ಈ ಬಿಜೆಪಿ ಆಡಳಿತಕ್ಕೆ ಬಂದರೆ ಸಾಕು. ಜನಗಳಿಗೆ ಏನಾದರಾಯಿತು ಆದರೆ ದನಗಳ ರಕ್ಷಣೆಯೇ ಅವರಿಗೆ ಮುಖ್ಯವಾಗುತ್ತದೆ. ಅದೂ ಪ್ರಾಮಾಣಿಕವಾದದ್ದಲ್ಲ. ಮುಸ್ಲಿಮರನ್ನು ಪ್ರತ್ಯೇಕಗೊಳಿಸಿ ಓಟಿನಾಟವಾಡಲು ಮಾತ್ರ ’ಗೋವು’ ಎಂಬ ಪ್ರಾಣಿಯನ್ನು ಬಳಸಿಕೊಳ್ಳುತ್ತಾರೆ. ಅದು ಬಿಟ್ಟು ಹಿಂದೂ ಮೇಲ್ಜಾತಿಗಳೇ ಸ್ವತಃ ಟನ್ನುಗಟ್ಟಲೆ ಗೋಮಾಂಸವನ್ನು ರಫ್ತು ಮಾಡುವುದನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ಕೇರಳ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸಂಸದರೇ ಗೋಮಾಂಸ ಮಾರಾಟದ ಪರವಾಗಿದ್ದಾರೆ.
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ನಂತರ ಗೋ ರಕ್ಷಕ ದಳಗಳು ಬೀದಿಬೀದಿಯಲ್ಲಿ ಹುಟ್ಟಿಕೊಂಡವು. ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದ ಈ ಹಿಂದೂ ಮೇಲ್ಜಾತಿ ಗೋರಕ್ಷಕರಿಗೆ ಅಖ್ಲಾಕ್ ಸೇರಿದಂತೆ ಹಲವು ಜೀವಗಳು ಬಲಿಯಾದವು. ಅಷ್ಟೇ ಅಲ್ಲ ದಲಿತರೂ ಸಹ ಬಲಿಯಾದರು. 2002ರಲ್ಲಿ ಬಿಜೆಪಿ ಸರ್ಕಾರವಿಲ್ಲದಿದ್ದಾಗಲೇ ಜಜ್ಜಾರಿನಲ್ಲಿ ದಲಿತರ ಮೇಲೆ ಅಟ್ಟಹಾಸ ಮೆರೆದ ವಿಶ್ವ ಹಿಂದೂ ಪರಿಷತ್ತಿನ ಗೋ ಭಯೋತ್ಪಾದಕರ ಕ್ರೌರ್ಯವನ್ನು ಕಳೆದ ವಾರದ ಇದೇ ಅಂಕಣದಲ್ಲಿ ನೋಡಿದಿರಿ. ಅಂತಹುದೇ ಕ್ರೌರ್ಯ ಮೋದಿ-ಶಾ ಅವರ ತವರು ಜಿಲ್ಲೆಯಲ್ಲಿಯೇ ಸಂಭವಿಸಿತು. ಅದೇ ಊನಾ ಫೈಲ್.
ಜುಲೈ 11, 2016ರಂದು ’ಗಿರ್ ಸೋಮನಾಥ’ ಜಿಲ್ಲೆಯ ’ಊನಾ’ದ ಬಳಿಯಲ್ಲಿರುವ ’ಮೋಟ ಸಮಾಧಿಯಾಲ’ ಎಂಬ ಹಳ್ಳಿಯಲ್ಲಿ ಸತ್ತ ದನದ ಚರ್ಮವನ್ನು ತಲತಲಾಂತರದಿಂದ ಸುಲಿಯುವ ದಲಿತ ಕುಟುಂಬದ ಏಳು ಯುವಕರು ಎಂದಿನಂತೆ ತಮ್ಮ ಕಾಯಕ ಮಾಡುತ್ತಿದ್ದರು. ಆ ಸತ್ತ ದನವನ್ನವರು ಬೇಡಿಯಾ ಜಿಲ್ಲೆಯಿಂದ ತಂದಿದ್ದರು. ಆಗ ಅಲ್ಲಿಗೆ ಎರಡು ಕಾರಿನಲ್ಲಿ ಬಂದ ಒಂದಷ್ಟು ಜನ ಕೆಳಗಿಳಿದು ಅವರ ಬಳಿ ಬಂದು ’ನಾವು ಗೋ ರಕ್ಷಕರು’ ಎಂದರು. ’ದನವನ್ನು ಕೊಂದು ಚರ್ಮ ಸುಲಿಯುತ್ತಿದ್ದೀರಿ’ ಎಂದು ದಲಿತರ ಮೇಲೆ ಆರೋಪ ಹೊರಿಸಿದರು. ಆ ದಲಿತ ಯುವಕರು ’ತಾವು ಸತ್ತ ದನದ ಚರ್ಮ ಸುಲಿಯುತ್ತಿರುವುದಾಗಿ’ ಎಷ್ಟೇ ಹೇಳಿದರೂ ಧರ್ಮಾಂಧತೆಯ ಅಮಲಿನಲ್ಲಿದ್ದ ಆ ಗೋ ರಕ್ಷಕರೆಂಬ ಭಯೋತ್ಪಾದಕರು ಏಳು ಜನ ದಲಿತರನ್ನೂ ಕಾರಿಗೆ ಕಟ್ಟಿಹಾಕಿ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛ ಥಳಿಸಿದರು. ಅದಷ್ಟಕ್ಕೆ ಅವರ ವಿಕೃತಿ ಸಮಾಧಾನವಾಗಲಿಲ್ಲ. ಎರಡೂ ಕಾರಿನಲ್ಲಿ ನಾಲ್ವರನ್ನು ತುಂಬಿಕೊಂಡು ಊನಾ ಪಟ್ಟಣಕ್ಕೆ ಬಂದರು. ಅಲ್ಲಿ ಬೃಹತ್ ಸರ್ಕಲ್‌ನಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾಗಿಸಿ ಮತ್ತೆ ಥಳಿಸಿದರು. ಇದನ್ನು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿಕೊಂಡರು. ಪೊಲೀಸರು ಅಲ್ಲಿಗೆ ಬರುವುದನ್ನು ಕಂಡು ಗೋರಕ್ಷಕ ಭಯೋತ್ಪಾದಕರು ನಂತರ ಓಡಿಹೋದರು.
ಜಜ್ಜಾರ್‌ನಲ್ಲಿ ದಲಿತರನ್ನು ಕೊಂದ ವಿಶ್ವ ಹಿಂದೂ ಪರಿಷತ್ತಿನವರು ಆರೋಪದಿಂದ ತಪ್ಪಿಸಿಕೊಳ್ಳಲು ಸರ್ಕಸ್ ಮಾಡಿದ್ದರು. ಆದರೆ ಊನಾದಲ್ಲಿ ದಲಿತರನ್ನು ಥಳಿಸಿದ್ದ ಗೋ ಭಯೋತ್ಪಾದಕರು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು. ನರೇಂದ್ರ ಮೋದಿಯವರ ಆಡಳಿತದಲ್ಲಿ ಹುಟ್ಟಿಕೊಂಡ ನೂತನ ಫೆನಾಮಿನ ಇದೇ ಆಗಿದೆ. ಈ ಹಿಂದೆ ಅಪರಾಧ ಮಾಡಿ ತಪ್ಪಿಸಿಕೊಳ್ಳಲು ಹೊಂಚು ಹಾಕಲಾಗುತ್ತಿತ್ತು. ಆದರೆ ಮೋದಿಯವರ ಆಡಳಿತದಲ್ಲಿ ಅಪರಾಧ ಮಾಡಿ ತಪ್ಪಿಸಿಕೊಳ್ಳಬೇಕೆನ್ನುವ ಆತಂಕವೇ ಇಲ್ಲ. ಸ್ವತಃ ವಿಡಿಯೋ ಮಾಡಿ ತಾವೇ ಹಂಚುತ್ತಾರೆ. ಏಕೆಂದರೆ ಆರೆಸ್ಸೆಸ್-ಬಿಜೆಪಿ-ಸಂಘ ಪರಿವಾರವೇ ಗೋರಕ್ಷಕರ ಬೆನ್ನಿಗೆ ನಿಂತಿರುವಾಗ, ಗೋ ಭಯೋತ್ಪಾದಕರನ್ನು ಮುಟ್ಟುವವರಾರು? ಮುಸ್ಲಿಮರು ಹಾಗೂ ದಲಿತರನ್ನು ಕೊಂದ ಗೋ ಭಯೋತ್ಪಾದಕರಿಗೆ ಸಂಘಪರಿವಾರ ಸನ್ಮಾನ ಮಾಡುತ್ತದಲ್ಲದೇ ಸ್ವತಃ ಜಾಮೀನು ನೀಡಿ ಹೊರತರುತ್ತದೆ. ಕಾನೂನು ಕ್ರಮಗಳು ಇಂದು ಬಿಜೆಪಿ-ಆರೆಸ್ಸೆಸ್‌ಯೇತರರಿಗೆ ಮಾತ್ರ ಸೀಮಿತವಾಗಿದೆ. ಮೋದಿ ಸರ್ಕಾರದ ಕೃಪಾಕಟಾಕ್ಷವಿರುವವರೆಲರೂ ಏನು ಬೇಕಾದರೂ ಮಾಡಬಹುದು.
ನಂತರ ಆ ಏಳು ದಲಿತರಿಗೆ ಊನಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಮೇಲೆ ಹೆಚ್ಚಿನ ಚಿಕಿತ್ಸೆಗೆ ರಾಜಕೋಟ್‌ನ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ದಲಿತರನ್ನು ಮಾರಣಾಂತಿಕವಾಗಿ ಥಳಿಸಿದ್ದ ವಿಡಿಯೋ ಇಡೀ ಗುಜರಾತಿನ ದಲಿತರ ನಿದ್ದೆಗೆಡಿಸಿತು. ರಾಜ್ಯಾದ್ಯಂತ ಸರಣಿ ಹೋರಾಟಗಳು ಜರುಗಿದವು. ಜುಲೈ 12ರಂದೇ ಗುಜರಾತಿನ ಅಹಮದಾಬಾದ್‌ನಲ್ಲಿ ಹಲವು ದಲಿತ ನಾಯಕರು ಬೀದಿಗಿಳಿದ ಪರಿಣಾಮ ದಲಿತ ಯುವಕರು ಸಿಟ್ಟಿಗೆದ್ದು ಪ್ರತಿಭಟಿಸಿದರು. ರಾಜ್ಯ ಹೆದ್ದಾರಿಯನ್ನು ತಡೆಹಿಡಿದರು. ಸತ್ತ ಪ್ರಾಣಿಗಳ ಕಳೇಬರಗಳನ್ನು ಸರ್ಕಾರಿ ಕಚೇರಿಗಳ ಮುಂದೆ ಎಸೆದರು. ರಸ್ತೆರಸ್ತೆಯಲ್ಲಿ ಕಳೇಬರಗಳನ್ನು ಬಿಸಾಡಿದರು. ಅಕ್ಷರಶಃ ಗುಜರಾತ್ ಒಂದು ವಾರ ಗಬ್ಬು ನಾರುತ್ತಿತ್ತು. ದಲಿತರು ರೊಚ್ಚಿಗೆದ್ದರೆ ಆಗುವ ಪರಿಣಾಮವನ್ನು ಗುಜರಾತ್ ಕಂಡಿತ್ತು. 12 ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸಿದರು. ಅದರಲ್ಲಿ ಒಬ್ಬ ಯುವಕ ಅಸುನೀಗಿದನು. ಇದರ ಪರಿಣಾಮವಾಗಿ ಜುಲೈ 21ರಂದು ರಾಜ್ಯಸಭೆಯಲ್ಲಿ ಈ ಘಟನೆ ಪ್ರತಿಧ್ವನಿಸಿತು.
ದಲಿತ ಯುವಕ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ ಆಗಸ್ಟ್ 15, 2016ರ ಸ್ವಾತಂತ್ರ್ಯ ದಿನಾಚರಣೆಯಂದು ಅಹಮದಾಬಾದ್‌ನಿಂದ ಊನಾದವರೆಗೆ ದಲಿತ ಅಸ್ಮಿತೆ ಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಯಾತ್ರೆಯಲ್ಲಿ ಸುಮಾರು 20,000 ಹೋರಾಟಗಾರರು ಭಾಗವಹಿಸಿದ್ದರು. ಅತಿ ಪ್ರಮುಖವಾಗಿ ಈ ಯಾತ್ರೆಯಲ್ಲಿ ಭಾಗವಹಿಸಿದ್ದ ದಲಿತರು ’ಇನ್ನು ಮುಂದೆ ಸಾಂಪ್ರದಾಯಿಕ ವೃತ್ತಿಯಾದ ಸತ್ತ ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ಮಾಡಲಾರೆವು’ ಎಂಬ ಪ್ರತಿಜ್ಞೆಯನ್ನು ಕೈಗೊಂಡರು. ಆ ಹೋರಾಟದಲ್ಲಿಯೇ ’ದಲಿತರಿಗೆ ಉಳುಮೆ ಮಾಡಲು ಭೂಮಿ ಕೊಡಿ’ ಎಂಬ ಘೋಷವಾಕ್ಯವೂ ಮೊಳಗಿತು. ಬರೋಬ್ಬರಿ ಹತ್ತು ದಿನಗಳು ನಡೆದ ಈ ಯಾತ್ರೆಯಿಂದ ಮನೆಗೆ ಮರಳುತ್ತಿದ್ದಾಗ ದಲಿತರ ಮೇಲೆ ಬಾಂಬ್ ದಾಳಿ ಮಾಡಲಾಯಿತು. 10 ಜನರು ಗಂಭೀರವಾಗಿ ಗಾಯಗೊಂಡರು. ಆಶ್ಚರ್ಯವೆಂದರೆ ಅಲ್ಲಿನ ಬಿಜೆಪಿ ಸರ್ಕಾರ ದಲಿತರ ಮೇಲೆ ಬಾಂಬು ಹಾಕಿದವರನ್ನು ಬಂಧಿಸದೇ, ಅದನ್ನು ಸುಳ್ಳು ಸುದ್ದಿಯೆಂದು ಪ್ರಚಾರಮಾಡಿತು. ಮುಂದುವರೆದು ದಲಿತರ ಮೇಲೆಯೇ 74 ಕೇಸುಗಳನ್ನು ದಾಖಲಿಸಿತು.

ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ದಲಿತ ಕುಟುಂಬಗಳನ್ನು ಭೇಟಿಯಾದರು. ಪ್ರತಿಯೊಂದು ಸಂತ್ರಸ್ತ ಕುಟುಂಬಕ್ಕೂ ಬಿಪಿಎಲ್ ಕಾರ್ಡ್, ನಿವೇಶನ, ಐದು ಎಕರೆ ಜಮೀನು ಹಾಗೂ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ದಲಿತರ ಬಗೆಗೆ ಬಿಜೆಪಿಯವರ ಬಣ್ಣದ ಮಾತು ಬಹುಬೇಗನೇ ಬಯಲಾಗಿತ್ತು. 2018ರಲ್ಲಿ ಇದೇ ಬಿಜೆಪಿ ಸರ್ಕಾರ ಗುಜರಾತಿನ ವಿಧಾನಸಭೆಯಲ್ಲಿ ’ಈ ರೀತಿ ಭರವಸೆ ನೀಡಿದ್ದರ ಬಗ್ಗೆ ದಾಖಲೆಗಳೇ ಇಲ್ಲ’ ಎಂದು ದಲಿತರ ಬಗೆಗಿನ ತನ್ನ ಸುಳ್ಳು ಪ್ರೀತಿಯನ್ನು ಬಯಲುಗೊಳಿಸಿತು. ಸಂತ್ರಸ್ತ ಕುಟುಂಬದವರು ಈ ಮೇಲಿನ ಭರವಸೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ಬಿಜೆಪಿ ಸರ್ಕಾರದ ಕಿವಿ ತೆರೆದುಕೊಳ್ಳಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ ದಲಿತ ಕುಟುಂಬ ದಯಾಮರಣಕ್ಕಾಗಿ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅದರಿಂದಲೂ ನ್ಯಾಯ ಸಿಗದಾಗ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ (ಕೋವಿಂದ್ ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿಯೇ ಊನಾ, ಹತ್ರಾಸ್, ಉನ್ನಾವೋ ಘಟನೆಗಳು ನಡೆದದ್ದು) ಅವರಿಗೆ ದೇಶದ ಯಾವ ಭಾಗದಲ್ಲಿ ತಾರತಮ್ಯವಿಲ್ಲವೋ ಅಲ್ಲಿಗೆ ನಮ್ಮನ್ನು ಸ್ಥಳಾಂತರಿಸಿಕೊಡಿ ಎಂದು ಬೇಡಿಕೊಂಡರು.
ಗುಜರಾತಿನ ಸಿಐಡಿ ಪೊಲೀಸರು ಈ ಪ್ರಕರಣ ಸಂಬಂಧ ಸೆಪ್ಟೆಂಬರ್ 2016ರಲ್ಲಿ 43 ಆರೋಪಿಗಳನ್ನು ಬಂಧಿಸಿದರು. 34 ಗೋರಕ್ಷಕ ಭಯೋತ್ಪಾದಕರ ಮೇಲೆ ಹಲವು ಕೇಸು ದಾಖಲಿಸಿದರು. ಅದರಲ್ಲಿ ನಾಲ್ವರು ಪೊಲೀಸರು ಇದ್ದರು. ಇವರಲ್ಲಿ ಪ್ರಮುಖ ಆರೋಪಿಗೆ ಕೋರ್ಟ್ ಊನಾಕ್ಕೆ ಪ್ರವೇಶ ನಿರ್ಬಂಧ ಹೇರಿ ಜಾಮೀನು ನೀಡಿತು. ಏಪ್ರಿಲ್ 25, 2018ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಗೋರಕ್ಷಕ ಭಯೋತ್ಪಾದಕ ಮತ್ತೊಮ್ಮೆ ಊನಾ ಪ್ರಕರಣದ ಇಬ್ಬರು ದಲಿತ ಯುವಕರನ್ನು ಥಳಿಸಿದನು. ಥಳಿಸಿದ ಆ ದಿನದಂದು ಆ ಇಬ್ಬರು ಯುವಕರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಧಮ್ಮ ಸ್ವೀಕರಿಸುವ ತಯಾರಿಯಲ್ಲಿದ್ದರು. ಡಿಸೆಂಬರ್ 2016ರಂದು ಚಾರ್ಜ್‌ಶೀಟ್ ಹಾಕಲಾಯಿತು. ಆಗಸ್ಟ್ 2018ರಿಂದ ವಿಚಾರಣೆ ಆರಂಭವಾಯಿತು.
ಈಗಲೂ ಊನಾ ದಲಿತರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಸಾಕ್ಷಿ ನುಡಿಯದಂತೆ ನಿರ್ಬಂಧಿಸಲಾಗುತ್ತಿದೆ. ಥಳಿಸಿಕೊಂಡವರಲ್ಲಿ ಇಬ್ಬರು ಯುವಕರು ಹಾಸಿಗೆ ಹಿಡಿದಿದ್ದಾರೆ. ಬಿಜೆಪಿ ಸರ್ಕಾರ ದಲಿತರ ಮತವನ್ನು ಒಡೆಯಲು ದಲಿತರೊಳಗಿನ ಜಾತಿಯನ್ನೇ ಬಳಸಿಕೊಂಡು ಮೊಸಳೆಯಂತೆ ಬಾಯ್ದೆರೆದು ಕುಳಿತಿದೆ. ಅದಾಗಲೇ ದಲಿತ ಶಕ್ತಿಯ ಹಿಂಗಾಲನ್ನು ಹಿಡಿದು ಸಂಪೂರ್ಣ ನುಂಗಲು ಹವಣಿಸುತ್ತಿದೆ.
ಇದನ್ನೂ ಓದಿ: ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು


