ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಅವರ ಕುಟುಂಬ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು ದಾಭೋಲ್ಕರ್ ಕುಟುಂಬದ ಮೇಲ್ಮನವಿ ಪುರಸ್ಕರಿಸಿದ್ದು, ಆರೋಪಿಗಳಾದ ವೀರೇಂದ್ರಸಿನ್ಹ ತಾವಡೆ, ಸಚಿನ್ ಅಂದುರೆ, ಶರದ್ ಕಲಾಸ್ಕರ್, ವಕೀಲ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇವರು ಬಲಪಂಥೀಯ ಗುಂಪುಗಳಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಎನ್ನಲಾಗಿದೆ.
ಪೀಠವು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೂಡ ನೋಟಿಸ್ ಜಾರಿಗೊಳಿಸಿದೆ. ವಕೀಲ ವಿವೇಕ್ ಪಾಟೀಲ್ ಮೂಲಕ ದಾಭೋಲ್ಕರ್ ಕುಟುಂಬ ಮೇಲ್ಮನವಿ ಸಲ್ಲಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ಮೇ 10, 2024 ರಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 34ರ (ಸಾಮಾನ್ಯ ಉದ್ದೇಶ) ಅಡಿ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ದೋಷಿಗಳೆಂದು ಘೋಷಿಸಿದೆ.
ಕೊಲೆ, ಸಾಮಾನ್ಯ ಉದ್ದೇಶ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಎದುರಿಸುತಿದ್ದ ಇತರ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ನ ಸೆಕ್ಷನ್ 16 (ಭಯೋತ್ಪಾದಕ ಕೃತ್ಯ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳಡಿ ಐವರು ಆರೋಪಿಗಳಲ್ಲಿ ಯಾರನ್ನೂ ದೋಷಿ ಎಂದು ಘೋಷಿಸಿಲ್ಲ.
ಆರೋಪಿಗಳು ದಾಭೋಲ್ಕರ್ ಅವರನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಮತ್ತು ಅದಕ್ಕಾಗಿ ಸಂಚು ರೂಪಿಸಿದ್ದರು ಎಂಬ ವಿಶೇಷ ನ್ಯಾಯಾಲಯ ಉಲ್ಲೇಖಿಸಿದ ಅಂಶಗಳನ್ನು ದಾಭೋಲ್ಕರ್ ಕುಟುಂಬ ತಮ್ಮ ಮೇಲ್ಮನವಿಯಲ್ಲಿ ಎತ್ತಿ ತೋರಿಸಿದೆ. ಅಂತಿಮವಾಗಿ ಆರೋಪಿಗಳನ್ನು ಐಪಿಸಿ ಮತ್ತು ಇತರ ನಿಬಂಧನೆಗಳಡಿ ದೋಷಿಗಳು ಎಂದು ಘೋಷಿಸುವಲ್ಲಿ ಕೆಳ ನ್ಯಾಯಾಲಯ ಎಡವಿದೆ ಎಂದು ದೂರಿದೆ.
ಪ್ರಕರಣದಲ್ಲಿ ಯುಎಪಿಎ ಕಾನೂನಿನ ಅನ್ವಯಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಸರಿಯಾಗಿ ವಿಚಾರಣೆ ನಡೆಸುವಲ್ಲಿ ವಿಶೇಷ ನ್ಯಾಯಾಲಯ ವಿಫಲವಾಗಿದೆ ಎಂದು ದಾಭೋಲ್ಕರ್ ಕುಟುಂಬ ಆರೋಪಿಸಿದೆ. ಕೊಲೆ, ಕ್ರಿಮಿನಲ್ ಪಿತೂರಿ, ಯುಎಪಿಎ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಲ್ಲಾ ಐವರು ಆರೋಪಿಗಳನ್ನು ದೋಷಿ ಎಂದು ಘೋಷಿಸಲು ಹೈಕೋರ್ಟ್‌ಗೆ ಒತ್ತಾಯಿಸಿದೆ.
ಇದನ್ನೂ ಓದಿ : ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಎದುರಿಸುತ್ತಿರುವ 151 ಸಂಸದರು-ಶಾಸಕರು, 16 ಜನರ ಮೇಲೆ ರೇಪ್ ಕೇಸ್


