Homeಚಳವಳಿದಲಿತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದ ಶವಸಂಸ್ಕಾರ: ಪೂಜಾರಿಯ ಬಂಧನ

ದಲಿತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮತ್ತು ಬಲವಂತದ ಶವಸಂಸ್ಕಾರ: ಪೂಜಾರಿಯ ಬಂಧನ

ಈ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೀಮ್ ಆರ್ಮಿ ಸೇರಿದಂತೆ ಇತರರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ನಂತರ ಬಲವಂತವಾಗಿ ಶವಸಂಸ್ಕಾರ ಮಾಡಿದ ಆರೋಪದ ಮೇಲೆ ಪೂಜಾರಿ ಪಂಡಿತ್ ರಾಧೆ ಶ್ಯಾಮ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಮೋಹನ್ ಲಾಲ್ ಮತ್ತು ಸುನೀತಾ ದೇವಿ ಎಂಬ ದಂಪತಿಗಳು ದಂಪತಿಗಳು 9 ವರ್ಷದ ಮಗಳೊಂದಿಗೆ ಹಳೆಯ ನಂಗಲ್ ಗ್ರಾಮದಲ್ಲಿ ಶ್ಮಶಾನದ ಮುಂಭಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಭಾನುವಾರ ಸಂಜೆ 5.30ರ ಸಮಯಕ್ಕೆ ಶ್ಮಶಾನದಲ್ಲಿನ ಕೂಲರ್‌ನಲ್ಲಿ ನೀರು ತರಲು ಅಪ್ರಾಪ್ತ ಬಾಲಕಿ ಹೋಗಿದ್ದಳು. ಆದರೆ ಸಂಜೆ 6 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಅದೇ ಸಮಯಕ್ಕೆ ಶ್ಮಶಾನದಲ್ಲಿನ ಪೂಜಾರಿ ಮತ್ತು ಇತರರು ಸುನೀತಾ ದೇವಿಯವರನ್ನು ಕರೆದು ಅವರ ಮಗಳ ಮೃತದೇಹ ತೋರಿಸಿ ನೀರು ತರುವಾಗ ಕರೆಂಟ್ ಷಾಕ್ ತಗಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.

ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೆ ಅವರು ಪೋಸ್ಟ್ ಮಾರ್ಟಂ ಮಾಡುತ್ತಾರೆ, ನಿಮ್ಮ ಮಗಳ ದೇಹವನ್ನು ಛಿದ್ರ ಛಿದ್ರ ಮಾಡುತ್ತಾರೆ. ಹಾಗಾಗಿ ಬೇಗನೇ ಶವಸಂಸ್ಕಾರ ಮಾಡೋಣ ಎಂದು ತಾಯಿ ಬಳಿ ಹೆದರಿಸಿದರು. ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಒಪ್ಪಿಗೆ ಪಡೆಯದೇ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೋಷಕರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವಿನ ಎಡ ಮಣಿಕಟ್ಟು ಮತ್ತು ಮೊಣಕೈ ನಡುವೆ ಸುಟ್ಟ ಗುರುತುಗಳಿದ್ದು, ಆಕೆಯ ತುಟಿಗಳು ಸಹ ನೀಲಿ ಬಣ್ಣದಲ್ಲಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ನೆರೆಹೊರೆಯ ಜನರು ಪೂಜಾರಿಯನ್ನು ಥಳಿಸಿದಾಗ ಆತ ಅತ್ಯಾಚಾಸವೆಸಗಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೋಷಕರು ಮೂಕನಾಯಕ ಚಾನೆಲ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಂತರ ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳ ತಲುಪುವ ವೇಳೆಗೆ ಮೃತ ಬಾಲಕಿಯ ಸುಟ್ಟ ಕಾಲುಗಳು ಮಾತ್ರ ಸಿಕ್ಕಿವೆ. ಸ್ಥಳೀಯರಿಂದ ಪ್ರತಿಭಟನೆ ನಡೆದ ನಂತರ ಪೊಲೀಸರು FSL ತಂಡವನ್ನು ಕರೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪೂಜಾರಿ ಸೇರಿದಂತೆ ಇತರ ಮೂವರ ಮೆಲೆ FIR ದಾಖಲಿಸಿ, ಬಂಧಿಸಿದ್ದಾರೆ.

ಈ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭೀಮ್ ಆರ್ಮಿ ಸೇರಿದಂತೆ ಇತರರು ತೀವ್ರವಾಗಿ ಖಂಡಿಸಿದ್ದಾರೆ. ಭೀಮ್ ಆರ್ಮಿ ತಂಡ ಸ್ಥಳಕ್ಕೆ ಭೇಟಿನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ “ದೆಹಲಿಯಲ್ಲಿ 9 ವರ್ಷದ ಬಾಲಕಿಯ ಮೇಲೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ. ನಮ್ಮ ತಂಡ ಸ್ಥಳದಲ್ಲಿದೆ. ಇದು ನನ್ನ ಸ್ವಂತ ಕುಟುಂಬ. ಅವಳು ನನ್ನ ಸಹೋದರಿ. ನಾಳೆ ನಾನೇ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಹೋಗುತ್ತೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದಿದ್ದಾರೆ.

ಹತ್ರಾಸ್ ರೀತಿಯ ಭಯಾನಕ ಘಟನೆ ದೆಹಲಿಯಲ್ಲಿ ಪುನರಾವರ್ತನೆಯಾಗಿದೆ. ದಲಿತ ಬಾಲಕಿಯೊಬ್ಬಳನ್ನು ಶ್ಮಶಾನದಲ್ಲಿ ಅತ್ಯಾಚಾರವೆಸಗಿ ಮತ್ತು ಕುಟುಂಬದ ಒಪ್ಪಿಗೆಯಿಲ್ಲದೆ ಪೂಜಾರಿ ಅಂತ್ಯಸಂಸ್ಕಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಾವು ಮತ್ತೊಮ್ಮೆ ಇಂತಹ ಭಯಾನಕ ಅಪರಾಧಗಳಿಗೆ ಮೂಕ ಪ್ರೇಕ್ಷಕರಾಗಲಿದ್ದೇವೆಯೇ? ಎಂದು ಮಾನವ ಹಕ್ಕು ಕಾರ್ಯಕರ್ತ ಬೆಜವಾಡ ವಿಲ್ಸನ್ ಪ್ರಶ್ನಿಸಿದ್ದಾರೆ.

ಈ ಅಮಾನುಷ ಘಟನೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆದಿದೆ. ಅಲ್ಲದೇ ನೂರಾರು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ; ಬಸವನ ಬಾಗೇವಾಡಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯರ ಅತ್ಯಾಚಾರ: ಕೈ ಕಟ್ಟಿ ಬಾವಿಗೆ ಎಸೆದು ಕೊಲೆಗೈದ ದುಷ್ಕರ್ಮಿಗಳು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಅತ್ಯಾಚಾರ ಮತ್ತು ಕೊಲೆ ಕಂಡನಾರ್ಹ. ಅಪರಾಧಿಗಳಿಗೆ ಕಟಿಣ ಶಿಕ್ಷೆ ಆಗಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial