Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು - ರಾಜಧಾನಿ ಎಂಬ ಮಾಯಾಮೋಹಿನಿ

ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

- Advertisement -
- Advertisement -

ಮೊನ್ನೆ ಭಾರತಮಾತೆಯ ಅನೇಕ ಸುಪುತ್ರರು, ‘ವಿಕೇಂದ್ರೀಕರಣ ವಿನಾಶಕ್ಕೆ ದಾರಿ’, ‘ಒಕ್ಕೂಟ ಸರಕಾರ ಒಡೆದು ಹಾಕೀತು’, ‘ರಾಜ್ಯ ಸರಕಾರಗಳು ರಜೆಯ ಮೇಲೆ ಹೋಗಲಿ’, ‘ಒಂದು ದೇಶ, ಒಂದು ಸರಕಾರ’ ಅಂತೆಲ್ಲಾ ಸೋಷಿಯಲ್ ಮೀಡಿಯಾದಾಗ ಬರಕೊಂಡರು. ಅದು ಲಸಿಕೆ ಪೂರೈಕೆಗೆ ಸಂಬಂಧಪಟ್ಟ ಗೊಂದಲದ ಸಲುವಾಗಿ.

ಅವರ ಪ್ರಕಾರ ಭಾರತ ಎಂಬೊ ಉಪಖಂಡಕ್ಕ ದೆಹಲಿ ಎಂಬ ದೂರದ ಊರಿನಲ್ಲಿ ಒಂದು ಸರಕಾರ ಅಂತ ಇದ್ದರೆ ಸಾಕು. ದೇಶದ ಇತರ ರಾಜ್ಯಗಳು, ಅವುಗಳ ರಾಜಧಾನಿಗಳು, ಕೇವಲ ಭಾರತದ ಭೂಪಟದ ಮೇಲಿನ ಬಿಂದುಗಳು ಅಷ್ಟೇ ಮತ್ತು ದೆಹಲಿಯ ಸುಲ್ತಾನರು ನೀಡುವ ಭಿಕ್ಷೆಯಲ್ಲಿ ಬದುಕುವ ಭಿಕಾರಿಗಳು ಎಂಬಂತಾಗಿತ್ತು.

ಇದನ್ನ ನಾವು ಭಾವನಾತ್ಮಕವಾಗಿ ನೋಡದೆ, ಲಭ್ಯ ದತ್ತಾಂಶಗಳ ಮೂಲಕ ನೋಡೋಣ. ಉದಾಹರಣೆಗೆ ಒಕ್ಕೂಟ ಸರಕಾರದ ಕೇಂದ್ರ ಸ್ಥಾನ ದೆಹಲಿ ಒಳಗ 55 ಇಲಾಖೆಗಳ ಸುಮಾರು 1335 ಕಚೇರಿಗಳು ಅದಾವು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಅಂದರ ‘ಬರೆ ದೆಹಲಿಗೆ ಬಂತು’ ಅಂದಂಗ ಆಗೇದ. ಸುಮಾರು 130 ಕೋಟಿ ಜನ ಇರುವ, 30 ರಾಜ್ಯಗಳ, 600 ಜಿಲ್ಲೆಗಳ, 200 ಸ್ಮಾರ್ಟ್ ಸಿಟಿಗಳ, 30 ಲಕ್ಷ ಕಿಲೋಮೀಟರ್ ಚದುರ ಕಿಲೋಮೀಟರ್ ವ್ಯಾಪ್ತಿಯ, ಈ ದೇಶದ ಒಳಗ ಕೆಲವು ಕಚೇರಿಗಳನ್ನ ಆದರೂ ದೆಹಲಿಯಿಂದ ದೂರ ತೊಗೊಂಡು ಹೋಗಬೇಕು ಅಂತ ಇಲ್ಲಿಯವರೆಗಿನ 14 ಪ್ರಧಾನ ಮಂತ್ರಿಗಳಿಗೆ, ಅವರು ನಡೆಸಿದ ಸರಕಾರಗಳಿಗೆ ಅವಶ್ಯಕ ಅನ್ನಿಸಲಿಲ್ಲ. ಅದು ಹೋಗಲಿ, 545 ಲೋಕಸಭಾ ಕ್ಷೇತ್ರಗಳಿಂದ ನಮ್ಮ ವೋಟು ತೊಗೊಂಡು, ನಮ್ಮ ಸುಂಕದ ಹಣದಿಂದ ಬಿಂಕ ಮಾಡಿ ಮೆರೆಯುವ ಸಂಸತ್ತು ಸದಸ್ಯರಿಗೂ ಅನ್ನಿಸಲಿಲ್ಲ. ಸ್ವಾತಂತ್ರ ಬಂದು 75 ವರ್ಷ ಆಗಲಿಕ್ಕೆ ಬಂದರೂ ಈ ಹಣೆಬಾರ ಐತಿ ಅಂದರ, ಇನ್ನು ಮುಂದೆ ಅದು ಬದಲು ಆಗತದೋ ಇಲ್ಲೋ ಖಾತ್ರಿ ಇಲ್ಲ.

ಹಂಗ ಅಂತ ಅದು ಬರಿಯ ದೆಹಲಿಗೆ ಸೀಮಿತವಾದ ಭಾವ ಅಂತ ಅಂದುಕೋ ಬ್ಯಾಡ್ರಿ. ಇದೇ ಭಾವ ಇತರರಲ್ಲೂ ಕಾಣತದ. ಇನ್ನು ಬೆಂಗಳೂರಿಗೆ ಬಂದರ, ಅಲ್ಲಿಯೂ ಇದೆ ಹಣೆಬಾರ.

ರಾಜ್ಯ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ವ್ಯವಸ್ಥೆಗಳ ಪರಿಶೀಲನೆ

ವರ್ಷಕ್ಕೆ ಎರಡು ಬಾರಿ ಯಾವುದೋ ಹೆಸರು ಕೇಳದ ಪ್ರವಾಸೋದ್ಯಮ ಪತ್ರಿಕೆಯವರು ಮಾಡಿದ ಸರ್ವೇಪ್ರಕಾರ ಇಡೀ ದೇಶದಾಗ ವಾಸಕ್ಕ ಅತ್ಯಂತ ಸೂಕ್ತವಾದ ನಗರ ‘ನಮ್ಮ ಬೆಂಗಳೂರು’ ಅಂತ ಸೋಶಿಯಲ್ ಮೀಡಿಯಾದಾಗ ಚೀರಿಕೊಳ್ಳುವ ಅನೇಕ ಕನ್ನಡಿಗರ ಕಣ್ಣಿಗೆ ಇತರ ಜಿಲ್ಲೆ, ನಗರ, ಹಳ್ಳಿಗಳು ಕಾಣೋದ ಇಲ್ಲ. ಇದು ಮಕ್ಕಳ ಕೂಟ ಒಂದನೇ ಕ್ರಾಸ್‌ನಲ್ಲಿ ಹುಟ್ಟಿ, ಬಸವನಗುಡಿ ಕಾಲೇಜಿಗೆ ಹೋಗಿ, ಮಲ್ಲೇಶ್ವರದಲ್ಲಿ ಮನೆ ಮಾಡಿ, ಪಕ್ಕದ ಕ್ರಾಸ್ ಅಂಕಲ್ ಅವರ ಮಗಳನ್ನು ಮದುವೆ ಮಾಡಿಕೊಂಡು ರಾಜಾಜಿನಗರದಲ್ಲಿ ಅಂತಿಮ ಯಾತ್ರೆ ಮುಗಿಸಿದ ‘ಸೆವೆಂತ್ ಜನರೇಷನ್ ಬ್ಯಾಂಗಲೋರಿಯನ್ಸ್’ ಕತೆ ಅಷ್ಟೇ ಅಲ್ಲ. ಕೂಗನಹಳ್ಳಿ ಎಂಬೊ ಕುಗ್ರಾಮದಲ್ಲಿ ಹುಟ್ಟಿ ಹೊಟ್ಟೆಪಾಡಿಗೆ ರಾಜಧಾನಿಯ ಸಿಂಗಲ್ ರೂಮಿನಲ್ಲಿ ಬೆಂದಕಾಳೂರು ತಿಂದು ಬದುಕಿದ ಉತ್ತರ ಕರ್ನಾಟಕದ ವೀರ ಕನ್ನಡಿಗರ ಕತೆಯೂ ಹೌದು.

ಮೂಲ ಇಲಾಖೆಗಳು ಹೋಗಲಿ, ರಾಜ್ಯದ ವಿವಿಧ ಭೂಭಾಗಗಳಿಗೆ ಸಂಬಂಧಿಸಿದ ಅನೇಕ ಕಚೇರಿಗಳು ಬೆಂಗಳೂರಿನಾಗ ಮುರಕೊಂಡು ಬಿದ್ದಾವು. ಉದಾಹರಣೆಗೆ ಬಯಲುಸೀಮೆ ಅಭಿವೃದ್ಧಿ ಮಂಡಳಿ, ಪಶ್ಚಿಮಘಟ್ಟ ಕಾವಲು ಸಮಿತಿ, ಮೀನುಗಾರಿಕೆ ನಿಗಮ, ಕಾಫಿ ಬೋರ್ಡು, ತೊಗರಿ ಬೋರ್ಡು, ಹರಳೆಣ್ಣೆ ಬೋರ್ಡು ಮುಂತಾದ ಕಚೇರಿಯ ಅದಕ್ಷ ಅಧ್ಯಕ್ಷರು, ಅದರ ಮೇಲೂ – ಕೆಳಗೂ ಜವಾಬುದಾರಿ ಇಲ್ಲದ ಮೇಲುಸ್ತುವಾರಿ ಅಧಿಕಾರಿಗಳು, ಅವರ ರಕ್ಷಕರು, ಭಕ್ಷಕರು, ಚಪರಾಸಿಗಳು, ಚಾಲಕರು, ಏಜೆಂಟ್ರು ಎಲ್ಲರೂ ಬೆಂಗಳೂರಿನಾಗ, ಅಲ್ಲಿನ ಹೆಚ್ಚುವರಿ ಭತ್ತೆ ಮತ್ತು ಇತರ ಆನುಷಿಂಗಿಕ ಫಲಗಳನ್ನು ಅನುಭೋಗಿಸುತ್ತಾ ಇದ್ದಾರ.

ಹಿಂದೊಮ್ಮೆ ವಿಧಾನಪರಿಷತ್ತಿನ ಸದಸ್ಯರೊಬ್ಬರು “ರಾಜ್ಯದ 350 ಜನ ಐಎಎಸ್ಸು ಅಧಿಕಾರಿಗಳ ಪೈಕಿ 300 ಜನ ಬರೆ ಬೆಂಗಳೂರಿನಲ್ಲಿ ಅದಾರ. ಇದು ಅನವಶ್ಯಕ, ಅವರನ್ನ ಜಿಲ್ಲೆಗಳಿಗೆ ಕಳಿಸಿರಿ”, ಅಂತ ಕೇಳಿದಾಗ, ಹಳೆ ಮೈಸೂರಿನ ಕೆಲ ಹಳೆ ತಲೆಗಳು ಆಕ್ಷೇಪಿಸಿದರು. “ಯಾಕೆ ನಂ ಬ್ಯಾಂಗಲೋರ್‌ಗೆ ಒಳ್ಳೆ ಆಫೀಸರ್ಸ್ ಬೇಡವಾ?” ಅಂತ ತರಲೆ ಮಾಡಿದರು.

ಘನ ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಒಂದು ಉಸ್ತುವಾರಿ ಕಾರ್ಯದರ್ಶಿ ಅಂತ ಇಟಗೊಂಡದ. ಇವರಲ್ಲಿ ಕೆಲ ಪುಣ್ಯಾತರು ಮತ್ತು ಪುಣ್ಯಾತಗಿತ್ತಿಯರು ವಿಕ್ಟೋರಿಯಾ ರಾಣಿಯ ದತ್ತು ಪುತ್ರರು. ವಿಕ್ಟೋರಿಯಾ ರಾಣಿಯ ಕೆಲಸದ ಅವಧಿ ಬೆಳಿಗ್ಗೆ 11ರಿಂದ ಸಂಜೆ 5 ಆಗಿತ್ತಲ್ಲಾ, ಹಿಂಗಾಗಿ ಇವರೆಲ್ಲ, ಅದನ್ನು ಚಾಚೂತಪ್ಪದೆ ಪಾಲಿಸುವರು. ಆ ಜಿಲ್ಲೆಗೆ ಫ್ಲಯಿಟ್ ಇದೆಯಾ ಅಂತ ಕೇಳಿ, ತಿಳಕೊಂಡ ಮ್ಯಾಲೆನೆ ಆ ಜವಾಬುದಾರಿ ಒಪ್ಪಿಕೊಂಡವರು. ಬೆಳಿಗ್ಗೆ 11 ಗಂಟೆ ಫ್ಲಯಿಟ್‌ಗೆ ಬಂದು ಒಂದು ಮೀಟಿಂಗ್ ಮಾಡಿ, ಎಲ್ಲರ ಕಡೆಯಿಂದ ‘ಯಸ್ ಸರ್’, ‘ಓಕೆ ಸಾರ್’ ಅನ್ನಿಸಿಕೊಂಡು, ಯಾವಾಗ ಸಂಜೆ 5 ಗಂಟೆ ಆದೀತೋ, ಯಾವಾಗ ಫ್ಲಯಿಟ್ ಹಿಡಕೊಂಡು ವಾಪಸ್ ಬೆಂಗಳೂರಿಗೆ ಹೋದೆನೋ ಅಂತ ಓಡಿ ಹೋಗತಾರ. ಅಲ್ಲಿ ಏನು ಗಂಟು ಇಟ್ಟಿರತಾರೋ, ರಾತ್ರಿ ಮನಿಗೆ ಹೋಗಲಿಲ್ಲ ಅಂದ್ರ ಯಾವ ದರೊಡೆಕೋರರು ದೋಚಿಕೊಂಡು ಹೋಗತಾರೋ ಗೊತ್ತಿಲ್ಲ.

ಇದು ಬರೆ ಬೀದರ್- ಗುಲ್ಬರ್ಗದ ಕತಿ ಅಲ್ಲ. ಚಾಮರಾಜನಗರ, ಚಿತ್ರದುರ್ಗದ ಕತಿನೂ ಹೌದು. ಕೇವಲ ಹಿಂದಿ ಮಾತಾಡುವ ಕಾಶ್ಮೀರಿ ಲಾಲಾಗಳ ಸ್ವಭಾವ ಅಲ್ಲ. ಇಲ್ಲೇ ಬಳ್ಳಾರಿಯ ಹಳ್ಳಿಯಲ್ಲಿ ಹುಟ್ಟಿ ಐಎಎಸ್ಸು ಪಾಸಾಗಿ ಬೆಂಗಳೂರಿಗೆ ಹೋದಮ್ಯಾಲೆ ತನ್ನೂರು ಮರೆತವನ ಕತಿನೂ ಹೌದು.

ಬೆಳಗಾವಿಯ ಹೊರಗ ಒಂದು ಕಲ್ಲು ಹೃದಯದ ಕಟ್ಟಡ ಅದ. ಸುಮಾರು 400 ಕೋಟಿ ರೂಪಾಯಿಯಲ್ಲಿ ಲೋಕೋ ಗೈರು ಉಪಯೋಗಿ ಇಲಾಖೆಯವರು ಕಟ್ಟಿದ ಈ ಅನಗತ್ಯ ಆಲಯಕ್ಕೆ ಸುವರ್ಣಸೌಧ ಅಂತ ಹೆಸರು. ಈ ಬಿಳಿಯಾನೆಯನ್ನು ಸ್ವಚ್ಛ ಮಾಡಿ, ಮೈ ತೊಳದು, ಹುಲ್ಲು ತಿನಿಸಲಿಕ್ಕೆ ವರ್ಷಕ್ಕೆ 2-3 ಕೋಟಿ ಖರ್ಚು ಆಗತದ. ಬೆಂಗಳೂರು ಎಂಬೊ ದಂತಗೋಪುರದ ಮುತ್ತುಗದ ಕುರ್ಚಿಗಳ ಮ್ಯಾಲೆ ಫೆವಿಕಾಲ್ ಮೆತ್ತಿ ಕೂತಿರುವ ಪುಢಾರಿ ಹಾಗೂ ಅಧಿಕಾರಿಗಳಿಗೆ ಇಲ್ಲಿಯೂ ಸದನ ನಡೆಸಬಹುದು ಅಂತ ಅನ್ನಿಸಿ ನಾಲ್ಕು ವರ್ಷ ಆತು.

“ವಿಕೇಂದ್ರೀಕರಣ ಇರಲೇಬೇಕು, ಆದರ ಬರೆ ನನ್ನ ಲೆವೆಲ್ ತನಕ ಆಷ್ಟ ಇರಬೇಕು. ನನ್ನ ಕೆಳಗಿನ ಎಲ್ಲ ಅಧಿಕಾರವೂ ನನ್ನಲ್ಲೇ ಕೇಂದ್ರೀಕೃತ ಆಗಿರಬೇಕು” ಅನ್ನೋದು ಪುಢಾರಿ-ಅಧಿಕಾರಿಗಳ ಬಯಕೆ, ಅಂತ ಒಂದು ಹಳೆ ಜೋಕು ಐತಿ. ಇದೆ ಲಾಜಿಕ್ ಜಿಲ್ಲೆ, ತಾಲೂಕ, ಗ್ರಾಮ ಪಂಚಾಯತಿವರೆಗೂ ಅನ್ವಯ ಆಗತದ. ರಾಜಧಾನಿ ರಾಜಕೀಯ ಅನ್ನೋದು ಸದ್ಯದ ಮಟ್ಟಿಗೆ ಐದು ಅಂಕದ ನಾಟಕ.

ಸಂಸತ್ತು ಅಧಿವೇಶನದ ಪ್ರಶ್ನೆಯ ಅವಧಿ ರದ್ದುಗೊಳಿಸಿದ ಕೇಂದ್ರ: ಖಂಡಿಸಿ ಪತ್ರಬರೆದ 800 ತಜ್ಞರು
PC: Jagran Josh

ಅಂದಹಂಗ ದೆಹಲಿ ಅಂದರೆ ಪರ್ಷಿಯನ್, ಉರ್ದು ಭಾಷೆಯಲ್ಲಿ ಮೆಟ್ಟಿಲು. ದೇಹಲವಿ ಅನ್ನೋದು ಉರ್ದು ಭಾಷೆಯ ಇನ್ನೊಂದು ಹೆಸರು. ಆದರ ನಮಗ ಎಲ್ಲರಿಗೂ ಗೊತ್ತಿರೋ ಹಂಗ, ಮನಿ ಅನ್ನೋದು ಮೆಟ್ಟಿಲಿನಿಂದ ಶುರು ಆಗಬೇಕೇ ಹೊರತು ಅಲ್ಲಿಗೆ ಮುಗದು ಹೋಗಬಾರದು. ಇನ್ನು ದೆಹಲಿಯ ದೊರೆಗಳು ಗೆದ್ದ ದಕ್ಷಿಣದ ಮೊದಲ ನಗರ ಔರಂಗಾಬಾದ್. ಇದರ ಮೂಲ ಹೆಸರು ‘TIQ’, ಅಂದ್ರ ದಕ್ಷಿಣದ ಕಿಡಕಿ. ಕಿಡಕಿಯಿಂದ ಹೊರ ಜಗತ್ತು ತೆರೀಬೇಕು ಆಷ್ಟ, ಮುಚ್ಚಬಾರದು.

ಶರ್ಲಾಕ್ ಹೋಮ್ಸ್, ಡಾ. ವಾಟ್ಸನ್ ಎನ್ನುವ ಅಜರಾಮರ ಪಾತ್ರಗಳನ್ನು ಸೃಷ್ಟಿಸಿ ಜಗತ್ತನ್ನೇ ದಂಗುಬಡಿಸಿದ. ಮನುಕುಲ ಮರೆಯಲಾರದ ಪತ್ತೇದಾರಿ ಬರಹಗಾರ ಆರ್ಥರ್ ಕೋನಾನ್ ಡಾಯ್ಲನ ಒಂದು ಮಾತು ಇಲ್ಲೇ ನೆನಪು ಆಗತದ: “ಈ ಲಂಡನ್ ಅನ್ನುವುದು ಒಂದು ಮಹಾನ್ ಕಸದ ಗುಂಡಿ. ಈ ಸಾಮ್ರಾಜ್ಯದ ಎಲ್ಲ
ಸೋಮಾರಿಗಳು ಹಾಗೂ ಕೂತು ತಿನ್ನುವವರು ಇದರ ಆಕರ್ಷಣೆ ತಪ್ಪಿಸಿಕೊಳ್ಳಲಾರದೆ ಇಲ್ಲಿ ಬಂದು ಬೀಳುತ್ತಾರೆ. ಅಂತೆಯೇ ನಾನೂ ಇಲ್ಲಿಗೆ ಬಂದು ಬಿದ್ದೆ.”

ಹುಟ್ಟಿನಿಂದ ಲಂಡನ್‌ನವನಾಗಿರದ, ವೃತ್ತಿಯಿಂದ ವೈದ್ಯನಾಗಿ, ಬರಹದಿಂದ ಜನಪ್ರಿಯತೆ ಪಡೆದ ಡಾ. ಡಾಯ್ಲ, ತನ್ನದೇ ಪ್ರತಿಬಿಂಬವಾದ ಡಾ. ವಾಟ್ಸನ್‌ನ ಬಾಯಿಯಿಂದ ಈ ಮಾತು ಹೇಳಿಸಿದ. ಇದು ವಿಶ್ವದ ಪ್ರತಿ ನಾಗರಿಕತೆಗೆ, ಅನಾದಿಕಾಲದವರೆಗೂ ಅನ್ವಯ ಆಗತದ ಅಂತ ಅನ್ನಸತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...