ಸಿಪಿಐ(ಎಂ) ನಾಯಕಿ ಮತ್ತು ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ ಪಿ ದಿವ್ಯಾ ಅವರಿಂದ ಸಾರ್ವಜನಿಕ ಸಮಾರಂಭದಲ್ಲಿ ಟೀಕೆಗೊಳಗಾದ ಮರುದಿನವೇ, ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ನವೀನ್ ಬಾಬು ಮಂಗಳವಾರ ಅವರ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬಾಬು ಅವರ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ಅವರು ನಾಳೆ ಪತ್ತನಂತಿಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದರು.
ಸೋಮವಾರ ಕಣ್ಣೂರಿನಲ್ಲಿ ಬಾಬು ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡನ್ ಮುಖ್ಯ ಅತಿಥಿಯಾಗಿದ್ದ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದಿವ್ಯಾ ಅವರನ್ನು ಆಹ್ವಾನಿಸಿರಲಿಲ್ಲ.
ಆದರೆ, ದಿವ್ಯಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಮಾತನಾಡಿದ್ದ ಅವರು, “ಬೇರೆ ಜಿಲ್ಲೆಗೆ ತೆರಳುತ್ತಿರುವ ಎಡಿಎಂಗೆ ನಾನು ಎಲ್ಲಾ ರೀತಿಯ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಮಾಜಿ ಎಡಿಎಂ ಅಧಿಕಾರಾವಧಿಯಲ್ಲಿ ಹಲವು ಬಾರಿ ನಾನು ಅವರ ಜೊತೆ ಮಾತನಾಡಿದ್ದೆ. ಆದರೆ, ಈ ಎಡಿಎಂ ಜೊತೆ ನನಗೆ ಅಂತಹ ಅವಕಾಶ ಸಿಕ್ಕಿಲ್ಲ. ಚೆಂಗಲೈನಲ್ಲಿ ಪೆಟ್ರೋಲ್ ಬಂಕ್ ಒಂದಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಕೊಡಿಸುವ ಬಗ್ಗೆ ಮಾತನಾಡಲು ಇವರಿಗೆ ನಾನು ಒಮ್ಮೆ ಕರೆ ಮಾಡಿದ್ದೆ. ಎಡಿಎಂ ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಲು ನಾನು ಬಯಸಿದ್ದೆ. ಬಳಿಕ ಎಡಿಎಂ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದರು. ಆದರೆ, ಪೆಟ್ರೋಲ್ ಬಂಕ್ ಮಾಲೀಕ ಎಡಿಎಂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನನ್ನ ಬಳಿ ಹಲವು ಬಾರಿ ಬಂದಿದ್ದರು. ಈ ಬಗ್ಗೆ ಎಡಿಎಂ ಅವರನ್ನು ಕೇಳಿದಾಗ, ಅಂಕುಡೊಂಕು ರಸ್ತೆಯಿಂದ ಕೆಲವು ಸಮಸ್ಯೆಗಳಿದ್ದು, ಎನ್‌ಒಸಿ ನೀಡಲು ಸಮಸ್ಯೆ ಇದೆ ಎಂದಿದ್ದರು. ನೀವು ಆಗಾಗ ಎಡಿಎಂ ಅವರನ್ನು ಭೇಟಿ ಮಾಡುವ ಅಗತ್ಯ ಇಲ್ಲ ಎಂದು ಬಂಕ್ ಮಾಲೀಕರಿಗೆ ಹೇಳಿದ್ದ ನಾನು, ಎನ್‌ಒಸಿ ಪಡೆಯಲು ಅವರಿಗೆ ಸಹಾಯ ಮಾಡಲು ಮುಂದಾಗಿದ್ದೆ” ಎಂದಿದ್ದರು.
“ಈಗ ಎಡಿಎಂ ಇಲ್ಲಿಂದ ಬಿಟ್ಟು ಹೋಗುವಾಗ ಎನ್‌ಒಸಿ ನೀಡಲಾಗಿದೆ ಎನ್ನುತ್ತಿದ್ದಾರೆ. ಎನ್‌ಒಸಿ ಕೊಟ್ಟಿದ್ದು ಹೇಗೆ ಅಂತ ನನಗೆ ಗೊತ್ತು. ಆ ಎನ್‌ಒಸಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜೀವನದಲ್ಲಿ ನಾವು ಪ್ರಾಮಾಣಿಕರಾಗಿರಬೇಕು. ಹೊಸ ಪೋಸ್ಟಿಂಗ್ ಜಾಗದಲ್ಲಿ ಕಣ್ಣೂರಿನಲ್ಲಿ ಮಾಡಿದ ರೀತಿಯಲ್ಲಿ ಕೆಲಸ ಮಾಡಬೇಡಿ. ನೀವು ಜನರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಿ. ಇದು ಸರ್ಕಾರಿ ಸೇವೆ ಮತ್ತು ಏನಾದರೂ ಆಗಲು ಒಂದು ಕ್ಷಣ ಸಾಕು” ಎಂದು ಹೇಳಿದ್ದರು.
ಎಡಿಎಂಗೆ ಉಡುಗೊರೆ ನೀಡುವಾಗ ಅಲ್ಲಿ ತಾನು ಇರಬಾರದು ಎಂದು ಹೇಳಿದ ದಿವ್ಯಾ ಅವರು, ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ಸಹೋದ್ಯೋಗಿಗಳು ಹಾಜರಿದ್ದಾಗಲೇ ಸ್ಥಳದಿಂದ ನಿರ್ಗಮಿಸಿದ್ದರು. ಅವರು ಕಾರ್ಯಕ್ರಮದಿಂದ ಅರ್ಧಕ್ಕೆ ಹೋಗಲು ಕಾರಣ ಏನು ಎಂಬುವುದನ್ನು ಎರಡು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದಿದ್ದರು.
ಈ ನಡುವೆ ಇಂದು ಬಾಬು ಅವರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಕುರಿತು ಸಿಪಿಐ(ಎಂ) ಕಣ್ಣೂರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಿವ್ಯಾ ಅವರು ಸಿಪಿಐ(ಎಂ) ಮಹಿಳಾ ಘಟಕ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ದಿವ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದನ್ನೂ ಓದಿ : ಚೆನ್ನೈ ಮಳೆ: ಪ್ರವಾಹಕ್ಕೆ ಹೆದರಿ ಫ್ಲೈಓವರ್‌ಗಳ ಮೇಲೆ ಕಾರು ಪಾರ್ಕ್ ಮಾಡುತ್ತಿರುವ ಮಾಲೀಕರು


