Homeಅಂಕಣಗಳುಹೊಂಬಾಳೆ-1: ದೇಶದ ಅನ್ನದ ಬಟ್ಟಲನ್ನೇ ಮಾರಲು ಹೊರಟರೆ ಕೊನೆಗೆ ಏನು ಉಳಿದೀತು?

ಹೊಂಬಾಳೆ-1: ದೇಶದ ಅನ್ನದ ಬಟ್ಟಲನ್ನೇ ಮಾರಲು ಹೊರಟರೆ ಕೊನೆಗೆ ಏನು ಉಳಿದೀತು?

- Advertisement -
- Advertisement -

ನಂದಿನಿ ಜಯರಾಂ, ರೈತಸಂಘ, ಕೆ.ಆರ್.ಪೇಟೆ

ಹಿರಿಯರಿಂದ ಬಂದ ತೆಂಗಿನ ತೋಟದ್ದೇ ಬಿತ್ತನೆ; ಹೊಸ ತೋಟವಾಗಿ ಮೊದಲ ಹೊಂಬಾಳೆ ಹೊರ ಹೊಮ್ಮಿದ್ದನ್ನು ಕಂಡಾಗ ಆದ ಸಂತೋಷ ನನ್ನ ಮೊದಲ ಹೆರಿಗೆಯ ನಂತರ ಮಗುವಿನ ಮುಖ ಕಂಡಾಗ ಆದ ಸಂತೋಷಕ್ಕಿಂತ ಕಮ್ಮಿ ಏನೂ ಇರಲಿಲ್ಲ.

ಆದರೆ ಇಂದಿನ ಆರೋಗ್ಯ ತುರ್ತುಪರಿಸ್ಥಿತಿಯ (Health Emergency) ಕಾರಣದಿಂದಾಗಿ ಆದ ಲಾಕ್‌ಡೌನ್‌ನಿಂದಾಗಿ ಫೆಬ್ರವರಿಯಲ್ಲಿ ಕೆಡವಿದ್ದ ಸಾವಿರಾರು ಕಾಯಿ ಮಾರಾಟವಾಗದೆ ಹಾಗೆ ಉಳಿದಿವೆ. ಕೊಬ್ಬರಿ ಮಂಡಿಯು ಮುಚ್ಚಿರುವ ಕಾರಣದಿಂದ ತೆಳ್ಳಗಾಗುತ್ತಿರುವ ಜೇಬಿನ ಗಾತ್ರ ಬಹಳ ಬೇಗ ‘ಈ ಸಸಿಗಳಿಂದ ಭವಿಷ್ಯ ಹೇಗೊ’ ಎಂಬ ಆತಂಕವೂ ಮನೆಮಾಡಿತ್ತು.

“ಹೌದೂ ನಿಮ್ಮದಷ್ಟೇ ಅಲ್ಲ, ಇಡೀ ಜಗತ್ತಿನ ಆರ್ಥಿಕತೆಯೇ ಕುಸಿಯುತ್ತಿದೆ. ರೈತರು ಮಾತ್ರ ಹೇಗೆ ಹೊರತಾಗಲು ಸಾಧ್ಯ???” ಎನ್ನಿಸಬಹುದು. ಆರ್ಥಿಕತೆಯೇ ಕುಸಿಯುತ್ತಿರುವಾಗ ರೈತರಷ್ಟೇ ಹೇಗೆ ಹೊರತಾಗಲು ಸಾಧ್ಯ ಎನ್ನುವ ಪ್ರಶ್ನೆ ತುಂಬಾ ಸಹಜವೆನ್ನಿಸುತ್ತದೆ. ಆದರೆ ವೇಗವಾಗಿ ಆರ್ಥಿಕತೆ ಬೆಳೆಯುತ್ತಿರುವಾಗ ರೈತ ಕುಲವು ಆದರಿಂದ ಹೊರತಾಗಿದ್ದು ಯಾರಿಗೂ ಸೋಜಿಗವೆನ್ನಿಸಲಿಲ್ಲ. ಅಷ್ಟೇ ಏಕೆ ಅದೊಂದು ವಿಷಯವೇ ಆಗಲಿಲ್ಲ. ರೈತರ ಆರ್ಥಿಕತೆ ಇರಲಿ, ರೈತರ ಆತ್ಮಹತ್ಯೆಯು ಒಂದು ಗಂಭೀರ ವಿಷಯವಾಗಿ ಈ ಸಮಾಜವನ್ನಾಗಲಿ, ಪ್ರಭುತ್ವವನ್ನಾಗಲಿ ಕಾಡಲಿಲ್ಲ. ಕೊನೆಪಕ್ಷ ಅದು ಸರಿಯಾಗಿ ಕಾಣಲೂ ಇಲ್ಲ.

ಪ್ರತಿ 42 ನಿಮಿಷಗಳಿಗೊಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭವನ್ನು ಈ ದೇಶ ಕಂಡಿದೆ. ರೈತಳಾಗಿ ನನ್ನ ನೋವೇನೆಂದರೆ ಕೊರೊನಾ ರೋಗಕ್ಕೆ ಬಲಿಯಾದವರ ಸಂಖ್ಯೆ ದೇಶದೆಲ್ಲಡೆ ತಲ್ಲಣ ಹುಟ್ಟಿಸಿದರೆ ರೈತರ ಸಾವಿನ ಸಂಖ್ಯೆ ಕೇವಲ ತುಟಿಯ ಅನುಕಂಪಕ್ಕೆ ಸೀಮಿತವಾಗಿ ಅಥವ ಅದಕ್ಕೂ ಸೀಮಿತವಾಗದೆ ರೈತರ ದುಂದು ವೆಚ್ಚ, ಸೋಮಾರಿತನವೇ ಅವರ ಸಾವಿಗೆ ಕಾರಣ ಎಂಬ ತಪ್ಪು ವಿಶ್ಲೇಷಣೆಗಳಿಗೂ ಒಳಪಟ್ಟಿದ್ದು ಎಂಥಾ ಸಂಕಟದ ಮತ್ತು ದುರಂತದ ಸಂಗತಿ ಅಲ್ಲವೆ?

ಇಂತಹ ನಮ್ಮ ಅನಿಸಿಕೆಗಳಿಗೆ ‘ನಾನು ಗೌರಿ’ ಪತ್ರಿಕೆ ವೇದಿಕೆ ಒದಗಿಸಿ ಕೊಡುತ್ತಿರುವುದಕ್ಕೆ ರೈತ ಕುಲದ ಪರವಾಗಿ ವಂದನೆ ತಿಳಿಸಿ ಮುಂದುವರೆಯುವುದಾದರೆ…….

ಕೊರೊನಾ ಕಾರಣದಿಂದ ಲಾಕ್‌ಡೌನ್ ಏನೋ ಆಯ್ತು. ಹೀಗೆಲ್ಲಾ ಆಗುತ್ತದೆ ಅಥವಾ ಇಂಥಾ ದಿನಗಳು ಬರುತ್ತವೆ ಎಂದು ಬಿತ್ತುವ ಯಾವ ರೈತರಿಗೂ ಗೊತ್ತಿರಲಿಲ್ಲ. ಬಿತ್ತಿದ್ದು, ಬೆಳೆದದ್ದು, ಕೈಗೆ ಬಂದಿದ್ದನ್ನ ಅವರೇನು ಮಾಡಬೇಕು? ಈ ಪ್ರಶ್ನೆಗೆ ಬಹಳ ಹಗುರವಾಗಿ ‘ಇದೊಂದು ಆರೋಗ್ಯ ತುರ್ತು ಸ್ಥಿತಿ, ಯಾರೇನು ಮಾಡಲು ಸಾಧ್ಯ?’ ಎನ್ನುವವರಿದ್ದಾರೆ. ಹೌದು ಲಾಕ್‌ಡೌನ್ ಎಂದು ಯಾರೂ ಉಣ್ಣುವುದು ಬಿಡಲಿಲ್ಲ. ಹೀಗೆ ಬಂದ ಸುದ್ದಿಗಳಲ್ಲಿ ಲಾಕ್‌ಡೌನ್ ಕಾಲದಲ್ಲಿ ಹೆಚ್ಚು ಆಡುಗೆ ತಯಾರಿಸಿ ಬಳಕೆಯಾದ ವರದಿಗಳೂ ಕಂಡವು. ಅಟ್ಟು ಉಣ್ಣುವವರಿದ್ದರು, ಬೆಳೆದವರು ಇದ್ದೆವು, ಹಸಿವಿನಿಂದ ನರಳಿದವರೂ ಇದ್ದರು. ಇವರನ್ನೆಲ್ಲಾ ಬೆಸೆಯುವ ಜವಾಬ್ದಾರಿ ಪ್ರಭುತ್ವ ಹೊರಬೇಕಿತ್ತು. ವಾಸ್ತವದಲ್ಲಿ ಹೊರಲಿಲ್ಲ. ಇಂಥಾ ತುರ್ತುಪರಿಸ್ಥಿಯಲ್ಲೂ ಪ್ರಭುತ್ವ ತನ್ನ ಜವಾಬ್ದಾರಿ ಅರಿಯದಿದ್ದರೆ ಪ್ರಭುತ್ವದ ಪಾತ್ರ ಏನು ಹಾಗಾದರೆ?

ಓಡಾಟದ ನಿರ್ಬಂಧದಿಂದಾಗಿ ಹತ್ತಿರದ ಮಾರಾಟ ಕೇಂದ್ರಕ್ಕೆ ಬೆಳೆದವ ತನ್ನ ಉತ್ಪನ್ನ ಸಾಗಿಸುವುದು ಕಷ್ಟವಾಗಿತ್ತು. ಆದರೆ ನಮ್ಮಲ್ಲಿ ಹಾಲಿನ  ಕೇಂದ್ರಗಳಿದ್ದವಲ್ಲವೆ! ಇವೇ ಸಂಸ್ಥೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಬೆಳ್ಳಗೆ 10ರಿಂದ ಸಂಜೆ 4ರವರೆಗೆ ಕೃಷಿಕರ ಉತ್ಪನ್ನಗಳನ್ನು ಇಲ್ಲಿನ ಸಿಬ್ಬಂದಿಗಳ ಮೂಲಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಬಹುದಿತ್ತು.  ಈ ಅವಕಾಶವನ್ನು ಸರ್ಕಾರ, ಸರ್ಕಾರದ ವ್ಯವಸ್ಥೆ ಸಮರ್ಪಕವಾಗಿ ಉಪಯೋಗಿಸಿಕೊಂಡು ಬೆಳೆದವರಿಂದ ಗ್ರಾಹಕರಿಗೆ ಹುಟ್ಟುವಳಿ ತಲುಪಿಸಬಹುದಿತ್ತು. ಆಗ ರೈತರಿಗೂ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತಿತ್ತು. ವಿಶೇಷವಾಗಿ ತರಕಾರಿ ಬೆಳೆಗಾರರು ಬದುಕಿಕೊಳ್ಳತ್ತಿದ್ದರು. ಅತ್ತ ಗ್ರಾಹಕರ ಶೋಷಣೆಯು ತಪ್ಪುತಿತ್ತು.

ಇಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಏಕೆಂದರೆ ಸರ್ಕಾರಕ್ಕೆ ನಿರ್ವಹಣೆಗೆ ದುಡಿಮೆಯ ಬಂಡವಾಳದ (Working Capital) ಅವಶ್ಯಕತೆಯು ಇರಲಿಲ್ಲ. ಅಲ್ಲದೆ ರೈತರಿಗೂ ತಮ್ಮ ಹುಟ್ಟುವಳಿ ಮಾರಾಟವಾದ ನಂತರ ಹಣಕ್ಕಾಗಿ ಕಾಯುವುದು ಸಾಮಾನ್ಯವಾಗಿ ಹೋಗಿದೆ. Regulating ಮಾರುಕಟ್ಟೆಯೆ ಇರಲಿ ಅಥವಾ ದಲ್ಲಾಳಿಗಳೇ ಆಗಲಿ, ಕಬ್ಬಿನ ಕಾರ್ಖಾನೆಯೆ ಇರಲಿ ಎಲ್ಲರೂ ರೈತರ ಸರಕನ್ನೇ ಬಂಡವಾಳ ಮಾಡಿಕೊಳ್ಳುವುದು, ನಂತರದ ಹಲವು ದಿನಗಳು ತಿಂಗಳುಗಳು ಕಳೆದರೂ ಹಣ ಪಾವತಿಸುವುದು ನಡೆದೇ ಇದೆ. ರೈತರು ತಮ್ಮದೇ ಮಾರುಕಟ್ಟೆ ಮಾಡಿಕೊಳ್ಳಲಾಗದೆ ಇದನ್ನ ಒಪ್ಪಿಕೊಂಡಿದ್ದಾರೆ.

ಇಂಥಾ ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಈ ವ್ಯವಸ್ಥೆ – ಈ ಪ್ರಭುತ್ವ ನಮ್ಮ ಕೈ ಹಿಡಿಯಲಿಲ್ಲ. ಆದರೆ ಇದೇ ಪ್ರಭುತ್ವ ನವೆಂಬರ್ ತನಕ ಈ ದೇಶದೊಳಗೆ ಆಹಾರ ಪದಾರ್ಥ ಒದಗಿಸುವುದಾಗಿ ಭರವಸೆ ನೀಡುವ ಎದೆಗಾರಿಕೆಯ ಹಿಂದೆ ರೈತರ ಶ್ರಮವಿಲ್ಲವೆ? ರೈತರ ದುಡಿಮೆ ನಿಂತರೆ ಕರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹಸಿವಿನ ವೈರಸ್‌ನಿಂದ ಸಾಯುವವರ ಸಂಖ್ಯೆ ನಿಸ್ಸಂಶಯವಾಗಿಯೂ ಹೆಚ್ಚಾಗುತ್ತದೆ. ಜಾಗತಿಕವಾಗಿಯೂ ಇದೇ ಪರಿಸ್ಥಿತಿ ಮುಂದುವರೆದರೆ, ಇಂದು ಜಾಗತಿಕ ಮಟ್ಟದಲ್ಲಿ 10 ಕೋಟಿ ಜನಸಂಖ್ಯೆ ಹಸಿವಿನಿಂದ ಬಳಲುತ್ತಿದ್ದು ಮುಂದಿನ ವರ್ಷದ ಹೊತ್ತಿಗೆ 27ಕೋಟಿಗೆ ಈ ಸಂಖ್ಯೆ ಏರಲಿದೆ ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಎಫ್.ಎ.ಓ (FAO) ಈಗಾಗಲೇ ಎಚ್ಚರಿಸಿದೆ. ಭಾರತದ ಜನಪ್ರತಿನಿಧಿಗಳು ಎದೆ ಉಬ್ಬಿಸಿ “ಯಾರನ್ನು ಹಸಿವಿನಿಂದ ಸಾಯಲು ಬಿಡುವುದಿಲ್ಲ ಆಹಾರ ಒದಗಿಸುತ್ತೇವೆ…” ಎನ್ನುವ ಎದೆಗಾರಿಕೆಗೆ ಕಾರಣ ಈಗಾಗಲೇ 55 ದಶಲಕ್ಷ ಟನ್‌ಗಳಷ್ಟು ಇರುವ ಬಫರ್ ಸ್ಟಾಕ್. ಇದಕ್ಕೆ ರೈತರ ದುಡಿಮೆ ಅಪಾರ ಕೊಡುಗೆ ಕೊಟ್ಟಿದೆ ತಾನೆ? ಈಗ ಮತ್ತೆ ಹೆಚ್ಚುವರಿಯಾಗಿ ಸುಮಾರು 22  ದಶಲಕ್ಷ ಟನ್ ದವಸ ಧಾನ್ಯವನ್ನ ಪಂಜಾಬ್ ರಾಜ್ಯ ಒಂದರಿಂದಲೆ MSP ದರದಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಇದೇ ಪಂಜಾಬ್‌ನಲ್ಲಿ ಅತೀ ಹೆಚ್ಚು  ರೈತರು ರಾಸಾಯನಿಕ ಬಳಸಿ ಕ್ಯಾನ್ಸರ್‌ಗೆ ತುತ್ತಾದದ್ದು ಈ ದೇಶದ ದುರಂತವಲ್ಲವೆ? ಯಾರೋ ಉಣ್ಣುವ ಅನ್ನಕ್ಕೆ ತನ್ನ ಬೆವರು, ಆರೋಗ್ಯ ಪ್ರಾಣ ಕೊಡಬೇಕಾದ ರೈತನ ರಕ್ಷಣೆಗೆ ಯಾರು ನಿಂತರು?  ನಿಲ್ಲಬೇಕಿತ್ತು ಅಲ್ಲವೆ? ಆ ಚರ್ಚೆಗೆ ಇಳಿದರೆ ಆದೇ ಒಂದು ವಿಷಯವಾದೀತು.

ನಮ್ಮ ರೈತರಿಂದ ಈ ದೇಶಕ್ಕೆ ಸಿಕ್ಕಿರುವ ಆಹಾರ ಭದ್ರತೆ ಮುಂದಿನ ವರ್ಷದವರೆಗೂ ಕೊರತೆ ಇಲ್ಲದೆ ಸಾಗುತ್ತದೆ. ಆದರೆ ಮುಂದೆ ನಿಸ್ಸಂಶಯವಾಗಿಯು ಕೊರತೆ ಉಂಟಾಗಿ ಅನ್ನಕ್ಕಾಗಿ ಹಾಹಾಕಾರ ಶುರುವಾಗುತ್ತದೆ. ಇದರ ಸ್ಪಷ್ಟ ಚಿತ್ರಣ ನಮ್ಮ ಮುಂದಿದೆ. ಏಕೆಂದರೆ ಕೃಷಿ ಉತ್ಪಾದನೆಗೆ ಬೇಕಾಗುವ ಉತ್ಪಾದನಾ ಸಾಮಗ್ರಿಗಳ ಲಭ್ಯತೆಯಲ್ಲಿ ಕೊರತೆ ಉಂಟಾಗಿದೆ. ಪ್ರಭುತ್ವವು ರಾಸಾಯನಿಕ ಗೊಬ್ಬರ, ಬೀಜದ ಸರಬರಾಜಿನ ಜವಾಬ್ದಾರಿಗೆ ಹೆಗಲು ಕೊಟ್ಟಿಲ್ಲ. ರಾಸಾಯನಿಕ ಗೊಬ್ಬರದ ಕಚ್ಚಾ ವಸ್ತುವಾದ (Naphtha)  ನಾಫ್ತಾದ ಕೊರತೆಯು ಇದಕ್ಕೆ ಕಾರಣವಾಗುತ್ತದೆ.

ಕೊರೊನಾ ಲಾಕ್‌ಡೌನ್ ಸಡಿಲವಾಯಿತು. ಕೈಗಾರಿಕೆಗಳನ್ನು ಮತ್ತೆ ಶುರುಮಾಡಲು ಅನುಮತಿ ಸಿಕ್ಕಿತು. ಆದರೆ ಕೃಷಿ ಉತ್ಪನ್ನಗಳ ಆಧಾರಿತ ಕೈಗಾರಿಕೆಗಳನ್ನು ನಡೆಸುವುದನ್ನು ನಿರಾಕರಿಸಲು ವ್ಯವಸ್ಥೆಗೆ ಹಲವಾರು ಕಾರಣಗಳಿದ್ದವು. ಉದಾಹರಣೆಗೆ ತೆಂಗಿನ ಉತ್ಪನ್ನಗಳಾದ Desiccated Coconut Founder ತಯಾರಿಸುವ ತೆಂಗಿನ ಎಣ್ಣೆ ಕಾರ್ಖಾನೆಗಳನ್ನು ತೆರೆಯಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರುಗಳ ಮೇಲೆ ಒತ್ತಡ ಹೇರಬೇಕಾಯಿತಾದರೂ ಫಲವಿಲ್ಲದಂತಾಯಿತ್ತು. ತೆಂಗು ತಿಂಗಳುಗಳ ಕಾಲ ಇಟ್ಟರೂ ಕೆಡದಿರುವಂಥದ್ದು, ಆದರೆ ಬೇಗ ಹಾಳಾಗುವಂಥ ಬೇರೆ ಪದಾರ್ಥಗಳನ್ನು ಬೆಳೆದ ರೈತರ ಸಂಕಷ್ಟಕ್ಕೆ ಈ ವ್ಯವಸ್ಥೆ ನಿಲ್ಲಲಿಲ್ಲವೇಕೆ? ಯಾರನ್ನ ಕೇಳುವುದು? ಅಲ್ಲದೆ ರಫ್ತಿನಲ್ಲಿ ಆಗಬಹುದಾದ ಏರು ಪೇರಿನ ಮಾಹಿತಿಯು ರೈತರಿಗೆ ತಲುಪಿಲ್ಲ. ಬಹುತೇಕ ರೈತರು ಇಂದಿಗೂ ಶುಂಠಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ರಫ್ತಾಗುವ ಈ ಬೆಳೆ ರಫ್ತಾಗದಿದ್ದರೆ?? ಬೆಳೆಗಾರ ಏನು ಮಾಡಬೇಕು? FAO ನೀಡಿದ ಎಚ್ಚರಿಕೆ ಭಾರತಕ್ಕೂ ಅನ್ವಯಿಸುವುದಿಲ್ಲವೆ? ರೈತರಿಗೆ ವಾಣಿಜ್ಯ ಬೆಳೆಗಳನ್ನು ಬಿಟ್ಟು ಆಹಾರ ಬೆಳೆಗಳನ್ನು ಬೆಳೆಯಲು ಪ್ರಭುತ್ವ ಪ್ರೊತ್ಸಾಹ ನೀಡಬೇಕಲ್ಲವೆ?

ಮರುವಲಸಿಗರು ಬಹುತೇಕರು ಕೃಷಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೃಷಿ ಆರಂಭಿಸಿದ್ದಾರೆ. ಆದರೆ ಇವರ ಒಲವು ಹೆಚ್ಚು ತೋಟಗಾರಿಕೆಗೆ ಸೀಮಿತವಾಗುತ್ತಿರುವುದು ವಾಸ್ತವ. ಮರು ವಲಸಿಗರ ಕೃಷಿ ಚಟುವಟಿಕೆಯಿಂದ ಆಹಾರ ಉತ್ಪಾದನೆ ಹೆಚ್ಚುತ್ತದೆ ಎಂಬುದು ಭ್ರಮೆ. 2003ರ ವಿದ್ಯುತ್ ನೀತಿಯ ತಿದ್ದುಪಡಿಯ ಪೂರ್ಣ ಅರಿವಿಲ್ಲದೆ ಅಂತರ್ಜಲ ಕೃಷಿಗೆ ಇವರು ಬಂಡವಾಳ ಹೂಡುವವರಾಗಿದ್ದಾರೆ. FDI ನೇರ ವಿದೇಶಿ ಬಂಡವಾಳ ಹೂಡಿಕೆಯಂತೆ ಬಂಡವಾಳ ಉಳ್ಳ ವಿದೇಶಿಗರಿಗೆ ಈ ದೇಶದ ನೀತಿಗಳಲ್ಲಿ ಸಿಗುವ ರಕ್ಷಣೆಯ ಶೇ 0.5ರಷ್ಟು ರಕ್ಷಣೆ ರೈತರಿಗಿಲ್ಲ. ‘ಇಲ್ಲ’ ಏಕೆಂದರೆ ಪ್ರಭುತ್ವ ಈ ದೇಶದ ಅನ್ನದ ಬಟ್ಟಲನ್ನು ಮಾರಲು ಹೊರಟಿದೆ. ನಮ್ಮ ಹಳ್ಳಿ ಕಡೆಯ ಮಾತಿನಲ್ಲಿ ಹೇಳುವುದಾದರೆ “ನನ್ನ ಮನೆ ಅಕ್ಕಿ ನೆರೆಮನೆಯೊಳಿಗೆ ಕೊಟ್ಟು ನಾನು ನನ್ನ ಮಕ್ಕಳು ಅವಳ ಮುಂದೆ ಅನ್ನಕ್ಕಾಗಿ, ಅಕ್ಕ ನಿನ್ನ ಪ್ರಸಾದ” ಎಂದು ಕೈ ಜೋಡಿಸಿದಂತೆಯೇ, ಈ ರೀತಿಯ ಪ್ರಭುತ್ವದ ನಡೆ ಸರಿಯೇ?

ಅನಾವೃಷ್ಟಿಯೋ ಅತಿವೃಷ್ಟಿಯೋ ಯಾವುದಾದರೇನು – ಕಲ್ಪವೃಕ್ಷ ಕಚ್ಚುವ ಕಾಯಿಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾದೀತೇ ವಿನಃ ಹೊಂಬಾಳೆ ಹೊರನೂಕುವುದನ್ನು ಮಾತ್ರ ಅದು ಎಂದೂ ನಿಲ್ಲಿಸುವುದಿಲ್ಲ. ಪ್ರಕೃತಿಯ ಈ ಭಾಷೆ ಕಲಿತ ರೈತ ಇನ್ನು ಗಟ್ಟಿಯಾಗಿ ಕೃಷಿಯಲ್ಲಿ ಉಳಿದಿದ್ದಾನೆ. ಅವನನ್ನು ಗಟ್ಟಿಯಾಗಿ ಅಲ್ಲೆ ಉಳಿಸಿಕೊಳ್ಳದಿದ್ದರೆ ಈ ದೇಶದಲ್ಲಿ ಏನು ಉಳಿದೀತು? ಪ್ರಭುತ್ವ? ಪ್ರಜೆ? ಪ್ರಜಾಪ್ರಭುತ್ವ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಿಜೆಪಿ ಹಾಕಿರುವ ಪೋಸ್ಟ್ ಸುಳ್ಳು

0
"ಕಾಂಗ್ರೆಸ್ ಪ್ರಾಣಾಳಿಕೆಯಾ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆಯಾ?" "ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ, ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ, ಮುಸ್ಲಿಮರಿಗೆ ವಿಶೇಷ ಮೀಸಲಾತಿ, ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ, ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು,...