ಹರಿಯಾಣದ ಉನ್ನತ ಪೊಲೀಸರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಚಂಡೀಗಢ ಪೊಲೀಸರು ನಿನ್ನೆ ರಾತ್ರಿ ದಾಖಲಿಸಿದ ಎಫ್‌ಐಆರ್‌ನಿಂದ ತೃಪ್ತರಾಗದ ಮೃತ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಕುಟುಂಬ, ಎಫ್‌ಐಆರ್‌ನಲ್ಲಿ ಕೆಲ ಬದಲಾವಣೆಗಳನ್ನು ಕೋರಿದೆ.
ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವರಿಗೆ ಐಎಎಸ್ ಅಧಿಕಾರಿ ಮತ್ತು ಪೂರಣ್ ಕುಮಾರ್ ಅವರ ಪತ್ನಿ ಅಮ್ನೀತ್ ಪಿ. ಕುಮಾರ್ ಅವರು ಬರೆದ ಪತ್ರದಲ್ಲಿ, “ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ, ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ಅಗತ್ಯವಾದ ವಿವರಗಳು ದಾಖಲೆಯಲ್ಲಿ ಇಲ್ಲ” ಎಂದು ಒತ್ತಿ ಹೇಳಿದರು.
ಅಕ್ಟೋಬರ್ 8 ರಂದು ಸಲ್ಲಿಸಿದ ದೂರನ್ನು ಉಲ್ಲೇಖಿಸಿ ಪತ್ರ ಬರೆದಿರುವ ಅಮ್ನೀತ್ ಅವರು, “ಇಬ್ಬರು ಆರೋಪಿಗಳಾದ ಶತ್ರುಜೀತ್ ಕಪೂರ್ (ಹರಿಯಾಣ ಡಿಜಿಪಿ) ಮತ್ತು ನರೇಂದ್ರ ಬಿಜಾರ್ನಿಯಾ (ರೋಹ್ಟಕ್ ಎಸ್‌ಪಿ) ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ನಮೂದಿಸಲಾಗಿಲ್ಲ” ಎಂದು ಉಲ್ಲೇಖಿಸಿದ್ದಾರೆ.
ಚಂಡೀಗಢ ಪೊಲೀಸರು ಹೇಳಿಕೆಯಲ್ಲಿ, ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಎಲ್ಲ ಅಧಿಕಾರಿಗಳ ವಿರುದ್ಧ ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಚಂಡೀಗಢ ಪೊಲೀಸರು ತಿಳಿಸಿದ್ದಾರೆ.
ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪತ್ರದಲ್ಲಿ, ಅವರು ತಮ್ಮ ಸಾವಿಗೆ ಪ್ರಸ್ತುತ ಹರಿಯಾಣ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿದಂತೆ ಹರಿಯಾಣದ 11 ಉನ್ನತ ಪೊಲೀಸರನ್ನು ಹೆಸರಿಸಿದ್ದಾರೆ. ಅಕ್ಟೋಬರ್ 7 ರಂದು, ಅವರು ಚಂಡೀಗಢದಲ್ಲಿರುವ ಖಾಸಗಿ ನಿವಾಸದಲ್ಲಿ ತಮ್ಮ ಸೇವಾ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಂಡರು.
ಆದರೂ, ಮೃತ ಅಧಿಕಾರಿಯ ಪತ್ನಿ ನಿಗದಿತ ಎಫ್‌ಐಆರ್ ಸ್ವರೂಪದ ಪ್ರಕಾರ, ಎಲ್ಲಾ ಆರೋಪಿಗಳ ಹೆಸರುಗಳನ್ನು ಕಾಲಮ್ ಸಂಖ್ಯೆ ಏಳರ ಅಡಿಯಲ್ಲಿ ಸ್ಪಷ್ಟವಾಗಿ ಪಟ್ಟಿ ಮಾಡಬೇಕು. ಆದರೆ, ಅದನ್ನು ಅನುಸರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. “ಸರಿಯಾದ ವಿಭಾಗದಲ್ಲಿ ಎಲ್ಲ ಆರೋಪಿ ವ್ಯಕ್ತಿಗಳ ಹೆಸರುಗಳನ್ನು ನಿಖರವಾಗಿ ಪ್ರತಿಬಿಂಬಿಸಲು ಎಫ್‌ಐಆರ್ ಅನ್ನು ತಿದ್ದುಪಡಿ ಮಾಡಬೇಕೆಂದು ವಿನಂತಿಸಲಾಗಿದೆ” ಎಂದು ಅವರು ಪತ್ರ ಬರೆದಿದ್ದಾರೆ.
“ಎಸ್‌ಸಿ/ಎಸ್‌ಟಿ ಕಾಯ್ದೆಯ ದುರ್ಬಲಗೊಳಿಸಿದ ವಿಭಾಗಗಳನ್ನು ತಿದ್ದುಪಡಿ ಮಾಡಬೇಕು” ಎಂದು ಅವರು ಒತ್ತಿ ಹೇಳಿದರು. “ಎಫ್‌ಐಆರ್‌ನಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಉಲ್ಲೇಖಿಸಲಾದ ವಿಭಾಗವನ್ನು ದುರ್ಬಲಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಅನ್ವಯವಾಗುವ ಸೂಕ್ತ ವಿಭಾಗವೆಂದರೆ ತಿದ್ದುಪಡಿ ಮಾಡಲಾದ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(ವಿ) ಆಗಿದೆ. ಸರಿಯಾದ ಕಾನೂನು ನಿಬಂಧನೆಗಳನ್ನು ಅನ್ವಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ವಿಭಾಗಗಳನ್ನು ಅದಕ್ಕೆ ಅನುಗುಣವಾಗಿ ಸೇರಿಸಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ, 1989 ರ ಸೆಕ್ಷನ್ 3(2)(ವಿ) ಪ್ರಕಾರ, ಬಲಿಪಶು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ಸದಸ್ಯನಾಗಿರುವುದರಿಂದ ಮಾತ್ರ ಅಪರಾಧ ಎಸಗುವ ವ್ಯಕ್ತಿಗಳು ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ.
ಅಮ್ನೀತ್ ಅವರು ಅಕ್ಟೋಬರ್ 8 ರಂದು ಚಂಡೀಗಢ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಪತಿಯ ಸಾವು ಸಾಮಾನ್ಯ ಆತ್ಮಹತ್ಯೆಯಲ್ಲ, ಬದಲಾಗಿ ತನ್ನ ಪತಿಯ ಮೇಲೆ ವ್ಯವಸ್ಥಿತವಾಗಿ ಕಿರುಕುಳ ನೀಡಿದ ಪರಿಣಾಮವಾಗಿದೆ. ಎಸ್‌ಸಿ ಸಮುದಾಯದ ಅಧಿಕಾರಿಯಾಗಿದ್ದ ಅವರಿಗೆ ಮೇಲಧಿಕಾರಿಗಳು ತಮ್ಮ ಸ್ಥಾನಗಳನ್ನು ಬಳಸಿಕೊಂಡು ಮಾನಸಿಕವಾಗಿ ಹಿಂಸೆ ನೀಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಚಂಡೀಗಢ ಪೊಲೀಸರಿಂದ ಕ್ರಮ ಕೈಗೊಳ್ಳುವಂತೆ ಕೇಳಿದೆ.
ಕ್ರಮಕ್ಕೆ ಆಗ್ರಹ
ಹರಿಯಾಣದಲ್ಲಿ ನಡೆದಿರುವ ಐಪಿಎಸ್ ಆತ್ಮಹತ್ಯೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ಸಾರ್ವಜನಿಕರು ಹಾಗೂ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಲಿತ ಸಂಘಟನೆಗಳಿಂದ ಹಿಡಿದು ಹಿರಿಯ ವಿರೋಧ ಪಕ್ಷದ ನಾಯಕರವರೆಗೆ ಎಲ್ಲರೂ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆಗೆ ಬಿಜೆಪಿ-ಆರ್‌ಎಸ್‌ಎಸ್‌ನ ‘ಮನುವಾದಿ’ ಸಿದ್ಧಾಂತವೇ ಕಾರಣ: ಕಾಂಗ್ರೆಸ್


