ಕುದುರೆ ವ್ಯಾಪಾರ ಮತ್ತು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯ ಸಾಧ್ಯತೆಯನ್ನು ಉಲ್ಲೇಖಿಸಿದ ಎಎಪಿ ಸಂಸದ ಸಂಜಯ್ ಸಿಂಗ್, ಹೊಸ ಲೋಕಸಭೆಯಲ್ಲಿ ಬಿಜೆಪಿ ಪಕ್ಷದ ಸಂಸದ ಸ್ಪೀಕರ್ ಆದರೆ “ಸಂಸದೀಯ ಸಂಪ್ರದಾಯಗಳಿಗೆ ಅಪಾಯಕಾರಿ” ಎಂದು ಹೇಳಿದ್ದಾರೆ.
16 ಸಂಸದರನ್ನು ಹೊಂದಿರುವ ಎನ್‌ಡಿಎಯ ಎರಡನೇ ಅತಿದೊಡ್ಡ ಮಿತ್ರಪಕ್ಷ ಟಿಡಿಪಿ ನೂತನ ಸರಕಾರದಲ್ಲಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸುತ್ತಾ ಎಂದು ಕಾದು ನೋಡಬೇಕಿದೆ. ಬಹುಮತಕ್ಕಿಂತ 32 ಸ್ಥಾನಗಳಿಗಿಂತ ಕಡಿಮೆ ಇರುವ ಬಿಜೆಪಿಗೆ ಅದರ ಮಿತ್ರಪಕ್ಷಗಳ ಬೆಂಬಲದ ಅಗತ್ಯವಿದೆ. ವಿಶೇಷವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಬೆಂಬಲದ ಅಗತ್ಯವಿದೆ.
ಲಕ್ನೋದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ದೇಶದ ಸಂಸತ್ತಿನ ಇತಿಹಾಸದಲ್ಲಿ ಎಂದಿಗೂ 150ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿಲ್ಲ, ಆದರೆ ಬಿಜೆಪಿ ಅದನ್ನು ಮಾಡಿದೆ. ಆದ್ದರಿಂದ ಸ್ಪೀಕರ್ ಬಿಜೆಪಿಯವರಾಗಿದ್ದರೆ, ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ವಿಧೇಯಕಗಳನ್ನು ಅವರಿಗೆ ಬೇಕಾದಂತೆ ಅಂಗೀಕರಿಸಲಾಗುತ್ತದೆ. ಟಿಡಿಪಿ, ಜೆಡಿಯು ಮತ್ತು ಇತರ ಸಣ್ಣ ಪಕ್ಷಗಳನ್ನು ವಿಭಜಿಸಿ ಬಲವಂತವಾಗಿ ಬಿಜೆಪಿಗೆ ಸೇರಿಕೊಳುವ ಪ್ರಯತ್ನವೂ ನಡೆಯಲಿದೆ. ಬಿಜೆಪಿಗೆ ಅದರ ಇತಿಹಾಸವಿದೆ ಎಂದು ಹೇಳಿದ್ದಾರೆ.
ಸ್ಪೀಕರ್ ಹುದ್ದೆಯನ್ನು ಹೊಸ ಎನ್‌ಡಿಎ ಸರ್ಕಾರದ “ಮೊದಲ ಪರೀಕ್ಷೆ” ಎಂದು ಕರೆದ ಸಂಜಯ್ ಸಿಂಗ್, ಈ ಹುದ್ದೆ ಬಿಜೆಪಿಯಲ್ಲೇ ಉಳಿದರೆ, ಧ್ವನಿ ಎತ್ತುವ ಸಂಸದರನ್ನು ಸದನದಿಂದ ಹೊರದಬ್ಬಲಾಗುತ್ತದೆ. ಸ್ಪೀಕರ್ ಆಯ್ಕೆಯ ಕುರಿತು ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಇಂಡಿಯಾ ಬಣ ಕಾದು ನೋಡಲಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷವಾದ ಎಎಪಿ ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ. ಪಂಜಾಬ್‌ನಲ್ಲಿ ಎಎಪಿ ಕೇವಲ ಮೂರು ಲೋಕಸಭಾ ಸ್ಥಾನಗಳಲ್ಲಿ ಗೆಲುವನ್ನು ಕಂಡಿದೆ. ಈ ಬಾರಿ ಒಟ್ಟಾರೆ ಚುನಾವಣೆ ಫಲಿತಾಂಶವನ್ನು ನೋಡಿದರೆ ಎಎಪಿಯು ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದೆ. ಎಎಪಿ ಸರಕಾರ ಇರುವ ದೆಹಲಿಯಲ್ಲಿ ಎಎಪಿ ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದೆ.
ಇದನ್ನು ಓದಿ: ‘ದಿ ಕಾರವಾನ್’ ಪತ್ರಕರ್ತರ ವಿರುದ್ಧದ ಎಫ್‌ಐಆರ್ ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ


