ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಮತ್ತು ನಾಗಿರೆಡ್ಡಿಗಾರಿ ಪಾಳ್ಯದ ಗ್ರಾಮದ ದಲಿತ ಹೆಣ್ಣುಮಕ್ಕಳು ಬಸ್ಸಿನಲ್ಲಿ ಶಾಲೆ, ಕಾಲೇಜಿಗೆ ಹೋಗುವಾಗ ಕೆಲ ಪುಂಡರು ನಿತ್ಯವೂ ಕಿರುಕುಳ ನೀಡುತ್ತಿದ್ದದು ಇದನ್ನು ಪ್ರಶ್ನಿಸಿದ ಹೆಣ್ಣುಮಕ್ಕಳು ಮತ್ತು ಅವರ ಪೋಷಕರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಸೆಪ್ಟಂಬರ್ 04 ರಂದು ನಡೆದಿದೆ.
ಟಿ.ಎನ್ ಗೌರಿ, ಟಿ.ಎಂ ಯಶಸ್ವಿನಿ ಹಾಗೂ ಭಾವನ ಎಂಬ ಹೆಣ್ಣು ಮಕ್ಕಳು ಚಿಂತಾಮಣಿ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ನಾಯಕ ಸಮುದಾಯದಕ್ಕೆ ಸೇರಿದ ಗೌನಿಪಲ್ಲಿಯ ಪವನ್ ಮತ್ತು ಕೊಂಡಾಮುರಿಯ ಬಾಬೂ ನಾಯಕ್ ಎಂಬುವರು ಪ್ರತಿದಿನ ಚುಡಾಯಿಸುವುದು, ಮಾನಸಿಕ ಕಿರುಕುಳ ನೀಡಿವುದು ಮಾಡುತ್ತಿದ್ದರು. ಈ ಕುರಿತು ಆ ಯುವಕರಿಗೆ ಹೆಣ್ಣುಮಕ್ಕಳ ಪೋಷಕರು ಬುದ್ದಿವಾದ ಹೇಳಿದ್ದರು. ಈ ಕುರಿತು ಮಾತಿಗೆ ಮಾತು ಬೆಳೆದಿತ್ತು. ಅದಕ್ಕೆ ಕುಪಿತಗೊಂಡ ಯುವಕರು ಮತ್ತು ಅವರ ಪೋಷಕರು ಸೇರಿ ಸೆಪ್ಟಂಬರ್ ನಾಲ್ಕರಂದು ಕೊಂಡಾಮುರಿ ಗೇಟ್ ಬಳಿ ಆ ಹೆಣ್ಣು ಮಕ್ಕಳ ಮೇಲೆ ಅಮಾನುಷ ಹಲ್ಲೆ ನಡೆಸಿದ್ದಾರೆ. ತಾಡಿಗೋಳ್ ಕ್ರಾಸ್‌ನಲ್ಲಿ ಗಿರೀಶ್ ಮತ್ತು ರೌಡಿ ಶೀಟರ್ ಜಿಮ್ ಅನಿಲ್ ಕುಮಾರ್ ಎಂಬುವವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಇದೆಲ್ಲವೂ ವಿಡಿಯೋ ಆಗಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೌರ್ಜನ್ಯ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಪ್ರಶ್ನಿಸಿದ ಅಭಿಷೇಕ್, ನವೀನ್ ಮತ್ತು ಶ್ರೀನಾಥ್ ಎಂಬುವವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಊರಿನವರೆಲ್ಲಾ ಸೇರಿಕೊಂಡು ಅಶ್ಲೀಲವಾಗಿ ಬೈದು ಮನಬಂದಂತೆ ಥಳಿಸಿದ್ದಾರೆ. ಹೆಣ್ಣು ಮಕ್ಕಳು ಸೇರಿದಂತೆ ಗಾಯಗೊಂಡ ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಎರಡೂ ಕಡೆಯವರ ಮೇಲೂ FIR ದಾಖಲಾಗಿದೆ.
ಘಟನೆಯನ್ನು ಖಂಡಿಸಿರುವ ಶ್ರೀನಿವಾಸಪುರ ತಾಲ್ಲುಕು ದಲಿತ ಸಂಘರ್ಷ ಸಮಿತಿಯು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳನ್ನು ಬಂಧಿಸಿಬೇಕು, ಸಂತ್ರಸ್ತರ ಮೇಲಿನ FIR ರದ್ದುಗೊಳಿಸಬೇಕು ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದೆ.

ಇದೊಂದು ಪೂರ್ವನಿಯೋಜಿತ ದಾಳಿಯಾಗಿದೆ. ಮೂರು ಹೆಣ್ಣು ಮಕ್ಕಳು ಸೇರಿದಂತೆ ಆರು ಜನರು ಪೆಟ್ಟು ತಿಂದು ಆಸ್ಪತ್ರೆಯಲ್ಲಿದ್ದಾರೆ. ಪೊಲೀಸರು ಸಂತ್ರಸ್ತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಗಲಾದರೂ ಪೊಲೀಸರು ಸಮರ್ಪಕ ಕ್ರಮ ತೆಗೆದುಕೊಳ್ಳದಿದ್ದರೆ ಸೆಪ್ಟಂಬರ್ 14 ರಂದು ಬೃಹತ್ ಜಾಥಾ ನಡೆಸಲಾಗುವುದು ಎಂದು ದಸಂಸ ರಾಜ್ಯ ಮುಖಂಡರಾದ ಎನ್.ವೆಂಕಟೇಶ್ ತಿಳಿಸಿದ್ದಾರೆ.
ಇಂದು ಅವರ ನೇತೃತ್ವದಲ್ಲಿ ದಸಸಂ ಸಂಘಟನೆಯು ಶ್ರೀನಿವಾಸಪುರ ತಹಶೀಲ್ದಾರ್ ಮೂಲಕ ಗೃಹ ಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದು, ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ದಾಖಲಿಸಬೇಕೆಂದು ಒತ್ತಾಯಿಸಿದೆ. ಅಲ್ಲದೇ ಪ್ರಕರಣದಲ್ಲಿ ಮುಖ್ಯ ಆರೋಪಿಯಾದ ಅನಿಲ್ ಕುಮಾರ್ ಎಂಬಾತನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದೆ.
ದಸಸಂ ತಂಡವು ಜಿಲ್ಲಾಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಲಾಗಿದೆ. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ವಿ.ಮುನಿಯಪ್ಪ, ಪಿ. ವಾಸು, ಬಿ.ವೆಂಕಟೇಶ್, ನರಸಿಂಹ ವಿ, ಎಂ ಮೂರ್ತಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಮುಸ್ಲಿಂ ಬಾಲಕಿಯ ಅಪಹರಣ; ಆರ್‌ಎಸ್ಎಸ್ ಮುಖಂಡ ಸೇರಿ ಐವರ ಬಂಧನ



ದಲಿತ ಹೆಣ್ಣುಮಕ್ಕಳ ಮೇಲಿನ ಈ ಹಲ್ಲೆ ಕಂಡನಾರ್ಹ. ಆರೋಪಿಗಳಿಗೆ ಕಟಿಣ ಶಿಕ್ಷೆ ಆಗಬೇಕು.