ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು

ಬಿಗ್ ಬಾಸ್ ತಮಿಳು ಸೀಸನ್ 3 ರಲ್ಲಿ ಭಾಗವಹಿಸಿದ್ದ ಮೀರಾ ಮಿಥುನ್ ಎಂಬ ನಟಿ, ಪರಿಶಿಷ್ಟ ಜಾತಿಯವರನ್ನು ನಿಂದಿಸಿ, ಅವಹೇಳನಕಾರಿ ಟೀಕೆಗಳನ್ನು ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಎಲ್ಲಾ ಪರಿಶಿಷ್ಟ ಜಾತಿ ಚಲನಚಿತ್ರ ಕೆಲಸಗಾರರನ್ನು ಉದ್ಯಮದಿಂದ ಹೊರಹಾಕಬೇಕು ಎಂದು ಹೇಳಿಕೆ ನೀಡಿದ್ದರು.

ಕೆಲವೇ ಚಿತ್ರಗಳಲ್ಲಿ ನಟಿಸಿ, ಬಿಗ್‌ಬಾಸ್‌ ಸೀಸನ್ 3 ರಲ್ಲಿ ಸ್ಫರ್ಧಿಸಿದ್ದ ಮೀರಾ ಮಿಥುನ್ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಮೀರಾ ಮಿಥುನ್, “ಎಲ್ಲಾ ಪರಿಶಿಷ್ಟ ಸಮುದಾಯದ ಸದಸ್ಯರು ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ತೊಡಗಿರುವ ಕಾರಣ ತೊಂದರೆ ಎದುರಿಸುತ್ತಾರೆ. ಯಾವುದೇ ಕಾರಣವಿಲ್ಲದೆ ಯಾರೂ ಅನಗತ್ಯವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ” ಎಂದಿದ್ದರು.

ಸಿನಿಮಾ ಉದ್ಯಮದಲ್ಲಿನ ಎಲ್ಲಾ ತಪ್ಪು ಚಟುವಟಿಕೆಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಮತ್ತು ಎಸ್ಸಿ ಸಮುದಾಯದ ಸದಸ್ಯರ ಕಾರಣ ಎಂದು ಮೀರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನದ ಆಶಯಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’

“ಸಿನಿಮಾ ಉದ್ಯಮದಲ್ಲಿನ ಎಲ್ಲಾ ಪರಿಶಿಷ್ಟ ಜಾತಿಯ ಜನರನ್ನು, ನಿರ್ದೇಶಕರನ್ನು ಹೊರಹಾಕುವ ಸಮಯ ಇದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಜೊತೆಗೆ ಎಸ್‌ಸಿ ಸಮುದಾಯದ ನಿರ್ದೇಶಕರು ತಮ್ಮ ಫೋಟೋವನ್ನು ಅವರ ಚಲನಚಿತ್ರದ ಫಸ್ಟ್ ಲುಕ್‌ಗಾಗಿ ಬಳಸಿದ್ದಾರೆ ಎಂದು ಮೀರಾ ಹೇಳಿಕೊಂಡಿದ್ದಾರೆ.

ಆಕೆಯ ಸಂದರ್ಶನದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ಹೇಳಿಕೆಯನ್ನು ಅನೇಕರು ಖಂಡಿಸಿದರು. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸರಿಗೆ ಒತ್ತಾಯಿಸಿದ್ದರು.

ವಿಡುದಲೈ ಸಿರುತೈಗಲ್ ಕಚ್ಚಿಯ ಉಪ ಪ್ರಧಾನ ಕಾರ್ಯದರ್ಶಿ ವನ್ನಿ ಅರಸು ಅವರ ದೂರಿನ ಆಧಾರದ ಮೇಲೆ, ಚೆನ್ನೈ ಪೊಲೀಸರು ಐಪಿಸಿಯ 153, 153 ಎ (1) (ಎ), 505 (1) (ಬಿ) ಸೇರಿದಂತೆ SC ಮತ್ತು ST (ದೌರ್ಜನ್ಯ ತಡೆ) ಕಾಯಿದೆಯ 7 ಸೆಕ್ಷನ್‌ಗಳ ಅಡಿಯಲ್ಲಿ ಮೀರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೈಬರ್ ಕ್ರೈಂ ವಿಭಾಗದ ಪೋಲಿಸರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪದರ್ಶಿ ಮತ್ತು ನಟಿ ಮೀರಾ ಮಿಥುನ್ ಅವರಿಗೆ ವಿಚಾರಣೆಗೆ ಬರುವಂತೆ ಬುಧವಾರ ನೋಟಿಸ್ ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.


ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

 

LEAVE A REPLY

Please enter your comment!
Please enter your name here