ದಲಿತ ಬಾಲಕಿ ಮೇಲೆ ಎರಡು ವರ್ಷಗಳಿಂದ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ 13 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ಪ್ರಸ್ತುತ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಅನಂತಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ 9ರಂದು ಆಕೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಗಳು ಹೇಳಿವೆ.
ಆರೋಪಿಗಳ ವಿರುದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ, ಎಸ್‌ಸಿ /ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಬಿಎನ್‌ಎಸ್‌ನ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಜೂನ್ 9 ರಂದು ಅಚಂಪಲ್ಲಿ ವರ್ಧನ್ (21), ತಲಾರಿ ಮುರಳಿ (25), ಬಡಗೋರ್ಲ ನಂದವರ್ಧನ್ ರಾಜ್ (23), ಅರೆಂಚೇರು ನಾಗರಾಜು (51), ಬೋಯ ಸಂಜೀವ್ (40) ಮತ್ತು ಬುಡಿದ ರಾಜಣ್ಣ (49) ಅವರನ್ನು ಬಂಧಿಸಲಾಗಿತ್ತು. ಜೂನ್ 10 ರಂದು ಇತರ ಏಳು ಜನರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಧರ್ಮಾವರಂ ಪೊಲೀಸ್ ಉಪವಿಭಾಗದ ಅಡಿಯಲ್ಲಿ ವಿಶೇಷ ತಂಡಗಳ ಸಮನ್ವಯದೊಂದಿಗೆ ಆರೋಪಿಗಳನ್ನು ಗುರುತಿಸಲಾಗಿದೆ, ಪತ್ತೆಹಚ್ಚಲಾಗಿದೆ ಮತ್ತು ಬಂಧಿಸಲಾಗಿದೆ ಎಂದು ಶ್ರೀ ಸತ್ಯ ಸಾಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿ ರತ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಬಾಲಕಿಯ ಕೆಲವು ಖಾಸಗಿ ಫೋಟೋ, ವಿಡಿಯೋ ಬಳಸಿಕೊಂಡ ಆರೋಪಿಗಳು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಪ್ರಸ್ತುತ ಅನಂತಪುರ ಜಿಲ್ಲೆಯ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಗರ್ಭಧಾರಣೆಯು ಮುಂದುವರಿದ ಹಂತದಲ್ಲಿರುವ ಕಾರಣ ಗರ್ಭಪಾತ ಮಾಡಿಸದಿರಲು ವೈದ್ಯರು ಮತ್ತು ಜಿಲ್ಲಾ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಹೆರಿಗೆಯ ನಂತರ ಬಾಲಕಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಹುಟ್ಟಲಿರುವ ಮಗುವಿನ ಡಿಎನ್‌ಎ ಪರೀಕ್ಷೆಯು ಕಾನೂನು ಪ್ರಕ್ರಿಯೆಗಳಿಗೆ ನಿರ್ಣಾಯಕವಾಗಿರುವುದರಿಂದ ಅದಕ್ಕೆ ಅನುಮತಿ ಕೋರಲಾಗಿದೆ. ಬಂಧಿತರಲ್ಲಿ ಕೆಲವರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದರೂ, ಜಾತಿ ಅವಹೇಳನ, ಸಮುದಾಯದ ಬಹಿಷ್ಕಾರದ ಆತಂಕ ಮತ್ತು ಮತ್ತೆ ದೌರ್ಜನ್ಯ ನಡೆಯು ಭಯದಿಂದ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಕ್ಕಿಲ್ಲ ಎಂದು ನಾವು ಅಂದಾಜಿಸಿದ್ದೇವೆ ಎಂಬುವುದಾಗಿ ಪೊಲೀಸರು ಮಾಧ್ಯಮಗಳಿಗೆ ಹೇಳಿದ್ದಾರೆ.
ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳಲ್ಲಿ ಒಬ್ಬನನ್ನು ಮದುವೆಯಾಗುವಂತೆ ಬಾಲಕಿಯ ಮೇಲೆ ಕೆಲ ಗ್ರಾಮಸ್ಥರು ಒತ್ತಡ ಹೇರಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತಾನು ಸರ್ಕಾರಿ ಶಾಲಾ ವಿದ್ಯಾರ್ಥಿನಿ ಎಂದು ಹೇಳಿದ್ದು, ಈ ಬಗ್ಗೆ ಪೊಲೀಸರು ಈ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಶಾಲೆ, ಆರೋಗ್ಯ ಮತ್ತು ಮಕ್ಕಳ ರಕ್ಷಣಾ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಿದೆಯೇ ಎಂದು ನೋಡುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಸಂತ್ರಸ್ತೆಯ ತಾಯಿ ಕೂಲಿ ಕಾರ್ಮಿಕರಾಗಿದ್ದು, ಆಕೆಯ ಪತಿ ನಿಧನರಾಗಿದ್ದಾರೆ. ಬಾಲಕಿಯ ಕುಟುಂಬದ ದುರ್ಬಲ ಪರಿಸ್ಥಿತಿಯು ಈ ಪ್ರಕರಣದಲ್ಲಿ ಅವರನ್ನು ಸಮುದಾಯದ ಒತ್ತಡ ಮತ್ತು ಮೌನಕ್ಕೆ ಹೆಚ್ಚು ಒಳಗಾಗುವಂತೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಕೆಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಕೆಲ ಅಪ್ರಾಪ್ತ ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಈ ನಡುವೆ ಜಿಲ್ಲಾಡಳಿತವು ಸಂತ್ರಸ್ತ ಬಾಲಕಿಯ ಸುರಕ್ಷತೆಯ ಭರವಸೆ ನೀಡಿದೆ. ಆಕೆಯ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ, ಕಾನೂನು ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವ ಮತ್ತು ಚೇತರಿಕೆಯ ಸಮಯದಲ್ಲಿ ಮಾನಸಿಕ ಬೆಂಬಲವನ್ನು ನೀಡುವ ವಿಶ್ವಾಸ ವ್ಯಕ್ತಪಡಿಸಿದೆ.
ಅಂತರ್ಜಾತಿ ಮದುವೆಗೆ ವಿರೋಧ: ತಲೆ ಬೋಳಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು!


