Homeಅಂಕಣಗಳುಡೇಟಾಖೋಲಿ: ಮಾಧ್ಯಮ ನಲ್ಲರು - ಯಾರ ಕೆಲಸ ಏನು?

ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

- Advertisement -
- Advertisement -

ಈ ವಾರ ಇಡೀ ಜಗತ್ತು ಶಾಂತಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದಾಗ ಒಂದು ಸುದ್ದಿ ಬಂತು. ಈಗಿನ ಕಾಲದ ಎಲ್ಲ ಒಳ್ಳೆ-ಕೆಟ್ಟ ಸುದ್ದಿಗಳಂತೆ ಅದು ಕೆಲವೇ ನಿಮಿಷದಾಗ ವೈರಲ್ ಆಗಿ ಹೋತು.

ಅದು ಯಾವುದಪಾ ಅಂದರ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವೆ ಜಗಳ ಆಗಿ, ಅದರಾಗ ಕಿರಿಯ ಅಧಿಕಾರಿ ಒಬ್ಬರು ರಾಜೀನಾಮೆ ಕೊಟ್ಟು, ಕಡಿಕೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿದ ಸುದ್ದಿ.

ಅದರಾಗ ಹಿರಿಯ ಅಧಿಕಾರಿ, ’ಇದರ ಹಿಂದೆ ದೊಡ್ಡ ಪಿತೂರಿ ಐತಿ. ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲ ಇದಕ್ಕ ಕಾರಣ. ನಮ್ಮ ನಡುವಿನ ಭಿನ್ನಾಭಿಪ್ರಾಯ ಎಲ್ಲ ಸಣ್ಣದು ಆಷ್ಟ. ಅದನ್ನ ನೆವ ಮಾಡಿಕೊಂಡು ನಮ್ಮನ್ನ ಇಲ್ಲಿಂದ ಹೊರಗ ಹಾಕಿದರು’ ಅನ್ನೋ ಅರ್ಥ ಬಾರೋ ಹಂಗ ಪ್ರತಿಕ್ರಿಯೆ ಕೊಟ್ಟರು.

ಅಲ್ಲಿಗೆ ಆ ಕತಿ ಮುಗೀತು. ಆದರ ಅದರಗಿಂತ ಕುತೂಹಲಕಾರಿಯಾಗಿದ್ದು ಯಾವುದು ಅಂದರ ಈ ವಿಷಯಕ್ಕ ಸಂಬಂಧ ಪಡದೇ ಇರುವ ಒಬ್ಬ ಐಪಿಎಸ್ಸು ಅಧಿಕಾರಿ ತಮ್ಮ ಫೇಸ್ಬುಕ್ ಗೋಡೆ ಮೇಲೆ ಒಂದು ಬರಹ ಬರದು ಹಾಕಿದರು. ಅದರಾಗ ಅವರು ಏನು ಹೇಳಿದರು ಅಂದರ ಕೆಲವು ಅಧಿಕಾರಿಗಳು ತಾವು ಸಿಂಗಮ್, ಸಿಂಹಿಣಿ ಅಂತ ಎಲ್ಲಾ ಪ್ರಚಾರ ಮಾಡಿಕೊಳತಾರ. ಇದು ಸರಿಯಲ್ಲ. ತಮ್ಮ ಕೆಲಸ ತಾವು ಸುಮ್ಮನೇ ಮಾಡಬೇಕು, ರಾಜಕೀಯದಿಂದ ಅವರು ದೂರ ಇರಬೇಕು, ಒಳ್ಳೆ ಕೆಲಸ ಮಾಡಿದರ ತಮ್ಮ ತಂಡಕ್ಕೆ ಅದರ ಶ್ರೇಯಸ್ಸು ಕೊಡಬೇಕು, ಕೆಟ್ಟ ಕೆಲಸ ಮಾಡಿದರ ಅದರ ತಪ್ಪು ಹೊರಲಿಕ್ಕೆ ತಯಾರು ಇರಬೇಕು, ಅನ್ನುವ ಮಾತು ಹೇಳಿದರು. ಮಜಾ ಅಂದರ ಈ ಅಧಿಕಾರಿ ಹುಬ್ಬಳ್ಳಿ- ಬೆಳಗಾವಿಯೊಳಗ ಕೆಲಸ ಮಾಡಿದಾಗ ಇದೆ ರೀತಿಯ ಮಾಧ್ಯಮ ಪ್ರಚಾರದ ಅನುಕೂಲ ಪಡೆದುಕೊಂಡಿದ್ರು. ಆ ಮಾತು ಬ್ಯಾರೆ.

ಇಲ್ಲಿ ಮುಖ್ಯವಾದ ವಿಷಯ ಏನು ಅಂದರ ನಮ್ಮ ಭವ್ಯ ಭಾರತದ ಮಾನ್ಯ ಮತದಾರ ಬಂಧುಗಳಿಗೆ ನಮ್ಮ ಘನ ಸರಕಾರದ ಒಳಗ ಯಾರಿಗೆ ಯಾವ ಕೆಲಸ, ಯಾವ ಜವಾಬುದಾರಿ ಅನ್ನೋದು ಸರಿಯಾಗಿ ಗೊತ್ತಿಲ್ಲ. ರಾಜಕಾರಣಿಯ ಕೆಲಸ ಏನು, ಅಧಿಕಾರಿಗಳ ಕೆಲಸ ಏನು ಅನ್ನೋದು ಗೊತ್ತಿಲ್ಲ.

PC : Wikipedia, (ಪ್ರತಾಪ್ ಸಿಂಗ್ ಖೈರೋಂ)

ಇದರ ಬಗ್ಗೆ ಒಂದು ರಸವತ್ತಾದ ಕತೆ ಇದೆ. ಪ್ರತಾಪ್ ಸಿಂಗ್ ಖೈರೋಂ ಅವರು 50ನೇ ದಶಕದೊಳಗ ಪಂಜಾಬ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆಗ ಒಬ್ಬ ದಕ್ಷಿಣ ಭಾರತ ಮೂಲದ ಐಎಎಸ್ ಅಧಿಕಾರಿ ಪಂಜಾಬಿನ ಮುಖ್ಯ ಕಾರ್ಯದರ್ಶಿ ಆಗಿದ್ದರು. ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದರಂತ – ಅಲ್ರೀ, ನಿಮ್ಮ ಕೆಲಸ ಏನು, ನನ್ನ ಕೆಲಸ ಏನು? ಅಂತ. ಆಗ ಆ ಐಎಎಸ್ ಅಧಿಕಾರಿ ಸರ್, ನಿಮ್ಮ ಕೆಲಸ ಸರಕಾರದ ಕಾನೂನು, ನೀತಿನಿಯಮ ರೂಪಿಸುವುದು. ನನ್ನ ಕೆಲಸ ದಿನನಿತ್ಯದ ಆಡಳಿತ ನಿರ್ವಹಣೆ ಮಾಡೋದು, ಅಂತ. ಹೌದಾ, ಹಂಗಾರ ನಾಳೆಯಿಂದ ನನ್ನ ಕೆಲಸ ನೀವು ಮಾಡ್ರಿ, ನಿಮ್ಮ ಕೆಲಸ ನಾನು ಮಾಡತೆನಿ ಅಂತ ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದರಂತ.

ಖೈರೋಂ ಅವರು ಪ್ರಾಮಾಣಿಕರು, ಸರಳ ಮನುಷ್ಯರು. ಹಿಂಗಾಗಿ ಅವರು ಅಧಿಕಾರಿನ ಕರೆದು ಮಾತಾಡಿದರು. ಬ್ಯಾರೆ ರಾಜಕಾರಣಿಗಳು ಸಹಿತ ಇದೆ ಕೆಲಸ ಮಾಡ್ತಾ ಇದಾರೆ, ಅದರ ಅದನ್ನ ಮುಕ್ತವಾಗಿ ಒಪ್ಪಿಕೊಳ್ಳೋದಿಲ್ಲ.

ಈಗ ಮತ್ತ ನಮ್ಮ ರಾಜ್ಯದ ಅಧಿಕಾರಿಗಳಿಗೆ ಬರೋಣ. ಮೈಸೂರಿನ ಇಬ್ಬರು ಅಧಿಕಾರಿಗಳು ಜಗಳ ಅಡಿದರ, ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗೆ ಭಿನ್ನಾಭಿಪ್ರಾಯ ಬಂದರ, ಅವರ ಮ್ಯಾಲೆ ಒಬ್ಬ ಪ್ರಾದೇಶಿಕ ಆಯುಕ್ತ ಅಂತ ಒಬ್ಬ ಅಧಿಕಾರಿ ಇದ್ದ ಇರತಾನ. ಆ ಪುಣ್ಯಾತ್ಮ ಈ ಅಧಿಕಾರಿಗಳ ಮೇಲೆ ನಿಗರಾಣಿ ವಹಿಸಿ ಅವರು ಸರಿಯಾಗಿ ಕೆಲಸ ಮಾಡುವ ಹಂಗ ಯಾಕ್ ಮಾಡಲಿಲ್ಲ ಅಂತ ಯಾವ ಮಾಧ್ಯಮದವರು ಕೇಳಲಿಲ್ಲ, ರಾಜಕಾರಣಿನು ಕೇಳಲಿಲ್ಲ.

ಯಾಕೆ ಅಂದ್ರ ಮಾಧ್ಯಮದವರಿಗೆ ಸಹಿತ ಯಾರದ್ದು ಯಾವ ಕೆಲಸ ಅಂತ ಹೇಳಿ ಸರಿಯಾಗಿ ಗೊತ್ತಿಲ್ಲ. ಅಥವಾ ಗೊತ್ತಿದರೂ, ಟಿಆರ್‌ಪಿ ಆಸೆಗೆ, ಮಾರುಕಟ್ಟೆ, ಜಾಹೀರಾತು ಆಸೆಗೆ, ಅವರು ಬಹು ಚರ್ಚಿತ ವಿಷಯಗಳನ್ನ ತೋರಿಸ್ತಾರ ಹೊರತು, ಕೇಳಲೇಬೇಕಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡೋದಿಲ್ಲ.

ಈ ರೀತಿಯ ಸುದ್ದಿ ಅಥವಾ ಚರ್ಚೆ, ಜನರಿಗೆ ಬೇಕೋ ಬೇಡವೋ? ಪ್ರತಿ ದಿನ ಮುಂಜಾನೆದೊಳಗಿನ ಸುದ್ದಿಯ ಹೆಡ್‌ಲೈನ್ ಓದಿ ಪೇಪರ್ ಮುಚ್ಚಿ ಇಡುವ ನಮ್ಮ ಜನರಿಗೆ ಸುದ್ದಿಯ ಅಳಕ್ಕೆ ಹೋಗೋದು ಬೇಕೋ ಬ್ಯಾಡವೋ?

ಇದರಾಗ ನಾಯಕರ ತಪ್ಪೂ ಐತಿ. ಈಗಿನ ನಾಯಕರು ಮುಂದಿನ ಚುನಾವಣೆ ಬಗ್ಗೆ ಮಾತ್ರ ವಿಚಾರ ಮಾಡತಾರ ಹೊರತು ಅವರಿಗೆ ಬೇರೆ ಮುಂದಾಲೋಚನೆ, ದೂರದೃಷ್ಟಿತ್ವ ಅನ್ನೋದು ಇರೋದಿಲ್ಲ.

ಬಹಳ ಹಿಂದೆ ರಾಮಚಂದ್ರಪ್ಪ ಅಂತ ಬೆಂಗಳೂರಿನ ಮೇಯರ್ ಇದ್ದರು. ಅವರು ಜಾಸ್ತಿ ಓದಿರಲಿಲ್ಲ, ಆದ್ದರಿಂದ ಅವರನ್ನ ಬೆಂಗಳೂರಿನ ಕೆಲವು ಪತ್ರಕರ್ತರು ಮೇಯರ್ ಮುತ್ತಣ್ಣ ಅಂತ ಕರಿತಿದ್ದರು. ಅವರು ಬಹಳ ಸರಳ ಭಾಷೆಯೊಳಗ ಭಾಷಣ ಮಾಡ್ತಿದ್ದರು. ಪಾಲಿಕೆಯ ಆಯುಕ್ತರು ಬದಲಾವಣೆ ಆದಾಗ ಅವರು ಒಂದು ಸ್ವಾಗತ ಭಾಷಣ ಮಾಡಿದ್ದರು. ಅದರಲ್ಲಿ ಒಂದು ಮರೆಯಲಾರದಂತಹ ಮಾತು ಹೇಳಿದರು.

’ನೋಡಿ ಸ್ವಾಮಿ, ನಮ್ಮ ಅಧಿಕಾರಿಗಳು ಕುದುರೆಗಳು ಇದ್ದಂತೆ. ಅವರು ಯಾವ ದಿಕ್ಕಿನಲ್ಲಿ ಓಡುತ್ತಾರೆ ಅನ್ನುವುದು ಅವರನ್ನು ಓಡಿಸುವ ಸವಾರರ ಮೇಲೆ ಇರುತ್ತದೆ. ಆಯುಕ್ತರು ಸವಾರರು ಇದ್ದಂತೆ. ನೀವು ಒಳ್ಳೆಯವರಾದರೆ, ಅವರು ಒಳ್ಳೆಯವರು’, ಅಂತ ಹೇಳಿ ಮಾತು ಮುಗಿಸಿದ್ದರು.

ಈ ರೀತಿಯ ಸ್ಪಷ್ಟತೆ ಈಗಿನ ನಾಯಕರಲ್ಲಿ ಬಂದರೆ, ಅದು ಜನರಿಗೆ ತಿಳಿದರೆ, ಆಡಳಿತ ಅನ್ನುವುದು ಸರಿಯಾದ ದಾರಿಯಲ್ಲಿ ನಡೆದೀತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...