ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ದಲಿತ ಸಮುದಾಯದ ಬಾಲಕಿಯೊಬ್ಬರ ಮೇಲೆ ಬಿಜೆಪಿ ಮುಖಂಡ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಪೋಕ್ಸೋ ದಾಖಲಾಗಿದ್ದರೂ ಆರೋಪಿಯನ್ನು ಈ ವರೆಗೆ ಬಂಧಿಸದೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದು ಈ ಬಗ್ಗೆ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಆಕ್ರೋಶ ವ್ಯಕ್ತಪಡಿಸಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ, ಅತ್ಯಾಚಾರ ಕೂಡಾ ಎಸಲಾಗಿದೆ ಎಂಬ ಸಂಶಯವನ್ನು ಡಿಎಚ್‌ಎಸ್ ವ್ಯಕ್ತಪಡಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಲು, ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ಏಪ್ರಿಲ್ 3ರಂದು ‘ಆಕ್ರೋಶ ಮೆರವಣಿಗೆ’ ನಡೆಸಿ ಪ್ರತಿಭಟನೆಗೆ ಮುಂದಾಗಿದೆ. ದಲಿತ ಬಾಲಕಿ ಮೇಲೆ ಲೈಂಗಿಕ
ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಪ್ರದೇಶದ ದಲಿತ ಬಾಲಕಿಯ ಮೇಲೆ ಸ್ಥಳೀಯ ಭೂಮಾಲಕ ಮಹೇಶ್ ಭಟ್ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾರ್ಚ್ 26ರಂದು ವರದಿಯಾಗಿತ್ತು. ಆರೋಪಿಯ ಮೇಲೆ ಪೋಕ್ಸೋ ದಾಖಲಾಗಿದ್ದರು ತನ್ನ ಪ್ರಭಾವದ ಕಾರಣಕ್ಕಾಗಿ ಆತನ ಬಂಧನವಾಗಿಲ್ಲ ಎಂದು ಆರೋಪಿಸಲಾಗಿದೆ. ದಲಿತ ಬಾಲಕಿ ಮೇಲೆ ಲೈಂಗಿಕ
ಈ ಬಗ್ಗೆ ದಲಿತ ಹಕ್ಕುಗಳ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದಲಿತ ಮತ್ತು ಸಮಾನ ಮನಸ್ಕ ಸಂಘಟನೆಗಳು ಹೋರಾಟ ಕೈಗೆತ್ತಿಕೊಂಡಿದ್ದು, ಏಪ್ರಿಲ್ 3ರ ಗುರುವಾರದಂದು ವಿಟ್ಲ ನಾಡ ಕಚೇರಿ ಬಳಿ ಪ್ರತಿಭಟನೆಗೆ ಸಿದ್ಧವಾಗಿದೆ. ಬೆಳಿಗ್ಗೆ 10 ಗಂಟೆಗೆ ವಿಟ್ಲ ಬಸ್ ನಿಲ್ದಾಣದಿಂದ ‘ಆಕ್ರೊಶ ಮೆರವಣಿಗೆ’ ಆರಂಭವಾಗಲಿದ್ದು, ವಿಟ್ಲ ನಾಡ ಕಚೇರಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಲಿದೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್, “ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಆರೋಪಿಯ ಬಂಧನವಾಗಿಲ್ಲ. ಅರೋಪಿ ಸಂತ್ರಸ್ತ ಬಾಲಕಿಗೆ ‘ನನ್ನೊಂದಿಗೆ ಗುಡ್ಡಕ್ಕೆ ಬರುತ್ತಿಯ’ ಎಂದು ಅಷ್ಟೆ ಕೇಳಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಕೂಡಾ ಎಸಗಿದ್ದಾನೆ ಎಂಬ ಆರೋಪ ಕೂಡಾ ಸ್ಥಳೀಯವಾಗಿ ಕೇಳಿಬರುತ್ತಿದೆ. ಆರೋಪಿ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು ಪ್ರಕರಣದಲ್ಲಿ ಪೊಲೀಸರು ಯಾವುದೆ ಆಸಕ್ತಿ ತೋರಿಸುತ್ತಿಲ್ಲ” ಎಂದು ಹೇಳಿದರು.
“ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದ್ದರೂ, ಇಲ್ಲಿವರೆಗೆ ಅವರ ವೈದ್ಯಕೀಯ ಪರೀಕ್ಷೆ ಆಗಿಲ್ಲ. ಆರೋಪಿ ಭೂಮಾಲಕನೂ ಆಗಿದ್ದು, ಸಂತ್ರಸ್ತ ಬಾಲಕಿಯ ತಂದೆ ಅವರ ತೋಟದಲ್ಲಿ ಹಲವಾರು ವರ್ಷಗಳಿಂದ ಕಡಿಮೆ ಕೂಲಿಗೆ ದುಡಿಯುತ್ತಿದ್ದಾರೆ. ಸ್ಥಳೀಯವಾಗಿ ಪ್ರಭಾವ ಹೊಂದಿರುವ ಆರೋಪಿ ತೋಟದಲ್ಲಿ ದುಡಿಯು ಇತರ ಕಾರ್ಮಿಕರ ಮೇಲೆ ಕೂಡಾ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪ ಕೂಡಾ ಕೇಳಿ ಬರುತ್ತಿದೆ. ಹಾಗಾಗಿ ಪ್ರಕರಣದಲ್ಲಿ ಆರೋಪಿಯ ಮೇಲೆ ಕಠಿಣ ಪ್ರಕರಣ ದಾಖಲಿಸಿ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಬೇಕಿದೆ. ” ಎಂದು ಸಂತೋಷ್ ಕುಮಾರ್ ಬಜಾಲ್ ಹೇಳಿದರು.
ಈ ಬಗ್ಗೆ ಮಾರ್ಚ್ 29ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಡಿಎಚ್‌ಎಸ್ ಮುಖಂಡರು, ಘಟನೆಯಿಂದ ಬಾಲಕಿ ಖಿನ್ನತೆಗೊಳಗಾಗಿದ್ದು, ಅವರನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕೌನ್ಸಿಲಿಂಗ್ ನಡೆಸಿ ಮಾನಸಿಕ ಧೈರ್ಯ ತುಂಬುವ ಮೂಲಕ ಸತ್ಯಾಂಶ ತಿಳಿಯಲು ಪ್ರಯತ್ನಿಸಬೇಕು ಎಂದು ಹೇಳಿತ್ತು. ಅಷ್ಟೆ ಅಲ್ಲದೆ, ಸಂತ್ರಸ್ತ ಬಾಲಕಿಯ ಪೋಷಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದರು.
“ಆರೋಪಿ ಮಹೇಶ್ ಭಟ್ ಹಿಂಬಾಲಕ ಹರೀಶ್ ಮಣಿಯಾಣಿ ಎಂಬ ವ್ಯಕ್ತಿ ಸಂತ್ರಸ್ತ ಬಾಲಕಿಯ ಪೋಷಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಬೇಕು” ಎಂದು ಪತ್ರಿಕಾಗೋಷ್ಠಿಯಲ್ಲಿ ಡಿಎಚ್‌ಎಸ್ ಮುಖಂಡರು ಒತ್ತಾಯಿಸಿದ್ದರು.
ಆರೋಪಿ ಮಹೇಶ್ ಭಟ್ ಬಂಟ್ವಾಳದ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾಗಿದ್ದು, ಜಿಲ್ಲೆಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ತನ್ನ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿತ್ತು. ಆರೋಪಿಯ ಕೃತ್ಯದಿಂದ ಬಾಲಕಿ ಮಾನಸಿಕವಾಗಿ ಕುಂದಿದ್ದು, ಎರಡು ತಿಂಗಳಿನಿಂದ ಶಾಲೆಗೆ ಹೋಗಿರಲಿಲ್ಲ ಎನ್ನಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೂ ಬಾಲಕಿ ಬಾರದ ಕಾರಣ ಶಿಕ್ಷಕರು ಆಕೆಯ ಮನೆಗೆ ಭೇಟಿ ನೀಡಿದ್ದರು. ಆದರೆ, ಅವರನ್ನೂ ಒಳಗೆ ಹೋಗಲು ಬಿಟ್ಟಿರಲಿಲ್ಲ ಎಂದು ಹೇಳಲಾಗಿದೆ. ರಾಜಕೀಯ ಪ್ರಭಾವ ಇರುವ ಕಾರಣ ಈ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಆತಂಕ ಎಂದಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಸಿಂಹ ನಾಯಿಗಳನ್ನು ಬೇಟೆಯಾಡುವುದಿಲ್ಲ..’; ದಲಿತ ಅಧಿಕಾರಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಮುಖ್ಯಮಂತ್ರಿ
‘ಸಿಂಹ ನಾಯಿಗಳನ್ನು ಬೇಟೆಯಾಡುವುದಿಲ್ಲ..’; ದಲಿತ ಅಧಿಕಾರಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಮುಖ್ಯಮಂತ್ರಿ

