ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಅದನ್ನು ವಿಡಿಯೋ ಮಾಡಿದ ಘಟನೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೈಕ್ ಬಾಡಿಗೆ ವಿಚಾರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹಲ್ಲೆಗೊಳಗಾದ ಯುವಕ ತನ್ನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ, ಪವನ್ ಕುಮಾರ್ ಎಂಬ ದಲಿತ ಯುವಕನ ಮೇಲೆ ಬಾಡಿಗೆ ಬೈಕ್ ಪಾವತಿಸದ ಕಾರಣ ಹಲ್ಲೆ ನಡೆಸಲಾಗಿದೆ. ಆರೋಪಿಗಳು ಪವನ್‌ನನ್ನು ಅಪಹರಿಸಿ, ಒಂದು ಕೋಣೆಯಲ್ಲಿ ಕೂಡಿಹಾಕಿ ದೊಣ್ಣೆಗಳಿಂದ ಹೊಡೆದಿದ್ದಾರೆ. ಇದಲ್ಲದೆ, ಅವರು ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಯುವಕನ ತಂದೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಅನಿಲ್ ರೆಡ್ಡಿ, ವೈಎಸ್‌ಆರ್‌ಸಿಪಿ ಪಕ್ಷದ ಮಾಜಿ ಶಾಸಕ ಭೂಮನ್ ಅಭಿನಯ್ ರೆಡ್ಡಿ ಅವರ ಚಾಲಕ ಎಂದು ವರದಿಯಾಗಿದೆ. ಇತರ ಇಬ್ಬರು ಆರೋಪಿಗಳನ್ನು ದಿನೇಶ್ ಮತ್ತು ಜಗನ್ ರೆಡ್ಡಿ ಎಂದು ಗುರುತಿಸಲಾಗಿದೆ. ಈ ಹಲ್ಲೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತಾರೂಢ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಂದಾಯ ಸಚಿವ ಸತ್ಯ ಪ್ರಸಾದ್ ಅನಗಾನಿ ಅವರು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು, ವಿರೋಧ ಪಕ್ಷದ ವೈಎಸ್‌ಆರ್‌ಸಿಪಿ ನಾಯಕರನ್ನು ತೀವ್ರವಾಗಿ ಟೀಕಿಸಿದ್ದಾರೆ. ಭೂಮನ್ ಅಭಿನಯ್ ರೆಡ್ಡಿ ಅವರು ತಮ್ಮ ಅನುಯಾಯಿಗಳು ದಲಿತರ ವಿರುದ್ಧ ದಬ್ಬಾಳಿಕೆ ನಡೆಸಲು ಅವಕಾಶ ನೀಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
ಸಂತ್ರಸ್ತ ಯುವಕನ ಮನವಿ: ‘ನನ್ನ ಹೆಸರಿನಲ್ಲಿ ರಾಜಕೀಯ ಬೇಡ’
ಈ ಘಟನೆ ಕುರಿತು ರಾಜಕೀಯ ಆರೋಪ-ಪ್ರತ್ಯಾರೋಪಗಳು ಹೆಚ್ಚುತ್ತಿದ್ದಂತೆಯೇ, ಹಲ್ಲೆಗೊಳಗಾದ ಪವನ್ ಕುಮಾರ್ ಸ್ವತಃ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋದಲ್ಲಿ, ತಮ್ಮ ಮೇಲಿನ ಹಲ್ಲೆಗೆ ದಲಿತ, ವೈಎಸ್‌ಆರ್‌ಸಿಪಿ ಅಥವಾ ಟಿಡಿಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. “ದಯವಿಟ್ಟು ನನ್ನನ್ನು ಟ್ರೋಲ್ ಮಾಡಬೇಡಿ ಮತ್ತು ನನ್ನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ” ಎಂದು ಸಂತ್ರಸ್ತ ದಲಿತ ಯುವಕ ಮನವಿ ಮಾಡಿದ್ದಾನೆ.
ಬೈಕ್ ಬಾಡಿಗೆ ಪಡೆದ ಸಂಬಂಧ ಪವನ್‌ನನ್ನು ಅಪಹರಿಸಿ 5 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿತ್ತು ಎಂದು ವರದಿಗಳು ತಿಳಿಸಿವೆ. ಪೊಲೀಸರು ಕೊಲೆ ಯತ್ನ, ಅಪಹರಣ ಮತ್ತು ಅಕ್ರಮ ಬಂಧನಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಈ ಘಟನೆಯು ಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದೆಹಲಿಯಲ್ಲಿ ಭಾರೀ ಮಳೆಗೆ ಗೋಡೆ ಕುಸಿತ: ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಸಾವು


