‘ಮೊದಲು ಆಕಾಶ ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್‌ ಎಲಿಫೆಂಟ್ಸ್‌ ಕಿರು ಚಿತ್ರ

ಆಗಸ್ಟ್‌ 12 ರಂದು ಪ್ರತಿ ವರ್ಷ ‘ವಿಶ್ವ ಆನೆ ದಿನ’ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಬೇಟೆಗೆ ಬಲಿಯಾಗುವುದು, ತನ್ನ ಆವಾಸಸ್ಥಾನಗಳ ಇಲ್ಲದಾಗುವಿಕೆ, ಮಾನವರೊಂದಿಗೆ ಸಂಘರ್ಷ ಮತ್ತು ಸೆರೆಯಲ್ಲಿ ಕಷ್ಟಗಳು ಹೀಗೆ ಏಷ್ಯನ್ ಮತ್ತು ಆಫ್ರಿಕನ್ ಆನೆಗಳಿಗೆ ಒದಗಿ ಬಂದ ಸಂಕಷ್ಟವನ್ನು ಎತ್ತಿ ಹಿಡಿಯಲು ವಿಶ್ವ ಆನೆ ದಿನವನ್ನು ಪ್ರಾರಂಭಿಸಲಾಯಿತು.

ಅಂತಾರಾಷ್ಟ್ರೀಯ ಆನೆ ದಿನದಂದು ವನ್ಯ ಜೀವಿಗಳ ಬಗ್ಗೆ ಸುಮಾರು 25 ಕಿರು ಚಿತ್ರಗಳನ್ನು ನಿರ್ಮಿಸಿರುವ ಪ್ರಕಾಶ್‌‌ ಮಟದ ಅವರು ನಿರ್ದೇಶಿಸಿರುವ “ಫ್ಲೈಯಿಂಗ್‌ ಎಲಿಫೆಂಟ್ಸ್‌ – ಎ ಮದರ್ಸ್‌ ಹೋಪ್‌” ಎಂಬ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಆನೆಯೊಂದು ತನ್ನ ಆತಂಕ ಮತ್ತು ಮನುಷ್ಯನ ಕ್ರೌರ್ಯವನ್ನು ತನ್ನ ಮರಿಯೊಂದಿಗೆ ತೋಡಿಕೊಳ್ಳುವ ಕಿರು ಚಿತ್ರವಾಗಿದೆ ಫ್ಲೈಯಿಂಗ್‌ ಎಲಿಫೆಂಟ್ಸ್‌!.

ಫ್ಲೈಯಿಂಗ್‌ ಎಲಿಫೆಂಟ್ಸ್ ಕಿರುಚಿತ್ರವು ‘ಜಾಕ್ಸನ್ ವೈಲ್ಡ್-2020’ ರಲ್ಲಿ ‘ಅತ್ಯುತ್ತಮ ಗ್ಲೋಬಲ್ ವಾಯ್ಸ್ ಫಿಲ್ಮ್’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ವೈಲ್ಡ್‌ ಸ್ಕ್ರೀನ್‌ ಪಿಲ್ಮ್‌ ಫೇಸ್ಟಿವೆಲ್‌ನಲ್ಲಿ ಅಧಿಕೃವಾಗಿ ಆಯ್ಕೆಯಾಗಿರುವ ಏಷ್ಯಾದ ಒಂದೇ ಒಂದು ಕಿರು ಚಿತ್ರ ಇದಾಗಿದೆ. ಅಲ್ಲದೆ, ಇನ್ನೂ ಮೂರು ಫಿಲ್ಮ್‌ಫೆಸ್ಟ್‌ಗಳಿಗೆ ಈ ಚಿತ್ರವು ಅಧಿಕೃತವಾಗಿ ಆಯ್ಕೆಯಾಗಿದೆ.

ಇದನ್ನೂ ಓದಿ: ಸಂವಿಧಾನದ ಆಶಯಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’

ಗಜಶಾಸ್ತ್ರದಲ್ಲಿರುವ ಪೌರಾಣಿಕ ಕಥೆಯೊಂದರ ಮೂಲಕ, ಆನೆಗಳು ಪ್ರಸ್ತುತ ಅನುಭವಿಸುತ್ತಿರುವ ಸಂಕಷ್ಟವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇಷ್ಟೇ ಅಲ್ಲದೆ, ಚಿತ್ರವು ‘ಬೆಟ್ಟ ಕುರುಬ’ ಬುಡಕಟ್ಟು ಭಾಷೆಯಲ್ಲಿ ನಿರೂಪಿಸಲ್ಪಟ್ಟಿದ್ದು ಚಿತ್ರಕ್ಕೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದೆ.

ತಾಯಿ ಆನೆಯೊಂದು ಮನುಷ್ಯರು ತಮ್ಮ ಮೇಲೆ ನಡೆಸುವ ಅನ್ಯಾಯಗಳನ್ನು ಹೇಳುತ್ತಾ, ತಾವು ಕಳೆದು ಕೊಂಡ ಹಲವು ಸಂಗತಿಗಳ ಬಗ್ಗೆ ನೆನಪಿಸುತ್ತದೆ. ಕೊನೆಗೆ ಪೌರಾಣಿಕ ಕತೆಯಲ್ಲಿ ತನ್ನ ಪೂರ್ವಜರಿಗೆ ಇದ್ದಂತೆ ತನ್ನ ಮರಿಗೆ ಭವಿಷ್ಯದಲ್ಲಿ ರೆಕ್ಕೆನಾದರೂ ಮರಳಿ ಬರಲಿ ಎಂದು ಬಯಸಿ, ಮನುಷ್ಯನ ಮುಂದೆ ತನ್ನ ಅಸಹಾಯಕತೆಯನ್ನು ಮುಂದಿಡುತ್ತದೆ.

ಕಿರುಚಿತ್ರವನ್ನು ಇಲ್ಲಿ ನೋಡಬಹುದಾಗಿದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಪ್ರಕಾಶ್‌ ಮಟದ, “ಆನೆಗಳು ತನ್ನ ಆವಾಸ ಸ್ಥಾನ ಮತ್ತು ತಾನು ನಡೆದಾಡುವ ಪಥವನ್ನು ಕಳೆದು ಕೊಳ್ಳುತ್ತಿದೆ. ಉದಾಹರಣೆಗೆ ಹೇಳಬೇಕೆಂದರೆ, ಸಕಲೇಶಪುರದಲ್ಲಿ ಎತ್ತಿನಹೊಳೆ ಪ್ರಾರಂಭವಾಯಿತು, ಅದಕ್ಕಿಂತ ಮುಂಚೆ ಬಿಸಿಲೆಘಾಟ್‌, ಚಾರ್ಮಾಡಿ ಘಾಟ್‌ಗಳ ಮೂಲಕ ಆನೆಗಳು ನಡೆದಾಡುತ್ತಿದ್ದವು. ಆದರೆ ಇವೆಲ್ಲಾ, ಆನೆಯ ಕಾರಿಡಾರ್‌‌ಗಳಾಗಿದೆ. ಎತ್ತಿನಹೊಳೆ ಯೋಜನೆ ಪ್ರಾರಂಭಿಸಿದ ನಂತರ ಅವುಗಳ ದಾರಿ ಕಡಿತಗೊಂಡಿತು. ಇದರಿಂದಾಗಿಯೆ ಆನೆಗಳು ರೈತರ ಹೊಲಗಳಿಗೆ ನುಗ್ಗಿ ತೊಂದರೆ ಕೊಡುವುದು” ಎಂದು ಹೇಳಿದರು.

ಇದನ್ನೂ ಓದಿ: ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಜೀವನ ಆಧಾರಿತ ಚಿತ್ರ ನಿರ್ಮಾಣ

“ಆನೆಗಳಿಗೆ ಅವುಗಳ ಪಥ(ಕಾರಿಡಾರ್‌) ಬಹಳ ಮುಖ್ಯವಾದುದಾಗಿದೆ. ಈ ಪಥಗಳಲ್ಲಿ ರೈಲ್ವೇ, ರಸ್ತೆ, ಅಣೆಕಟ್ಟು ಮುಂತಾದವುಗಳನ್ನು ಮಾಡುವುದರಿಂದ ಅವುಗಳ ಚಲನೆಗೆ ತೊಂದರೆಯಾಗುತ್ತದೆ. ಆನೆಯೊಂದು ಸಾಧು ಪ್ರಾಣಿ, ಅವುಗಳು ತೊಂದರೆ ಮಾಡುವುದು ಅವುಗಳಿಗೆ ತೊಂದರೆಯಾದರೆ ಮಾತ್ರ. ಅವುಗಳ ಭೂಮಿ ಅವುಗಳಿಗಷ್ಟೇ ಬಿಟ್ಟುಬಿಡಬೇಕು” ಎಂದು ಪ್ರಕಾಶ್‌ ಹೇಳುತ್ತಾರೆ.

ಎಲಿಫೆಂಟ್ ರಿಇಂಟ್ರೊಡಕ್ಷನ್ ಫೌಂಡೇಶನ್ ಮತ್ತು ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಮೈಕೆಲ್ ಕ್ಲಾರ್ಕ್ 2011 ರಲ್ಲಿ ಮೊದಲ ಬಾರಿ ಆನೆ ದಿನವನ್ನು ಆರಂಭಿಸಿದರು. ಮೊದಲ ಅಂತರಾಷ್ಟ್ರೀಯ ಆನೆ ದಿನವನ್ನು ಆಗಸ್ಟ್ 12, 2012 ರಂದು ಆಚರಿಸಲಾಯಿತು. ಮಳೆಕಾಡುಗಳ ಜೀವವೈವಿಧ್ಯತೆಯಲ್ಲೊಂದಾದ ಆನೆಗಳನ್ನು ರಕ್ಷಿಸಲು ಪ್ರತಿ ವರ್ಷ ಆಗಸ್ಟ್ 12 ಈ ದಿನವನ್ನು ಕಾಡಿನಲ್ಲಿನ ಆನೆಗಳ ಕಷ್ಟದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮತ್ತು ಅವುಗಳನ್ನು ರಕ್ಷಿಸಲು ಸಂಭವನೀಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಆನೆ ದಿನವನ್ನು ಆಚರಿಸಲಾಗುತ್ತಿದೆ.

ವೈಲ್ಡ್‌ಲೈಫ್‌ ಫಿಲ್ಮ್‌ಮೇಕರ್‌ ಆಗಿರುವ ಪ್ರಕಾಶ್ ಮಟದ ಅವರ ಮತ್ತಷ್ಟು ಚಿತ್ರಗಳನ್ನು ಇಲ್ಲಿ ಕ್ಲಿಕ್ ಮಾಡಿದರೆ ನೋಡಬಹುದಾಗಿದೆ.

ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು

LEAVE A REPLY

Please enter your comment!
Please enter your name here