ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾದ ದಲಿತ ದಂಪತಿಯ ಮೇಲೆ ಹತ್ತಾರು ಪೊಲೀಸರು ಅಮಾನವೀಯವಾಗಿ ಥಳಿಸಿದ್ದಾರೆ. ಕ್ರೂರ ದೌರ್ಜನ್ಯಕ್ಕೆ ತುತ್ತಾದ ದಂಪತಿಗಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಡಿಯ ವೈರಲ್ ಆಗಿದೆ. ಈ ಕುರಿತು ಮಧ್ಯಪ್ರದೇಶ ಸರ್ಕಾರದ ವಿರುದ್ಧ ಸಾವಿರಾರು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಣಾ ಜಿಲ್ಲೆಯಲ್ಲಿ ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಗುತ್ತಿಗೆಗೆ ತೆಗೆದುಕೊಂಡು ದಲಿತ ಕುಟುಂಬವೊಂದು ಬೆಳೆ ಬೆಳೆಯುತ್ತಿತ್ತು. ಇತ್ತೀಚೆಗೆ, ಆ ಪ್ರದೇಶದಲ್ಲಿ ಕಾಲೇಜನ್ನು ನಿರ್ಮಿಸಲು ಸರ್ಕಾರ ಆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುಲು ಆದೇಶಿಸಿತ್ತು. ಈ ವೇಳೆ ದಲಿತ ದಂಪತಿಗಳಾದ ರಾಜ್‌ಕುಮಾರ್ ಅಹಿರ್ವಾರ್ ಮತ್ತು ಸಾವಿತ್ರಿ ಸ್ವಲ್ಪ ಸಮಯ ಕೊಡಿ ಬೆಳೆ ಕೊಯ್ದುಕೊಂಡ ನಂತರ ವಶಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಪೊಲೀಸರು ಬಲವಂತವಾಗಿ ಬೆಳೆ ನಾಶಕ್ಕೆ ಮುಂದಾದಾಗ ಬೇರೆ ದಾರಿ ಕಾಣದೇ ದಂಪತಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಮಧ್ಯಪ್ರದೇಶದ ದಲಿತ ದಂಪತಿಯ ಮೇಲಿನ ಅಮಾನವೀಯ ಹಲ್ಲೆಗೆ ತೀವ್ರ ಖಂಡನೆ: ಡಿಸಿ, ಎಸ್ಪಿ ಅಮಾನತು
Posted by Naanu Gauri on Thursday, July 16, 2020
ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು, ಕಾಟಾವು ಮಾಡುವವರೆಗೂ ಸಮಯಾವಕಾಶ ಕೊಡಿ ಎಂದು ಕುಟುಂಬ ಜಮೀನಿನಿಂದ ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳ ಬಳಿ ಅಂಗಲಾಚಿಕೊಂಡರೂ ಅಧಿಕಾರಗಳು ದರ್ಪ ಮೆರೆದಿದ್ದಾರೆ. ಪೊಲೀಸರು ಮನಬಂದಂತೆ ಥಳಿಸಿದ್ದಾರೆ.
ಮನಕಲಕುವ ವೈರಲ್ ವಿಡಿಯೋದಲ್ಲಿ ದಂಪತಿಗಳಿಬ್ಬರನ್ನು ನೆಲದಲ್ಲಿ ಎಳೆದೊಯ್ಯುವ, ತನ್ನ ಮಕ್ಕಳ ಎದುರೆ ಕಾಲಿನಿಂದ ಒದೆಯುವ, ಲಾಠಿಯಿಂದ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ. ಕೇವಲ ಇಬ್ಬರ ಮೇಲೆ ಸುಮಾರು 25-30 ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಘಟನೆಯಲ್ಲಿ ಅಸ್ವಸ್ಥಗೊಂಡು ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಹಿರ್ವಾರ್ ಮತ್ತು ಪತ್ನಿ ಸಾವಿತ್ರಿಯವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಸಾವಿರಾರು ಜನ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ದಲಿತ ಕುಟುಂಬಕ್ಕೆ ಭೂಮಿ, ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
“ನಮ್ಮ ಹೋರಾಟವು ಇಂತಹ ಮನಸ್ಥಿತಿ ಮತ್ತು ಅನ್ಯಾಯದ ವಿರುದ್ಧವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಆ ವಿಡಿಯೋವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
हमारी लड़ाई इसी सोच और अन्याय के ख़िलाफ़ है। pic.twitter.com/egGjgY5Awm
— Rahul Gandhi (@RahulGandhi) July 16, 2020
ಭೂಸ್ವಾಧೀನಕ್ಕಾಗಿ ದೌರ್ಜನ್ಯ ನಡೆಸಿದ ಗುಣಾ ಜಿಲ್ಲಾಧಿಕಾರಿ ಎಸ್ ವಿಶ್ವನಾಥ್ ಮತ್ತು ಎಸ್‌ಪಿ ತರುಣ್ ನಾಯಕ್ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ದಲಿತ ದಂಪತಿಯ ಮೇಲೂ ಸಹ ಆತ್ಮಹತ್ಯೆಗೆ ಪ್ರಯತ್ನ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.
ಸೇವೆಯಿಂದ ಅಮಾನತಾಗುವ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ವಿಶ್ವನಾಥನ್, “ಅಹಿರ್ವಾರ್ ಅವರ ಸಂಬಂಧಿಕರು ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಡದ ಕಾರಣ ಪೊಲೀಸರು ಬಲವನ್ನು ಬಳಸಬೇಕಾಯಿತು. ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ 12 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇನ್ನೂ ವಿಳಂಬ ಮಾಡಿದಲ್ಲಿ ಅದನ್ನು ಬೇರೆ ಜಿಲ್ಲೆಗೆ ಸ್ಥಳಾಂತರಿಸಬಹುದು. ಹಾಗಾಗಿ ನಾವು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿತ್ತು” ಎಂದು ಹೇಳಿದ್ದಾರೆ.
‘ಈ ಘಟನೆಯ ಬಗ್ಗೆ ಭೋಪಾಲ್‌ನ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಮತ್ತು ಘಟನೆಗೆ ಯಾರು ಹೊಣೆಗಾರರಾಗಿದ್ದಾರೆ ಎಂಬುದರ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ’ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು.
“ಭೂಮಿಯ ಬಗ್ಗೆ ವಿವಾದವಿದ್ದರೆ, ಅದನ್ನು ಕಾನೂನುಬದ್ಧವಾಗಿ ಪರಿಹರಿಸಬಹುದಿತ್ತು… ಜನ ಸೇವಕರು ಎಂದು ಕರೆದುಕೊಳ್ಳುವ ಬಿಜೆಪಿ ಸರ್ಕಾರವು, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಆಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವಲ್ಲಿ ಇದೇ ರೀತಿಯ ದರ್ಪವನ್ನು ತೋರುತ್ತದೆಯೇ?” ಎಂದು ಮಾಜಿ ಸಿಎಂ ಕಮಲ್ ನಾಥ್ ಪ್ರಶ್ನಿಸಿದ್ದಾರೆ.
ಗುಣಾ ಜಿಲ್ಲೆಯು ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಜಿಲ್ಲೆಯಾಗಿದ್ದು ಭಾರೀ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಪ್ರತಿಭಟನೆ
ಕರ್ನಾಟಕದ ಸಿಂಧನೂರಿನಲ್ಲಿ ಈ ಘಟನೆಯನ್ನು ಖಂಡಿಸಿ ಕ್ರಾಂತಿಕಾರಿ ಯುವಜನ ರಂಗ (RYF) ಪ್ರತಿಭಟನೆ ನಡೆಸಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದದಿನಿದ ದಲಿತ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗೂ ಕೊಲೆಯಂತಹ ಘಟನೆಗಳು ದೇಶಾದ್ಯಂತ ಮಿತಿ ಮೀರಿವೆ. ಇನ್ನು ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರ ಅಲ್ಲಿನ ದಲಿತರು, ಬಡವರು ಹಾಗೂ ಆದಿವಾಸಿ ಕುಟುಂಬಗಳ ಮೇಲೆ ನಿರಂತರ ದೌರ್ಜನ್ಯ ಮುಂದುವರಿಸಿದ್ದು, ಬಡ ಹಾಗೂ ಮಧ್ಯಮ ವರ್ಗದ ಅಸಹಾಯಕ ಕುಟುಂಬಗಳು ಬದುಕುವುದೇ ದುಸ್ತರ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು RYF ಆರೋಪಿಸಿದೆ.

ಪೊಲೀಸ್ ದೌರ್ಜನ್ಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಅಧಿಕಾರಿಗಳನ್ನು ಅಮಾನತು ಮಾಡಬೇಕು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಘಟನೆಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ದಲಿತ ರೈತ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ದಲಿತ ರೈತ ಕುಟುಂಬ ಉಳುಮೆ ಮಾಡಲು ಜಮೀನನ್ನು ವಾಪಸ್ ಕೊಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ನಾಗರಾಜ ಪೂಜಾರ್, ಆರ್.ಎಚ್ ಕಲಮಂಗಿ, ಬಸವರಾಜ ಕೊಂಡೆ, ಮಹಾದೇವ ಅಮರಾಪುರ, ಮಲ್ಲಿಕಾರ್ಜುನ ಕುರುಗೋಡು, ಹುಸೇನಪ್ಪ ತಿಡಿಗೋಳ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ಹೊಂಬಾಳೆ-1: ದೇಶದ ಅನ್ನದ ಬಟ್ಟಲನ್ನೇ ಮಾರಲು ಹೊರಟರೆ ಕೊನೆಗೆ ಏನು ಉಳಿದೀತು?


