ಎರಡು ವರ್ಷಗಳ ಹಿಂದೆ ದಲಿತ ಯುವಕನ ಹತ್ಯೆಗೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಪಿನಿಪೆ ವಿಶ್ವರುಪ್ ಅವರ ಪುತ್ರ ಪಿನಿಪೆ ಶ್ರೀಕಾಂತ್ ನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಆಂಧ್ರಪ್ರದೇಶ ಪೊಲೀಸರ ತಂಡ ಶ್ರೀಕಾಂತ್‌ನನ್ನು ವಶಕ್ಕೆ ತೆಗೆದುಕೊಂಡಿದೆ. ಅವರನ್ನು ‘ಟ್ರಾನ್ಸಿಟ್ ವಾರಂಟ್’ ಮೇಲೆ ರಾಜ್ಯಕ್ಕೆ ಕರೆತರಲಾಗುತ್ತಿತ್ತು. ಈತ ದಲಿತ ಯುವಕ ಹಾಗೂ ಗ್ರಾಮದ ಸ್ವಯಂಸೇವಕ ಜೆ.ದುರ್ಗಾ ಪ್ರಸಾದ್ ಹತ್ಯೆಯ ಆರೋಪಿ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಆಂಧ್ರ ಪೊಲೀಸರು ಶ್ರೀಕಾಂತ್‌ಗಾಗಿ ಹುಡುಕಾಟ ನಡೆಸಿದ್ದರು, ಅವರನ್ನು ಮಧುರೈನಲ್ಲಿ ಬಂಧಿಸಿ ಟ್ರಾನ್ಸಿಟ್ ವಾರಂಟ್ ಪಡೆಯಲು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ರಸ್ತೆ ಮಾರ್ಗವಾಗಿ ಕೋನಸೀಮಾ ಜಿಲ್ಲೆಗೆ ಕರೆತರಲಾಗುತ್ತಿತ್ತು.
ಆದರೆ, ಶ್ರೀಕಾಂತ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಮಧುರೈನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, “ನಾನು ವೈದ್ಯ, ಜೀವ ಉಳಿಸುವುದು ಮಾತ್ರ ನನಗೆ ಗೊತ್ತು. ಈ ಪ್ರಕರಣದಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ” ಎಂದು ಆರೋಪಿಸಿದರು.
ಕೋನಸೀಮಾ ಜಿಲ್ಲೆಯಲ್ಲಿ ನಡೆದ ಗಲಭೆಗಳ ನಂತರ 2022ರ ಜೂನ್ 6 ರಂದು ದುರ್ಗಾ ಪ್ರಸಾದ್ ಅವರನ್ನು ಕೊಲ್ಲಲಾಯಿತು. ಪೊಲೀಸರು ಈ ಹಿಂದೆ ಸಂತ್ರಸ್ತನ ಸ್ನೇಹಿತ ಮತ್ತು ವೈಎಸ್‌ಆರ್‌ಸಿಪಿ ಸಾಮಾಜಿಕ ಮಾಧ್ಯಮ ಸಂಚಾಲಕ ವಿ.ಧರ್ಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಕ್ಟೋಬರ್ 18ರಂದು ಆತನನ್ನು ಬಂಧಿಸಲಾಗಿತ್ತು. ಪೊಲೀಸರು ಶ್ರೀಕಾಂತ್ ಮತ್ತು ಇತರ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಮೃತನು ಧರ್ಮೇಶ್ ಮತ್ತು ಶ್ರೀಕಾಂತ್ ಇಬ್ಬರಿಗೂ ಸ್ನೇಹಿತನಾಗಿದ್ದು, ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎನ್ನಲಾಗಿದೆ.
ದಲಿತ ಯುವಕನ ಹತ್ಯೆಯ ಹಿಂದಿನ ಉದ್ದೇಶ ತಿಳಿದಿಲ್ಲ. ಯೋಜಿತ ಸಂಚು ರೂಪಿಸಿ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಧರ್ಮೇಶ್ ಅವರು ದುರ್ಗಾ ಪ್ರಸಾದ್ ಅವರನ್ನು ದ್ವಿಚಕ್ರ ವಾಹನದಲ್ಲಿ ಕೋಟಿಪಲ್ಲಿ ದಕ್ಕೆಗೆ ಕರೆದುಕೊಂಡು ಹೋಗಿದ್ದರು. ಅವರನ್ನು ಕಾರಿನಲ್ಲಿ ನಾಲ್ವರು ಹಿಂಬಾಲಿಸಿದರು. ನಂತರ ಸಂತ್ರಸ್ತನನ್ನು ದೋಣಿಗೆ ಕರೆದೊಯ್ದ ನಂತರ ಆರೋಪಿಗಳು ದುರ್ಗಾ ಪ್ರಸಾದ್ ಅವರನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ ಎನ್ನಲಾಗಿದೆ.
ಮೃತನ ಕುಟುಂಬದ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಪೊಲೀಸರು ಆತನ ಶವವನ್ನು ಪತ್ತೆ ಹಚ್ಚಿದ್ದು, ಶವಪರೀಕ್ಷೆಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ವಿಶ್ವರೂಪ್ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಮೇ 2022 ರಲ್ಲಿ ಕೋನಸೀಮಾ ಜಿಲ್ಲೆಯ ಮರುನಾಮಕರಣದ ಹಿಂಸಾಚಾರದ ಸಂದರ್ಭದಲ್ಲಿ ಅಮಲಾಪುರಂನಲ್ಲಿರುವ ಅವರ ಮನೆಗೆ ಗುಂಪೊಂದು ಬೆಂಕಿ ಹಚ್ಚಿತು. ಆದರೆ, ವೈಎಸ್‌ಆರ್‌ಸಿಪಿ ನಾಯಕ ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಉತ್ತರ ಪ್ರದೇಶ: ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ದಲಿತ ಬಾಲಕನಿಗೆ ಥಳಿತ


