ಭಾರತಕ್ಕೆ ಭೇಟಿ ನೀಡಿರುವ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಮುಂದೆ, 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಸಂಘರ್ಷವನ್ನು ವರದಿ ಮಾಡುವಾಗ ನಡೆದ, ಪುಲಿಟ್ಝರ್ ಪ್ರಶಸ್ತಿ ವಿಜೇತ ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರ ಹತ್ಯೆ ವಿಷಯವನ್ನು ಪ್ರಸ್ತಾಪಿಸುವಂತೆ ಡ್ಯಾನಿಶ್ ಸಿದ್ದಿಕಿ ಫೌಂಡೇಶನ್ ಆಗ್ರಹಿಸಿದೆ. ಸಿದ್ದಿಕಿ ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂದು ಫೌಂಡೇಶನ್ ಆರೋಪಿಸಿದೆ.
ಭಾರತ ಸರ್ಕಾರ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಹೊಣೆಗಾರಿಕೆ ಕಾರ್ಯವಿಧಾನಗಳ ಮೂಲಕ ಸಿದ್ದಿಕಿ ಅವರ ಸಾವಿನ ನ್ಯಾಯಕ್ಕಾಗಿ ಒತ್ತಾಯಿಸುವಂತೆ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಿದ್ದಿಕಿ ಫೌಂಡೇಶನ್ ಆಗ್ರಹಿಸಿದೆ.
As the Taliban Foreign Minister visits India, we renew our call for justice. Danish Siddiqui, a Pulitzer Prize–winning Indian journalist, was captured, tortured, and killed in Afghanistan in 2021 while reporting. We continue to seek truth and accountability. pic.twitter.com/dDHFnOUHnn
— Danish Siddiqui Foundation (@DSFAsiaOrg) October 11, 2025
ಮುಲ್ಲಾ ಹಸನ್ ಅಖುಂದ್, ಅಬ್ದುಲ್ ಘನಿ ಬರಾದಾರ್ ಮತ್ತು ಜಬಿಯುಲ್ಲಾ ಮುಜಾಹಿದ್ ಸೇರಿದಂತೆ ಹಿರಿಯ ತಾಲಿಬಾನ್ ನಾಯಕರನ್ನು ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ಯುದ್ಧಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಹೊಣೆಯಾಗಿಸಿ ಮಾರ್ಚ್ 2022ರಲ್ಲಿ ಸಿದ್ದಿಕಿ ಪೋಷಕರು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಔಪಚಾರಿಕ ದೂರು ಸಲ್ಲಿಸಿದ್ದಾರೆ.
ತಾಲಿಬಾನ್ ವಿದೇಶಾಂಗ ಸಚಿವ ಈಗ ಭಾರತಕ್ಕೆ ಭೇಟಿ ನೀಡಿರುವ ಹಿನ್ನೆಲೆ, ತಾಲಿಬಾನ್‌ಗೆ ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯ ತನ್ನ ಬಾಧ್ಯತೆಗಳನ್ನು ನೆನಪಿಸಲು ಮತ್ತು ಡ್ಯಾನಿಶ್ ಹತ್ಯೆಯ ಸ್ವತಂತ್ರ ತನಿಖೆಗೆ ಸಹಕಾರ ನೀಡುವಂತೆ ಒತ್ತಾಯಿಸಲು ಭಾರತಕ್ಕೆ ಉತ್ತಮ ಅವಕಾಶ ದೊರೆತಿದೆ ಎಂದು ಸಿದ್ದಿಕಿ ಫೌಂಡೇಶನ್ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಫೋಟೋ ಜರ್ನಲಿಸ್ಟ್ ಆಗಿದ್ದ ಡ್ಯಾನಿಶ್ ಸಿದ್ದಿಕಿ ಅವರು ಜುಲೈ 2021ರಲ್ಲಿ ಕಂದಹಾರ್‌ನಲ್ಲಿ ಕರ್ತವ್ಯದಲ್ಲಿದ್ದಾಗ, ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಿದ್ದಿಕಿ ಪಾಕಿಸ್ತಾನ ಗಡಿ ಬಳಿಯ ಸ್ಪಿನ್ ಬೋಲ್ಡಾಕ್‌ನಲ್ಲಿ ಅಫ್ಘಾನ್ ವಿಶೇಷ ಪಡೆಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ (ಸಿಪಿಜೆ), ರಿಪೋಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಸೇರಿದಂತೆ ಸ್ವತಂತ್ರ ಪತ್ರಿಕಾ ಸಂಘಟನೆಗಳು ಡ್ಯಾನಿಶ್ ಸಿದ್ದಿಕಿ ಅವರಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ. ಅವರ ಮೃತದೇಹದ ಮೇಲೆ ಗಂಭೀರ ಗಾಯಗಳು ಇತ್ತು ಎಂದು ಆರೋಪಿಸಿವೆ. ಆದರೆ, ತಾಲಿಬಾನ್ ಇದನ್ನು ತಳ್ಳಿ ಹಾಕಿವೆ.
ಸಿದ್ದಿಕಿ ಅವರ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಜಾಗತಿಕ ಪತ್ರಿಕಾ ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಹತ್ಯೆಯನ್ನು ಖಂಡಿಸಿತ್ತು ಮತ್ತು ತಾಲಿಬಾನ್ ವಿರುದ್ದ ಕ್ರಮಕ್ಕೆ ಆಗ್ರಹಿಸಿತ್ತು.
ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಬಗ್ಗೆ ಸಿದ್ದಿಕಿ ಮಾಡಿದ್ದ ವರದಿಗೆ 2018ರ ಪುಲಿಟ್ಝರ್ ಪ್ರಶಸ್ತಿ ಮತ್ತು ಭಾರತದ ಕೋವಿಡ್-19 ಕುರಿತ ವರದಿಗಾಗಿ 2022ರಲ್ಲಿ ಮರಣೋತ್ತರ ಪುಲಿಟ್ಝರ್ ಪ್ರಶಸ್ತಿ ಸಿದ್ದಿಕಿ ಅವರಿಗೆ ದೊರೆತಿತ್ತು. ಸಿದ್ದಿಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗುರುತಿಸಲ್ಪಟ್ಟ ಭಾರತೀಯ ಪತ್ರಕರ್ತರಲ್ಲಿ ಒಬ್ಬರಾಗಿದ್ದರು.
‘ತಾಂತ್ರಿಕ ಸಮಸ್ಯೆ’: ಮಹಿಳೆಯರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಟ್ಟ ಬಗ್ಗೆ ತಾಲಿಬಾನ್ ಸಚಿವ ಪ್ರತಿಕ್ರಿಯೆ


