ಮತ್ತು ಆಡಳಿತ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, 24 ಗಂಟೆಯೂ ಕೆಲಸ ಮಾಡುತ್ತಿವೆ. ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವುದು, ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಖಾಲಿ ಮಾಡುವುದು ಸೇರಿದಂತೆ ತುರ್ತು ಕೆಲಸಗಳನ್ನು ಕೈಗೊಂಡಿವೆ.
ಮೇ 26ರಿಂದ ಕೊಲ್ಕತ್ತಾದ ನಿಲ್ಧಾಣದಿಂದ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಅದನ್ನು ಮರುಸ್ಥಾಪಿಸಲಾಗಿದೆ. ವಿವಿಧ ರೀತಿಯ ಹಾನಿ ಸಂಭವಿಸಿರುವ ಜಿಲ್ಲೆಗಳ ಜನರ ನೆರವಿಗೆ 1,400ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಊಟ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
ಸುಮಾರು 2,500 ಮನೆಗಳು ಸಂಪೂರ್ಣವಾಗಿ ಮತ್ತು 27,000 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಪರಿಹಾರ ವಿತರಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿದೆ ಎಂದು ವರದಿಗಳು ಹೇಳಿವೆ.
ಚಂಡಮಾರುತದ ಪರಿಣಾಮ ದಕ್ಷಿಣ-24-ಪರಗಣ, ಉತ್ತರ-24-ಪರಗಣ, ಪುರ್ಬಾ ಮೇದಿನಿಪುರ, ಪಶ್ಚಿಮ ಮೇದಿನಿಪುರ, ಕೋಲ್ಕತ್ತಾ, ಹೌರಾ, ಹೂಗ್ಲಿಯಲ್ಲಿ ಭಾರೀ ಮಳೆಯಾಗಿದೆ.
ನೆರೆಯ ಬಾಂಗ್ಲಾದೇಶದಲ್ಲಿ 10 ಜನರು ಮೃತಪಟ್ಟಿದ್ದು, ಅಲ್ಲಿನ ಕರಾವಳಿ ಭಾಗದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಇದರಿಂದ ಸುಮಾರು 15 ಲಕ್ಷ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಅಲ್ಲಿನ ಪ್ರಾಕೃತಿಕ ವಿಕೋಪ ನಿರ್ವಹಣಾ ಮುಖ್ಯಸ್ಥ ಮಿಜಾನುರಹ್ಮಾನ್ ತಿಳಿಸಿದ್ದಾರೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಯೋಜನೆಗೆ ಪರ್ಯಾಯವನ್ನು ಕಂಡುಹಿಡಿಯಬೇಕು: ಅಮಿತ್ ಶಾ


