ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಕೆ.ಸಿ.ಎನ್ ಕುಟುಂಬದ ಹೆಜ್ಜೆ ಗುರುತುಗಳು ದಟ್ಟವಾಗಿ ಕಾಣಿಸುತ್ತವೆ. ಚಿತ್ರನಿರ್ಮಾಣ, ಹಣಕಾಸಿನ ನೆರವು, ವಿತರಣೆ ಜೊತೆ ಪ್ರದರ್ಶಕರಾಗಿ ಸಿನಿಮಾರಂಗದೊಂದಿಗೆ ಈ ಕುಟುಂಬದ್ದು ಸುಮಾರು ಆರೇಳು ದಶಕಗಳ ಒಡನಾಟ. ಸರ್ವಮಂಗಳ, ಕಸ್ತೂರಿ ನಿವಾಸ, ಶರಪಂಜರ, ಬೆಳ್ಳಿಮೋಡ, ಬಬ್ರುವಾಹನ, ಹುಲಿಯ ಹಾಲಿನ ಮೇವು, ಬಂಗಾರದ ಮನುಷ್ಯ, ರಂಗನಾಯಕಿ, ಸತ್ಯ ಹರಿಶ್ಚಂದ್ರ, ದೂರದ ಬೆಟ್ಟ, ಅಂತ, ಮುತ್ತಿನಹಾರ-ಹೀಗೆ ಮೈಲುಗಲ್ಲಾದ ಕನ್ನಡ ಚಿತ್ರಗಳ ನಿರ್ಮಾಣ, ಫೈನಾನ್ಸ್, ವಿತರಣೆಯೊಂದಿಗೆ ಸದಭಿರುಚಿಯ ಸಿನಿಮಾಗಳ ಹರಿವಿಗೆ ತಮ್ಮದೇ ಆದ ಕೊಡುಗೆ ನೀಡಿದೆ ಕೆಸಿಎನ್ ಮೂವೀಸ್. ಪ್ರಮುಖವಾಗಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ ಕುಟುಂಬ ಹಿಂದಿ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲೂ ಸಿನಿಮಾಗಳನ್ನು ತಯಾರಿಸಿದ್ದಾರೆ.

ತಂದೆ ಕೆ.ಸಿ.ಎನ್.ಗೌಡರು ಹಾಕಿಕೊಟ್ಟ ಭದ್ರ ಅಡಿಪಾಯದಲ್ಲಿ ಪುತ್ರ ಕೆ.ಸಿ.ಎನ್.ಚಂದ್ರಶೇಖರ್ ಉತ್ತಮ ಸಿನಿಮಾ ಬೆಳೆ ತೆಗೆದರು. ಈ ಕುಟುಂಬದ ಬಗ್ಗೆ ಬರೆಯುವಾಗ ಕೆ.ಸಿ.ಎನ್.ಗೌಡರ ಕುರಿತು ಮೊದಲು ಹೇಳಬೇಕು. ದೊಡ್ಡಬಳ್ಳಾಪುರ ತಾಲೂಕಿನ ಕೊನೇನಹಳ್ಳಿ ಕೆ.ಸಿ.ಎನ್.ಗೌಡರ ಹುಟ್ಟೂರು. ಮೂಲತಃ ರೇಷ್ಮೆ ಉದ್ದಿಮೆದಾರರು. ಅವರ ಸಿನಿಮಾ ನಂಟು ಶುರುವಾಗಿದ್ದು 1963ರಲ್ಲಿ. ರಾಜಾಜಿನಗರದ ’ನವರಂಗ್’ ಚಿತ್ರಮಂದಿರದ ನಿವೇಶನ ಹರಾಜಾದಾಗ ಅದನ್ನು ಕೊಂಡು ಅಲ್ಲಿ ಸುಂದರ ಚಿತ್ರಮಂದಿರ ನಿರ್ಮಿಸಿದರು.

ಅಲ್ಲಿಂದ ಶುರುವಾದ ಗೌಡರ ಸಿನಿಮಾಸಕ್ತಿ ಕ್ರಮೇಣ ಚಿತ್ರವಿತರಣೆಯತ್ತ ಹೊರಳಿತು. ಅಷ್ಟರಲ್ಲಿ ಅವರಿಗೆ ಸಿನಿಮಾರಂಗದ ಒಳಹೊರಗುಗಳ ಪರಿಚಯವಾಗಿತ್ತು. ಭಾವಮೈದುನ ಎಚ್.ಎನ್.ಮುದ್ದುಕೃಷ್ಣ ಅವರೊಂದಿಗೆ ಸೇರಿ ’ಪಾರಿಜಾತ ಫಿಲಂಸ್’ ಸ್ಥಾಪಿಸಿ ಹಂಚಿಕೆ ಆರಂಭಿಸಿದರು. ಹಂಚಿಕೆ ಮಾಡಿದ ಮೊದಲ ಚಿತ್ರ ’ಬೆಳ್ಳಿಮೋಡ’ದಲ್ಲೇ ಅವರು ಯಶಸ್ಸು ಕಂಡರು. ಮುಂದೆ ಸಹೋದರ ಮೂರ್ತಿ ಅವರೊಡಗೂಡಿ ’ಕೆ.ಸಿ.ಎನ್. ಮೂವೀಸ್’ ಸ್ಥಾಪಿಸಿದರು. ಈ ಹೊಸ ಸಂಸ್ಥೆಯ ಮೂಲಕ ಗೌಡರು ವಿತರಿಸಿದ ಮೊದಲ ಸಿನಿಮಾ ’ಸರ್ವಮಂಗಳ’. ಮುಂದೆ ಚಿತ್ರ ನಿರ್ಮಾಣಕ್ಕಿಳಿದು ’ಭಲೇ ಜೋಡಿ’ ನಿರ್ಮಿಸಿ ಯಶಸ್ಸು ಗಳಿಸಿದರು. ’ಶರಪಂಜರ’ ಚಿತ್ರಕ್ಕೆ ಆಗಿನ ಕಾಲಕ್ಕೆ ಬಹುದೊಡ್ಡ ಮೊತ್ತವೆನಿಸಿದ 10 ಲಕ್ಷ ರೂಪಾಯಿ ತೊಡಗಿಸಿ ಗಾಂಧಿನಗರದ ಗಮನ ಸೆಳೆದಿದ್ದರು.

ಕನ್ನಡದ ಮಹೋನ್ನತ ಚಿತ್ರಗಳಲ್ಲೊಂದಾದ ’ಬಂಗಾರದ ಮನುಷ್ಯ ಸಿನಿಮಾಗೆ ಹಣಕಾಸಿನ ನೆರವು ಒದಗಿಸಿದ್ದೇ ಗೌಡರು. ಮುಂದಿನ ದಿನಗಳಲ್ಲಿ ಅವರ ಸಂಸ್ಥೆಯಡಿ ತಯಾರಾದ ’ಬಬ್ರುವಾಹನ’, ’ಹುಲಿಯ ಹಾಲಿನ ಮೇವು’ ಚಿತ್ರಗಳೂ ದೊಡ್ಡ ಯಶಸ್ಸು ಕಂಡದ್ದಲ್ಲದೆ, ಇತರೆ ನಿರ್ಮಾಪಕರಿಗೂ ಇಂತಹ ಚಿತ್ರನಿರ್ಮಾಣಕ್ಕೆ ಸ್ಫೂರ್ತಿಯಾದವು. ಈ ವೇಳೆಗಾಗಲೇ ಅವರ ಹಿರಿಯ ಪುತ್ರ ಕೆ.ಸಿ.ಎನ್.ಚಂದ್ರು ಸಿನಿಮಾ ವ್ಯವಹಾರದಲ್ಲಿ ತಂದೆಗೆ ಬೆನ್ನೆಲುಬಾಗಿ ನಿಂತಿದ್ದರು. ಇದು ಗೌಡರಿಗೆ ಹೆಚ್ಚಿನ ಬಲ ತಂದಿತ್ತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕುಮಾರ್ ಅಭಿನಯದ ’ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಬಣ್ಣದಲ್ಲಿ ತೆರೆಗೆ ತಂದದ್ದರಲ್ಲಿ ಕೆ.ಸಿ.ಎನ್.ಚಂದ್ರಶೇಖರ್ ಅವರ ಒತ್ತಾಸೆಯೂ ಇತ್ತು.

ಬಿಕಾಂ ಪದವೀಧರರಾದ ಕೆ.ಸಿ.ಎನ್.ಚಂದ್ರಶೇಖರ್ ತಂದೆಯವರ ಸಿನಿಮಾ ವ್ಯವಹಾರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಸಹೋದರ ಮೋಹನ್ ಅವರೊಡಗೂಡಿ ಚಿತ್ರನಿರ್ಮಾಣ, ವಿತರಣೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಉದ್ಯಮದಲ್ಲಿ ತಂದೆಯವರಿಗಿದ್ದ ಒಳ್ಳೆಯ ಹೆಸರು ಅವರಿಗೆ ವರವಾಯ್ತು. ಕೆ.ಸಿ.ಎನ್. ಸಂಸ್ಥೆಯನ್ನು ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆಯಂತೆ ಬೆಳೆಸಿದ್ದರಲ್ಲಿ ಚಂದ್ರಶೇಖರ್ ಅವರ ಚತುರತೆ ಇದೆ. ರಾಜಕುಮಾರ್ ಅಭಿನಯದ ’ದಾರಿ ತಪ್ಪಿದ ಮಗ’ ಚಿತ್ರದ ಸಹನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ ಚಂದ್ರಶೇಖರ್ ಮುಂದೆ ’ಜಯಸಿಂಹ’, ’ನಮ್ಮೂರ ರಾಜ’, ’ಇಂದಿನ ಭಾರತ’ ಮತ್ತಿತರ ಕನ್ನಡ ಚಿತ್ರಗಳು ಸೇರಿದಂತೆ ’ಮುಖ್ಯಮಂತ್ರಿ, ’ಸಂಚಲನಂ’ (ತೆಲುಗು), ’ಮೇರಿ ಅದಾಲತ್’ (ಹಿಂದಿ) ಇತರೆ ಭಾಷೆಗಳಲ್ಲೂ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಕಂಡರು. ಚಂದ್ರಶೇಖರ್ ಅವರ ಪತ್ನಿ ಮಹಾಲಕ್ಷ್ಮಿ. ಕಾವ್ಯ, ಸ್ಫೂರ್ತಿ, ಶ್ರೇಯಸ್ ಮೂವರು ಮಕ್ಕಳು.

ಚಿತ್ರ ಕೃಪೆ: ಪ್ರಗತಿ ಅಶ್ವಥ್‍ನಾರಾಯಣ್

ಕೆ.ಸಿ.ಎನ್.ಚಂದ್ರಶೇಖರ್ ಅವರು ಭಾರತೀಯ ಫಿಲಂ ಫೆಡರೇಷನ್ ಸದಸ್ಯರಾಗಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕನ್ನಡ ಚಿತ್ರನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರೋದ್ಯಮ ಸಹಕಾರ ಸಂಘದ ಅಧ್ಯಕ್ಷರು, ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ಕೂಡ ತೊಡಗಿಸಿಕೊಂಡಿದ್ದವರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಮಂಡಳಿ ವತಿಯಿಂದ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಿ ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಸಾಹಿತಿಗಳನ್ನು ಕರೆಸಿ ಹೊಸ ಪೀಳಿಗೆಗೆ ಚಿತ್ರಕಥೆ, ಸಂಭಾಷಣೆ ರಚನೆಗೆ ನೆರವಾಗುವಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತಂದವರು. ಕನ್ನಡ ಚಲನಚಿತ್ರ ಇತಿಹಾಸ ಸಂಪುಟಗಳ ರಚನೆಗೆ ಪ್ರೇರಕ ಶಕ್ತಿಯಾಗಿದ್ದರು. ಪರಭಾಷಾ ಚಿತ್ರಗಳ ಹಾವಳಿ, ರೀಮೇಕ್ ಪಿಡುಗು, ತೆರಿಗೆ ವಿನಾಯ್ತಿ, ಸಬ್ಸಿಡಿ ಮೊದಲಾದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಚಂದ್ರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಅಂದು ಮತ್ತು ಇಂದಿನ ದಿನಗಳನ್ನು ಬೆಸೆದ ಕೊಂಡಿಯೊಂದು ಕಳಚಿದಂತಾಗಿದೆ.

ಹೊಸತನದ ಹುಡುಕಾಟ

ಚಂದ್ರಶೇಖರ್ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ’ಚಿತ್ರಕಥಾ ಶಿಬಿರ’ ಆಯೋಜಿಸಿದ್ದರು. ಆಗ ನಾನು ಅವರೊಂದಿಗೆ ಒಂದು ತಿಂಗಳು ಇರಬೇಕಾಗಿ ಬಂತು. ಆಗ ಅವರು ಯುವಸಾಹಿತಿಗಳನ್ನು ಕರೆಸೋಣ ಅಂತ ಹೇಳಿದ್ರು. ಮುಂಬಯಿಯಲ್ಲಿದ್ದ ಜಯಂತ ಕಾಯ್ಕಿಣಿ ಅವರಿಗೆ ಕನ್ನಡ ಚಿತ್ರರಂಗದ ಸಂಪರ್ಕ ಬರಬೇಕೆಂದರೆ ಈ ಚಿತ್ರಕಥಾ ಶಿಬಿರ ಮತ್ತು ಕೆ.ಸಿ.ಎನ್.ಚಂದ್ರು ಕಾರಣ.

ಯಾವ ಕೆಲಸವನ್ನು ಅಕಾಡೆಮಿ ಮಾಡಬೇಕಾಗಿತ್ತೋ, ಚಂದ್ರಶೇಖರ್ ಅಧ್ಯಕ್ಷರಾಗಿದ್ದಾಗ ಛೇಂಬರ್ ಮೂಲಕ ಆ ಕೆಲಸ ಮಾಡಿಸ್ತಾ ಇದ್ರು. ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃತಿಗಳು ಯಾವುವು? ಅದರಲ್ಲೂ ಸಿನಿಮಾಗೆ ಹೊಂದುವ ಕೃತಿಗಳು ಯಾವುವು ಎನ್ನುವುದನ್ನು ಚರ್ಚಿಸ್ತಾ ಇದ್ರು, ಓದ್ತಾ ಇದ್ರು. ಅದು ಯಶಸ್ವಿಯಾಗುತ್ತದೆಯೇ ಅಂತ ವಾಣಿಜ್ಯ ಕಾರಣಕ್ಕೆ ಹುಡುಕ್ತಾ ಇದ್ದುದಲ್ಲ ಅದು. ಕತೆಯಲ್ಲಿ ಹೊಸತನ ಇದೆಯೇ? ಚಿತ್ರರಂಗಕ್ಕೆ ಇದು ಹೊಸತನ ಕೊಡುತ್ತಾ ಅನ್ನೋ ಕಾರಣಕ್ಕೆ ಹುಡುಕ್ತಾ ಇದ್ರು. ಹಾಗಾಗಿ ಚಿತ್ರರಂಗಕ್ಕೆ ಚಂದ್ರು ಅವರ ಕಾಣ್ಕೆ ಹೇಳುವಾಗ ಇವನ್ನೆಲ್ಲಾ ಹೇಳಬೇಕಾಗುತ್ತೆ. ಚಿತ್ರರಂಗಕ್ಕೆ ಹೊಸತನ ತರುವ ದೃಷ್ಟಿಯಿಂದ ಅವರು ಸದಾ ಹುಡುಕಾಟ ನಡೆಸ್ತಾ ಇದ್ರು.

ಗಿರೀಶ್ ಕಾಸರವಳ್ಳಿ, ಚಿತ್ರನಿರ್ದೇಶಕ

ಸ್ನೇಹಜೀವಿ, ಸಂಯಮಿ

ಚಂದ್ರು ಬಿಕಾಂ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗಲೇ ನನಗೆ ಪರಿಚಯವಾಗಿದ್ದರು. ಆಗೊಮ್ಮೆ ಬೆಂಗಳೂರು ಮಲ್ಲೇಶ್ವರದ ರತನ್ ಮಹಲ್ ಹೋಟೆಲ್‌ನಲ್ಲಿ ಅವರನ್ನು ಭೇಟಿ ಮಾಡಿದ್ದ ನೆನಪು. ಮುಂದೆ ಚಂದ್ರು ’ದೂರದ ಬೆಟ್ಟ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋಗೆ ಬರುತ್ತಿದ್ದರು. ನಾನಾಗ ಛಾಯಾಗ್ರಾಹಕ ಡಿ.ವಿ.ರಾಜಾರಾಂ ಅವರಿಗೆ ಸಹಾಯಕನಾಗಿದ್ದೆ. ವಿಕ್ರಂ ಶ್ರೀನಿವಾಸ್ ನಿರ್ಮಾಣದ ಈ ಚಿತ್ರಕ್ಕೆ ಕೆ.ಸಿ.ಎನ್.ಗೌಡ್ರು ಫೈನಾನ್ಸ್ ಮಾಡಿದ್ದರು. ಆಗೆಲ್ಲಾ ಗೌಡರು ಹಣಕಾಸಿನ ವ್ಯವಹಾರ ನೋಡಿಕೊಳ್ಳಲು ತಮ್ಮ ಪುತ್ರ ಚಂದ್ರುರನ್ನು ಕಳುಹಿಸುತ್ತಿದ್ದರು. ಆಗ ಚಂದ್ರು ಅವರೊಂದಿಗೆ ಹೆಚ್ಚಿನ ಒಡನಾಟ ಸಾಧ್ಯವಾಯ್ತು.

ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಹೊಸ ಪ್ರಯೋಗ ನಡೆಸಬಹುದು, ಸಾಧ್ಯತೆಗಳೇನು ಎಂದೆಲ್ಲಾ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಚಂದ್ರು ಮೆದುಮಾತಿನ ವ್ಯಕ್ತಿ, ಸಂಯಮಿ. ದೇಶದ ವಿವಿಧೆಡೆ ನಡೆಯುವ ಚಿತ್ರೋತ್ಸವಗಳ ಕುರಿತಂತೆ ಅವರಲ್ಲಿ ಸಾಕಷ್ಟು ಮಾಹಿತಿ ಇರುತ್ತಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಹತ್ತಾರು ಚಿತ್ರಗಳಿಗೆ ಅವರು ಹಣಕಾಸಿನ ನೆರವು ನೀಡಿದ್ದಾರೆ. ಆ ಚಿತ್ರಗಳು ದೊಡ್ಡ ಯಶಸ್ಸು ಕಂಡಿರುವುದಲ್ಲದೆ ಮೈಲುಗಲ್ಲಾಗಿವೆ. ಸಿನಿಮಾಗಳಲ್ಲಿ ನಟಿಯರನ್ನು ಸರಿಯಾಗಿ ನಡೆಸಿಕೊಳ್ಳದ ಸಮಯದಲ್ಲೆಲ್ಲಾ ಅವರು ನಿರ್ದೇಶಕರನ್ನು ಎಚ್ಚರಿಸುತ್ತಿದ್ದರು. ಅದು ಅವರ ಸದಭಿರುಚಿ.

ಬಿ.ಎಸ್.ಬಸವರಾಜು, ಸಿನಿಮಾ ಛಾಯಾಗ್ರಾಹಕ

ಶಶಿಧರ ಚಿತ್ರದುರ್ಗ

ಶಶಿಧರ ಚಿತ್ರದುರ್ಗ
ಹಿರಿಯ ಸಿನಿಮಾ ಪತ್ರಕರ್ತ, ಚಿತ್ರಪಥ.ಕಾಂ ಸಂಪಾದಕ. ಸಿನಿಮಾ ಇತಿಹಾಸ ದಾಖಲಿಸುವ ಬಗ್ಗೆ ಅತೀವ ಆಸಕ್ತಿ. ಚಿತ್ರಪಥ, ಬಂಗಾರದ ಮನುಷ್ಯ ಸಿದ್ದಲಿಂಗಯ್ಯ ಸೇರಿದಂತೆ ಹಲವು ಸಿನಿಮಾ ಕೃತಿಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

LEAVE A REPLY

Please enter your comment!
Please enter your name here