Homeನ್ಯಾಯ ಪಥನೆರೆರಾಜ್ಯಗಳಲ್ಲಿಯೂ ಹೈನುಗಾರಿಕೆ ಬಿಕ್ಕಟ್ಟಿನಲ್ಲಿ...

ನೆರೆರಾಜ್ಯಗಳಲ್ಲಿಯೂ ಹೈನುಗಾರಿಕೆ ಬಿಕ್ಕಟ್ಟಿನಲ್ಲಿ…

- Advertisement -
- Advertisement -

“ಒಂದು ಹಸು ಸಾಕಿದರೆ ಸಾಕು, ಜೀವನ ಹಸನಾಗುತ್ತದೆ” ಎಂಬ ಕಾಲವೊಂದಿತ್ತು. ಆದರೆ ಹೈನೋದ್ಯಮಕ್ಕೆ ಬೆನ್ನುತಿರುಗಿಸಬೇಕು ಎನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಕಳೆದ ಸಂಚಿಕೆಯಲ್ಲಿ ಪ್ರಕಟಿಸಲಾದ ’ಹೈನುಗಾರಿಕೆ ಆಳ-ಅಗಲ: ನಡುಬೀದಿಯಲ್ಲಿ ರೈತ’ ಲೇಖನದಲ್ಲಿ ಕರ್ನಾಟಕದ ಹೈನುಗಾರರ ಪರಿಸ್ಥಿತಿ ಕುರಿತು ಸಣ್ಣ ಅವಲೋಕನ ಮಾಡಲಾಗಿತ್ತು. ಅದೇ ರೀತಿಯಲ್ಲಿ ನೆರೆಹೊರೆಯ ರಾಜ್ಯಗಳಲ್ಲಿ ಹಾಲು ಉತ್ಪಾದಕರ ಪರಿಸ್ಥಿತಿ ಹೇಗಿದೆ ಎಂದು ಪರಾಮರ್ಶಿಸಲು ಹೊರಟರೆ, ಅಲ್ಲಿನ ರೈತರು ಕರ್ನಾಟಕಕ್ಕಿಂತ ಭಿನ್ನವಾಗಿಲ್ಲ ಎಂದು ವಿಷಾದಿಸಬೇಕಾಗುತ್ತದೆ.

“ಒಂದು ಲೀಟರ್ ಹಾಲಿಗೆ ಕನಿಷ್ಠ 50 ರೂಪಾಯಿಗಳನ್ನು ನೀಡಿದರೆ ರೈತರು ಬದುಕುಳಿಯುತ್ತಾರೆ. ಆಗ ಮಾತ್ರ ಹಸು ಸಾಕಾಣಿಕೆಗೆ ತಗಲುತ್ತಿರುವ ವೆಚ್ಚವನ್ನು ಸರಿದೂಗಿಸಬಲ್ಲರು” ಎಂದು ಕರ್ನಾಟಕ ರೈತರು ಒತ್ತಾಯಿಸುತ್ತಿರುವಂತೆ, ತಮಿಳುನಾಡಿನ ರೈತರೂ ಆಗ್ರಹಿಸುತ್ತಿದ್ದಾರೆ.

ಜಾನುವಾರುಗಳ ಮೇವಿನ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರು ಬಿಕ್ಕಟ್ಟಿನಲ್ಲಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಬೇಕಾದರೆ ತಕ್ಷಣ ಹಾಲಿನ ಸಂಗ್ರಹಣೆ ಬೆಲೆಯನ್ನು ಲೀಟರ್‌ಗೆ ಕನಿಷ್ಠ ರೂ.೧೦ರಷ್ಟು ಹೆಚ್ಚಿಸಬೇಕೆಂದು ತಮಿಳುನಾಡಿನ ರೈತರು ಸರ್ಕಾರವನ್ನು ಇತ್ತೀಚೆಗೆ ಆಗ್ರಹಿಸಿದ್ದರು.

ಖಾಸಗಿ ಡೈರಿಗಳಿಗೆ ಸರಿಸಮನಾಗಿ ಮಾರ್ಕೆಟಿಂಗ್‌ಅನ್ನು ಬಲಪಡಿಸಲು ಆವಿನ್ (ತಮಿಳುನಾಡು ಹಾಲು ಉತ್ಪಾದಕರ ಒಕ್ಕೂಟ) ಪ್ರಯತ್ನಿಸಬೇಕು. ಹೆಚ್ಚಿನ ಕುಟುಂಬಗಳು ಜಾನುವಾರುಗಳಿಂದ ಬರುವ ಆದಾಯವನ್ನು
ಅವಲಂಬಿಸಿರುವುದರಿಂದ ಹಾಲಿನ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಜಾನುವಾರುಗಳ ಮೇವಿನ ಬೆಲೆಯಲ್ಲಿ ಆಗಿರುವ ಹೆಚ್ಚಳ ತೀವ್ರ ಆರ್ಥಿಕ ಒತ್ತಡಕ್ಕೆ ಕಾರಣವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ಹಲವರು ಹಾಲು ನೀಡುವ ಹಸುಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಇತ್ತೀಚೆಗೆ ’ದಿ ಹಿಂದೂ’ ವರದಿ ಮಾಡಿತ್ತು.

“ನನ್ನ ಬಳಿ 30 ಹಸುಗಳಿವೆ. ಕಳೆದ 20 ವರ್ಷಗಳಿಂದ ಆವಿನ್‌ಗೆ ಹಾಲು ಸರಬರಾಜು ಮಾಡುತ್ತಿದ್ದೇನೆ. ಇದು ನನ್ನ ಪ್ರಾಥಮಿಕ ಆದಾಯವಾಗಿತ್ತು. ಆದರೆ ಹಿಂಡಿ, ಬೂಸಾ, ಒಣಹುಲ್ಲಿನ ಬೆಲೆಯೂ ತೀವ್ರವಾಗಿ ಏರಿಕೆಯಾಗಿದ್ದರಿಂದ ನಷ್ಟ ಹೆಚ್ಚಾಗಿದೆ. ಆ ಕಾರಣ ಈ ವರ್ಷ20 ಹಸುಗಳನ್ನು ಮಾರಾಟ ಮಾಡಿದ್ದೇನೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿ ಈಗ ಕುರಿ ಸಾಕಾಣಿಕೆಗೆ ಮುಂದಾಗಿದ್ದೇನೆ. ಅನೇಕ ಹಾಲು ಪೂರೈಕೆದಾರರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ” ಎಂದು ತುರೈಯೂರು ಸಮೀಪದ ಕಾಳಿಂಗಮುದಯನ್ಪಟ್ಟಿಯ ಹಾಲು ಉತ್ಪಾದಕ ಎಂ.ರಾಮಯ್ಯ ಹೇಳಿದ್ದು ವರದಿಯಲ್ಲಿ ಉಲ್ಲೇಖಿತವಾಗಿತ್ತು.

ಕರ್ನಾಟಕದಂತೆಯೇ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಹಾಲು ಸರಬರಾಜು ವ್ಯವಸ್ಥೆಯನ್ನು ಮಾಡಿಕೊಂಡಿವೆ. ನೆರೆಯ ರಾಜ್ಯಗಳ ಪರಿಸ್ಥಿತಿ ಅವಲೋಕಿಸುವುದಾದರೆ, ತಮಿಳುನಾಡಿನಲ್ಲಿ ’ತಮಿಳುನಾಡು ಹಾಲು ಉತ್ಪಾದಕರ ಒಕ್ಕೂಟ’ವಿದ್ದು ’ಆವಿನ್ ಇದರ ಟ್ರೇಡ್‌ಮಾರ್ಕ್; ನಮ್ಮಲ್ಲಿ ’ನಂದಿನಿ’ ಬ್ರಾಂಡ್ ಇದ್ದಂತೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ತಮಿಳುನಾಡಿನ ನಿವಾಸಿ ಸೆಂಥಿಲ್ ಪೋಚಮ್‌ಪಲ್ಲಿಯವರು, “ನಮ್ಮಲ್ಲಿ 18-20 ರೂಪಾಯಿಗೆ ರೈತರಿಂದ ಹಾಲು ಖರೀದಿಸುತ್ತಾರೆ. ಹೆಚ್ಚಿನ ಬೆಲೆಗೆ ಮಾರುತ್ತಾರೆ. ಬೂಸಾ ಕಂಪನಿಗಳಿಗೆ ಹಾಗೂ ಹಾಲು ಉತ್ಪನ್ನ ಕಂಪನಿಗಳಿಗೆ ಲಾಭವಿದೆ. ರೈತರು ನಷ್ಟದಲ್ಲೇ ಇದ್ದಾರೆ. ಹಾಲಿನ ಬೆಲೆ ಏರಿಕೆ ಮಾಡಿದರೆ ಬಡವರಿಗೆ ಕಷ್ಟವಾಗುತ್ತದೆ. ಆದರೆ ಹಾಲಿನ ದರ ಕಡಿಮೆಯಾಗಿರುವುದರಿಂದ ರೈತರು ಬೀದಿಗೆ ಹಾಲು ಸುರಿದು ಹೋರಾಟ ಮಾಡುವಂತಾಗಿದೆ” ಎಂದರು.

ನೆರೆಯ ಕೇರಳದಲ್ಲಿ ಮತ್ತೊಂದು ರೀತಿಯ ಸಮಸ್ಯೆ ತಲೆದೋರಿದೆ. ’ಮಿಲ್ಮಾ ಎಂದೇ ಇಲ್ಲಿನ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ ಪ್ರಸಿದ್ಧವಾಗಿದೆ. ’ಮಿಲ್ಮಾ ಹಾಲು ಉತ್ಪನ್ನಗಳಿಗೆ ಕೊಡುವ ಆದ್ಯತೆಯನ್ನು ಕೇರಳಿಗರು ಮತ್ತೆ ಯಾವುದೇ ಹಾಲಿನ ಬ್ರಾಂಡಿಗೂ ನೀಡುವುದಿಲ್ಲ. ಆದರೆ ಹಾಲು ಉತ್ಪಾದಕರಾಗಿ ತೊಡಗಿಸಿಕೊಳ್ಳಲು ಕೇರಳಿಗರು ಹಿಂದೇಟು ಹಾಕುತ್ತಿದ್ದಾರೆ. “ಸರ್ಕಾರ ಪ್ರೋತ್ಸಾಹ ನೀಡಿದರೂ ಘನತೆಯ ಕಾರಣಕ್ಕೆ ಕೇರಳಿಗರು ಹೈನುಗಾರಿಕೆಯನ್ನು ಮಾಡುವುದಿಲ್ಲ ಎನ್ನುತ್ತಾರೆ ಕೇರಳ ನಿವಾಸಿ, ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಶ್ರೀಕುಮಾರ್.

ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಕುಮಾರ್, “ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಿಲ್ಮಾ ಕೇರಳ ಜನತೆಗೆ ಸರಬರಾಜು ಮಾಡುತ್ತದೆ. ಕೇರಳವಷ್ಟೇ ಅಲ್ಲದೆ ತಮಿಳುನಾಡಿನಲ್ಲಿಯೂ ಮಿಲ್ಮಾ ಕೆಲವು ಕೇಂದ್ರಗಳನ್ನು ತೆರೆದಿತ್ತು. ಆದರೆ ಅಲ್ಲಿ ವಿಶ್ವಾಸಾರ್ಹತೆಯ ಕೊರತೆಯಿಂದ ಮುಚ್ಚಲ್ಪಟ್ಟವು. ಕೊನೆಯದಾಗಿ ಮಿಲ್ಮಾ ಕೇರಳದಾದ್ಯಂತ ತನ್ನ ಏಕಸ್ವಾಮ್ಯ ಸಾಧಿಸಿದೆ. ಮಿಲ್ಮಾ ಬ್ರಾಂಡಿಗೆ ಆದ್ಯತೆಯನ್ನು ಕೇರಳ ಜನತೆ ನೀಡುತ್ತಾರೆ” ಎಂದು ತಿಳಿಸಿದರು.

“ಪಶುಪಾಲನೆ, ತೆಂಗಿನ ವ್ಯಾಪಾರ, ಭತ್ತ- ಇವೆಲ್ಲವೂ ಕೃಷಿ ವ್ಯಾಪ್ತಿಗೆ ಬರುತ್ತವೆ. ಕೇರಳದಲ್ಲಿ ಕೃಷಿ ವಲಯ ಸಂಪೂರ್ಣ ಕುಸಿದುಬಿದ್ದಿದೆ. ಕಾರ್ಮಿಕರ ಕೂಲಿ ಹೆಚ್ಚಳವಾಗಿದೆ. ಆದರೆ ಬರುವ ಆದಾಯ ಕಡಿಮೆಯಾಗಿದೆ. ಹೀಗಾಗಿ ಕೃಷಿಯತ್ತ ಜನರು ಆಸಕ್ತರಾಗಿಲ್ಲ. ಕೇರಳದಲ್ಲಿ ಜಾನುವಾರುಗಳ ಮೇವಿಗೆ ಕೊರತೆಯೇನೂ ಆಗುವುದಿಲ್ಲ. ವಿವಿಧ ರೀತಿಯ ಫೀಡ್ಸ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕೃಷಿಯತ್ತ ಜನರು ಆಸಕ್ತಿ ತೋರುತ್ತಿಲ್ಲ. ಶೈಕ್ಷಣಿಕವಾಗಿ ಮುಂದುವರಿದ ಯಾವುದೇ ನಾಡನ್ನು ನೋಡಿದರೂ ಅಲ್ಲಿ ಕೃಷಿಯ ಆಸಕ್ತಿ ಕಡಿಮೆಯಾಗಿರುವುದನ್ನು ಕಾಣಬಹುದು. ಕೇರಳದಲ್ಲೂ ಅಷ್ಟೇ; ಇಲ್ಲಿನ ಜನರು ಕೃಷಿಯತ್ತ ಆಸಕ್ತಿ ತೋರುತ್ತಿಲ್ಲ. ಪದವಿ ಪಡೆದ ಕೇರಳಿಗರು ಕೆನಡಾ, ಇಂಗ್ಲೆಡ್, ಆಸ್ಟ್ರೇಲಿಯಾ ಸೇರಿದಂತೆ ಮೊದಲಾದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ” ಎಂದರು.

“ಮಿಲ್ಮಾ ಘಟಕಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಾಕಷ್ಟು ಕ್ರಮ ಜರುಗಿಸುತ್ತಿದೆ. ಆದರೆ ಜನರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಒಂದು ಲೀಟರ್ ಹಾಲು ನೂರು ರೂಪಾಯಿಯಾದರೂ ಖರೀದಿಸಲು ಸಿದ್ಧರಿದ್ದಾರೆಯೇ ಹೊರತು, ಹಸು ಸಾಕಲು ಆಸಕ್ತಿ ತೋರುವುದಿಲ್ಲ. ಕೇರಳದ ಸಾಮಾಜಿಕ
ಪರಿಸ್ಥಿತಿಯೇ ಆ ರೀತಿ ಇದೆ. ಹಾಲಿಗೆ ಬೇಡಿಕೆ ಇದೆ. ಆದರೆ ಪೂರೈಕೆಯಲ್ಲಿ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಮಿಲ್ಮಾ ಪ್ರಯತ್ನಿಸುತ್ತಿದೆ. ಇತರ ರಾಜ್ಯಗಳಿಂದ ಹಾಲು ಸರಬರಾಜು ಮಾಡಿಕೊಳ್ಳುತ್ತಿದೆ” ಎಂದು ವಿವರಿಸಿದರು.

ಆಂಧ್ರದಲ್ಲಿ ’ಅಮುಲ್
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಕಳೆದ ವರ್ಷ ’ಎಪಿ ಅಮುಲ್ ಯೋಜನೆಯಡಿ’ ಗುಂಟೂರು ಜಿಲ್ಲೆಯಲ್ಲಿ ಹಾಲು ಸಂಗ್ರಹಣೆಗೆ ಚಾಲನೆ ನೀಡಿದರು. ಕರ್ನಾಟಕದಲ್ಲಿ ಕೆಎಂಎಫ್
ಇರುವಂತೆ ಆಂಧ್ರಪ್ರದೇಶದಲ್ಲಿ ಸಹಕಾರಿ ಹಾಲು ಒಕ್ಕೂಟ ವ್ಯವಸ್ಥೆ ಸದೃಢವಾಗಿಲ್ಲ. ಆದರೆ ’ಅಮುಲ್ ರೀತಿಯ ಸಂಸ್ಥೆಯೊಂದಿಗೆ ಭಾಗಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಮುಂದಾಗಿದೆ.

ಸರ್ಕಾರಿ ವಲಯದ ಹಾಲು ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸುವುದಕ್ಕೆ, ಮಹಿಳಾ ಸ್ವಸಹಾಯ ಗುಂಪುಗಳ ಸಬಲೀಕರಣಕ್ಕೆ ಪೂರಕವಾಗಿ ಅಮುಲ್ ಮತ್ತು ರಾಜ್ಯ ಸರ್ಕಾರದ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಎಪಿ ಅಮುಲ್ ಪಲವೆಲ್ಲುವ ಯೋಜನೆಗೆ ಈ ಹಿಂದೆಯೇ ಚಾಲನೆ ನೀಡಲಾಗಿತ್ತು. ಚಿತ್ತೂರು, ಕಡಪ, ಪ್ರಕಾಶಂ ಜಿಲ್ಲೆಗಳ 400ಹಳ್ಳಿಗಳಲ್ಲಿ ಹಾಲು ಸಂಗ್ರಹಿಸಲು ಕ್ರಮ ವಹಿಸಲಾಗಿತ್ತು.

ಅಮುಲ್ ಐಎಫ್‌ಸಿಎನ್ (International Farm Comparison Network) ಶ್ರೇಯಾಂಕದಲ್ಲಿ ಎಂಟನೇ ಸ್ಥಾನದಲ್ಲಿದೆ. ಇದು ಸಹಕಾರಿ ಘಟಕವಾಗಿದೆ. ಮಧ್ಯಸ್ಥಗಾರರು ಡೇರಿ ರೈತರಾಗಿರುವುದರಿಂದ ಲಾಭದಾಯಕ ಬೆಲೆ ದೊರಕುತ್ತದೆ ಎಂದು ಜಗನ್ ಹೇಳುತ್ತಾರೆ. ಸಹಕಾರಿ ಆಂದೋಲನವಾಗಿರುವ ಅಮುಲ್ ಪ್ರತಿ ಲೀಟರ್‌ಗೆ ಈಗಿರುವ ಬೆಲೆಗಿಂತ ಹೆಚ್ಚು ಪಾವತಿಸುತ್ತದೆ. ಅಮುಲ್ ಉತ್ಪಾದಿಸುವ ಚಾಕೊಲೆಟ್‌ಗಳು ಮತ್ತು ಐಸ್‌ಕ್ರೀಮ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೊಗಳಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ತಾಜಾ ಹಾಲು ಮತ್ತು ಮೊಸರಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆಂಧ್ರಪ್ರದೇಶ ಡೇರಿ ಅಭಿವೃದ್ಧಿ ಸಹಕಾರಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಾಬು, “ರಾಜ್ಯದಲ್ಲಿ ಪ್ರಸ್ತುತ 1400 ಗ್ರಾಮಗಳಲ್ಲಿ ಮಹಿಳಾ ಹೈನುಗಾರರಿಂದ ಪಾರದರ್ಶಕವಾಗಿ ಹಾಲು ಪಡೆಯಲಾಗುತ್ತಿದ್ದು, ಮುಂಬರುವ ಎರಡು ಮೂರು ತಿಂಗಳಲ್ಲಿ ಆ ಗ್ರಾಮಗಳ ಸಂಖ್ಯೆ ಇನ್ನೂ 3000 ಹೆಚ್ಚಾಗಲಿದೆ. ಭವಿಷ್ಯದಲ್ಲಿ ರೈತರು ಪ್ರತಿ ಲೀಟರ್‌ಗೆ 75 ರೂ.ವರೆಗೆ ಪಡೆಯಬಹುದು” ಎಂದು ತಿಳಿಸಿದ್ದಾರೆ.

ಆಂಧ್ರ ಪ್ರದೇಶಕ್ಕೆ ಅಮುಲ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದಕ್ಕೆ ಸ್ಥಳೀಯ ರಾಜಕೀಯವೂ ಕೆಲಸ ಮಾಡಿದೆ ಎನ್ನಲಾಗುತ್ತಿದೆ. “ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸ್ಥಾಪಿತ ಹೆರಿಟೇಜ್ ಫುಡ್ ಹೈನು ಉದ್ಯಮದಲ್ಲಿ ಪಾರಮ್ಯ ಸಾಧಿಸಿದೆ. ಆಂಧ್ರಪ್ರದೇಶದಲ್ಲಿ ಸಹಕಾರಿ ಸಂಘಗಳು ಬೆಳವಣಿಗೆಯಾಗದಂತೆ ತಡೆಯುವಲ್ಲಿ ನಾಯ್ಡು ಅವರ ರಾಜಕೀಯವೂ ಕೆಲಸ ಮಾಡಿದೆ. ಈಗ ಅಧಿಕಾರದಲ್ಲಿರುವ ಜಗನ್ ತನ್ನ ರಾಜಕೀಯ ವೈರಿಯಾಗಿರುವ ನಾಯ್ಡು ಅವರ ವ್ಯವಹಾರಕ್ಕೆ ಹೊಡೆತ ನೀಡಲು ಅಮುಲ್ ಜೊತೆ ಹೊರಟಿರಬಹುದು” ಎಂಬ ಅನುಮಾನಗಳನ್ನೂ ಕೆಲವರು ವ್ಯಕ್ತಪಡಿಸುತ್ತಾರೆ.

“ಗುಜರಾತ್ ಮೂಲದ ಅಮುಲ್‌ಗೆ ವಿಶೇಷತೆ ಇದೆ. ಹೈನೋದ್ಯಮದಲ್ಲಿ ಅಮುಲ್‌ಗೆ ಮೊದಲ ಸ್ಥಾನವಿದೆ. ಆದರೆ ಅದು ಆಂಧ್ರಪ್ರದೇಶದಲ್ಲಿ ಮೂರರಲ್ಲಿ ಮತ್ತೊಂದು ಎಂಬಂತಾಗಿದೆ” ಎನ್ನುತ್ತಾರೆ ಆಂಧ್ರದ ಹೋರಾಟಗಾರ
ವೆಂಕಟರಾಮು ಬಾಬು.

ಪತ್ರಿಕೆ ಜೊತೆ ಮಾತನಾಡಿದ ಬಾಬು ಅವರು, “ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಹೈನು ಉದ್ಯಮದಲ್ಲಿ ಖಾಸಗಿಯವರೇ ಅಧಿಪತಿಗಳು. ಅಮುಲ್ ಸಂಸ್ಥೆಯು ಗುಜರಾತ್‌ನಲ್ಲಿ ದೊಡ್ಡ ಸಹಕಾರಿ ಸಂಸ್ಥೆಯಾಗಿರಬಹುದು. ಆದರೆ ಆಂಧ್ರದಲ್ಲಿ ಒಂದು ವ್ಯವಹಾರಿಕ ದೃಷ್ಟಿಯನ್ನಷ್ಟೇ ತೋರುತ್ತಿದೆ. ಲಾಭದ ಉದ್ದೇಶವಷ್ಟೇ ಮುಖ್ಯವಾಗಿದೆ” ಎಂದು ವಿಷಾದಿಸಿದರು.

ಕರ್ನಾಟಕವೇ ಪರವಾಗಿಲ್ಲ: ಎಂ.ಎಸ್.ಶ್ರೀರಾಮ್
ಸಹಕಾರಿ ಕ್ಷೇತ್ರದ ಆಳ ಅಗಲವನ್ನು ಅಧ್ಯಯನ ಮಾಡಿರುವ ಐಐಎಂಬಿ ಪ್ರೊಫೆಸರ್ ಎಂ.ಎಸ್.ಶ್ರೀರಾಮ್ ಅವರು ’ನ್ಯಾಯಪಥ’ದೊಂದಿಗೆ ಮಾತನಾಡಿ, “ಆಂಧ್ರ ಪ್ರದೇಶ, ತಮಿಳುನಾಡಿನ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ನೋಡಿದರೆ ಕರ್ನಾಟಕದ ಕೆಎಂಎಫ್ ಸಂಘಟಿತವಾಗಿದೆ. ಅಮುಲ್ ಬಿಟ್ಟರೆ ಕರ್ನಾಟಕದಲ್ಲೇ ಸಹಕಾರಿ ಹಾಲು ಒಕ್ಕೂಟ ಸದೃಢವಾಗಿದೆ ಎನ್ನಬಹುದು. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿರಬಹುದು. ಆದರೆ
ಸಾಂಸ್ಥಿಕವಾಗಿ ಚೆನ್ನಾಗಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ ರೇವಣ್ಣನವರು ಅಧ್ಯಕ್ಷರಾಗಿದ್ದಾಗ ಕೆಎಂಎಫ್ ಸದೃಢವಾಗಿದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಅಮುಲ್ ಅತ್ಯುತ್ತಮ ಸಂಸ್ಥೆಯಾಗಿ ಬೆಳೆದಿದ್ದರ ಹಿಂದಿನ ಕಾರಣವನ್ನು ತಿಳಿಸಿದ ಅವರು, “ದಶಕಗಳ ಕಾಲ ರಾಜಕಾರಣದಿಂದ ಅಮುಲ್ ದೂರವಿತ್ತು. ಸಣ್ಣ ಪ್ರಮಾಣದ ರಾಜಕಾರಣವಿದ್ದರೂ ಮುಖ್ಯಮಂತ್ರಿಯವರ ಆಣತಿಯಂತೆ ನಡೆಯುತ್ತಿರಲಿಲ್ಲ. ಹಾಲಿನ ಬೆಲೆ ಇಳಿಸುವ ಅಥವಾ ಏರಿಸುವ ನಿರ್ಧಾರದಲ್ಲಿ ಸರ್ಕಾರದ ಅನುಮತಿಯನ್ನು ಬೇಡಲಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ಸದೃಢವಾದರು. ಮೊದಲಿನಿಂದಲೇ ವಿವಿಧ ಹಾಲಿನ ಉತ್ಪನ್ನಗಳತ್ತ ಗಮನ ಹರಿಸಿದ್ದರಿಂದ ಅವರ ಮಾರುಕಟ್ಟೆ ವ್ಯವಸ್ಥೆಯೇ ಬೇರೆ ರೀತಿಯಲ್ಲಿ ಬೆಳೆಯಿತು” ಎಂದು ವಿವರಿಸಿದರು.

“ಈಗ ಅಮುಲ್‌ನಲ್ಲಿ ರಾಜಕಾರಣ ತಲೆದೋರಿದೆ. ನರೇಂದ್ರ ಮೋದಿ, ಅಮಿತ್ ಷಾ ಅವರು ಅಮುಲ್ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಕುರಿತು ಚರ್ಚೆಗಳಾಗಿವೆ” ಎಂದು ತಿಳಿಸಿದರು.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಹೈನುಗಾರಿಕೆಯಲ್ಲಿ ತೋರಿರುವ ಬಿಕ್ಕಟ್ಟಿನಂತೆಯೇ ನೆರೆಹೊರೆಯ ರಾಜ್ಯಗಳ ಹಾಲು ಉತ್ಪಾದಕರೂ ಸಮಸ್ಯೆಯಲ್ಲಿ ಇದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಸಂಘ ಹೊಸ ದಾರಿಯನ್ನು ಕಂಡುಕೊಂಡು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ನಷ್ಟವಾಗದಂತೆ ವ್ಯವಹರಿಸುವುದು ಇಂದಿನ ತುರ್ತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...