ಜಾತಿ ದೌರ್ಜನ್ಯದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಹರಿಯಾಣ ಕೇಡರ್‌ನ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ, ಹರಿಯಾಣ ಸರ್ಕಾರ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.
ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರಾಜೀವ್ ಜೇಟ್ಲಿ ಸೋಮವಾರ (ಅ.13) ದೃಢಪಡಿಸಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಕ್ಟೋಬರ್ 17ಕ್ಕೆ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸೋನಿಪತ್ ಭೇಟಿ ರದ್ದಾಗಿದೆ.
ಶತ್ರುಜೀತ್ ಕಪೂರ್ ಅವರ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಹರಿಯಾಣ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಹರಿಯಾಣ ರಾಜ್ಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಮಹಾನಿರ್ದೇಶಕರಾಗಿರುವ 1992ರ ಬ್ಯಾಚ್ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ನೀಡಿದೆ.
ಈ ವರ್ಷದ ಡಿಸೆಂಬರ್ 31 ರಂದು ನಿವೃತ್ತರಾಗಲಿರುವ ಸಿಂಗ್, ಕಪೂರ್ ಅವರ ರಜೆಯ ಸಮಯದಲ್ಲಿ ಅವರ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಪೂರಣ್ ಕುಮಾರ್ ಸಾವಿಗೆ ಸಂಬಂಧಿಸಿದಂತೆ ರೋಹ್ಟಕ್ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜಾರ್ನಿಯಾ ಅವರನ್ನು ಹುದ್ದೆ ಗೊತ್ತುಪಡಿಸದೆ ವರ್ಗಾವಣೆ ಮಾಡಿದ ಬೆನ್ನಲ್ಲೇ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ.
ಪೂರಣ್ ಕುಮಾರ್ ಅವರು ಸಾವಿಗೂ ಮುನ್ನ ಬರೆದಿರುವ 9 ಪುಟಗಳ ಸುದೀರ್ಘ ಡೆತ್ ನೋಟ್‌ನಲ್ಲಿ ಮೇಲಧಿಕಾರಿಗಳ ವಿರುದ್ದ ಜಾತಿ ತಾರತಮ್ಯದ ಆರೋಪ ಹೊರಿಸಿದ್ದಾರೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ, ಒತ್ತಡದ ಹಿನ್ನೆಲೆ ಮತ್ತು ಪರಿಶಿಷ್ಟ ಜಾತಿ, ಸಮುದಾಯಗಳನ್ನು ಸಮಾಧಾನ ಮಾಡಲು ಸರ್ಕಾರ ಡಿಜಿಪಿ ವಿರುದ್ದ ಕ್ರಮ ಕೈಗೊಂಡಿದೆ ಎಂದು ಹೇಳಲಾಗ್ತಿದೆ.
ಡೆತ್ ನೋಟ್‌ನಲ್ಲಿ ಪೂರಣ್ ಕುಮಾರ್ ಅವರು ಕಪೂರ್, ಬಿಜಾರ್ನಿಯಾ ಸೇರಿದಂತೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಜಾತಿ ಆಧಾರಿತ ತಾರತಮ್ಯ, ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಮತ್ತು ಅಧಿಕಾರ ದುರುಪಯೋಗದ ಆರೋಪ ಹೊರಿಸಿದ್ದಾರೆ.
ಕುಮಾರ್ ಅವರ ಪತ್ನಿ, ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಅವರು, ತಮ್ಮ ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಪೂರ್ ಮತ್ತು ಬಿಜಾರ್ನಿಯಾ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಬೇಕೆಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳುವವರೆಗೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆಗೆ ಒಪ್ಪಿಗೆ ನೀಡಲು ಕುಟುಂಬ ನಿರಾಕರಿಸಿದೆ.
ಪ್ರಧಾನಿ ಮೋದಿ ಭೇಟಿ ರದ್ದು
ಹರಿಯಾಣದ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವ ಆಚರಣೆಗಾಗಿ ಅಕ್ಟೋಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋನಿಪತ್‌ಗೆ ಭೇಟಿ ನೀಡಬೇಕಿತ್ತು. ಆದರೆ, ಅಧಿಕಾರಿಯ ಆತ್ಮಹತ್ಯೆಯಿಂದ ಉಂಟಾದ ಜನಾಕ್ರೋಶ ಮೋದಿ ಪ್ರವಾಸ ರದ್ದತಿಗೆ ಕಾರಣವಾಗಿದೆ.
ಇದಲ್ಲದೆ, ಮಂಗಳವಾರ ನಡೆಯಲಿರುವ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ಸಿಎಂ ಸೈನಿ ಅವರು ನೂಹ್‌ಗೆ ಭೇಟಿ ನೀಡುವುದನ್ನು ಕೂಡ ರದ್ದುಗೊಳಿಸಲಾಗಿದೆ.
ಸೋನಿಪತ್‌ನ ರಾಯ್‌ನಲ್ಲಿರುವ ಎಜುಕೇಶನ್ ಸಿಟಿಯಲ್ಲಿ ‘ಜನ್ ವಿಶ್ವಾಸ್-ಜನ್ ವಿಕಾಸ್’ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಬೇಕಿತ್ತು ಮತ್ತು ಹಲವಾರು ಹೊಸ ಉಪಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ಆದರೆ, ಏಕಾಏಕಿ ಕಾರ್ಯಕ್ರಮ ಭೇಟಿ ರದ್ದಾಗಿದೆ.
ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲವಾದರೂ, ಐಪಿಎಸ್ ಅಧಿಕಾರಿಯ ಆತ್ಮಹತ್ಯೆಯ ನಂತರದ ಪರಿಸ್ಥಿತಿಯು ಪ್ರಧಾನಿಯವರ ಭೇಟಿಗೆ ಅನುಕೂಲಕರವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಜಿ.ಎನ್ ಸಾಯಿಬಾಬಾ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಐಎಸ್ಎಸ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು