Homeಮುಖಪುಟಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

- Advertisement -
- Advertisement -

ಈ ದೇಶದ ಸಿನಿಮಾ ಉದ್ಯಮಕ್ಕೆ ನೂರು ವರ್ಷದ ಇತಿಹಾಸವಿದೆ. ಈ ನೂರು ವರ್ಷಗಳಲ್ಲಿ ನಮ್ಮ ಸಿನಿಮಾಗಳು ಎಷ್ಟು ದೂರ ಕ್ರಮಿಸಿವೆ, ಆಯಾ ಕಾಲಘಟ್ಟದ ತಲ್ಲಣಗಳಿಗೆ ಎಷ್ಟು ಸ್ಪಂದಿಸಿವೆ, ನಮ್ಮ ಸುತ್ತಲಿನ ಸಮಾಜವನ್ನು ವಸ್ತುನಿಷ್ಠವಾಗಿ ಬಿಂಬಿಸಿದ್ದಾವೆಯೇ ಎಂದು ಒಮ್ಮೆ ಹಿಂತಿರುಗಿ ನೋಡಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಈ ದೇಶದ ಬಹುಪಾಲು ಸಿನಿಮಾಗಳು ಅಗ್ಗದ ಮನರಂಜನೆಯ ಸರಕು ಎಂಬ ಅಪವಾದವನ್ನ ಮೀರಿ ಬೆಳೆದದ್ದು ಅತಿ ಕಡಿಮೆ ಎನ್ನಬಹುದು. ಪ್ರೇಕ್ಷಕನಿಗೆ ಯೋಗ್ಯವಾದದ್ದನ್ನು ನೀಡಿ ಅವನ ಪ್ರಜ್ಞೆಯನ್ನ ಬೆಳೆಸುವ ಬದಲು ತಮ್ಮ ಸಿನಿಮಾಗಳ ಮುಖಾಂತರ ತಲೆತಲೆಮಾರುಗಳ ಆಲೋಚನೆಯನ್ನೆ ತುಂಬಿ ಸಮಾಜವನ್ನು ಹಳ್ಳ ಹಿಡಿಸಿ ಅವನತಿಗೆ ನೂಕುವ ಪರಂಪರೆಯನ್ನು ಮುಂದುವರೆಸಿದ ಹೆಗ್ಗಳಿಕೆಯೇ ಭಾರತದ ಸಿನಿಮಾ ರಂಗದ್ದು. ಇದಕ್ಕೆ ಅಪವಾದ ಇಲ್ಲ ಅಂತಲ್ಲ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ಅವುಗಳಿಗೆ ಇರುವ ಸೀಮಿತ ಅವಕಾಶದ ಕಾರಣವಾಗಿಯೋ ಅಥವಾ ಬೌದ್ಧಿಕ ಅಹಂಕಾರವೋ ಅವು ತಮ್ಮದೇ ಪ್ರತ್ಯೇಕ ದಾರಿಯಲ್ಲಿ ಚಲಿಸುತ್ತಿದ್ದಾವೆ.
ಅಂದರೆ ಅವು ಪ್ರೇಕ್ಷಕರ ಮಧ್ಯೆ ಜನಪ್ರಿಯವಾಗಿ ಮನೆಮಾತಾಗಿದ್ದೂ ಕಡಿಮೆ ಎಂಬರ್ಥದಲ್ಲಿ.

ಕಳೆದ ಎಂಟು ವರ್ಷಗಳಿಂದೀಚೆಗೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಕೊಂಚ ವಾಸ್ತವದ ಹೊಸ ಗಾಳಿ ಬೀಸಿದೆ. ಈ ಗಾಳಿ ಮುಂದಿನ ದಿನಗಳಲ್ಲಿ ವಿಶಾಲವಾಗಿ ಪಸರಿಸುತ್ತದೆ ಎಂಬ ಆಶಾವಾದ ದಿನೆ ದಿನೆ ಹೆಚ್ಚಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ತಮಿಳು, ಮಲೆಯಾಳಂ, ಮರಾಠಿ ಮತ್ತು ಹಿಂದಿಯ ಭಾಷೆಗಳ ಕೆಲವು ಸಿನಿಮಾಗಳನ್ನು ಗಮನಿಸಿದರೆ ಈ ಹೊಸ ಗಾಳಿಯ ಬೆಳವಣಿಗೆಯನ್ನು ಬಹಳ ಸ್ಪಷ್ಟವಾಗಿ ಗುರುತಿಸಬಹುದು.

ಮರಾಠಿಯಲ್ಲಿ ನಾಗರಾಜ್ ಮಂಜುಳೆ ನಿರ್ದೇಶನದ ’ಫಂಡ್ರಿ’ ಮತ್ತು ’ಸೈರಾಟ್’, ಮಲೆಯಾಳಂನ ವಿಧು ವಿನ್ಸೆಂಟ್‌ರ ’ಮ್ಯಾನ್ ಹೋಲ್’, ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ತಮಿಳಿನಲ್ಲಿ ಪ.ರಂಜಿತ್‌ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ’ವೆಟ್ರಿ ಮಾರನ್’ರ ’ಅಸುರನ್’, ಹಿಂದಿಯಲ್ಲಿ ನೀರಜ್ ಗಾಯ್ವಾನ್‌ರ ’ಮಸಾನ್’, ಅನುಭವ ಸಿನ್ಹಾರ ’ಆರ್ಟಿಕಲ್-15’ – ಹೀಗೆ ಇನ್ನೂ ಇರಬಹುದು, ಆದರೆ ನಾನು ಗಮನಿಸಿದ ಇಷ್ಟು ಸಿನಿಮಾಗಳು ಭಾರತದ ವಾಸ್ತವಗಳನ್ನು ತಮ್ಮ ನಿರೂಪಣೆಯ ಮೂಲಕ ಹೇಳಲು ಪ್ರಯತ್ನಿಸಿವೆ. ಇಷ್ಟು ವರ್ಷ ಬೆಳ್ಳಿತೆರಗೆ ಅಂಟಿಕೊಂಡಿದ್ದ ಪೊರೆಯನ್ನು ಕಳಚಿ ಆ ಮೂಲಕ ಪ್ರಜ್ಞಾವಂತ ಪ್ರೇಕ್ಷಕರನ್ನ ಸೃಷ್ಟಿ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಈ ಮೇಲೆ ಹೆಸರಿಸಿದ ಎಲ್ಲಾ ಸಿನಿಮಾಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಆಳೆಯುವುದು ಸಾಧ್ಯವಿಲ್ಲವಾದರೂ, ಭಾರತೀಯ ಸಿನಿಮಾ ದಾರಿಯಲ್ಲಿ ಇವುಗಳಿಗೆ ವಿಶೇಷವಾದ ಸ್ಥಾನವಿದೆ. ನಮ್ಮಲ್ಲಿ ಸಹಜವಾಗಿ ಕಮರ್ಷಿಯಲ್, ಬ್ರಿಡ್ಜ್, ಕಲಾತ್ಮಕ ಮುಂತಾದ ಹೆಸರುಗಳಲ್ಲಿ ಸಿನಿಮಾಗಳನ್ನ ವಿಂಗಡಿಸಿ ನೋಡುವುದಿದೆ. ಆದರೆ ಮೇಲೆನ ಈ ಸಿನಿಮಾಗಳನ್ನ ಅವುಗಳ ಕಟ್ಟುವಿಕೆಯಲ್ಲಿ ನಿರ್ದೇಶಕರ ಮೂಲ ಉದ್ದೇಶದ ಆಧಾರದ ಮೇಲೆ ’ಜನಪ್ರಿಯವಲ್ಲದ – ಜನಪ್ರಿಯ ಮಾದರಿ’ ಎಂದು ವಿಭಾಗಿಸಿಕೊಂಡು ಇವುಗಳ ಸಣ್ಣ ಪರಿಚಯ ಮಾಡಿಕೊಡಲು ಬಯಸುತ್ತೇನೆ.

ಜನಪ್ರಿಯವಲ್ಲದ ಶೈಲಿ

ಮಂಜುಳೆಯವರ ’ಫಂಡ್ರಿ’, ವಿಧು ವಿನ್ಸೆಂಟ್ರ ’ಮ್ಯಾನ್ ಹೋಲ್’ ಮತ್ತು ನೀರಜ್ ಗಾಯ್ವಾನ್ರ ’ಮಸಾನ್’ ಈ ಮೂರು ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮ ಅಲೋಚನೆಯನ್ನ ಯಾವ ಕ್ರಮದಲ್ಲಿ ಯಾವ ದೃಶ್ಯಕಟ್ಟುಗಳ ಮುಖಾಂತರ ಮತ್ತು ಯಾವ ತಾರಾಗಣದಲ್ಲಿ ಹೇಳಿದರೆ ಹೆಚ್ಚು ಪ್ರೇಕ್ಷಕನಿಗೆ ಬೇಗ ತಲುಪುತ್ತದೆ ಎಂಬ ಸಂಗತಿಗಿಂತ ಬಹುಶಃ ತಾನು ಸಿನಿಮಾದಲ್ಲಿ ಹೇಳಬೇಕಂದಿರುವ ಐಡಿಯಾ ಅಥವಾ ಅಲೋಚನಾ ಕ್ರಮವನ್ನ ಸಾಧ್ಯವಾದಷ್ಟು ಹೆಚ್ಚು ಪರಿಣಾಮಕಾರಿಯಾಗಿ ದೃಶ್ಯ ಕಟ್ಟುಗಳ ಮುಖಾಂತರ ಕಟ್ಟಬೇಕು ಎಂಬುದಷ್ಟೆ ಮೂಲ ಉದ್ದೇಶವಾಗಿದೆ ಅನಿಸುತ್ತೆ.

ನಾಗರಾಜ್ ಮಂಜುಳೆಯ ’ಫಂಡ್ರಿ’ ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಇವತ್ತು ಅದನ್ನ ಮೈಲಿಗಲ್ಲು ಎಂದು ಗುರುತಿಸದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಆ ರೀತಿ ಗುರುತಿಸುವ ಸಂದರ್ಭ ಬಂದೇ ಬರುತ್ತೆ. ಜಾತಿ ದೌರ್ಜನ್ಯದ ಬಗ್ಗೆ ಯಾವುದೇ ಧಾವಂತವಿಲ್ಲದೆ ತಣ್ಣಗೆ ಎಳೆ ಎಳೆಯಾಗಿ ಅಷ್ಟೇ ಗಾಢವಾಗಿ ತೆರೆ ಮೇಲೆ ಈ ಸಿನಿಮಾವನ್ನು ತಂದಿದ್ದಾರೆ ಮಂಜುಳೆ. ’ಜಬ್ಯಾ’ ಪಾತ್ರದ ಕನಸು, ಪ್ರೀತಿ, ಜಾತಿ ಕಾರಣಕ್ಕೆ
ಅವನು ಅನುಭವಿಸುವ ಅವಮಾನಗಳು – ಇವುಗಳಲ್ಲಿ ಕೆಲವನ್ನು ನೇರವಾಗಿ ಕೆಲವನ್ನು ಪ್ರತಿಮೆಗಳ ಮುಖಾಂತರ ಮಂಜುಳೆ ಕಟ್ಟುತ್ತಾ ಹೋಗುತ್ತಾರೆ. ಜಬ್ಯಾ ಕಾಣುವ ’ಕಪ್ಪು ಗುಬ್ಬಚ್ಚಿ’ ಹಕ್ಕಿ ಕನಸೋ ವಾಸ್ತವೋ! ಆದರೆ ಆ ರೀತಿಯ ಪ್ರತಿಮೆ ಬಹಳ ಅದ್ಭುತವಾದೆ. ಸಿನಿಮಾದ ಕೊನೆಯ ಅರ್ಧಗಂಟೆಯಲ್ಲಿ ಮೂಡಿರುವ ಜಾತಿ ಕ್ರೌರ್ಯದ ಚಿತ್ರಣವಂತೂ ಭಾರತದ ಸಿನಿಮಾ ನಿರೂಪಣೆಯಲ್ಲಿ ’ಅಜರಾಮರ’. ಅದರಲ್ಲೂ ಕಡೆಯ ದೃಶ್ಯ ಜಬ್ಯಾನ ಪ್ರತಿರೋಧ ಮುಂದಿನ ಸಿನಿಮಾ ನಿರ್ದೇಶಕರಿಗೆ ’ಮುನ್ನುಡಿ’.

ವಿಧು ವಿನ್ಸೆಂಟ್ ಅವರ ಮಲೆಯಾಳಂ ಭಾಷೆಯ ’ಮ್ಯಾನ್ ಹೋಲ್, ’ಫಂಡ್ರಿ’ಯಷ್ಟೇ ಪರಿಣಾಮಕಾರಿಯಾದ ಸಿನಿಮಾ. ವಿಚಿತ್ರ ಅನಿಸೋದು ಇದು ಕೇರಳದ ಹೊರಗೆ ಹೆಚ್ಚು ಪ್ರದರ್ಶನವಾಗಲಿ ಚರ್ಚೆಯಾಗಲಿ ಆಗಲಿಲ್ಲ. ಇದು 2016ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK) ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಿತ್ತು. ವಿಧು ವಿನ್ಸೆಂಟ್ ಈ ರೀತಿ ಆಯ್ಕೆಯಾದ ಮೊದಲ ಮಹಿಳಾ ನಿರ್ದೇಶಕಿ. ಕೇರಳ ರಾಜ್ಯ ಪ್ರಶಸ್ತಿ ಕೂಡ ಈ ಸಿನಿಮಾಗೆ ಲಭಿಸಿದೆ. ಚಿತ್ರದ ಪ್ರಧಾನ ಪಾತ್ರ ’ಶಾಲಿನಿ’ ಸಾಮಾಜಿಕ ಬಹಿಷ್ಕಾರದ ಭಯದಿಂದ ತನ್ನ ಜಾತಿ ಹಿನ್ನೆಲೆಯನ್ನು ಬಚ್ಚಿಟ್ಟುಕೊಂಡಿರುತ್ತಾಳೆ. ತಂದೆ ಹ್ಯೂಮನ್ ಸ್ಕಾವೆಂಜರ್. ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವಾಗಲೇ ಮರಣ ಹೊಂದುತ್ತಾನೆ. ಈ ಸುದ್ದಿಯಿಂದ ಶಾಲೆಯಲ್ಲಿ ಶಾಲಿನಿಯ ಜಾತಿ ಬಹಿರಂಗವಾಗುತ್ತೆ.

ಜಾತಿಕಾರಣವಾಗಿ ಶಾಲಿನಿ ಈಗಾಗಲೇ ಯಾರು ಸ್ನೇಹಿತರಾಗಿದ್ದರೋ ಅವರಿಂದಲೇ ನಿರಾಕರಿಸಲ್ಪಡುತ್ತಾಳೆ. ತಂದೆ ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವ ಅನಿವಾರ್ಯತೆ, ಜಾತಿ ಕಾರಣವಾಗಿ ತಾನು ಅನುಭವಿಸಬೇಕಾದ ಅವಮಾನ ಮತ್ತು ತನ್ನ ಸಮುದಾಯ ಶಿಕ್ಷಣದಿಂದ ವಂಚಿತರಾಗಿ ಪ್ರತಿಭಟಿಸುವ ಸಣ್ಣ ಧೈರ್ಯವನ್ನು ಕಳೆದುಕೊಂಡಿರುವ ಸಂಗತಿಗಳು ಶಾಲಿನಿಯನ್ನು ಕಾನೂನು ಪದವಿ ಪಡೆಯಲು ಪ್ರೇರೇಪಿಸುತ್ತವೆ. ಮುಂದೆ ವಕೀಲೆಯಾಗಿ ಈ ರೀತಿ ದೌರ್ಜನ್ಯಕ್ಕೆ ಒಳಗಾದ ತನ್ನ ಸಮುದಾಯದವರ ಪರವಾಗಿ ಕಾನೂನು ಹೋರಾಟ ಪ್ರಾರಂಭಿಸುತ್ತಾಳೆ. ಅದಕ್ಕೂ ಸರಿಯಾದ ನ್ಯಾಯ ಸಿಗದಿದ್ದಾಗ, ಎಲ್ಲರನ್ನೂ ಸಂಘಟಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ. ಇಲ್ಲಿ ಸಿನಿಮಾ ಕುರಿತಂತೆ ನನ್ನ ನಿರೂಪಣೆ ಬಹಳ ಸರಳವಾಗಿದೆ. ಆದರೆ, ವಿಧು ವಿನ್ಸೆಂಟ್ ಬಹಳ ಅದ್ಭುತವಾಗಿ ದೃಶ್ಯದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಮಾಗಿದ ದೃಶ್ಯ ಕಲಾಕಾರನಿಗೂ ಕಡಿಮೆಯೇನಿಲ್ಲ ವಿನ್ಸೆಂಟ್.

ನೀರಜ್ ಗಾಯ್ವಾನ್‌ರ ’ಮಸಾನ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರು ಮಾಡಿದ ಸಿನಿಮಾ. ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಎರಡು ಪ್ರಶಸ್ತಿಗಳನ್ನು ಪಡೆಯಿತು. ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಓಪನಿಂಗ್ ಸಿನಿಮಾವಾಗಿ ಪ್ರದರ್ಶನಗೊಂಡ ಹೆಗ್ಗಳಿಕೆ ’ಮಸಾನ್’ದು. ಈ ಸಿನಿಮಾದಲ್ಲಿ ಬರುವ ಎರಡು ಪ್ರಧಾನ ಪಾತ್ರಗಳು ಸಾಮಾಜಿಕವಾಗಿ ಬಹಳ ಅಂತರವಿರುವ ಎರಡು ಜಾತಿಗಳನ್ನು ಪ್ರತಿನಿಧಿಸುತ್ತಾರೆ. ದೇವಿಪಾತಕ್ ಪಾತ್ರ ಬ್ರಾಹ್ಮಣ ಸಮುದಾಯವನ್ನು ಮತ್ತು ದೀಪಕ್ ಕುಮಾರ್ ಪಾತ್ರ ದೊಮ್ ಎಂಬ ಕೆಳ ಜಾತಿಯನ್ನು ಪ್ರತಿನಿಧಿಸುತ್ತಾರೆ. ಕಥೆ ನಡೆಯುವ ಪರಿಸರ ವಾರಣಾಸಿ ನಗರದ ಗಂಗಾ ನದಿಯ ತಟದಲ್ಲಿರುವ ಸ್ಮಶಾನದ ಸುತ್ತಮುತ್ತ. ಈ ಎರಡು ಪಾತ್ರಗಳು, ತಾವು ದೈಹಿಕವಾಗಿ ಈಗಿರುವ ಪರಿಸರದಿಂದ ತಪ್ಪಿಸಿಕೊಳ್ಳಲು ಮತ್ತು ಮಾನಸಿಕವಾಗಿ ತಾವು ಪ್ರೀತಿಸಿದವರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಾರೆ.

ಈ ಚಲನೆಯನ್ನ ಸಿನಿಮಾ ಪ್ರಸ್ತುತಪಡಿಸುತ್ತದೆ. ಆದರೆ, ಗಾಯ್ವಾನ್ ತಳ ಸಮುದಾಯದ ಪರಿಸ್ಥಿತಿಯನ್ನಷ್ಟೆ ಸಿನಿಮಾದಲ್ಲಿ ತರುತ್ತಾರೆ. ಆದರೆ ವಾಸ್ತವದಲ್ಲಿರುವ ದೌರ್ಜನ್ಯವನ್ನ ಎಲ್ಲೂ ನಿರೂಪಿಸುವುದಿಲ್ಲ. ಇನ್ನೂ ಮೇಲ್ಜಾತಿಯ ದೇವಿಪಾತಕ್ ಮೇಲೆ ವ್ಯವಸ್ಥೆ ನಡೆಸುವ ದೌರ್ಜನ್ಯವನ್ನ ಒತ್ತಿ ಹೇಳಲಾಗಿದೆ. ಆದರೆ ಕೆಳ ಜಾತಿಯ ದೀಪಕ್ ಪ್ರೀತಿಸುವ ಮೇಲ್ಜಾತಿ ಹುಡುಗಿ ’ನನ್ನ ಮನೆಯವರು ವಿರೋಧಿಸಿದವರು ಸರಿಯೇ ನಾನು ನಿನ್ನನ್ನು ಮದುವೆ ಆಗುತ್ತೇನೆ’ ಎನ್ನುತ್ತಾಳೆ ಆದರೆ, ಈ ಜಾತಿ ಸಂಘರ್ಷಕ್ಕೆ ಮುಂಚಿತವಾಗಯೇ ದೀಪಕ್ ಪ್ರೀತಿಸಿದ ಹುಡುಗಿ ಸಾಯುತ್ತಾಳೆ. ಗಾಯ್ವಾನ್ ತಾನು ಹೇಳಬೇಕಾದ ಕತೆ/ಸಂಗತಿಗಳನ್ನು ದೃಶ್ಯಗಳಲ್ಲಿ ಬಹಳ ಅದ್ಭುತವಾಗಿ ನರೇಟ್ ಮಾಡಿದ್ದಾರೆ.

ಜನಪ್ರಿಯ ಶೈಲಿ

ನಾಗರಾಜ್ ಮಂಜುಳೆಯ ’ಸೈರಾಟ್’, ರಾಜೀವ್ ರವಿಯ ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ಪ.ರಂಜಿತ್ ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ವೆಟ್ರಿ ಮಾರನ್‌ರ ’ಅಸುರನ್’ ಮತ್ತು ಅನುಭವ್ ಸಿನ್ಹಾ ಅವರ ’ಆರ್ಟಿಕಲ್-15’ ಸಿನಿಮಾಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಭಾಗದಲ್ಲಿ ಚರ್ಚಿಸಲಾಗುವುದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ‘ಮೊದಲು ಆಕಾಶ.. ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್‌ ಎಲಿಫೆಂಟ್ಸ್‌ ಕಿರುಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....