ಬೆಂಗಾವಲು ಊರಿನಾಗ ವಿಧಾನಸೌಧ ಐತಿ. ಅದು ಎಲ್ಲರಿಗೂ ಗೊತ್ತೈತಿ. ಅಲ್ಲಿಂದ ಸುಮಾರು 2,000 ಕಿ.ಮೀ, ನಿಮಗ ದೇಶದ ‘ದೇಹಲೀಜ್’ ಅಂದರ ಮೆಟ್ಟಿಲು ಸಿಗತದ. ಅದರ ಹೆಸರು ಹೊಸ ದೆಹಲಿ. ಅಲ್ಲೇ ಕರ್ನಾಟಕ ಭವನ ಐತಿ. ಸಾರಿ, ಕರ್ನಾಟಕ ಭವನ ಅದಾವು. ಒಂದಲ್ಲ, ಎರಡಲ್ಲ, ಮೂರು ಕರ್ನಾಟಕ ಭವನ ಅದಾವು. ಅವು ಹೆಂಗರ ಇರಲಿ, ಅವಕ್ಕ ಕಾವೇರಿ, ಶರಾವತಿ, ಭೀಮಾ ಅಂತ ಪವಿತ್ರ ನದಿಗಳ ಹೆಸರು ಇಟ್ಟಾರ.

ಇವುಗಳನ್ನ ಕರ್ನಾಟಕದ ಸಾಮ್ರಾಟರ ಬೇಸಿಗೆ ಅರಮನೆಗಳು ಅಂತ ಕರಿಯಬಹುದು. ಯಾಕ ಅಂದರ ಅವು ಸಿಎಂ, ಮಂತ್ರಿಗಳು ಐಎಎಸ್ ಅಧಿಕಾರಿಗಳು, ಮಾಜಿ ಮಂತ್ರಿಗಳು ಹಾಗೂ ಇತರ ವಿ.ಐ.ಪಿಗಳು ತಂಗುವ ಸ್ಥಳ. ಆ ಸುಲ್ತಾನರ ದೆಹಲಿಯೊಳಗ ಇರೋದು ಎರಡೇ ಕಾಲ. ಒಂದು ಬೇಸಿಗೆ, ಇನ್ನೊಂದು ಕಡು ಬೇಸಿಗೆ. ಹೀಗಾಗಿಯೇ ಅವು ನಮ್ಮನ್ನು ಆಳುವ ನವಾಬರ ಬೇಸಿಗೆ ಅರಮನೆಗಳು.

ಈ ಭವನಗಳಿಗೆ ಸಂಬಂಧಿಸಿದ ಒಂದು ಸುದ್ದಿಯನ್ನ ಪತ್ರಿಕೆಗಳು ಆವಾಗವಾಗ ಛಾಪಿಸುತ್ತಾ ಇರತಾವು: ‘ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾಗಿ ಹಿರಿಯ ಐಎಎಸ್ಸು ಅಧಿಕಾರಿಯವರನ್ನು ನೇಮಿಸಲಾಗಿದೆ’ ಅಂತ.

ಅವರನ್ನ ಅಧಿಕೃತ ಭಾಷೆಯಲ್ಲಿ ‘ದೆಹಲಿಯ ರಾಜಪ್ರತಿನಿಧಿ’ ಅಂತ ಕರೆದು, ಬಡಪಾಯಿ ಕನ್ನಡಿಗರ ಭಾಷೆ ಒಳಗ ‘ದಿಲ್ಲಿಯ ಕಾಯಂ ವಸತಿ ಗಿರಾಕಿ’ ಅಂತ ಕರೆಯಬಹುದು. ಇದು ಓದುಗರ ಕಣ್ಣಿಗೆ ಕಾಣುವ ಸುದ್ದಿ ಆದರೆ, ಅದರ ಹಿಂದ ಜನರ ಕಣ್ಣಿಗೆ ಕಾಣಲಾರದ ಇನ್ನೊಂದು ಸುದ್ದಿ ಇರ್ತದ. ಈ ರಾಜಸೇವಾಸಕ್ತ ರಾಜಪ್ರಮುಖರ ಸೇವೆಗೆ ಇನ್ನೂ ಕೆಲವರು ಇರತಾರ. ಅವರ ನೇಮಕದ ಸುದ್ದಿ ಯಾರಿಗೂ ಗೊತ್ತಾಗೋದಿಲ್ಲ.

ಕರ್ನಾಟಕ ಭವನದ ಜಾಲತಾಣದ ಪ್ರಕಾರ ‘ಇಲ್ಲಿನ ನಿವಾಸಿ ಆಯುಕ್ತರು ಭಾರತೀಯ ಆಡಳಿತ ಸೇವೆಗೆ ಸೇರಿದ ಹಿರಿಯ ಅಧಿಕಾರಿಯಾಗಿರುತ್ತಾರೆ. ನಿವಾಸಿ ಆಯುಕ್ತರವರಿಗೆ ಸಹಾಯಕರಾಗಿ, ಅಪರ ನಿವಾಸಿ ಆಯುಕ್ತರು, ಉಪ ನಿವಾಸಿ ಆಯುಕ್ತರು, ಉಪ ನಿವಾಸಿ ಆಯುಕ್ತರು (ಸಾ.ಸಂ.), ಸಮನ್ವಯ ಅಧಿಕಾರಿ (ಸಂ.ಕೋ.), ಅಧೀನ ಕಾರ್ಯದರ್ಶಿಗಳು (ಕಾ.ಕೋ.), ಸಹಾಯಕ ನಿವಾಸಿ ಆಯುಕ್ತರು, ಲೆಕ್ಕಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ನಿವಾಸಿ ಆಯುಕ್ತರಿಗೆ ಆತಿಥ್ಯ, ಶಿಷ್ಟಾಚಾರ, ಆಡಳಿತ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಂಸದರೊಡನೆ ಸಮನ್ವಯ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಹಾಯಕರಾಗಿರುತ್ತಾರೆ. ಇದರಾಗ ‘ಸಾ.ಸಂ’
ಅಂದರ ಸಾರ್ವಜನಿಕ ಸಂಪರ್ಕ.

‘ಕಾ.ಕೋ’ ಅಂದರ ಕಾನೂನು ಕೋಶ. ‘ಸಂ.ಕೋ’ ಅಂದರ ಸಂಸದರ ಕೋಶ. ‘ಸಂಕೋಚ’ ಅಂತ ತಿಳಕೋಬ್ಯಾಡರಿ ಮತ್ತ. ಸಂಸದರಿಗೆ ಸಂಕೋಚ ಅನ್ನೋದು ಇರೋದಿಲ್ಲ.

ಅಲ್ಲದೇ, ಈ ‘ಉಪ’, ‘ಸಹಾಯಕ’, ‘ಸಮನ್ವಯ’, ಇತ್ಯಾದಿ ಅಧಿಕಾರಿಗಳು (ಅಧಿಕ+ಅರಿ=ದೊಡ್ಡ ವೈರಿ, ಸವರ್ಣದೀರ್ಘ ಸಂಧಿ) ಮಾಡುವ ಅಪರಕರ್ಮಗಳಿಗೆ ಅನುಕೂಲ ಆಗಲಿಕ್ಕೆ ಅವರಿಗೆ ಕೈಯಾಳು, ಕಾಲಾಳುಗಳು ಅದಾರು. ಅದರಾಗ ಯಾರರ ಒಬ್ಬವ ಅಲ್ಲಿಂದ ತಲಿಕೆಟ್ಟು ಓಡಿಹೋಗಬಾರದಲ್ಲಾ, ಅದಕ್ಕ ಆ ‘ತ್ರಿವಕ್ರಿಭವನ’ಗಳ ಗೇಟುಗಳನ್ನ ಕಾಯಲು ಕರ್ನಾಟಕ ಪೊಲೀಸ್‌ನಿಂದ ನಿಯುಕ್ತರಾದ ಹಿರಿಯ ಅಧಿಕಾರಿ ಹಾಗೂ ಅಸಂಖ್ಯ ಸಿಬ್ಬಂದಿ ಇರತಾರ. ಪೊಲೀಸರನ್ನು ಬಿಟ್ಟು ಅಲ್ಲಿ ಸುಮಾರು 80 ಜನ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದಾರ.

ಇನ್ನು ನಮ್ಮ ಬೆಂಗಾವಲು ಊರಿಗೆ ಬರೋಣ. ಇಲ್ಲೆ, ನಮ್ಮದ ಓಟು ತೊಗೊಂಡು ನಮಗ ‘ಯಾವುದೇ ಅಧಿಕೃತ ಮಾಹಿತಿ ಕೊಡೋದಿಲ್ಲ’ ಅಂತ ಹೇಳಿ ರಾಜ್ಯಪಾಲರ ಎದುರಿಗೆ ಪ್ರಮಾಣ ವಚನ ತೊಗೊಂಡು ಕೆಲವು ಜನ ಕುರ್ಚಿ ಮ್ಯಾಲೆ ಕೂತಿರತಾರ. ಅವರು ಈಗ ಏನು ಮಾಡಿಬಿಟ್ಟಾರ ಅಂದರ ದೆಹಲಿಯ ತಮ್ಮ ಬೇಸಿಗೆ ಅರಮನೆಗಳಿಗೆ ಮೂರು ಹಿರಿಯ ಐಎಎಸ್ಸು, ಒಬ್ಬ ಐಎಫ್‌ಎಸ್ಸು ಹಾಗೂ ಒಬ್ಬ ಕೆಎಎಸ್ಸು ಅಧಿಕಾರಿಗಳನ್ನ ನಿಯೋಜನೆ ಮಾಡಿಬಿಟ್ಟಾರ. ಅದರಾಗ ಒಬ್ಬರು ನಿವಾಸಿ, ಇನ್ನು ಇಬ್ಬರು ಹೆಚ್ಚುವರಿ, ಮತ್ತೊಬ್ಬರು ವಿಶೇಷ ನಿವಾಸಿ, ಮಗದೊಬ್ಬರು ಉಪ ನಿವಾಸಿ ಆಯುಕ್ತರು.

ಅವರು ಏನು ಮಾಡತಾರ, ಏನು ಬಿಡತಾರ ಅನ್ನೋದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಭವನದ ಜಾಲತಾಣದ ಪ್ರಕಾರ “ನವದೆಹಲಿಯಲ್ಲಿ ನೆಲೆಗೊಂಡಿರುವ ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು/ ಇಲಾಖೆಗಳು/ ರಾಯಭಾರಿ ಕಚೆರಿಗಳು, ಇತರೆ ಕಾರ್ಯಾಲಯಗಳೊಡನೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಹೆಚ್ಚಿನ ಸಮನ್ವಯ ಸಾಧಿಸಲು ನಿವಾಸಿ ಆಯುಕ್ತರ ಕಚೆರಿ ಮತ್ತು ಕರ್ನಾಟಕ ಭವನವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ”.

ಆದರ ಇತ್ತೀಚಿನ ದಿನಗಳ ಒಳಗ ಅವು ಬೇರೆಬೇರೆ ರಾಜ್ಯಗಳ ಒಳಗ ಇರುವ ವಿರಾಮ ಸೇನೆ (ವಿಕ್ಟೋರಿಯಾ ರಾಣಿಯವರ ಮಹೋನ್ನತ ನಾಗರಿಕ ಸೇವೆ) ಅರ್ಥಾತ್ ಐಎಎಸ್, ಐಎಫ್‌ಎಸ್, ಐಪಿಎಸ್ ಮೊದಲಾದ ಪತಿ-ಪತ್ನಿ ಅಧಿಕಾರಿಗಳು ಒಂದೇಕಡೆ ಇರಲಿಕ್ಕೆ ಅನುಕೂಲ ಮಾಡಿಕೊಡುವ ತಂಗುದಾಣ ಆಗಿಬಿಟ್ಟಾವ. ಇದು ಹೆಂಗಪಾ ಅಂದರ ಬಿ.ಎ, ಬಿ.ಎಡ್ ಮಾಡಿ ಸರಕಾರಿ ಶಾಲೆಯೊಳಗ ನೌಕರಿ ಮಾಡುವ ಗಂಡ ಹೆಂಡತಿ ಟೀಚರುಗಳು ಜಿಲ್ಲಾ ಕೇಂದ್ರ ಬಿಟ್ಟು ಹೋಗಲಾರದೆ ಪದೇಪದೇ ಜೋಡಿ ಪ್ರಕರಣ (ಕಪಲ್ ಕೇಸು) ಅಂತ ಜೋಡಿಲೇ ಅರ್ಜಿ ಹಾಕತಾರ, ಆದರ ಆದಾಯ ತೆರಿಗೆ ಕಟ್ಟುವಾಗ ಬ್ಯಾರೆಬ್ಯಾರೆ ಅರ್ಜಿ ಹಾಕತಾರಲ್ಲಾ, ಹಂಗ. ಈಗ ಸದ್ಯ ದೆಹಲಿಯೊಳಗ ಇರುವ ಮೂವರು ಮಹಿಳಾ ಅಧಿಕಾರಿಗಳು ಹಾಗೂ ಒಬ್ಬ ಪುರುಷ ಅಧಿಕಾರಿ ಅವರದ್ದೂ ಇದೇ ಕೇಸೆ.

ಪ್ರತಿವರ್ಷ ಭಾರತಖಂಡದ ಅಸಂಖ್ಯ ಯುವಜನರೊಳಗ ಈ ಪುಣ್ಯಾತ್ಮರನ್ನ ಹೆಕ್ಕಿ ತೆಗೆದು ವಿವಿಧ ರಾಜ್ಯಗಳಿಗೆ ಕಳಿಸಿಕೊಡುವ ಸಂಸ್ಥೆ ಕೇಂದ್ರ ನಾಗರಿಕ ಸೇವಾ ಆಯೋಗ. ಇದರ ನಿಯಮ ಹೆಂಗ ಅದಾವಪಾ ಅಂದ್ರ, ಪ್ರತಿಯೊಬ್ಬ ವಿರಾಮಸೇನೆ ಅಧಿಕಾರಿಗೆ ಒಂದು ರಾಜ್ಯದ ಪದವೃಂದಕ್ಕ (ಕೇಡರ್) ನೇಮಕ ಮಾಡತಾರ. ಅವರು ತಮ್ಮ ನಿವೃತ್ತಿ ಆಗೋತನಕ ಅಲ್ಲೇ ಸೇವೆ ಮಾಡಬೇಕು. ಅದು ಯಾಕ ಅಂದರ ಒಂದೇ ರಾಜ್ಯದಲ್ಲಿ ಸುಮಾರು ಮೂರು-ನಾಲ್ಕು ದಶಕ ಸೇವೆ ಮಾಡಿದ ಮೇಲೆ ಅವರಿಗೆ ಆಯಾ ರಾಜ್ಯದ ನೆಲದ ಗುಣ ತಿಳಿತದ. ಅಲ್ಲಿ ಸುಲಭವಾಗಿ, ಯಾರಿಗೂ ಹೆದರದೆ, ಯಾರ ಗೈರು ಪ್ರಭಾವಕ್ಕೆ ಸಿಗದೇ ಜನ ಕಲ್ಯಾಣದ ಕೆಲಸ ಮಾಡಬಹುದು ಅಂತ. ಆದರ ಅನೇಕ ಅಧಿಕಾರಿಗಳು ಈ ಮೂಲಮಂತ್ರ ಮರತು ಬಿಡತಾರ. ರಾಜಕೀಯ ಪ್ರಭಾವ ಉಪಯೋಗಿಸಿ ಮೂಲ ರಾಜ್ಯದಿಂದ ದೂರ ತಮ್ಮ ರಾಜ್ಯಕ್ಕೆ ಅಥವಾ ದೆಹಲಿಗೆ ಹೋಗಿ ಗೂಟ ಹಿಡಿದು ಕೂತುಬಿಡತಾರ. ಅಲ್ಲಿ ಹೋಗಿ ಅಲ್ಲೇ ಇದ್ದು, ಅಲ್ಲೇ ನಿವೃತ್ತಿಯಾಗಿ ಕಡಿಕೆ ಒಂದು ದಿವಸ ಅಲ್ಲೇ ರಾಜಘಾಟ್‌ನೊಳಗ ಚಿರಶಾಂತಿಯಿಂದ ಮಲಗಿಕೊಂಡುಬಿಡತಾರ ಅಂದ್ರ ಅದುನೂ ಇಲ್ಲಾ.

ತನ್ನ ಸೀನಿಯಾರ್ಟಿ ಬಂದತಕ್ಷಣ, ಅದೇ ಪುಢಾರಿಗಳನ್ನು ಹಿಡಕೊಂಡು ಮತ್ತೆ ಕರ್ನಾಟಕದೊಳಗ ಪ್ರತ್ಯಕ್ಷ ಆಗಿಬಿಡತಾರ. ಮೂವತ್ತು ವರ್ಷ ಈಕಡೆ ಹಾಯದೆ ಇದ್ದವರು, ಮುಖ್ಯ ಕಾರ್ಯದರ್ಶಿ, ಪೊಲೀಸು ಮುಖ್ಯಸ್ಥ, ಅರಣ್ಯ ಇಲಾಖೆ ಮುಖ್ಯಸ್ಥರಾಗಿ ಪ್ಯಾರಾಚೂಟಿನಿಂದ ನೇರವಾಗಿ ವಿಧಾನಸೌಧದ ಮೂರನೇ ಮಹಡಿಯ ಮೇಲೆ ಇಳಿದುಬಿಡತಾರ.

ತಾನು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಬಿಟ್ಟೆನೇನೋ ಅನ್ನೋ ಹಂಗೆ ಪೋಸು ಕೊಡತಾರ. ನಾವು ಯಾವಾಗಲೂ ‘ಕನ್ನಡ್ ಮಾತ್ ಆಡೋದ್’ ಅಂತ ಹೇಳಿಕೊಂಡು ವಿಧಾನಸೌಧ, ರಾಜಭವನ, ವಿಕಾಸಸೌಧಗಳ ಮೊಗಸಾಲೆಗಳಲ್ಲಿ ಠಳಾಯಿಸಲಿಕ್ಕೆ ಹತ್ತಿಬಿಡತಾರ.

ಇಂಥದೇ ಒಂದು ಘಟನೆ ಕೆಲವು ವರ್ಷಗಳ ಹಿಂದೆ ಆಗಿತ್ತು. ಇದೆ ತಾನೇ ಪ್ಯಾರಾಚೂಟಿನಿಂದ ಇಳಿದು, ಸಿಂಹಾಸನ ಏರಿದ ಮುಖ್ಯ ಕಾರ್ಯದರ್ಶಿಯೊಬ್ಬರು ಸುದ್ದಿಗೋಷ್ಟಿ ಕರೆದರು. ಅವರನ್ನು ಕಣ್ಣುತುಂಬ ತುಂಬಿಕೊಳ್ಳಲು ಎರಡನೇ ಪಾಳಿಯ ಬಡ ಪತ್ರಕರ್ತರು ಓಡೋಡಿಹೋದರು. ಜೀವನ ಪೂರ್ತಿ ತಾವು ನೋಡದ ಮುಖವೊಂದನ್ನು ನೋಡಿದರು.”‘ನೀವು ಕರ್ನಾಟಕದಲ್ಲಿ ಕೆಲಸ ಮಾಡಿಯೇ ಇಲ್ಲ. ಈಗ ಧುತ್ ಅಂತ ಬಂದು ಮುಖ್ಯ ಕಾರ್ಯದರ್ಶಿ ಆದರೆ ಕಷ್ಟ ಆಗೋದಿಲ್ಲವೇ” ಅಂತ ಕೇಳಿದರು. “ಹಾಗೇನು ಇಲ್ಲ, ನಾನು ದೆಹಲಿಯಲ್ಲಿ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆ ನಿಭಾಯಿಸಿಬಿಟ್ಟಿದ್ದೇನೆ. ಸಣ್ಣ ವಯಸ್ಸಿನಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ನಿರ್ದೇಶಕನಾಗಿದ್ದೆ” ಅಂತ ಮು.ಕಾ. ಅವರು ಅಂದ್ರು. ಅವರ ದನಿಯಲ್ಲಿ ‘ಎಷ್ಟೆಂದರೂ ಕರ್ನಾಟಕ ಒಂದು ಜುಜುಬಿ ಸಣ್ಣ ರಾಜ್ಯ’ ಅನ್ನುವ ಧಾಟಿ ಇತ್ತು. ಅದು ಸಾಲದಂತೆ “ನಾವು ಎಲ್ಲರೂ ಈ ದೇಶದ ಸೇವಕರಲ್ಲವೇ, ಎಲ್ಲ ರಾಜ್ಯಗಳು ಒಂದೇ. ‘ಸಾರೆ ಜಹಾನ್ ಸೇ ಅಚ್ಛಾ, ಎ ಗುಲಸೀತಾನ ಹಮಾರಾ’” (ಭಾರತ ಜಗತ್ತಿನಲ್ಲೇ ಸುಂದರ ಹೂದೋಟ) ಅಂತ ರೊಮ್ಯಾಂಟಿಕ್ ಡೈಲಾಗ್ ಹೊಡೆದರು. ಆಗ ಹಿಂದಿನ ಸಾಲಿನಲ್ಲಿ ಒಬ್ಬ ಹಿರಿಯ ಪತ್ರಕರ್ತರು ಕೂತಿದ್ದರು. ಅವರು ಈ ಅಧಿಕಾರಿ ಅಲ್ಲದೆ ಅವರ ಅಪ್ಪನಂತಹ ಅಧಿಕಾರಿಗಳನ್ನು ನೋಡಿದ್ದವರು. ಅವರು ತುಂಬ ಸೌಜನ್ಯದಿಂದ “ಸಾರ್, ತಾವು ಹಿರಿಯರು, ಮುಂದಿನ ಮೂರು ವರ್ಷ ರಾಜ್ಯದ ಆಡಳಿತ ನಡೆಸುವವರು. ತಾವು ದಯಮಾಡಿ ಕರ್ನಾಟಕದ ‘ಐದು ನದಿಗಳು, ಐದು ಪರ್ವತ ಶ್ರೇಣಿಗಳು, ಐದು ಪ್ರಮುಖ ರಾಜಮನೆತನಗಳು, ಐದು ಸ್ವತಂತ್ರ ಹೋರಾಟಗಾರರು’ ಇವರ ಹೆಸರು ಹೇಳಬಹುದೇ” ಅಂತ ಕೇಳಿದರು.

ಒಂದುಕ್ಷಣ ಮಂಕಾದ ಅಧಿಕಾರಿ, “ಅಯ್ಯೋ ಅದೆಲ್ಲ ನಾಲೆಡ್ಜ್ ಈಗ ಎಲ್ಲಿ ಸಾರ್. ನಾವು ವಿದ್ಯಾರ್ಥಿ ಅಗಿದ್ದಾಗ, ಐಎಎಸ್ ಪರೀಕ್ಷೆ ಬರೆಯುವಾಗ ಇದೆಲ್ಲ ನೆನಪು ಇರ್ತ ಇತ್ತು. ಈಗ ಎಲ್ಲಿ. ಭಾರಿ ಫೈಲ್, ಡಾಕ್ಯುಮೆಂಟ್, ರಿಪೋರ್ಟು, ಇದರಲ್ಲೇ ನಂ ಟೈಮ್ ಹೋಗಿಬಿಡುತ್ತೇ” ಅಂತ ಪೆಚ್ಚುಪೆಚ್ಚಾಗಿ ನಕ್ಕರು.

ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕಬೇಕಾತು ಅಂದರ, ನಮ್ಮ ಘನ ಸರಕಾರ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಇರೋ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನ ರದ್ದು ಮಾಡುತ್ತೇವೆ ಅಂತ ಒಂದು ಘನ ಗಂಭೀರ ನಿರ್ಧಾರ ತೊಗೊಂಡುಬಿಟ್ಟದ. ಅದಕ್ಕ ಮುಖ್ಯ ಕಾರಣಗಳು ಎರಡು. ಒಂದು ಬೆಂಗಳೂರಿನ ಅಧಿಕಾರಿ-ಪುಢಾರಿಗಳಿಗೆ ತಮ್ಮ ಕಪಿಮುಷ್ಟಿಯೊಳಗಿನ ಅಧಿಕಾರ ಬಿಟ್ಟು ಕೊಡಲಿಕ್ಕೆ ಮನಸ್ಸು ಇಲ್ಲ. ಇನ್ನೊಂದು ಪುಢಾರಿಗಳನ್ನು ತೊಗಲುಗೊಂಬೆಗಳಂತೆ ಆಡಿಸುವ ಅಧಿಕಾರಿಗಳು ಬೆಂಗಳೂರು ಬಿಟ್ಟು ಬರಲು ತಯಾರು ಇಲ್ಲ.

ಕರ್ನಾಟಕದ 317 ಐಎಎಸ್ಸು ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಳೂರು ಮೆಟ್ರೊ ರೈಲು ಹಳಿಯ ಪರಿಧಿ ಬಿಟ್ಟು ಹೊರಗೆ ಇದ್ದಾರ. ಅವರು ಎಲ್ಲಾರು ಕಿರಿಯ ಅಧಿಕಾರಿಗಳು. ಅವರನ್ನ ಬಿಟ್ಟರ, ಹಿರಿಯರು, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಡಾ. ಅಂಬೇಡ್ಕರ್ ಬೀದಿಯ ಮೆಟ್ರೊ ನಿಲ್ದಾಣ ಬಿಟ್ಟುಹೋಗಲಿಕ್ಕೆ ತಯಾರು ಇಲ್ಲ. ಅವರನ್ನು ಜಿಲ್ಲೆ-ವಿಭಾಗಗಳಿಗೆ ಒತ್ತಾಯದಿಂದ ಕಳಿಸುವ ನೈತಿಕ ಧೈರ್ಯ ನಮ್ಮ ಪುಢಾರಿಗಳಿಗೆ ಇಲ್ಲ. ಹಿಂಗಾಗಿ, ಏನೇನೋ ನೆವ ಹೇಳಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಚ್ಚಿಸುವ ಪ್ರಯತ್ನ ಮಾಡುತ್ತಾ ಇದ್ದಾರೆ.

“ನಾವು ಈ-ಆಡಳಿತ, ವರ್ಚುವಲ್ ಗವರ್ನನ್ಸ್‌ದಿಂದ ಜನರಿಗೆ ಬೇಕಾದ ಸವಲತ್ತು, ಸೌಕರ್ಯ-ಸೇವೆಗಳನ್ನು ಅವರ ಮೊಬೈಲ್, ಕಂಪ್ಯೂಟರ್‌ಗಳಿಗೆ ತಲುಪಿಸುತ್ತಿದ್ದೇವೆ”. “ಅವರ ಮನೆ ಬಾಗಿಲಿಗೆ ಹಣ-ಆಹಾರ ಧಾನ್ಯ ಪೆಟ್ರೋಲು-ಹೆಂಡ ಎಲ್ಲವೂ ಕೊರಿಯರ್ ಕಳಿಸಬಹುದು. ಅವರು ಯಾಕೆ ಬೆಂಗಳೂರಿಗೆ ಬರಬೇಕು?”, “ವಿಭಾಗ ಮಟ್ಟದಲ್ಲಿ 125 ಅಧಿಕಾರಿಗಳು ಖಾಲಿ ಕೂತುಕೊಂಡುಬಿಟ್ಟಾರ. ಅವರನ್ನ ಬೆಂಗಳೂರಿಗೆ ಕರಿಸಿಕೊಂಡು ಅವರಿಗೂ ಮಾಲಿನ್ಯದ ಪರಿಚಯ ಮಾಡಿಸುತೇವೆ” ಅಂತೆಲ್ಲಾ ಹೇಳತಾರ. ವರ್ಚುವಲ್ ಗವರ್ನನ್ಸ್ ಅನ್ನೋದಕ್ಕೆ ‘ಮಿಥ್ಯಾವಾಸ್ತವದ ಪ್ರಭುತ್ವ’ ಅಂತ ಅನ್ನುವ ಇನ್ನೊಂದು ಅರ್ಥನೂ ಐತಿ ಅನ್ನೋದು ಅವರಿಗೆ ಗೊತ್ತಿಲ್ಲ.

ಆಡಳಿತ ಅನ್ನೋದು ಭಿಕಾರಿಗಳಿಗೆ ನೀಡುವ ಭಕ್ಷೀಸು ಅಲ್ಲ. ತೆರಿಗೆದಾರರ ಹಣದಿಂದ ಖರೀದಿ ಮಾಡಿದ ಅಕ್ಕಿ-ಸಕ್ಕರೆಯನ್ನ ಜನರಿಗೆ ಹಂಚುವ ಸರಕಾರ ಬಡವರಿಗೆ ಏನೂ ಉಪಕಾರ ಮಾಡಿದಂತೆ ಅಲ್ಲ. ತಹಶೀಲು ಕಚೇರಿ, ಅಟಲ್ ಕೇಂದ್ರಗಳಲ್ಲಿ ಜಮೀನು ಉತಾರ, ಜಾತಿ ಪ್ರಮಾಣಪತ್ರ ಕೊಟ್ಟುಬಿಟ್ಟರೆ ಏನೋ ದೊಡ್ಡ ಸಾಧನೆ ಮಾಡಿದ ಹಂಗಅಲ್ಲ. ಆಡಳಿತ ಅಂದರ ಜನರೊಂದಿಗೆ, ಜನರಿಗಾಗಿ, ಕೂಡು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ. ಇದು ಬೇರೆ ಬೇರೆ ಮಟ್ಟದೊಳಗ ಆಗಬೇಕು. ‘ಹುಬ್ಬಳ್ಳಿ ಹತ್ತಿರದ ಕಾಡಸೆಟ್ಟಿ ಹಳ್ಳಿ ಒಳಗ ಎಷ್ಟು ಜನರಿಗೆ ಸಂಡಾಸು ಕಟ್ಟಬೇಕು?’ ಅನ್ನೋದು ಕೇಂದ್ರದ ಶೌಚಾಲಯ ಮಂತ್ರಾಲಯದ ಕಾರ್ಯದರ್ಶಿ ತೊಗೊಳ್ಳುವ ನಿರ್ಧಾರ ಅಲ್ಲ. ಅದನ್ನ ಅಲ್ಲಿಯ ಗ್ರಾಮ ಪಂಚಾಯತಿ ತೊಗೋಬೇಕು. ತಾಲೂಕುಮಟ್ಟದ ನಿರ್ಧಾರ ತಾಲೂಕದಾಗ, ಜಿಲ್ಲಾಮಟ್ಟದ ನಿರ್ಧಾರ ಜಿಲ್ಲೆ, ವಿಭಾಗಮಟ್ಟದ ನಿರ್ಧಾರ ವಿಭಾಗದಾಗ, ರಾಜ್ಯಮಟ್ಟದ್ದು ರಾಜ್ಯದೊಳಗ, ರಾಷ್ಟ್ರಮಟ್ಟದ್ದು ರಾಷ್ಟ್ರಮಟ್ಟದಾಗ ತೊಗೊಳ್ಳಬೇಕು. ‘ಭಾರತಕ್ಕೆ ಈ ವರ್ಷ ಎಷ್ಟು ಸಾಲ ಕೊಡಬೇಕು?, ಆ ಮ್ಯಾಲೆ ಆ ಋಣ ತೀರೀಸಲಿಕ್ಕೆ ಆ ಸಾಲಗಾರ ಹಣಕಾಸು ಮಂತ್ರಿ ಹೆಂಗ ಬಜೆಟ್ ಮಂಡಿಸಬೇಕು?’ ಅನ್ನೋದನ್ನ ವಿಶ್ವ ಬ್ಯಾಂಕಿನವರು ಈಗ ನಿರ್ಧಾರ ಮಾಡತಾರಲ್ಲ, ಅದು ಸರಿಯಲ್ಲ. ಅದೇ ಮಾದರಿ, ಕಾಡಸೆಟ್ಟಿ ಹಳ್ಳಿ ಗ್ರಾಮ ಪಂಚಾಯಿತಿಗೂ ಸರಿಯಲ್ಲ. ತಮ್ಮ ಬದುಕಿನ ನಿರ್ಧಾರಗಳನ್ನ ಜನ ತಾವೇ ಖುದ್ದಾಗಿ ತೊಗೋಬೇಕು. ಅವರ ವೋಟಿನ ಋಣದಲ್ಲಿ ಇರುವ ಸರಕಾರ ಅದಕ್ಕೆ ಅನುಕೂಲ ಮಾಡಿಕೊಡಬೇಕು.

ವಿಕೇಂದ್ರೀಕೃತ ಅಧಿಕಾರ ಜನರ ನಡುವೆ ಇರ್ತದ. ಅದರಿಂದ ಪ್ರಜಾಸತ್ತಾತ್ಮಕ ರೀತಿಯೊಳಗ ಕೆಲಸ ನಡೀತದ. ಅದನ್ನ ಬಿಟ್ಟು, ಅಧಿಕಾರ ಜನರಿಂದ ದೂರ ಆಗಿ ಕೇಂದ್ರೀಕೃತ ಆದಾಗ, ಅದು ಸರ್ವಾಧಿಕಾರ ಆಗಿಬಿಡತದ. ಪ್ರಜಾಸತ್ತೆ ಹೋಗಿ, ಪ್ರಜಾ ನಾ ಸತ್ತೆ ಅಂತ ಹೊಯ್ಕೋಳ್ಳೋ ಹಂಗಆಗತದ.

ನಾಡಿನ ಹಿರಿಯ ಪತ್ರಕರ್ತರೊಬ್ಬರು ಸದಾ ಹೇಳುತ್ತಿದ್ದರು. “ಪ್ರತಿ ಸುದ್ದಿಯ ಹಿಂದೆ ಒಂದು ಗುಪ್ತ ಸುದ್ದಿ ಇರುತ್ತದೆ, ಆ ಸುದ್ದಿ ಬರೆದ ಸುದ್ದಿಗಾರನ ಹಿಂದೆ ಇನ್ನೊಂದು ಕತೆ ಬಚ್ಚಿಟ್ಟುಕೊಂಡಿರುತ್ತದೆ” ಅಂತ. ಪತ್ರಿಕೆಗಳ ಒಳಗ ಈ ಸತ್ಯ ಪ್ರತಿ ದಿನಾ ಬೆಳಿಗ್ಗೆ ಬಯಲು ಆಗುತ್ತಾ ಇರ್ತದ. ಅದು ಕೆಲವರಿಗೆ ಕಾಣತದ, ಇನ್ನು ಕೆಲವರಿಗೆ ಕಾಣೋದಿಲ್ಲ.

ಇದು ಎಲ್ಲರಿಗೆ ಕಂಡ ದಿವಸ ನಮ್ಮ ಮನಸಿನ ಗ್ರಹಣ ಬಿಡಬಹುದು.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

LEAVE A REPLY

Please enter your comment!
Please enter your name here