ಚಿಕ್ಕಮಗಳೂರು: ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದಾರೆಂದು ಗ್ರಾಮಸ್ಥರು ದೇವಾಲಯದಲ್ಲಿ ಪೂಜೆ ಸ್ಥಗಿತಗೊಳಿಸಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ನರಸೀಪುರದಿಂದ ವರದಿಯಾಗಿದೆ.
ಈ ವಿವಾದದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತಹಶೀಲ್ದಾರ್ ಡಾ.ಸುಮಂತ್, ರಾಜಸ್ವ ನಿರೀಕ್ಷಕರು ಭೇಟಿ ನೀಡಿ ತಿರುಮಲೇಶ್ವರ ದೇವಾಲಯಕ್ಕೆ ಬೀಗ ಹಾಕಿದ್ದಾರೆಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಸುಮಾರು 250 ಕುರುಬ ಸಮುದಾಯದ ಕುಟುಂಬಗಳು ವಾಸವಾಗಿದ್ದರೆ, ಪರಿಶಿಷ್ಟ ಜಾತಿಯ ಸಮುದಾಯದಿಂದ ಕೇವಲ ಬೆರಣಿಕೆಯ 15 ಕುಟುಂಬಗಳು ಮಾತ್ರ ಈ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ತಿರುಮಲೇಶ್ವರ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನೀಡುತ್ತಿರಲಿಲ್ಲವೆನ್ನಲಾಗಿದೆ.
ಇಲ್ಲಿನ ಇಬ್ಬರು ಪರಿಶಿಷ್ಟ ಜಾತಿಯ ಯುವಕರು ದೇವಸ್ಥಾನಕ್ಕೆ ಹೋಗುತ್ತೇವೆಂದು ಮಂಗಳವಾರ ತಹಶೀಲ್ದಾರ್ ಡಾ. ಸುಮಂತ್ ಅವರಿಗೆ ಮನವಿ ಸಲ್ಲಿಸಿದ್ದರು. ದೇವಸ್ಥಾನದೊಳಗೆ ಪ್ರವೇಶಿಸಲು ತಮ್ಮ ಅಭ್ಯಂತರವಿಲ್ಲ ಎಂದು ಅಧಿಕಾರಿಗಳು ಅವರಿಗೆ ತಿಳಿಸಿದ್ದಾರೆನ್ನಲಾಗಿದೆ.
ಮಂಗಳವಾರ ಪೂಜೆ ನಡೆಯುತ್ತಿದ್ದ ವೇಳೆ ದಲಿತ ಯುವಕರು ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಕುರುಬ ಸಮುದಾಯದವರು ಪೂಜೆ ಸಲ್ಲಿಸದೆ ಹಿಂದಿರುಗಿದ್ದಾರೆಂದು ತಿಳಿದು ಬಂದಿದೆ.
ದೇವಸ್ಥಾನವು 2012ರಲ್ಲಿ ಮುಜರಾಯಿ ಇಲಾಖೆಗೆ ಸೇರಿದ್ದು, ಕುರುಬರು ಸಮುದಾಯದವರು ಮಂಗಳವಾರ ಪೂಜೆ ಸ್ಥಗಿತಗೊಳಿಸಿ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ….ಜನಾಕ್ರೋಶಕ್ಕೆ ಮಣಿದ ದಕ್ಷಿಣ ಕೊರಿಯಾ ಅಧ್ಯಕ್ಷ : ‘ತುರ್ತು ಮಿಲಿಟರಿ ಆಡಳಿತ’ ವಾಪಸ್


