ಬ್ಯಾಟರಾಯನಪುರ: ದಲಿತ ಮಹಿಳೆ ಕುಳಿತಿದ್ದ ಕುರ್ಚಿಯನ್ನು, ಗೋಮೂತ್ರದಿಂದ ಶುದ್ಧೀಕರಿಸಿ ನಂತರ ಬಳಸಿರುವ ಘಟನೆ ಇಲ್ಲಿನ ಬಾಗಲೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ದಲಿತ ಮಹಿಳೆ ಅಧ್ಯಕ್ಷರಾಗಿ ಕುಳಿತ್ತಿದ್ದ ಕುರ್ಚಿಯನ್ನು ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಸವರ್ಣಿಯ ವ್ಯಕ್ತಿ ಗೋಮೂತ್ರದಿಂದ ಶುದ್ಧೀಕರಿಸಿದ್ದಾನೆ ಎಂದು ಬಿಜೆಪಿ ಎಸ್‌ಸಿ ಮೊರ್ಚಾ ಆರೋಪಿಸಿದೆ. ಈ ಕುರಿತು ಮೊರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಏನಿದು ಘಟನೆ? ಬಿಜೆಪಿ ಎಸ್.ಸಿ. ಮೋರ್ಚಾದ ಆರೋಪವೇನು?
ಬಾಗಲೂರು ಕಾಂಗ್ರೆಸ್ ಮುಖಂಡ, ಗ್ರಾ.ಪಂ.ಅಧ್ಯಕ್ಷ ಜೆ.ಮುನೇಗೌಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರ ಹೆಸರಲ್ಲಿ ನಕಲಿ ಖಾತೆ ತೆರೆದು ಗ್ರಾ.ಪಂ.ಹಣ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಪ್ರಾದೇಶಿಕ ಆಯುಕ್ತರು ಬೆಂಗಳೂರು ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ 2019ರಲ್ಲಿ ಲಿಖಿತ ದೂರು ಸಲ್ಲಿಸಲಾಗಿತ್ತು. ಸದರಿ ದೂರನ್ನು ಕಳೆದ ಎರಡು ವರ್ಷಗಳಿಂದ ಪರಿಶೀಲಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು (48(4)ರ ಅನ್ವಯ ಇತ್ತೀಚೆಗೆ ಗ್ರಾ.ಪಂ. ಅಧ್ಯಕ್ಷ ಜೆ.ಮುನೇಗೌಡ ಅವರನ್ನು ಗ್ರಾ.ಪಂ. ಅಧ್ಯಕ್ಷ ಸ್ಥಾನದಿಂದ ಅಮಾನತ್ತುಗೊಳಿಸಲಾಗಿತ್ತು.
ಅಮಾನತುಗೊಂಡ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿ ಉಪಾಧ್ಯಕ್ಷೆ ಯಶೋಧಮ್ಮ ಮೂರು ದಿನಗಳ ಕಾಲ ಆಡಳಿತ ನಡೆಸಿದ್ದರು. ಈ ನಡುವೆ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಗ್ರಾ.ಪಂ. ಅಧ್ಯಕ್ಷ ಜೆ.ಮುನೇಗೌಡ ನ್ಯಾಯಾಲಯದ ಮೊರೆ ಹೋಗಿ, ತಮ್ಮ ವಿರುದ್ಧ ಕೈಗೊಂಡಿರುವ ಅಮಾನತು ಆದೇಶವನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಗ್ರಾ.ಪಂ. ಅಧ್ಯಕ್ಷ ಜೆ.ಮುನೇಗೌಡರ ಮನವಿಯನ್ನು ಪರಿಶೀಲಿಸಿ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಜೆ.ಮುನೇಗೌಡರು ಪುನಃ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
(ವಿಡಿಯೊ ನೋಡಿ)
ಇದನ್ನೂ ಓದಿರಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ
ಆದರೆ ಜೆ.ಮುನೇಗೌಡ ಅಮಾನತುಗೊಂಡ ವೇಳೆಯ ಮೂರು ದಿನಗಳ ಕಾಲ ಅಧ್ಯಕ್ಷರ ಕುರ್ಚಿ ಅಲಂಕರಿಸಿದ್ದ ಉಪಾಧ್ಯಕ್ಷೆ ಯಶೋಧಮ್ಮ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದು, ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅಧ್ಯಕ್ಷ ಸ್ಥಾನವನ್ನು ಪುನಃ ಅಲಂಕರಿಸಲು ಆಗಮಿಸಿದ ಜೆ.ಮುನೇಗೌಡ ಅಧ್ಯಕ್ಷರ ಕುರ್ಚಿಯನ್ನು ಗ್ರಾ.ಪಂ. ಕಚೇರಿಯಿಂದ ಹೊರತಂದು, ಅದನ್ನು ಸ್ವಚ್ಛಗೊಳಿಸಿ, ಸಗಣಿ ಮತ್ತು ಗೋಮೂತ್ರ ಪ್ರೋಕ್ಷಣೆ ಮಾಡಿದ್ದಾರೆ ಎಂದು ದೂರಲಾಗಿದೆ. ದಲಿತ ಮಹಿಳೆ ಕುರ್ಚಿಯ ಮೇಲೆ ಕುಳಿತಿದ್ದರಿಂದ ಅದು ಅಪವಿತ್ರವಾಗಿದೆ ಎಂದು ಜೆ.ಮುನೇಗೌಡ ಈ ರೀತಿ ಮಾಡಿದ್ದಾರೆ ಎಂಬುದು ದಲಿತ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.


ಬಿಜೆಪಿ ಎಸ್.ಸಿ.ಮೋರ್ಚಾ ಪದಾಧಿಕಾರಿಗಳು ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಲವು ಮುಖಂಡರೊಡಗೂಡಿ ಬಾಗಲೂರು ಉಪಾಧ್ಯಕ್ಷೆ, ಘಟನೆಯ ಕೇಂದ್ರ ಬಿಂದುವಾಗಿರುವ ಯಶೋಧಮ್ಮನವರ ಮನೆಗೆ ಭೇಟಿ ನೀಡಿದ್ದಾರೆ.
ದಲಿತ ಸಮುದಾಯಕ್ಕೆ ಅಪಮಾನಿಸಿರುವ ಇಂತಹ ಕೃತ್ಯಗಳು ಮರುಕಳಿಸಬಾರದು ಹಾಗೂ ಉಪಾಧ್ಯಕ್ಷೆ ಯಶೋಧಮ್ಮ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಬಾಗಲೂರು ಪೊಲೀಸರಿಗೆ ಲಿಖಿತ ದೂರಿನ ಮನವಿಯನ್ನು ದಲಿತ ಮುಖಂಡರು ಮಾಡಿದ್ದಾರೆ.
“ದಲಿತ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ದಲಿತ ವಿರೋಧಿತನವಿದು” ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಾಗಲೂರು ಗ್ರಾಪಂ ಸೇರಲಿದ್ದು, ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ ಅವರ ಪ್ರತಿಕ್ರಿಯೆಗೆ ‘ನಾನುಗೌರಿ.ಕಾಂ’ ಸಂಪರ್ಕಿಸಿತು. “ಈ ಕುರಿತು ಮಾಹಿತಿ ಇಲ್ಲ” ಎಂದು ಶಾಸಕರು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿರಿ: ಕೇರಳ: ದಲಿತ ಮಹಿಳೆಗೆ ಮನೆ ಕಟ್ಟುಲು ಸಾಮಾಗ್ರಿಯನ್ನು ಕೊಂಡೊಯ್ಯಲು ಬಿಡದ ಮೇಲ್ಜಾತಿ ಕುಟುಂಬ


