ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸೀದಾ ಗ್ರಾಬೀದಿಗಳಲ್ಲಿ 17 ವರ್ಷದ ದಲಿತ ಯುವಕನ ಮುಖಕ್ಕೆ ಕಪ್ಪು ಬಣ್ಣ ಬಳಿದು ಅರೆನಗ್ನವಾಗಿ ಮೆರವಣಿಗೆ ಮಾಡಿರುವ ಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಹರ್ಜೋತ್ ಸಿಂಗ್, ಅಂತರ್ಜಾತಿ ಜೋಡಿಗೆ ಓಡಿಹೋಗಲು ಸಹಾಯ ಮಾಡಿ, ಅವರ ವಿವಾಹಕ್ಕೆ ಸಹಾಯ ಮಾಡಿದ್ದಾನೆಂದು ಶಂಕಿಸಿ ಯುವತಿಯ ಕುಟುಂಬವು ಸಾರ್ವಜನಿಕವಾಗಿ ಅವಮಾನಿಸಿದೆ ಎಂದು ಆರೋಪಿಸಲಾಗಿದೆ.
ವೀಡಿಯೊದಲ್ಲಿ ಸೆರೆಹಿಡಿಯಲಾದ ಮತ್ತು ವ್ಯಾಪಕವಾಗಿ ಪ್ರಸಾರವಾದ ಈ ಘಟನೆಯು ಜೂನ್ 19 ರಂದು ಗುರ್‌ಪ್ರೀತ್ ಸಿಂಗ್ ಮತ್ತೊಂದು ಜಾತಿಯ ಮಹಿಳೆಯೊಂದಿಗೆ ಓಡಿಹೋದ ನಂತರ ಸಂಭವಿಸಿದೆ ಎಂದು ವರದಿಯಾಗಿದೆ.
ಗುರ್‌ಪ್ರೀತ್ ಅಲಿಯಾಸ್ ಗೋಪಾ, ಸಿಮ್ರನ್‌ಜೀತ್ ಸಿಂಗ್ ಅಲಿಯಾಸ್ ಸಿಮ್ಮಾ, ಸಂದೀಪ್ ಅಲಿಯಾಸ್ ಸ್ಯಾಮ್, ರಾಜ್‌ವೀರ್ ಮತ್ತು ರಮಣದೀಪ್ ಅಲಿಯಾಸ್ ಕಾಕಾ ಎಂದು ಗುರುತಿಸಲಾದ ಗುಂಪು ಸಂತ್ರಸ್ತ ಇದ್ದ ಸ್ಥಳೀಯ ಸಲೂನ್‌ಗೆ ನುಗ್ಗಿ, ಅವನನ್ನು ಹೊರಗೆಳೆದು ಕ್ರೂರವಾಗಿ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.
ಅವರು ಸಂತ್ರಸ್ತನ ಮುಖಕ್ಕೆ ಕಪ್ಪು ಬಣ್ಣ ಬಳಿದು, ಗಡ್ಡ ಮತ್ತು ಮೀಸೆ ಬೋಳಿಸಿ, ಬಟ್ಟೆ ಹರಿದು, ಅರೆಬೆತ್ತಲೆಯಾಗಿ ಹಳ್ಳಿಯ ಮೂಲಕ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವರು ಅವನನ್ನು ಬೆನ್ನಟ್ಟಿ, ಮತ್ತೆ ಥಳಿಸಿ, ಕೃತ್ಯವನ್ನು ಚಿತ್ರೀಕರಿಸಿದ್ದಾರೆ.
ತನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ಘಟನೆಯ ವೀಡಿಯೊವನ್ನು ನಂತರ ಪ್ರಸಾರ ಮಾಡಿ ವೈರಲ್ ಮಾಡಲಾಗಿದೆ ಎಂದು ಬಲಿಪಶು ಆರೋಪಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 127(2) (ಅಕ್ರಮ ಬಂಧನ), ಮತ್ತು 351 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಮೆಹರ್ಬನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಮತ್ತು 67ಬಿ ಹಾಗೂ 1989 ರ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿಯೂ ಆರೋಪಗಳನ್ನು ಹೊರಿಸಲಾಗಿದೆ. ಸಿಮ್ರನ್‌ಜೀತ್ ಸಿಂಗ್ ಎಂಬ ಒಬ್ಬ ಆರೋಪಿಯನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ. ತನಿಖೆ ಮುಂದುವರೆದಂತೆ ಹೆಚ್ಚಿನ ಬಂಧನಗಳು ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಜೋತ್ ಅವರ ಕುಟುಂಬವು ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದು, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ದಲಿತರ ಮದುವೆ ಮೆರವಣಿಗೆಯಲ್ಲಿ ಅಂಬೇಡ್ಕರ್ ಹಾಡು: ಸವರ್ಣಿಯರಿಂದ ಹಲ್ಲೆ


