Homeಮುಖಪುಟನಮ್ಮ ಕರ್ನಾಟಕ ಅಮಾನವೀಯ ನಾಡಾಗುವುದು ಸರಿಯೇ?

ನಮ್ಮ ಕರ್ನಾಟಕ ಅಮಾನವೀಯ ನಾಡಾಗುವುದು ಸರಿಯೇ?

ಸೋಂಕಿನಿಂದ ಸಾಯುವವರು ಶೇ.2-3 ಇರಬಹುದು. ಹಸಿವಿನಿಂದ ಅವಮಾನದಿಂದ ಸಾಯುವವರ ಪ್ರಮಾಣ ಶೇ.10 ಆಗಿಬಿಟ್ಟರೆ ಅದನ್ನು ಮನುಷ್ಯ ಸಮಾಜವೆನ್ನಲಾಗದು.

- Advertisement -
- Advertisement -

ಬಹಳ ಹಿಂದೆ ಬೆಂಗಳೂರಿನಲ್ಲಿ ತಮಿಳು ವಿರೋಧಿ ಭಾವನೆ ಒಂದಷ್ಟು ಜನರಲ್ಲಿ ಗಾಢವಾಗಿಯೇ ಇತ್ತು. ಆಗಾಗ ಅದು ಬಡತಮಿಳರ ವಿರುದ್ಧ ತಿರುಗಿಬಿಡುತ್ತಿತ್ತು. ಯಾವುದೋ ಒಂದು ರೀತಿಯಲ್ಲಿ ದಕ್ಷಿಣ ಭಾರತದ ಆರ್ಥಿಕತೆ, ಕೇಂದ್ರ ಸರ್ಕಾರೀ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಕಂಪೆನಿಗಳು ಹಾಗೂ ಚಿತ್ರರಂಗದಲ್ಲಿದ್ದ ತಮಿಳುನಾಡಿನ ಯಜಮಾನಿಕೆಯ ವಿರುದ್ಧದ ಸಿಟ್ಟೂ ಅದರಲ್ಲಿ ವ್ಯಕ್ತವಾಗುತ್ತಿತ್ತು. ಆದರೆ, ಅದು ಕೆಲವೊಮ್ಮೆ ಅತಾರ್ತಿಕವಾಗುತ್ತಿತ್ತು ಮತ್ತು ಕರ್ನಾಟಕದ ಅಸಲೀ ಶೋಷಕರನ್ನು ಗುರುತಿಸುವುದನ್ನು ತಪ್ಪಿಸಲೆಂದೂ ಬಳಕೆಯಾಗುತ್ತಿತ್ತು.

ಬೆಂಗಳೂರೆಂಬುದು ಕರ್ನಾಟಕದ ಎಷ್ಟೋ ಭಾಗಗಳಿಗಿಂತ ತಮಿಳುನಾಡು ಮತ್ತು ಆಂಧ್ರದ ಕೆಲವು ಜಿಲ್ಲೆಗಳಿಗೆ ಭೌಗೋಳಿಕವಾಗಿ ಹತ್ತಿರವಿದೆ. ಹಾಗಾಗಿಯೇ ಬೆಂಗಳೂರಿನಿಂದ ದೂರವಿದ್ದ ಉತ್ತರ ಕರ್ನಾಟಕದ ಬಡಜನರು ಮುಂಬಯಿ, ಗೋವಾಗಳಿಗೆ ವಲಸೆ ಹೋಗುತ್ತಿದ್ದರು. ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೇ ಕೇವಲ ಭಾಷಿಕ ನೆಲೆಯಲ್ಲಿ ಇದನ್ನು ನೋಡುವುದರಿಂದ ಆಗುತ್ತಿದ್ದ ಎಡವಟ್ಟುಗಳು ಸಾವು ನೋವುಗಳಿಗೂ ಕಾರಣವಾಗಿದ್ದಿದೆ. ಕಾವೇರಿ ವಿವಾದವು ತೀವ್ರಗೊಂಡ ಒಂದು ಸಂದರ್ಭದಲ್ಲಿ ಇದು ಸಾವಿರಾರು ತಮಿಳು ಭಾಷಿಕರು ಕರ್ನಾಟಕವನ್ನು ತೊರೆಯುವಂತೆಯೂ ಮಾಡಿತ್ತು.

ಆದರೆ, ಈ ಸಾರಿ ನಡೆಯುತ್ತಿರುವುದು ಬೇರೆ. ಕರ್ನಾಟಕದಲ್ಲಿ ದುಡಿಯುತ್ತಿದ್ದ ಉತ್ತರ ಮತ್ತು ಪೂರ್ವ ಭಾರತದ ಬಡವರು ಬೆಂಗಳೂರು ಬಿಟ್ಟು ಹೋಗಬಾರದೆಂದು ಸರ್ಕಾರವೇ ದೊಡ್ಡ ರಿಯಲ್ ಎಸ್ಟೇಟ್ ಕುಳಗಳ ಪರವಾಗಿ ಸಂಚು ನಡೆಸಿತು. ಲಾಕ್‌ಡೌನ್ ಸಡಿಲಿಸಿ ಉತ್ತರ ಕರ್ನಾಟಕದ ಕಾರ್ಮಿಕರನ್ನು ಕಳಿಸಿಕೊಟ್ಟ ಸರ್ಕಾರವು, ಉತ್ತರ ಭಾರತೀಯರಿಗಾಗಿ ಬುಕ್ ಮಾಡಿದ್ದ ರೈಲನ್ನು ರದ್ದುಗೊಳಿಸಿ ಅವರನ್ನು ಇಲ್ಲೇ ಕೂಡಿ ಹಾಕಲು ಯೋಜಿಸಿತು. ಇದನ್ನು ಬರೆಯುವ ಹೊತ್ತಿಗೆ ಮತ್ತೆ ರೈಲು ಶುರು ಮಾಡುವ ಕುರಿತ ಸುದ್ದಿ ಬಂದಿದೆ.

ಇದೇ ವಿಚಾರವನ್ನು ಕೇರಳ ನಿಭಾಯಿಸಿದ ರೀತಿಯನ್ನೊಮ್ಮೆ ಇದರ ಜೊತೆಗೆ ಹೋಲಿಸಿ ನೋಡಬೇಕು. ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಅಲ್ಲಿನ ರಾಜ್ಯ ಸರ್ಕಾರವು ಕರೆಯಲು ಅಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತವಿರುವುದು ಒಂದು ಕಾರಣ. ಎರಡನೆಯ ಕಾರಣ, ಕೇರಳದಿಂದ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಬದುಕನ್ನು ಉತ್ತಮಪಡಿಸಿಕೊಳ್ಳಲು ಲಕ್ಷಾಂತರ ಜನರು ವಲಸೆ ಹೋಗಿದ್ದು, ವಲಸೆಯನ್ನು ನಿರಾಕರಿಸುವ ಸ್ಥಿತಿಯಲ್ಲಿ ಅವರಿಲ್ಲ. ಮೂರನೆಯದಾಗಿ ಸ್ಥಳೀಯವಾಗಿ ಕಷ್ಟದ ಕೆಲಸಗಳನ್ನು ಮಾಡುವ ಜನರು ಕಡಿಮೆಯಾಗಿದ್ದು ಅಲ್ಲಿನ ಯಂತ್ರವು ನಡೆಯಲು ಇನ್ನಷ್ಟು ಬಡಜನರ ಅಗತ್ಯ ಅವರಿಗಿದೆ. ಅದೇನೇ ಇದ್ದರೂ, ವಲಸೆ ಕಾರ್ಮಿಕರನ್ನು ಕೇರಳವು ಅತ್ಯುತ್ತಮವಾಗಿ ನಡೆಸಿಕೊಂಡಿತು. ದೇಶದಲ್ಲಿದ್ದ ಒಟ್ಟೂ ವಲಸೆ ಕಾರ್ಮಿಕರ ಕೇಂದ್ರಗಳ ಪೈಕಿ ಶೇ.60ಕ್ಕೂ ಹೆಚ್ಚು ಶಿಬಿರಗಳನ್ನು ಅಲ್ಲೊಂದೇ ಕಡೆ ತೆರೆಯಲಾಗಿತ್ತು. ಆ ಶಿಬಿರಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಆ ಕಾರ್ಮಿಕರು ವಾಪಸ್ಸು ತೆರಳುವ ಸಂದರ್ಭ ಬಂದಾಗ ಅತ್ಯಂತ ಗೌರವಯುತವಾಗಿ ಬೀಳ್ಕೊಟ್ಟರು. ಹೋಗುವವರಿಗೆ ಉಚಿತ ಬಸ್ಸು, ರೈಲು ವ್ಯವಸ್ಥೆ ಮಾಡಿ ತಲಾ ಒಂದು ರೇಷನ್ ಕಿಟ್ ಸಹಾ ಕೊಟ್ಟು ಕಳಿಸಿದರು. ಅಂದರೆ ಹೋದವರಿಗೆ ಮತ್ತೆ ವಾಪಸ್ಸು ಬರಬೇಕು ಎನ್ನಿಸುವ ಹಾಗೆ. ಕರ್ನಾಟಕದ ಸರ್ಕಾರವು ನಡೆದುಕೊಂಡ ರೀತಿ ಹೇಗಿತ್ತೆಂದರೆ, ಇಲ್ಲಿದ್ದವರು ನಡೆದುಕೊಂಡು ವಾಪಸ್ಸು ಹೋಗಿಬಿಡಲೇಬೇಕು ಮತ್ತು ಈ ಕಡೆಗೆ ಎಂದಿಗೂ ತಿರುಗಿನೋಡಬಾರದು, ಆ ರೀತಿ.

ಆ ನಂತರ ಹೊರಬಂದ ಸಂಗತಿಗಳು ಇನ್ನೂ ಭೀಕರವಾಗಿದ್ದವು. ಮೈಸೂರಿನಲ್ಲಿ ಕೂಡಿಹಾಕಲ್ಪಟ್ಟಿದ್ದ ಕಾರ್ಮಿಕರು, ದೇವನಹಳ್ಳಿ, ಗುಬ್ಬಿಗಳಲ್ಲಿ ಇದ್ದ ಶೆಡ್ಡುಗಳಿಂದಲೂ ಹೊರದಬ್ಬಲು ಪ್ರಯತ್ನಿಸುತ್ತಿದ್ದ ಗುತ್ತಿಗೆದಾರರು, ಮಗುವಿಗೆ ನೀಡಲು ಎದೆಹಾಲೂ ಇಲ್ಲದೇ ಕಂಗೆಟ್ಟಿದ್ದ ಕಾರ್ಮಿಕ ಮಹಿಳೆಯರು – ಇದು ನಮ್ಮದೇ ರಾಜ್ಯದಲ್ಲಿ ನಡೆಯಿತೆಂಬುದಕ್ಕೆ ನಾವು ಅವಮಾನದಿಂದ ತಲೆ ತಗ್ಗಿಸುವಂತಹ ಘಟನೆಗಳು. ಸೋಂಕಿನಿಂದ ಸಾಯುವವರು ಶೇ.2-3 ಇರಬಹುದು. ಹಸಿವಿನಿಂದ ಅವಮಾನದಿಂದ ಸಾಯುವವರ ಪ್ರಮಾಣ ಶೇ.10 ಆಗಿಬಿಟ್ಟರೆ ಅದನ್ನು ಮನುಷ್ಯ ಸಮಾಜವೆನ್ನಲಾಗದು. ಅಂತಹ ಸ್ಥಿತಿ ಏಕೆ ಬಂದಿತೆಂಬುದನ್ನು ಲಾಕ್‌ಡೌನ್ ಹೇರಿದ ತಕ್ಷಣ ಎಲ್ಲ ಬಗೆಯ ಪರ್ಯಾಯ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕಿದ್ದ ಕೇಂದ್ರ ಸರ್ಕಾರವೂ ಮತ್ತು ಕರ್ನಾಟಕದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಬೇಕಿದ್ದ ರಾಜ್ಯ ಸರ್ಕಾರವೂ ಯೋಚಿಸಬೇಕು. ವಿಮಾನಗಳಲ್ಲಿ ಓಡಾಡುವವರು ತಂದಿದ್ದ ರೋಗದ ಕಾರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಹಸಿದು ಕಂಗೆಟ್ಟಿದ್ದ ಕಾರ್ಮಿಕರಿಗೆ ಕಳಿಸಿಕೊಡುವ ಬಸ್ಸುಗಳಿಗೆ ಮೂರು ಪಟ್ಟು ದರ ನಿಗದಿ ಮಾಡುವಷ್ಟು ಹೀನ ಸ್ಥಿತಿಯಲ್ಲಿ ಈ ರಾಜ್ಯದ ಸರ್ಕಾರವಿದೆ.

ಇನ್ನು ಕೇಂದ್ರದ ವಿಚಾರಕ್ಕೆ ಬರುವುದಾದರೆ, ಪಿಎಂ ಕೇರ್ಸ್ ಎಂಬ ನಿಧಿಗೆ 150 ಕೋಟಿ ಕೊಟ್ಟಿದ್ದ ರೈಲ್ವೇ ಇಲಾಖೆಯು 60 ಕೋಟಿ ವೆಚ್ಚ ಮಾಡಿ ಕಾರ್ಮಿಕರನ್ನು ಕಳಿಸಿಕೊಡಲು ಮುಂದಾಗಲಿಲ್ಲ. ಅಂದರೆ ಅಲ್ಲಿನ ಮೇಲ್ಪಂಕ್ತಿಯೇ ಎಲ್ಲರಿಗೂ ಮಾದರಿಯಾಗಿದೆ. ‘ಎಲ್ಲರ ಒಳಿತಿನ ದೃಷ್ಟಿಯಿಂದಲೇ’ ಹೇರಲಾದ ಲಾಕ್‌ಡೌನ್ ಇದಿರಬಹುದಾದರೂ, ಅದರಲ್ಲಿ ಈ ಜನರ ತಪ್ಪೇನೂ ಇರಲಿಲ್ಲ ಎಂಬುದೂ ಕಾಣದಷ್ಟು ಕಣ್ಣುಗಳು ಇಂಗಿ ಹೋಗಿದ್ದವೇ? ಎಲ್ಲ ಸಿದ್ಧಾಂತಗಳಾಚೆ ಕನಿಷ್ಠ ಮಾನವೀಯತೆ ನಾಗರಿಕವೆನಿಸಿಕೊಳ್ಳುವ ಸರ್ಕಾರಗಳಿಗೆ ಇರಬೇಕಿತ್ತಲ್ಲವೇ? ಅಥವಾ ಸಿದ್ಧಾಂತದ ಕಾರಣಕ್ಕೇ ಈ ಸರ್ಕಾರಗಳು ಹೀಗೆ ನಡೆದುಕೊಳ್ಳುತ್ತಿವೆಯೇ?

ಈ ಬರಹ ಶುರುವಾದ ಕಡೆಗೆ ಮತ್ತೆ ಬರುವುದಾದರೆ, ಇಂದು ವಲಸೆ ಬೇಡ ಎಂದು ಹೇಳುವ ಸ್ಥಿತಿಯಲ್ಲಿ ಯಾವ ರಾಜ್ಯವೂ, ದೇಶವೂ ಇಲ್ಲ. ಕೆಲವೆಡೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲಾಗದೇ ಬೇರೆ ಕಡೆಗೆ ಹೋದರೆ ಸಾಕು ಎಂಬ ಪರಿಸ್ಥಿತಿಯಿದ್ದರೆ, ಇನ್ನು ಕೆಲವೆಡೆ ಸ್ಥಳೀಯ ಜನರು ಹಲವು ರೀತಿಯ ದೈಹಿಕ ಶ್ರಮದ ಕೆಲಸಗಳನ್ನು ಮಾಡುವ ಮನಸ್ಥಿತಿಯಲ್ಲಿಲ್ಲ. ಹಾಗಿಲ್ಲದೇ ಹೋಗಿದ್ದರೆ ಬಿಲ್ಡರ್‌ಗಳು ಸರ್ಕಾರದ ಬಳಿ ಹೋಗಿ, ಕಾರ್ಮಿಕರನ್ನು ‘ಹೇಗಾದರೂ ಮಾಡಿ’ ಇಲ್ಲಿಯೇ ಉಳಿಸಿ ಎಂದು ಒತ್ತಡ ಹಾಕುತ್ತಿರಲಿಲ್ಲ. ಹಾಗಾಗಿ ಇನ್ನೂ ಭಿನ್ನ ರೀತಿಯಲ್ಲಿ ಈ ವಿದ್ಯಮಾನವನ್ನು ನೋಡುವ ಅಗತ್ಯವನ್ನು ನಾವೆಲ್ಲರೂ ಮನಗಾಣಬೇಕಿದೆ.


ಇದನ್ನೂ ಓದಿ: ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...