ತಿರುನಲ್ವೇಲಿ, ತಮಿಳುನಾಡು: ಪ್ರೇಮಸಂಬಂಧದ ಕಾರಣಕ್ಕೆ ನಡೆದಿದೆ ಎನ್ನಲಾದ ದಲಿತ ಟೆಕ್ಕಿ ಕವಿನ್ ಸೆಲ್ವಗಣೇಶ್ (23) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸುರ್ಜಿತ್‌ನ ತಂದೆ ಮತ್ತು ಸಬ್ ಇನ್ಸ್‌ಪೆಕ್ಟರ್ ಸರವಣನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಕಾರಣರಾದ ಎಲ್ಲರನ್ನೂ ಬಂಧಿಸುವವರೆಗೂ ಮೃತದೇಹ ಸ್ವೀಕರಿಸುವುದಿಲ್ಲ ಎಂದು ಕವಿನ್ ಕುಟುಂಬ ಐದು ದಿನಗಳ ಕಾಲ ನಡೆಸಿದ ತೀವ್ರ ಪ್ರತಿಭಟನೆಯ ನಂತರ ಈ ಬಂಧನ ನಡೆದಿದೆ.
ಈ ಪ್ರಕರಣದಲ್ಲಿ ಆರೋಪಿ ಸುರ್ಜಿತ್‌ರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ತಂದೆಯನ್ನು ಸಹ ಬಂಧಿಸಬೇಕು ಎಂದು ಕವಿನ್ ಕುಟುಂಬ ಪಟ್ಟು ಹಿಡಿದಿತ್ತು. ಶುಕ್ರವಾರ, ಸಬ್ ಇನ್ಸ್‌ಪೆಕ್ಟರ್ ಸರವಣನ್ ಬಂಧನದ ನಂತರ, ಮೃತ ಟೆಕ್ಕಿಯ ಕುಟುಂಬ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹವನ್ನು ಸ್ವೀಕರಿಸಿದೆ. ಈ ವೇಳೆ ಸಚಿವ ಕೆ.ಎನ್. ನೆಹರು ಮತ್ತು ಜಿಲ್ಲಾಧಿಕಾರಿ ಆರ್. ಸುಕುಮಾರ್ ಸಹ ಉಪಸ್ಥಿತರಿದ್ದರು.
ಪ್ರೀತಿಯೇ ಹತ್ಯೆಗೆ ಕಾರಣ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕವಿನ್ ಮತ್ತು ಆರೋಪಿ ಸುರ್ಜಿತ್‌ನ ಸಹೋದರಿ ಸುಭಾಷಿಣಿ ನಡುವಿನ ಪ್ರೇಮಸಂಬಂಧವೇ ಈ ಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಸುಭಾಷಿಣಿ ಈ ಕುರಿತು ವಿಡಿಯೋವೊಂದರಲ್ಲಿ ಸ್ಪಷ್ಟಪಡಿಸಿದ್ದು, “ನಾವು ನಿಜವಾಗಿಯೂ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ, ನಮ್ಮ ಸಂಬಂಧದ ಬಗ್ಗೆ ತಕ್ಷಣವೇ ನಮ್ಮ ಪೋಷಕರಿಗೆ ತಿಳಿಸಬಾರದೆಂದು ನಿರ್ಧರಿಸಿದ್ದೆವು. ಮೇ 30ರಂದು ನನ್ನ ಅಣ್ಣ ಸುರ್ಜಿತ್ ಈ ವಿಷಯವನ್ನು ನನ್ನ ತಂದೆಗೆ ತಿಳಿಸಿದ್ದ. ಆದರೆ, ಕವಿನ್ ಸ್ವಲ್ಪ ಸಮಯ ಬೇಕು ಎಂದಿದ್ದರಿಂದ ನಾನು ಸುಮ್ಮನಿದ್ದೆ” ಎಂದು ಹೇಳಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಕವಿನ್ ಅವರ ಸಂಬಂಧಿ ಸೆಲ್ವಂ, “ಇದು ಸ್ಪಷ್ಟವಾಗಿ ಮರ್ಯಾದೆಗೇಡು ಹತ್ಯೆ (Honour killing). ಸುರ್ಜಿತ್ ಬಂಧನವಾಗಿದೆ, ಆದರೆ ಅವನ ತಂದೆ-ತಾಯಿಯನ್ನೂ ಬಂಧಿಸಬೇಕು. ಎಫ್‌ಐಆರ್ ಆಧಾರದ ಮೇಲೆ ಅವರನ್ನು ಬಂಧಿಸಲು ಅವಕಾಶವಿದೆ,” ಎಂದು ಒತ್ತಾಯಿಸಿದ್ದರು. ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ತನಿಖೆಗಾಗಿ ಸಿಐಡಿ (Crime Branch–CID) ಗೆ ವರ್ಗಾಯಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಕವಿನ್ ಸೆಲ್ವಗಣೇಶ್ ಮತ್ತು ಸುಭಾಷಿಣಿ ಪ್ರೀತಿಸುತ್ತಿದ್ದರು. ಈ ಸಂಬಂಧ ಸುರ್ಜಿತ್‌ಗೆ ಇಷ್ಟವಿರಲಿಲ್ಲ. ಮೇ 30ರಂದು ಕವಿನ್‌ರನ್ನು ಆತನ ಪ್ರೇಯಸಿ ಸುಭಾಷಿಣಿ ಕೆಲಸ ಮಾಡುತ್ತಿದ್ದ ಸಿಧಾ ಕೇಂದ್ರದ ಬಳಿ ಸುರ್ಜಿತ್ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ಸಿಸಿಟಿವಿ ದೃಶ್ಯಗಳಲ್ಲಿ ಈ ಘಟನೆ ದಾಖಲಾಗಿದೆ. ನಂತರ ಕವಿನ್ ದೇಹವು ತೀವ್ರ ಗಾಯಗಳೊಂದಿಗೆ ಪತ್ತೆಯಾಗಿತ್ತು. ಸುರ್ಜಿತ್‌ನನ್ನು ಕೊಲೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಸರವಣನ್ ಅವರ ಬಂಧನದ ನಂತರ, ನ್ಯಾಯ ಸಿಗುವ ಭರವಸೆಯಲ್ಲಿ ಕುಟುಂಬವು ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಮೃತದೇಹವನ್ನು ಸ್ವೀಕರಿಸಿದೆ. ಈ ಘಟನೆ ತಮಿಳುನಾಡಿನಲ್ಲಿ ಜಾತಿವಾದದ ವಿರುದ್ಧ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಮಲ್ ಹಾಸನ್ ಸೇರಿದಂತೆ ಹಲವು ರಾಜಕೀಯ ನಾಯಕರು ಖಂಡಿಸಿದ್ದಾರೆ.
ಮುಂಬೈ-ಕೋಲ್ಕತ್ತಾ ಇಂಡಿಗೋ ವಿಮಾನದಲ್ಲಿ ಮುಸ್ಲಿಂ ಪ್ರಯಾಣಿಕನಿಗೆ ಕಪಾಳಮೋಕ್ಷ-video


