ಜಾತಿ ದೌರ್ಜನ್ಯ ಮತ್ತು ಹಿಂಸಾಚಾರದ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಸೋಮವಾರ (ಅ.20) ರಾತ್ರಿ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಗ್ವಾಲಿಯರ್‌ನ ದಲಿತ ಚಾಲಕನನ್ನು ಮೂವರು ಪ್ರಬಲ ಜಾತಿಯ ವ್ಯಕ್ತಿಗಳು ಅಪಹರಿಸಿ, ಹಲ್ಲೆ ಮಾಡಿ, ಬಲವಂತವಾಗಿ ಮೂತ್ರ ಕುಡಿಸಿರುವ ಆರೋಪ ಕೇಳಿ ಬಂದಿದೆ.
ಸಂತ್ರಸ್ತ ಆಸ್ಪತ್ರೆ ಸೇರುವಂತೆ ಮಾಡಿರುವ ಈ ಕ್ರೌರ್ಯವು, ಆಳವಾಗಿ ಬೇರೂರಿರುವ ಜಾತಿ ಹಿಂಸಾಚಾರ ಮತ್ತು ದಲಿತ ಕಾರ್ಮಿಕರ ಘನತೆ ಹಾಗೂ ರಕ್ಷಣೆಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.
ಆರೋಪಿಗಳು ಸಂತ್ರಸ್ತನನ್ನು ಗ್ವಾಲಿಯರ್‌ನ ದೀನದಯಾಳ್ ನಗರದಿಂದ ಅಪಹರಿಸಿ ಭಿಂಡ್‌ನ ಸುರಪುರ ಗ್ರಾಮಕ್ಕೆ ಕರೆದೊಯ್ದಿದ್ದರು. ಅಲ್ಲಿ ಹಿಗ್ಗಾಮುಗ್ಗಾ ಥಳಿಸಿ, ಬಲವಂತವಾಗಿ ಮದ್ಯ ಕುಡಿಸಿ, ಮೂತ್ರ ವಿಸರ್ಜನೆ ಮಾಡಿದ್ದಾರೆ. ನಂತರ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿಗಳು ಹೇಳಿವೆ.
ಸಂತ್ರಸ್ತ ಸಂಬಂಧಿಕರಿಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದರು. ಅವರು ಆತನನ್ನು ಭಿಂಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋನು ಬರುವಾ (22), ಅಲೋಕ್ ಪಾಠಕ್ (40) ಮತ್ತು ಛೋಟು ಓಜಾ (27) ಆರೋಪಿಗಳು. ಎಲ್ಲರೂ ಭಿಂಡ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಠಕ್ ಅವರ ಮಾಹಿತಿ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಹೇಳಿದೆ.
ಪೊಲೀಸರು ಆರೋಪಿಗಳ ಬಂಧನದ ಬಗ್ಗೆ ದೃಢಪಡಿಸಿದ್ದಾರೆ. ಆದರೆ, ಸಂತ್ರಸ್ತಗೆ ಮೂತ್ರ ಕುಡಿಸಲಾಗಿದೆ ಎಂಬುದನ್ನೂ ಒಳಗೊಂಡಂತೆ ಕೆಲವು ಆರೋಪಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಆರೋಪಿಯ ವಾಹನವನ್ನು ಓಡಿಸಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಎಸ್ಪಿ ಪಾಠಕ್ ಹೇಳಿದ್ದಾರೆ. ವರದಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬನ ವಾಹನ ಚಾಲಕನಾಗಿ ದುಡಿಯುತ್ತಿದ್ದ ಸಂತ್ರಸ್ತ, ಇತ್ತೀಚೆಗೆ ಕೆಲಸ ತೊರೆದಿದ್ದರು.
ಹಲ್ಲೆ ಮತ್ತು ಅಪಹರಣಕ್ಕಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶ: ಕೊಟ್ಟ ಹಣ ವಾಪಸ್ ಕೇಳಿದ ದಲಿತ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ವ್ಯಕ್ತಿ


