ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತದಿಂದ ಧ್ವಂಸಗೊಂಡ ಹಳ್ಳಿಗಳ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಓಡಿಹೋಗಲು ಒತ್ತಾಯಿಸಲ್ಪಟ್ಟರು, ಅವರು ತಾವು ಬಿಟ್ಟುಬಂದ ಆಸ್ತಿಗಳಲ್ಲಿ ಕಳ್ಳತನವಾಗುತ್ತಿವೆ ಎಂದು ದೂರು ನೀಡಿದ್ದಾರೆ. ಪೊಲೀಸರ ರಾತ್ರಿ ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಕಳ್ಳರು ರಾಜ್ಯದ ಅತಿದೊಡ್ಡ ಮಾನವೀಯ ಬಿಕ್ಕಟ್ಟಿನ ಲಾಭವನ್ನು ಪಡೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ ಎಂದು ಸ್ಥಳಾಂತರಗೊಂಡ ನಿವಾಸಿಗಳು ಶಂಕಿಸಿದ್ದಾರೆ. ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಸಂತ್ರಸ್ತ ಕೆಲವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡವರು ನಾವೇ ಎಂದು ಸಂತ್ರಸ್ತ ವ್ಯಕ್ತಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. “ನಾವು ಭೂಕುಸಿತ ದುರಂತದ ಸಮಯದಲ್ಲಿ ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಮನೆಗಳನ್ನು ತ್ಯಜಿಸಿದ್ದೇವೆ. ಆದರೆ, ಅದರ ನಂತರ ನಮ್ಮ ಮನೆಯ ಸ್ಥಿತಿಯನ್ನು ಪರಿಶೀಲಿಸಲು ನಾವು ಹಿಂತಿರುಗಿದಾಗ, ಬಾಗಿಲು ಮುರಿದು ತೆರೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಸದ್ಯ ಅವರು ತಂಗಿರುವ ರೆಸಾರ್ಟ್‌ನಲ್ಲಿರುವ ಅವರ ಕೊಠಡಿಯನ್ನು ಕೂಡ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ” ಎಂದು ದೂರಿದರು.
ಶನಿವಾರ ಸಂಜೆ ಹೇಳಿಕೆ ನೀಡಿರುವ ಅಧಿಕಾರಿಗಳು, ಚೂರಲ್ಮಲಾ, ಮುಂಡಕ್ಕೈ ಸೇರಿದಂತೆ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಆರಂಭಿಸಲಾಗಿದೆ. ಪೀಡಿತ ಪ್ರದೇಶಗಳಿಗೆ ಅಥವಾ ಸಂತ್ರಸ್ತರ ಮನೆಗಳಿಗೆ ರಾತ್ರಿಯಲ್ಲಿ ಅನುಮತಿಯಿಲ್ಲದೆ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಹೆಸರಿನಲ್ಲಿ ಅಥವಾ ರಾತ್ರಿಯಲ್ಲಿ ಪೊಲೀಸರ ಅನುಮತಿಯಿಲ್ಲದೆ ಪೀಡಿತ ಪ್ರದೇಶಗಳಿಗೆ ಅಥವಾ ಮನೆಗಳಿಗೆ ಪ್ರವೇಶಿಸಲು ಯಾರಿಗೂ ಅವಕಾಶವಿಲ್ಲ ಎಂದು ಅದು ಹೇಳಿದೆ.
ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ತಮ್ಮ ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ, ರಕ್ಷಣಾ ಪಡೆಗಳು ಹೆಚ್ಚಿನ ದೇಹಗಳು ಮತ್ತು ದೇಹದ ಭಾಗಗಳನ್ನು ಪತ್ತೆಹಚ್ಚಿದ್ದಾರೆ. ಸಾವಿನ ಸಂಖ್ಯೆಯನ್ನು 350 ದಾಟಿದ್ದು, ಸುಮಾರು 206 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ; ವಯನಾಡ್ ದುರಂತ | 350 ದಾಟಿದ ಮೃತರ ಸಂಖ್ಯೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ


