ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಮುಂದುವರಿದಿರುವಂತೆಯೇ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುವಂತೆ ಒತ್ತಾಯಿಸಲು ಪಕ್ಷದ ನಾಯಕರನ್ನು ಭೇಟಿ ಮಾಡಲು ನವದೆಹಲಿಗೆ ಪ್ರಯಾಣ ಬೆಳೆಸಿದ್ದ ಕೆಲವು ಕಾಂಗ್ರೆಸ್ ಶಾಸಕರು, ತಮ್ಮ ಬೇಡಿಕೆ ಈಡೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಹೇಳುತ್ತಾ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಶಿವಕುಮಾರ್ ಅವರ ಪದೋನ್ನತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಾನು ಯಾವಾಗಲೂ ಆ ಹೇಳಿಕೆಗೆ ಬದ್ಧನಾಗಿರುತ್ತೇನೆ ಎಂದಿರುವ ಇಕ್ಬಾಲ್ ಹುಸೇನ್ ಶೇ. 200 ರಷ್ಟು, ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮುಖ್ಯಮಂತ್ರಿಯಾಗುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮ ನಾಯಕ (ಶಿವಕುಮಾರ್) ಹೇಳಿದಂತೆ, ಅಧಿಕಾರ ವರ್ಗಾವಣೆಯು ಐದರಿಂದ ಆರು ಪಕ್ಷದ ನಾಯಕರ ನಡುವಿನ ರಹಸ್ಯ ಒಪ್ಪಂದವಾಗಿದೆ ಮತ್ತು ಆ ಐದರಿಂದ ಆರು ಜನರು ನಿರ್ಧರಿಸುತ್ತಾರೆ” ಎಂದು ಮಂಗಳವಾರ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮುಖ್ಯಮಂತ್ರಿ ಹುದ್ದೆಯ ಗೊಂದಲವನ್ನು ಆದಷ್ಟು ಬೇಗ ಕೊನೆಗೊಳಿಸುವಂತೆ ಕೆಲವು ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಿದ್ದರೆ, ಇನ್ನು ಕೆಲವರು ಪ್ರಸ್ತಾವಿತ ಸಂಪುಟ ಪುನರ್ ರಚನೆಯ ಬಗ್ಗೆ ಯುವಕರು ಅಥವಾ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ಹೇಳಿದರು.
ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧ ಭಾಗವನ್ನು ಪೂರ್ಣಗೊಳಿಸಿದ ನಂತರ, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ ಆಡಳಿತ ಪಕ್ಷದೊಳಗಿನ ಆಂತರಿಕ ಅಧಿಕಾರ ಜಗಳ ತೀವ್ರಗೊಂಡಿದೆ.
2023 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ನಡೆಯಲಿದೆ ಎಂಬ ವದಂತಿಯನ್ನು ವರದಿಗಳು ಉಲ್ಲೇಖಿಸಿವೆ.
ಶಿವಕುಮಾರ್ ಅವರನ್ನು ಬೆಂಬಲಿಸುವ ಆರು ಶಾಸಕರ ತಂಡ ಭಾನುವಾರ ರಾತ್ರಿ ಹೈಕಮಾಂಡ್ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಇನ್ನೂ ಕೆಲವರು ಬರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ವಾರ ಸುಮಾರು 10 ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು.
ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು, ಆದರೆ ನಡೆಯುತ್ತಿರುವ ಗೊಂದಲಗಳನ್ನು ಪರಿಹರಿಸುವಂತೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಒತ್ತಾಯಿಸಿದರು.
“ಅಂತಿಮ ನಿರ್ಧಾರದ ಅಗತ್ಯವಿರುವುದರಿಂದ ಗೊಂದಲವನ್ನು ನಿವಾರಿಸಲು ನಾವು ಹೈಕಮಾಂಡ್ ಜೊತೆ ಚರ್ಚಿಸಲು ಹೋಗಿದ್ದೆವು. ಯಾರು ಸಿಎಂ ಆಗುತ್ತಾರೆ ಎಂಬುದು ಮುಖ್ಯವಲ್ಲ; ಪ್ರಸ್ತುತ ಪರಿಸ್ಥಿತಿ ಕಾಂಗ್ರೆಸ್‌ಗೆ ಹಾನಿಕಾರಕವಾಗಿದೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಇದಕ್ಕೆ ಅಂತ್ಯ ಹಾಡಬೇಕು” ಎಂದು ಅವರು ಹೇಳಿದರು, ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆಯೇ ಅಥವಾ ಈ ವಿಷಯವನ್ನು ನಾಯಕತ್ವದೊಂದಿಗೆ ಚರ್ಚಿಸಲಾಗಿದೆಯೇ ಎಂಬುದನ್ನು ದೃಢಪಡಿಸದೆ.
ಸಚಿವ ಸಂಪುಟ ಪುನರ್ ರಚನೆಯ ಸಮಯದಲ್ಲಿ ಹೊಸ ಮುಖಗಳು ಮತ್ತು ಯುವಕರಿಗೆ ಅವಕಾಶ ನೀಡುವಂತೆ ಶಾಸಕರು ಹೈಕಮಾಂಡ್ ಅನ್ನು ವಿನಂತಿಸಿದ್ದಾರೆ ಮತ್ತು ಇದನ್ನು ಪರಿಗಣಿಸಲಾಗುವುದು ಎಂಬ ಸೂಚನೆಗಳು ಬಂದಿವೆ ಎಂದು ಮದ್ದೂರು ಶಾಸಕ ಕೆ.ಎಂ. ಉದಯ್ ಹೇಳಿದರು. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಬೇಡಿಕೆಯ ಬಗ್ಗೆ, ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಮತ್ತು ಎಲ್ಲರೂ ಅದನ್ನು ಪಾಲಿಸುತ್ತಾರೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ತಮ್ಮನ್ನು ಬೆಂಬಲಿಸುವ ಶಾಸಕರು ಮುಖ್ಯಮಂತ್ರಿಯಾಗಿ ಬಡ್ತಿ ನೀಡುವಂತೆ ಒತ್ತಾಯಿಸಲು ದೆಹಲಿಗೆ ಹೋಗಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಆ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಅವರು ಸಚಿವ ಸ್ಥಾನಗಳನ್ನು ಬಯಸುತ್ತಿರಬಹುದು ಎಂದು ಸೂಚಿಸಿದರು. “ನಾನು ಅವರಲ್ಲಿ ಯಾರಿಗೂ ಕರೆ ಮಾಡಿಲ್ಲ ಅಥವಾ ಮಾತನಾಡಿಲ್ಲ. ಅವರು ಏಕೆ ಹೋದರು ಎಂದು ನಾನು ಕೇಳುತ್ತಿಲ್ಲ. ನನಗೆ ಕೇಳುವ ಅಗತ್ಯವಿಲ್ಲ” ಎಂದು ಅವರು ಹೇಳಿದರು.


