Homeಅಂಕಣಗಳುನಿಲ್ಲದ ಮಹಾವಲಸೆ - ಪ್ರಧಾನಸೇವಕ ಕೈಯಾರೆ ನಿರ್ಮಿಸಿದ ದುರಂತ

ನಿಲ್ಲದ ಮಹಾವಲಸೆ – ಪ್ರಧಾನಸೇವಕ ಕೈಯಾರೆ ನಿರ್ಮಿಸಿದ ದುರಂತ

- Advertisement -
- Advertisement -

ಹವಾಯಿ ಚಪ್ಪಲ್ ಧರಿಸುವ ಗರೀಬರು ಹವಾಯಿ ಜಹಜಿನಲ್ಲಿ (ವಿಮಾನ) ವಿಹರಿಸಬೇಕೆಂಬುದು ನನ್ನ ಕನಸು ಎಂದು ಭಾರೀ ಸಾರ್ವಜನಿಕ ಸಭೆಗಳಲ್ಲಿ ಭರಪೂರ ಭಾಷಣ ಬಿಗಿದು ಚಪ್ಪಾಳೆ ಕೇಕೆ ಗಿಟ್ಟಿಸುತ್ತಿದ್ದರು ಪ್ರಧಾನಮಂತ್ರಿ ನರೇಂದ್ರ ಮೋದಿ. ಅಮಾಯಕರಿಗೆ ವಿಮಾನ ವಿಹಾರದ ಕನಸು ತೋರಿಸಿ ವಲಸೆ ಕಾರ್ಮಿಕರ ‘ಕಫನ್’ ಗಳನ್ನೂ (ಹೆಣಕ್ಕೆ ಹೊದಿಸುವ ಬಟ್ಟೆ) ಕಿತ್ತುಕೊಂಡಿದ್ದಾರೆ. ಬದುಕಿರುವವರಿಂದ ಬದುಕಿನ ಘನತೆಯನ್ನು ಕಿತ್ತುಕೊಂಡಿದ್ದಾರೆ. ಇನ್ನು ಕಿತ್ತು ಕೊಳ್ಳಲು ಬಡವರ ಬಳಿ ಏನೂ ಉಳಿದಿಲ್ಲ.

ದುಃಖ, ಹಸಿವು, ನೀರಡಿಕೆ, ಅವಮಾನ, ನೋವು, ಅಸಹಾಯಕತೆಗಳು ಉತ್ತರಭಾರತದ ಹೆದ್ದಾರಿಗಳಲ್ಲಿ ನದಿಗಳ ರೂಪ ಧರಿಸಿ ಹರಿಯುತ್ತಿವೆ. ಈ ಹರಿವಿನಲ್ಲಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ನೂರಾರು- ಸಾವಿರಾರು ಕಿ.ಮೀ. ನಡೆಯವು ಎದೆ ಒಡೆವ ದೃಶ್ಯಗಳು. ಇವರ ದುರ್ಮರಣಗಳ ಸುದ್ದಿ ನಿತ್ಯ ಸತ್ಯ. ಆದರೆ ಅವುಗಳನ್ನು ಸುಳ್ಳೆಂದೂ, ಮೋದಿ ಸರ್ಕಾರದ ವಿರುದ್ಧ ದುಷ್ಪ್ರಚಾರವೆಂದೂ ಭಕ್ತ ಸಮೂಹ ಮತ್ತು ಮೀಡಿಯಾ ಭಜನಾ ಮಂಡಳಿ ಗಂಟಲು ಹರಿದುಕೊಳ್ಳುತ್ತಿದೆ. ಮೊನ್ನೆ ಘಾಜಿಯಾಬಾದ್ ನಲ್ಲಿ ಭಾರೀ ಜನಸ್ತೋಮ. ರಾಜಕಾರಣಿಗಳು ತಮ್ಮ ಬಹಿರಂಗ ಸಭೆಗಳನ್ನು ಭರ್ತಿ ಮಾಡಲು ದಿನಗೂಲಿ ಕೊಟ್ಟು, ಊಟ ಉಣಿಸಿ, ಬಸ್ಸುಗಳಲ್ಲಿ ಬಡವರನ್ನು ಕರೆತಂದು ವಾಪಸು ಬಿಟ್ಟೂ ಬರುತ್ತಿದ್ದರು. ಆದರೆ ಇದೀಗ ರಾಜಕೀಯ ರ್ಯಾಲಿಗಳಿಲ್ಲವಲ್ಲ. ದೂರ ದೂರದ ಊರುಗಳ ತಮ್ಮ ಮನೆಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ ಜನದಟ್ಟಣೆಯಿದು. ಸತ್ತರೂ ನನ್ನೂರಿನ ಮಣ್ಣಿನಲ್ಲಿ ಸಾಯುತ್ತೇನೆ ಎಂದ ವ್ಯಕ್ತಿ ಕಿಕ್ಕಿರಿದು ಅಲ್ಲಿ ನೆರೆದಿದ್ದ ಎಲ್ಲರ ಮನದ ಮಾತು ಆಡಿದ್ದ.

ಹೆದ್ದಾರಿಯ ಪಕ್ಕ ಕುಳಿತು ನೋವು ತಾಳಲಾರದೆ ಮಗುವಿನಂತೆ ರೋದಿಸುತ್ತಿದ್ದ ಯುವಕನೊಬ್ಬ. ಹೆದ್ದಾರಿಯಲ್ಲಿ ನಡೆಯುವವರಿಗೆ ಪೊಲೀಸರ ಕಾಟ. ಕಳ್ಳದಾರಿಗಳಲ್ಲಿ ನಡೆಯುವ ದೇಶದ ದರೋಡೆಕೋರರು ಹಾಯಾಗಿದ್ದಾರೆ. ಆದರೆ ಹೆದ್ದಾರಿಗಳಲ್ಲಿ ಮನೆ ಮುಟ್ಟಲೆಂದು ನಡೆಯುವ ಬಡವರು ಆಳುವವರ ಕಣ್ಣ ಕಿಸುರು. ಹಸಿವು ನೋವಿನಿಂದ ಕಂಗೆಟ್ಟ ಅವರ ಮೇಲೆ ಪೊಲೀಸರನ್ನು ಛೂ ಬಿಟ್ಟಿದ್ದಾರೆ. ಹೆದ್ದಾರಿಗಳಲ್ಲಿ ನಡೆಯುವುದು ಮಹಾನ್ ದೇಶದ್ರೋಹ ಎಂಬಂತೆ ಪೊಲೀಸರ ಲಾಠಿಗಳು ಬಡವರ ಮೈಮೇಲೆ ಕುಣಿಯತೊಡಗಿವೆ. ಹೆದ್ದಾರಿಯ ಪಕ್ಕ ಕುಳಿತು ನೋವು ತಾಳಲಾರದೆ ಮಗುವಿನಂತೆ ರೋದಿಸುತ್ತಿದ್ದ ಯುವಕನ ಅಳಲಿಗೆ ಕಿವಿಗೊಡುವಿರಾ- ಸುಡುಬಿಸಿಲಿನಲ್ಲಿ ನಡೆ ನಡೆದು ಕೆಲ ಕಾಲ ಫ್ಲೈಓವರ್ ನೆರಳಿಗೆ ಸರಿದು ಕುಳಿತದ್ದೇ ಆತನ ಅಪರಾಧವಂತೆ. ಮೊಣಕೈ ಮತ್ತು ತೊಡೆಗಳ ಮೇಲೆ ಬಿದ್ದಿರುವ ಏಟುಗಳು ಆತನನ್ನು ನಡೆಯಗೊಡುತ್ತಿಲ್ಲ. ಲಾಠಿ ಏಟಿಗಿಂತ ಹೆಚ್ಚಾಗಿ ತನ್ನ ಯಾವ ಅಪರಾಧಕ್ಕೆ ಈ ಶಿಕ್ಷೆ ಎಂಬುದು ಆತನ ದುಃಖ.

ಮಧ್ಯಪ್ರದೇಶದ ರೀವಾದಲ್ಲಿ ರೊಟ್ಟಿ ಕೇಳಿದರೆಂದು ಹಸಿದಿದ್ದ ಕೂಲಿ ಕಾರ್ಮಿಕರ ಮೇಲೆ ಲಾಠಿಯ ಮಳೆಗರೆದಿದ್ದಾರೆ ಪೊಲೀಸರು. ಹರಿಯಾಣಾದ ಯಮುನಾನಗರದಲ್ಲಿ ರಸ್ತೆಗಿಳಿದಿದ್ದ ಕಾರ್ಮಿಕರನ್ನು ಥಳಿಸಿ ಶೆಲ್ಟರ್ ಹೋಮ್ ಗಳಿಗೆ ಅಟ್ಟಲಾಗಿದೆ. ಬಿಹಾರದ ಸಮಷ್ಟೀಪುರದ ಕ್ವಾರಂಟೈನ್ ಕೇಂದ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಪೊಲೀಸರಿಂದ ಲಾಠಿ ಪ್ರಯೋಗ. ದೆಹಲಿ- ಯು.ಪಿ. ಗಡಿಯ ನೋಯ್ಡಾದಲ್ಲಿ ದಿನಸಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಬಡ ಮಹಿಳೆಯನ್ನು ವಿನಾಕಾರಣ ಲಾಠಿಯಿಂದ ಬಾರಿಸುತ್ತಾನೆ ಸಬ್ ಇನ್ಸ್ ಪೆಕ್ಟರ್.

ಸಾವಿರಾರು ಕಿ.ಮೀ. ದೂರವನ್ನು ಸುಡುಗೆಂಡದ ಬಿಸಿಲಿನಲ್ಲಿ ನಡೆಯುತೊಡಗಿದ್ದಾರೆ. ಕಾಲುಗಳು ಜರ್ಝರಿತವಾಗಿವೆ. ಮೂಳೆಗಳು ದಣಿದಿವೆ. ಪಾದಗಳಲ್ಲಿ ಬೊಬ್ಬೆ ಕಿತ್ತಿವೆ. ಇದು ವಿವಿಧ ವಿನೋದಾವಳಿಯಂತೆ ತೋರುತ್ತಿದೆ ಆಳುವವರಿಗೆ. ಅನ್ನ ನೀರಿಲ್ಲದೆ ಬಸವಳಿದ ಒಡಲುಗಳು. ಕಣ್ಣ ಮುಂದೆ ಹೊಳೆವ ಮನೆಗಳೆಂಬ ಮೃಗಜಲಗಳು. ಯಾರಾದರೂ ಅನ್ನ ನೀರು ನೀಡಿದರೆ ಅದೇ ಭಾಗ್ಯ. ನೆರವಿಗಾಗಿ ಚಾಚುವ ಹಸ್ತಗಳ ಮೇಲೆ ಬಾರಿಸುತ್ತಿದೆ ಸರ್ಕಾರ. ಪೊಲೀಸ್ ಕೇಸುಗಳನ್ನು ಹೆಟ್ಟಿ ಬೆನ್ನಟ್ಟಲಾಗುತ್ತಿದೆ.

ಇಲ್ಲಿ ಸತ್ತವರಿಗೂ ಬದುಕಿರುವವರಿಗೂ ವ್ಯತ್ಯಾಸವಿಲ್ಲ. ಸರ್ಕಾರಗಳ ಪಾಲಿಗೆ ಬದುಕಿರುವವರೂ ಸತ್ತವರಂತೆಯೇ ಲೆಕ್ಕ. ಅಪಘಾತದಲ್ಲಿ ಸತ್ತ ವಲಸೆ ಕಾರ್ಮಿಕರ ಕಳೇಬರಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿ ತೆರೆದ ಟ್ರಕ್ ನಲ್ಲಿ ಮಂಜುಗಡ್ಡೆಯ ಮೇಲೆ ಎಸೆದು ಹೊದೆಸಿ ಸಾಗಿಸಲಾಗುತ್ತದೆ. ಈ ಕಳೇಬರಗಳ ಪಕ್ಕದಲ್ಲೇ ಗಾಯಗೊಂಡವರೂ ಮೈಮನ ಮರಗಟ್ಟಿದವರಂತೆ ಬಿದ್ದಿದ್ದಾರೆ. ಬದುಕಿದ್ದಾಗ ನಿರಾಕರಿಸಲಾದ ಘನತೆಯನ್ನು ಸತ್ತ ಮೇಲೆ ನೀಡುವರೆಂದು ಹೇಗೆ ನಿರೀಕ್ಷಿಸಲು ಬಂದೀತು?

ವಲಸೆ ಕಾರ್ಮಿಕರನ್ನು ರೇಲ್ವೆ ಹಳಿಗಳು ಹೆದ್ದಾರಿಗಳ ಮೇಲೆ ಕತ್ತರಿಸಿ ಹಾಕಲಾಗುತ್ತಿದೆ. ಈ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೆಜ್ಜೆ ಹಾಕುವ ಕಾರ್ಮಿಕರ ಹೊಟ್ಟೆ ಸಂಕಟ ಸುಡು ಶಾಪದ ಮಾತುಗಳಾಗಿ ಹೊರಬೀಳುತ್ತಿವೆ.

ಹದಿಮೂರು ವರ್ಷದ ಜ್ಯೋತಿ ಕುಮಾರಿ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹರಿಯಾಣದ ಗುರುಗ್ರಾಮದಿಂದ ಹೊರಟು ಮೇ.15ರಂದು ಬಿಹಾರದ ದರ್ಭಂಗಾ ತಲುಪಿದ್ದಾಳೆ. ತಂದೆ ಮೋಹನ್ ಪಾಸ್ವಾನ್ ಬ್ಯಾಟರಿ ರಿಕ್ಷಾ ನಡೆಸುತ್ತಿದ್ದ. ಜನವರಿಯಲ್ಲಿ ನಡೆದ ಅಪಘಾತದಿಂದ ಎಡಗಾಲು ಊನವಾಗಿದೆ. ಲಾಕ್ ಡೌನ್ ನಂತರ ಹಣವಿಲ್ಲದೆ ಉಪವಾಸದ ಸ್ಥಿತಿ. ಔಷಧಿಗೂ ಗತಿಯಿಲ್ಲ. ಸೈಕಲ್ ಮೇಲೆ ಊರಿಗೆ ಹೋಗೋಣವೆಂಬುದು ಜ್ಯೋತಿಯ ಮನೋನಿರ್ಧಾರ. ಕಡೆಗೂ ಒಪ್ಪಿದ ಅಪ್ಪ. ಅವರಿವರ ನೆರವು ಪಡೆದು, 1,200 ರುಪಾಯಿ ತೆತ್ತು ಸೈಕಲ್ ಖರೀದಿಸಿ ಪ್ರಯಾಣ ಆರಂಭಿಸಿದಳು ಜ್ಯೋತಿ. ರಸ್ತೆಯಲ್ಲಿ ಮಂದಿ ನೀಡಿದ ಅನ್ನ ಉಣ್ಣುತ್ತಿದ್ದರು. ನಡುವೆ ಎರಡು ದಿನಗಳ ಉಪವಾಸ. ಏಳು ದಿನಗಳ ನಂತರ ದರ್ಭಾಂಗ ತಲುಪಿದರು. ಮಗಳ ಬಗ್ಗೆ ಹೆಮ್ಮೆಯಿಂದ ತಂದೆಯ ಎದೆ ಉಬ್ಬುತ್ತದೆ. ಮಸಿಬಟ್ಟೆಯೇ ಮನುಷ್ಯರೂಪ ಧರಿಸಿದಂತೆ ಮರುಕು ಸೈಕಲ್ ಮೇಲೆ ಎಂಬತ್ತು ವರ್ಷದ ತಾಯಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಮತ್ತು ಏಳು ವರ್ಷದ ಮಗಳನ್ನು ಮುಂದೆ ಕಂಬಿಯ ಮೇಲೆ ಕುಳ್ಳಿರಿಸಿಕೊಂಡು ಬೆಂಗಳೂರಿನಿಂದ ರಾಜಸ್ತಾನದ ಕೋಟಾಕ್ಕೆ ಹೊರಟಿದ್ದಾನೆ ಮತ್ತೊಬ್ಬ ವ್ಯಕ್ತಿ. ಇವರು ಮನೆ ತಲುಪುವರೇ?

ಸತ್ಯೇಂದ್ರ ಕುಮಾರ್ ಎಂಬ ಕೂಲಿಯಾಳು ರಸ್ತೆಯ ಪಕ್ಕ ಬಟ್ಟೆ ಹಾಸಿ ಬೊಂಬೆಯಂತಹ ತನ್ನ ಹಸುಳೆಯನ್ನು ಅಂಗಾತ ಮಲಗಿಸಿ ಅದರ ಪಾದಗಳನ್ನು ಮಸಾಜ್ ಮಾಡುತ್ತಿರುವ ನೋಟ ಕಟುಕರೆದೆಯನ್ನೂ ಕರಗಿಸಬಲ್ಲದು. ಆದರೆ ಆಳುವವರ ಎದೆಯನ್ನು ಕರಗಿಸಲಾರದು.
ದುರಂತದ ಈ ಕತೆಗಳು ನಿತ್ಯ ಸಾವಿರ ಸಂಖ್ಯೆಯಲ್ಲಿ ಜನಿಸಿ ಸಾಯುತ್ತಿವೆ. ಅವುಗಳಿಗಾಗಿ ಅಳುವವರಿಲ್ಲ. ಅಂತ್ಯ ಸಂಸ್ಕಾರ ಮಾಡುವವರೂ ದಿಕ್ಕಿಲ್ಲ.

ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೆಂಪು ನಡೆಮುಡಿ ಹಾಸಿ ಪಕ್ಷಕ್ಕೆ ಸೇರಿಸಿಕೊಂಡು ಸರ್ಕಾರ ರಚಿಸುತ್ತದೆ ಬಿಜೆಪಿ. ಆದರೆ ವಲಸೆ ಕಾರ್ಮಿಕರು ಮನೆಗೆ ಮರಳಲು ಕಾಂಗ್ರೆಸ್ ಪಕ್ಷ ವ್ಯವಸ್ಥೆ ಮಾಡಿದ ನೂರಾರು ಬಸ್ಸುಗಳು ಉತ್ತರಪ್ರದೇಶದ ಆದಿತ್ಯನಾಥ ಯೋಗಿ ಸರ್ಕಾರಕ್ಕೆ ಅಸ್ಪೃಶ್ಯ. ನಿರ್ಗತಿಕರ ಸಂಕಟದ ಬೆಂಕಿಯಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತೀಟೆಯನ್ನು ಏನೆಂದು ಕರೆಯಬೇಕು?

ಸೂರತ್ ನ ಮೋರ ಮತ್ತು ಹಜೀರಾದಲ್ಲಿ ರಿಲಯನ್ಸ್, ಲಾರ್ಸನ್ ಅಂಡ್ ಟೂಬ್ರೋ, ಎನ್.ಟಿ.ಪಿ.ಸಿ., ಹಾಗೂ ಎಸ್ಸಾರ್ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಸುಮಾರು 70 ಸಾವಿರ ವಲಸೆ ಕಾರ್ಮಿಕರನ್ನು ಊರಿಗೆ ಹೋಗಲು ಬಿಡದೆ ಅಕ್ರಮವಾಗಿ ಕೂಡಿ ಹಾಕಿವೆ. ಲಾಕ್ ಡೌನ್ ಅವಧಿಯಲ್ಲಿ ಇವರಿಗೆ ಕೂಲಿಯನ್ನೂ ನೀಡಿಲ್ಲ, ಅನ್ನವನ್ನೂ ಒದಗಿಸಿಲ್ಲ. ಈ ದುರಾಚಾರಕ್ಕೆ ಗುಜರಾತ್ ಸರ್ಕಾರದ ಕುಮ್ಮಕ್ಕು ಇದೆಯೆಂದು ಜಿಗ್ನೇಶ್ ಮೇವಾನಿ ಅಪಾದಿಸಿದ್ದಾರೆ.

ನಡೆಯುವವರನ್ನು ತಡೆಯಲು ಹೇಗೆ ಬಂದೀತು ಎನ್ನುವ ಸುಪ್ರೀಮ್ ಕೋರ್ಟು ತಾಯಿ ಹೃದಯವನ್ನು ಕಳೆದುಕೊಂಡಿದೆ. ದೇಶದ ಅತ್ಯುನ್ನತ ನ್ಯಾಯಾಲಯ ಆಡಬೇಕಿದ್ದ ಮಾತನ್ನು ಮದ್ರಾಸ್ ಹೈಕೋರ್ಟ್ ಆಡಿತ್ತು- ತಿಂಗಳೊಪ್ಪತ್ತಿನಿಂದ ವಲಸೆ ಕಾರ್ಮಿಕರ ದಯನೀಯ ಪರಿಸ್ಥಿತಿಯನ್ನು ನೋಡಿದರೆ ಕಣ್ಣುಗಳಲ್ಲಿ ನೀರು ಬರುತ್ತದೆ. ಇದು ಮಾನವೀಯ ದುರಂತವಲ್ಲದೆ ಮತ್ತೇನೂ ಅಲ್ಲ.

ವಲಸೆ ಕಾರ್ಮಿಕರನ್ನು ಕಾಂಗ್ರೆಸ್ ತಲೆಯಾಳು ಮಾತಾಡಿಸಿದ್ದನ್ನು ಮಹಾನ್ ನಾಟಕವೆಂದು ಜರೆಯುತ್ತಾರೆ ನಿರ್ಮಲಾ ಸೀತಾರಾಮನ್ ಎಂಬ ಮಂತ್ರಿ. ಅಲಹಾಬಾದ್ ಕುಂಭಮೇಳದಲ್ಲಿ ಕೊಳೆ ತೊಳೆದವರ ಪಾದಗಳನ್ನು ಮುಟ್ಟಿ ತೊಳೆದ ಮತ್ತು ದೆಹಲಿಯಲ್ಲಿ ಚಿಂದಿ ಆಯುವ ಮಹಿಳೆಯರ ನಡುವೆ ಕುಳಿತ ಪ್ರಧಾನಿ ಮೋದಿಯವರು ಆಡಿದ್ದು ಯಾವ ನಾಟಕ? ಈ ದೇಶದ ಹೆದ್ದಾರಿಗಳಲ್ಲಿ ಬಸವಳಿದು ಸಾಯುತ್ತಿರುವ ಶ್ರಮಿಕ ಕೋಟಿಯ ಕುರಿತು ಅವರು ಒಂದೇ ಒಂದು ವಾಕ್ಯದ ಮನ್ ಕೀ ಬಾತ್ ನ್ನು ಕೂಡ ಆಡಿಲ್ಲವಲ್ಲ ಯಾಕೆ?

ನರಕದ ಬೆಂಕಿ ಎಂಬುದಿದ್ದರೆ ಭರತಖಂಡದ ಪಾಷಾಣ ಹೃದಯಿಗಳು ಅದರಲ್ಲಿ ಬೇಯುವುದು ನಿಶ್ಚಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...