ಸಂವಿಧಾನದ ಆಶಯಗಳನ್ನಿಟ್ಟುಕೊಂಡು ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’

ಸಣ್ಣ ರೂಪದಲ್ಲಾದರೂ ನಮ್ಮ ಕತೆಗಳನ್ನು ಜನರಿಗೆ ಮುಟ್ಟಿಸಬೇಕು. ನೆಲದ ವಾಸ್ತವವನ್ನು ಚಿತ್ರಗಳ ಮೂಲಕ ಹೊರ ಜಗತ್ತಿಗೆ ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಉತ್ಸಾಹಿ ತಂಡವೊಂದು ಸಂವಿಧಾನದ ಆಶಯಗಳನ್ನಿಟ್ಟುಕೊಂಡು ’ಭಾರತದ ಪ್ರಜೆಗಳಾದ ನಾವು’ ಎಂಬ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದೆ.

ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ’ಭಾರತದ ಪ್ರಜೆಗಳಾದ ನಾವು’ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರಕ್ಕೆ ಬಿ.ಸುರೇಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಿ ಬೆಂಬಲ ನೀಡಿದ್ದಾರೆ.

’ಭಾರತದ ಪ್ರಜೆಗಳಾದ ನಾವು’ ಎಂಬ ಚಿತ್ರದ ಶೀರ್ಷಿಕೆ ಆಕರ್ಷಕವಾಗಿದ್ದು, ಇದನ್ನು ಭಾರತ ಸಂವಿಧಾನದ ಪೀಠಿಕೆಯ ಮೊದಲ ಸಾಲಿನಿಂದ ಆಯ್ದುಕೊಳ್ಳಲಾಗಿದೆ. ಚಿತ್ರದಲ್ಲಿರುವ ಕಲಾವಿದರು ರಂಗಭೂಮಿ ಹಿನ್ನೆಲೆಯವರಾಗಿದ್ದಾರೆ. ಅನೇಕರಿಗೆ ಸಿನಿಮಾ ರಂಗ ಹೊಸದು ಎಂದು ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಭಿನಯ ಶಾರದೆ ಜಯಂತಿ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು

’ಭಾರತದ ಪ್ರಜೆಗಳಾದ ನಾವು’ ಚಿತ್ರದ ನಿರ್ದೇಶಕರಾದ ಡಾ.ಕೃಷ್ಣಮೂರ್ತಿ ಚಮರಂರವರು ನಾನುಗೌರಿ.ಕಾಂ ಜೊತೆಗೆ ಮಾತನಾಡಿ, “ಇದು ದಲಿತ ದೃಷ್ಟಿಕೋನ ಹೊಂದಿರುವ ಕಥೆ. ಹಿಂದಿನ ತಲೆಮಾರುಗಳು ಜಾತಿ ವ್ಯವಸ್ಥೆ, ದಬ್ಬಾಳಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಮತ್ತು ಇಂದಿನ ಅಂಬೇಡ್ಕರ್‌ ವಾದವನ್ನು ತಿಳಿದುಕೊಂಡ, ಅರ್ಥ ಮಾಡಿಕೊಂಡ ತಲೆಮಾರು ಜಾತಿ ದೌರ್ಜನ್ಯ, ಅಸಮಾನತೆಗೆ ಹೇಗೆ ಮುಖಾಮುಖಿಯಾಗುತೇ ಎಂಬುದೇ ಚಿತ್ರದ ತಿರುಳು” ಎಂದು ಹೇಳಿದ್ದಾರೆ.

“ಚಿತ್ರಕ್ಕೆ ಈ ಮೊದಲು ಸಂವಿಧಾನ ಎಂಬ ಟೈಟಲ್ ಇಟ್ಟಿದ್ದೆ. ಆದರೆ ಅದು ಸಿಗಲಿಲ್ಲ. ಅದಕ್ಕಿಂತ ಮೊದಲು ಜೈ ಭೀಮ್ ಎಂದು ಹೆಸರಿಟ್ಟಿದ್ದೆ. ಆದರೆ ಎಲ್ಲರೂ ಟೈಟಲ್‌ ಒಂದೇ ಜಾತಿಯನ್ನ ಸೂಚಿಸುತ್ತೆ ಎಂದರು. ಅದಕ್ಕೆ ನಾನು ಸಂವಿಧಾನದ ಮೊದಲ ಸಾಲಿನಿಂದ ಶೀರ್ಷಿಕೆ ಆರಿಸಿಕೊಂಡೆ” ಎಂದು ತಾವು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡ ಬಗೆ ತಿಳಿಸಿದ್ದಾರೆ.

“ಸಂವಿಧಾನದ ಪೀಠಿಕೆಯಂತೆ ಭಾರತ ಪ್ರಜೆಗಳಾದ ನಾವು, ಸ್ವಾತಂತ್ರ, ಭ್ರಾತೃತ್ವ, ಸಮಾನತೆಯಿಂದ ಇರುತ್ತೇವೆ ಎಂದು ಶಪಥ ಮಾಡುತ್ತೇವೆ. ಆದರೆ, ವಾಸ್ತವದ ಬದುಕು ಬೇರೆ ಇದೆ. ಇದೆ ಎಳೆಯನ್ನು ಚಿತ್ರದಲ್ಲೂ ಇಟ್ಟುಕೊಂಡಿದ್ದೇವೆ. ಇಂದಿಗೂ ದಲಿತರನ್ನು ಭಾರತದ ಪ್ರಜೆಗಳು ಎಂದು, ನಾವೆಲ್ಲಾ ಒಂದೇ ಎಂದು ಒಪ್ಪಿಕೊಂಡಿಲ್ಲ. ದಲಿತರನ್ನು ಊರಿನಿಂದ ಹೊರಗೆ ಇಟ್ಟಿದ್ದೇವೆ” ಎಂದು ಅವರು ವಿವರಿಸಿದ್ದಾರೆ.

“ಒಂದು ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಚಿತ್ರವನ್ನು ಹೆಣೆಯಲಾಗಿದೆ. ಎಲ್ಲೂ ಹಿಂಸೆಗೆ ಪ್ರಚೋದನೆ ಮಾಡದೇ, ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ವಿರೋಧಿಸುತ್ತಾ, ನಮ್ಮ ಸಂವಿಧಾನ ನೀಡಿರುವ ಹಕ್ಕುಗಳ ಮೂಲಕ ಹೋರಾಡುವುದು ಹೇಗೆ? ಕಾನೂನು ಅರಿವು ಇರುವ ದಲಿತ ಯುವಕರು ಹೇಗೆ ತಮ್ಮ ಹಳ್ಳಿಯಲ್ಲಿ ಸಂವಿಧಾನದ ಆಶಯಗಳನ್ನು ತರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೇಲ್ವರ್ಗದ ಒಂದು ಆದರ್ಶದ ಪಾತ್ರವನ್ನು ಚಿತ್ರದಲ್ಲಿ ತರಲಾಗಿದೆ. ಅಂತರ್ ಜಾತಿ ಪ್ರೇಮ ಕಥೆಯು ಸಿನಿಮಾದಲ್ಲಿ ಇದೆ” ಎಂದು ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದ್ದಾರೆ.

ಇನ್ನು ಬೇರೆ ಭಾಷೆಗಳಲ್ಲಿ ಬರುತ್ತಿರುವ ಹೊಸ ಪ್ರಯೋಗದ ಚಿತ್ರಗಳ ಬಗ್ಗೆಯೂ ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿದ್ದಾರೆ.

ಇದನ್ನೂ ಓದಿ: ’ಮಹಾನಾಯಕ’ನಿಗೆ ಒಂದು ವರ್ಷ: ಧಾರಾವಾಹಿಯನ್ನು ಜನ ಅಪ್ಪಿಕೊಂಡ ಬಗೆ…

“ತಮಿಳು, ತೆಲುಗು, ಮರಾಠಿ, ಮಲಯಾಳಂ ಸಿನಿಮಾಗಳಲ್ಲಿ ಈಗ ದಲಿತ ಕೇಂದ್ರಿತ ಚಿತ್ರಗಳು ಬರುತ್ತಿವೆ. ಅಲ್ಲಿ ದೊಡ್ಡ ನಟರು, ನಿರ್ದೇಶಕರು ಸಿನಿಮಾ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅಂಬೇಡ್ಕರ್ ಫೋಟೋ ಕೂಡ ತೋರಿಸುವ ಧೈರ್ಯ ತೊರಿಸುವುದಿಲ್ಲ. ಹಾಗಂತ ಸುಮ್ಮನಿರಲು ಆಗುವುದಿಲ್ಲ. ನಮ್ಮ ಕೈಯಲ್ಲಿ ಆಗುವುದನ್ನು ಮಾಡಬೇಕಿದೆ. ನಮ್ಮ ಅನುಭವಕ್ಕೆ ದಕ್ಕಿದ್ದು ನಾವು ಮಾಡುತ್ತೇವೆ. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸದೆ ಇರಬಹುದು. ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪದೆ ಇರಬಹುದು. ಆದರೆ, ಕನ್ನಡದಲ್ಲೂ ಚಿತ್ರ ಬಂದಿದೆ ಎಂಬ  ಹೆಸರು ಇರುತ್ತದೆ. ದೊಡ್ಡ ದೊಡ್ಡ ನಟರನ್ನು ಹಾಕಿಕೊಂಡು ಸಿನಿಮಾ ಮಾಡಲು ನಮಗೆ ಆಗುವುದಿಲ್ಲ. ಕಡಿಮೆ ಬಂಡವಾಳದಲ್ಲಿ ನಾವು ಸ್ನೇಹಿತರೇ ಸೇರಿ ಸಿನಿಮಾ ಮಾಡುತ್ತಿದ್ದೇವೆ. ರಂಗಾಯಣದ ಕಲಾವಿದರನ್ನು ಬಳಸಿಕೊಂಡಿದ್ದೇವೆ, ಬಲ ರಾಜವಾಡಿ, ಬಿ.ಸುರೇಶ್ ನಮ್ಮ ಚಿತ್ರದಲ್ಲಿದ್ದಾರೆ” ಎಂದು ಹೇಳಿದ್ದಾರೆ.

ಚಿತ್ರದ ನಿರ್ದೇಶಕರಾದ ಡಾ. ಕೃಷ್ಣಮೂರ್ತಿ ಚಮರಂರವರು

“ಕನ್ನಡದಲ್ಲಿ ಸ್ಟಾರ್ ನಟ, ನಿರ್ದೇಶಕರು ಇಂತಹ ಪ್ರಯೋಗ ಮಾಡುವುದಿಲ್ಲ. ಏಕೆಂದರೆ ಅವರಿಗೆ ಅಂತಹ ಅನುಭವವಗಳಿಲ್ಲ. ಸಾಮಾಜಿಕ ಕೆಲಸ ಮಾಡುತ್ತಿರುವ ಒಬ್ಬ ನಟರನ್ನು ಸಿನಿಮಾ ಮಾಡಲು ಕೇಳಿದೆ. ಆದರೆ ಕಡಿಮೆ ಬಜೆಟ್ ಸಿನಿಮಾ ಎಂದು ಒಪ್ಪಿಕೊಳ್ಳಲಿಲ್ಲ. ಅವರೆ ನಿರಾಕರಿಸಿದರು. ಇನ್ನೂ ಇಮೇಜ್‌ಗೆ ಅಂಟಿಕೊಂಡಿರುವ ನಟರು ಇಂತಹ ಸಿನಿಮಾಗಳಿಗೆ ಬರುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

’ಈಗ ತಮಿಳಿನಲ್ಲಿ ಧನುಷ್, ಸೂರ್ಯರಂತಹ ನಟರು ಮುಂದೆ ಬಂದಿದ್ದಾರೆ. ಮುಂದೊಂದು ದಿನ ತಮಿಳಿನಂತೆಯೇ ಕನ್ನಡದಲ್ಲೂ ಸ್ಟಾರ್‌ ನಟರು ಇಂತಹ ಸಿನಿಮಾಗಳಿಗೆ ಬರಬಹುದು ಎಂಬ ಆಶಾಭಾವವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ವಿಚಾರಗಳನ್ನು ಇಟ್ಟುಕೊಂಡು, ದಲಿತ ದೃಷ್ಠಿಕೋನದ ಸಿನಿಮಾಗಳು ಇತರ ಚಿತ್ರರಂಗದಲ್ಲಿ ಬರುತ್ತಿವೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ಹೆಚ್ಚಾಗಲಿ. ’ಭಾರತದ ಪ್ರಜೆಗಳಾದ ನಾವು’ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಯಶಸ್ವಿಯಾಗಿ ಹೆಚ್ಚಿನ ಜನರನ್ನು ತಲುಪಲಿ ಎಂಬುದು ನಮ್ಮ ಆಶಯ.


ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here