ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ‘ಜೈ ಭೀಮ್’ ಹಾಡು ಹಾಕಿದ್ದಕ್ಕೆ ದಲಿತ (ಮಾದಿಗ) ಯುವಕನ ಮೇಲೆ ಪ್ರಬಲ ಜಾತಿಯವರು (ಸವರ್ಣೀಯರು) ಮಾರಾಣಾಂತಿಕ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮುದ್ದನಹಳ್ಳಿ ಗ್ರಾಮದಿಂದ ಕೇಳಿ ಬಂದಿದೆ. ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೀಪು (19) ಗಂಭೀರ ಹಲ್ಲೆಗೊಳಗಾದ ಯುವಕ, ಆತನ ಜೊತೆಗಿದ್ದ ನರಸಿಂಹಮೂರ್ತಿ ಎಂಬಾತನಿಗೂ ಥಳಿಸಲಾಗಿದೆ. ರೈಲ್ವೆ ಪೊಲೀಸ್ ಎಂದು ಹೇಳಿಕೊಂಡಿರುವ ಮುದ್ದನಹಳ್ಳಿ ಗ್ರಾಮದ ನಿವಾಸಿ ಚಂದ್ರಶೇಖರ್ ಮತ್ತು ಇನ್ನೋರ್ವ ನರಸಿಂಹರಾಜು ಎಂಬವರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಇಬ್ಬರೂ ಯುವಕರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಯುವಕರು ತಮ್ಮ ಟಾಟಾ ಏಸ್ ವಾಹನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿವಿದೆಡೆಗಳಿಂದ ಹಾಲಿನ ಕ್ಯಾನ್‌ಗಳನ್ನು ಸಂಗ್ರಹಿಸಿ, ಸಿರವಾರ ಡೈರಿಗೆ ಕೊಂಡೊಯ್ಯುತ್ತಿದ್ದರು. ಜನವರಿ 4ರಂದು ಸಂಜೆ ಹಾಲಿನ ಕ್ಯಾನ್‌ಗಳನ್ನು ಸಂಗ್ರಹಿಸಲು ಹೋಗುತ್ತಿದ್ದಾಗ ರೂಢಿಯಂತೆ ತಮ್ಮ ವಾಹನದಲ್ಲಿ ‘ಜೈ ಭೀಮ್’ ಹಾಡು ಹಾಕಿದ್ದರು. ಈ ವೇಳೆ ವಾಹನ ಅಡ್ಡಗಟ್ಟಿದ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ವಾಹನ ಅಡ್ಡಗಟ್ಟಿ ನಾವು ರೈಲ್ವೆ ಪೊಲೀಸರು ಎಂದು ಹೇಳಿಕೊಂಡಿದ್ದು, ವಾಹನದ ದಾಖಲೆಗಳನ್ನು ಕೇಳಿದ್ದಾರೆ. ಈ ವೇಳೆ ವಾಹನ ಚಲಾಯಿಸುತ್ತಿದ್ದ ನರಸಿಂಹಮೂರ್ತಿ ಎಲ್ಲಾ ದಾಖಲೆ ನೀಡಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿ ಕುಳಿತಿದ್ದ ದೀಪು ಅವರನ್ನು ಕೆಳಗೆಳೆದ ಆರೋಪಿಗಳು, ಅವರ ಜಾತಿ ವಿಚಾರಿಸಿ ನಿಂದನೆ ಮಾಡಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಗುಬ್ಬಿ ಪೊಲೀಸರು ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 307 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ-1989 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಒಡಿಶಾ | ಮೇಕೆ ಕಳವು ಆರೋಪ; ದಲಿತ ಯುವಕರ ಮೇಲೆ ಹಲ್ಲೆ, ಚಪ್ಪಲಿ ಹಾರ!


